ತಲೆಯಲ್ಲೇಳುವ ಅನುಮಾನ
ಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು
ಕಗ್ಗಂಟಾಗಿ ಎದೆಗಿಳಿದು
ಗಪ್ಪಾಗಿ ಬಿಗಿಯುವವರೆಗೂ
ಪದ್ಯ
ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ…!
Archive for October, 2007
ದಿಕ್ಕು
In ನೀಲುಗಳು, ಪದ್ಯ on October 31, 2007 at 3:26 pmಕಡೆಯ ಸಲ
In ಅಂದಂದು, ನಾಟಕ, ಯೋಚನೆ on October 30, 2007 at 2:30 amಸಣ್ಣವನಿದ್ದಾಗಲೇ ಅಲೀಬಾಬಾ ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ಆಡಿಸಿದ ಪ್ರೇಮಾ ಕಾರಂತ್ ಈವತ್ತು ಕೊನೆ ಉಸಿರೆಳೆದರು… ಒಂದೆರಡು ವಾರದಿಂದ ಬಳಲುತ್ತಿದ್ದರು… ಆಸ್ಪತ್ರೆಯಲ್ಲಿದ್ದರು…
ಮೈಸೂರಿನಲ್ಲಿ ಮಳೆ
In ಅಂದಂದು, ನಾಟಕ, ಯೋಚನೆ on October 29, 2007 at 12:11 pmಮೈಸೂರಿನಲ್ಲಿ ಮೊನ್ನೆ ಎಂಬತ್ತರ ಬೆಂಗಳೂರು ಧುತ್ತನೆ ಎದುರಾಯಿತು.
ಮೈಸೂರಿನ ಹೊರವಲಯದ ಬಡಾವಣೆಯಲ್ಲಿ ಇರುವ “ನಟನ” ಎಂಬ ಪುಟ್ಟ ರಂಗಮಂದಿರ. ಸ್ವಲ್ಪ ಉದ್ದವೇ ಅನಿಸಿದ ಈ ವರ್ಷದ ತಿರುಗಾಟದ ನಾಟಕ – ‘ಈ ನರಕ… ಆ ಪುಳಕ…’. ತೆರೆಗಳು, ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳ್ಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ – ಈ ಏಳು ಲಂಕೇಶರ ನಾಟಕಗಳನ್ನು ಕೂಡಿಸಿ ರಘುನಂದನ್ ಈ ನಾಟಕವನ್ನು ರೂಪಿಸಿದ್ದಾರೆ. ಲಂಕೇಶರ ಹರಿತವಾದ ಮಾತುಗಳು, ಸಾಮಾನ್ಯ ನುಡಿಗಳಲ್ಲೇ ಕಾವ್ಯವನ್ನು ಮಿಂಚಿಸುತ್ತಾ ಗಾಢವಾಗುವುದು ತುಂಬಾ ಕುಶಿ ಕೊಟ್ಟಿತು. ನೀನಾಸಂರಿಗರ ನುಡಿರೀತಿ ಯಾಕೋ ಈ ಬಾರಿ, ಈ ನಾಟಕಕ್ಕೆ ಅತಿ ಭಾರವಾದಂತೆ ಅನಿಸಿತು. ಸುಲಭ ವಾಚನದಿಂದ ಪ್ರಭಾವ ಬೀರಬಹುದಾದ ಮಾತುಗಳು ಇಲ್ಲಿ ಹೇಳುವ ರೀತಿಯ ಒತ್ತಿನಿಂದ ಕುಂದಿದಂತೆ ಅನಿಸಿತು. ಏನೋ ಕಳಕೊಂಡಂತೆ ಅನಿಸಿತು. ಇದು ಉದ್ದೇಶಪೂರ್ಣವಿರಬಹುದೆ. ಹೌದಾದರೆ ಏತಕ್ಕಾಗಿರಬಹುದು ಎಂದು ಯೋಚಿಸಿದೆ. ಆದರೆ ಎರಡೂ ಮುಕ್ಕಾಲು ಗಂಟೆಗೂ ಮೀರಿದ ಅವಧಿಯ ಬಗ್ಗೆ ನೀನಾಸಂ ಯೋಚಿಸಿದರೆ ಒಳ್ಳೆಯದಿತ್ತು ಅನಿಸಿತು.
ಹತ್ತು ಗಂಟೆಯ ಸುಮಾರಿಗೆ ಮುಗಿದ ನಾಟಕದಿಂದ ಹೊರಬಂದೆವು. ಸಣ್ಣಕೆ ಮಳೆ ಹನಿಯ ತೊಡಗಿತು. ಜನರೆಲ್ಲಾ ಸ್ಕೂಟರ್ ಕಾರುಗಳನ್ನು ಹತ್ತಿ ಕತ್ತಲಲ್ಲಿ ಕರಗಿಹೋಗುತ್ತಿದ್ದರು. ಆಟೋ ಹಿಡಿಯಲು ದೂರದಲ್ಲಿದ್ದ ಮುಖ್ಯ ಬೀದಿಗೆ ಬಂದೆವು. ಯಾರೂ ಓಡಾಡದ ದೊಡ್ಡ ಬೀದಿ. ಇರುಳಲ್ಲಿ ಅಲ್ಲಲ್ಲಿ ಉರಿಯುತ್ತಿದ್ದ ದೀಪಗಳು. ಆಗೊಂದು ಈಗೊಂದು ಓಡಾಡುತ್ತಿದ್ದ ವಾಹನಗಳು. ಆದರೆ ಆಟೋಗಳು ಮಾತ್ರ ಒಂದೂ ಇಲ್ಲ. ದಿಕ್ಕು ತಪ್ಪಿದವರಂತೆ ಅತ್ತಿತ್ತ ಓಡಾಡುತ್ತಿದ್ದಾಗ ಇದ್ದಕಿದ್ದ ಹಾಗೆ ಧೋ ಎಂದು ಸುರಿದ ಮಳೆ. ದೂರದಲ್ಲಿ ಕಾಣುತ್ತಿದ್ದ ಮುಚ್ಚಿದ ಅಂಗಡಿಗೆ ಓಟ. ಅದರ ಮುಂದಿನ ಛಾವಣಿಯಡಿ ಸ್ವಲ್ಪ ಸುಧಾರಿಸಿಕೊಂಡೆವು. ಮುಂದೇನು ಎಂದು ಹೊಳೆಯಲಿಲ್ಲ. ರಂಗಮಂದಿರದ ಕಡೆಯಿಂದಲೇ ತೆವಳುತ್ತಾ ಬರುತ್ತಿದ್ದ ಕಾರಿಗೆ ಅಡ್ಡಹಾಕಿದೆ. ಬೆಳಿಗ್ಗೆ ಸಿಕ್ಕಿದ್ದ ಗೆಳೆಯ ಅದರಲ್ಲಿದ್ದರು. ತುಂಬಿಕೊಂಡಿದ್ದ ಕಾರಿನಲ್ಲಿ ನಾವೂ ತೂರಿಕೊಂಡೆವು. ಮನೆಯ ಹತ್ತಿರ ಬಿಟ್ಟರು.
ಹತ್ತು ನಿಮಿಷದ ಹಿಂದೆ ಮಳೆಯಲ್ಲಿ ಸಿಕ್ಕಿಕೊಂಡು ಚಡಪಡಿಸಿ ದಿಕ್ಕು ತಪ್ಪಿದ್ದು. ನಿರ್ಜನ ಬೀದಿ. ಸಿಗದ ಆಟೋ. ಈಗ ಮನೆಯ ಎದುರು ಕಾರಿನಿಂದ ಇಳಿದದ್ದು. ಎಂಬತ್ತರ ಬೆಂಗಳೂರಿನ ನೆನಪು.
ಪಲಾಯನ
In ನೀಲುಗಳು, ಪದ್ಯ on October 24, 2007 at 2:32 pmತಾನು ಬರೆದ ಬೃಹತ್‌ಗ್ರಂಥವನ್ನು
ಪಕ್ಕಕ್ಕೆ ಸರಿಸಿ
ನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;
ಅದರೊಳಗಿರುವ ಜೊಳ್ಳಿನ ಬಗ್ಗೆ
ನನ್ನ ಟೀಕೆಗೆ ಹೆದರಿಯೇ ಇರಬೇಕೆಂದು
ಅನುಮಾನಿಸಿದಾಗ
ಅವನ ಸಿಟ್ಟಿಗೆ ಪಾರವೇ ಇಲ್ಲ!
ಮಂಪರಿನಲ್ಲಿ ಘಾಟಿ
In ಅಂದಂದು, ಯೋಚನೆ on October 23, 2007 at 2:08 am

ಬೆಂಗಳೂರಿನಿಂದ ಮೂಡುಬಿದ್ರೆಯ ದಾರಿಯಲ್ಲಿ ತೆವಳುತ್ತಿರುವ ಬಸ್ಸು. ನಡುರಾತ್ರಿ. ಬಸ್ಸಿನ ಅಲ್ಪ ಬೆಳಕಿನಲ್ಲಿ ಸರಿದು ಹೋಗುತ್ತಿದ್ದ ಮನೆ, ಅಂಗಳ, ಹಿತ್ತಲು, ಹಾಡಿ, ಕಾಡು… ಬಸ್ಸಿನ ಕ್ಷಣಿಕ ಬೆಳಕಿನಲ್ಲಿ ತೋರಿ ಕಾಣೆಯಾಗುತ್ತಿದ್ದ ದೇವಸ್ಥಾನ, ಮಸೀದಿ, ಇಗರ್ಜಿ ಗೋಪುರಗಳು… ಮತ್ತೆ ಕತ್ತಲೆಯಲ್ಲಿ ಕಾಡು ಬೇಲಿ ಇತ್ಯಾದಿ.
ಸಣ್ಣವನಿದ್ದಾಗ ಘಾಟಿ ಇಳಿದು ಹತ್ತುವುದನ್ನು ನೋಡುವ ಕುತೂಹಲದಲ್ಲಿ ಇವೆಲ್ಲವನ್ನು ಅರ್ಧ ಮಂಪರಿನಲ್ಲಿ ನೋಡುತ್ತಾ ನಿದ್ದೆ ಹತ್ತಿಬಿಡುತ್ತಿತ್ತು. ಘಾಟಿ ಹತ್ತಿ ಇಳಿಯುವುದು ಹಲವು ಸಲ ಸಿಕ್ಕುತ್ತಿರಲಿಲ್ಲ. ಆದರೆ, ಈ ಸಲ ಹಾಗಾಗಲಿಲ್ಲ. ಜೆಟ್‌ಲಾಗಿನ ಅವಾಂತರದಲ್ಲಿ ಎಚ್ಚರವಿತ್ತು. ಮನಸ್ಸಿನಲ್ಲಿ ನೆನಪುಗಳು ಬೆಚ್ಚಗೆ ಅರಳುತ್ತಿದ್ದವು. ಸಣ್ಣ ಮಗುವಿನ ಹಾಗೇ ಇವನ್ನೆಲ್ಲಾ ನೋಡುತ್ತಿದ್ದೇನೆ, ಅದೇ ಮಂಪರಿನಲ್ಲಿ, ಘಾಟಿಯ ಬರುವಿಕೆಯ ಕುತೂಹಲದಲ್ಲಿ ಅನಿಸುತ್ತಿತ್ತು!
ಬಸ್ಸು ಯಾಕೋ ತುಂಬಾ ತಡವಾಗಿ ಚಾರ್ಮಾಡಿ ಘಾಟಿ ತಲುಪಿತ್ತು. ಮುಂಜಾವದ ಬೆಳಕಲ್ಲಿ ಕಾತರದ ಮನಸ್ಸನ್ನು ಚೇಡಿಸುವಂತೆ ಮೆಲ್ಲನೆ ದೂರದ ಗುಡ್ಡ ಬೆಟ್ಟ ಮೋಡ ಎಲ್ಲ ಕಾಣತೊಡಗಿತು.
ಸರಕ್ಕನೆ ಇಳಿಯಬೇಕಾದ ಘಾಟಿಯ ಇಳಿಜಾರಿನಲ್ಲಿ ಏಕಾಏಕಿ ನಿಂತುಬಿಟ್ಟ ಬಸ್ಸು. ಮುಂದೆ ಹತ್ತಾರು ಬಸ್ಸು ಲಾರಿ ವಾಹನಗಳ ಸಾಲು. ತುಂಬಾ ಇಕ್ಕಟ್ಟಾದ ದಾರಿಯಲ್ಲಿ ಮುಂದಿಂದ ಬರುವ ವಾಹನಗಳನ್ನು ಸಂಬಾಳಿಸಿಕೊಂಡು ಹೋಗಬೇಕು. ಕೆಲವು ತಿರುವುಗಳಲ್ಲಿ ಅರ್ಧ ಮುಕ್ಕಾಲು ಗಂಟೆ ನಿಂತುಬಿಡುತಿತ್ತು.
ಶಿರಾಡಿ ಘಾಟಿ ಮುಚ್ಚಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಎರಡರಷ್ಷು ಗಾಡಿಗಳು. ನಿಂತ ಬಸ್ಸಿಂದ ಇಳಿದು ಅಡ್ಡಾಡುತ್ತಾ, ಸರ್ಕಾರವನ್ನು ಬಯ್ಯುತ್ತಾ ಕಾಲದೂಡುತ್ತಿದ್ದ ಮಂದಿ. ಹೀಗೆ ಮೆಲ್ಲನೆ ತೆವಳಿ ಇಳಿಯುವಾಗ ನಾಕೈದು ಗಂಟೆ ಕಳೆದು ಬಿಟ್ಟಿತ್ತು. ಬೆಳಕು ಚೆನ್ನಾಗಿಯೇ ಹರಿದಿತ್ತು.
ಅರೆ ಮಂಪರಿನಲ್ಲಿ ಘಾಟಿ ಇಳಿಯುವ ಕಾರ್ಯಕ್ರಮವನ್ನು ಇಷ್ಟವಿಲ್ಲದಿದ್ದರೂ ಮತ್ತೊಂದು ದಿನಕ್ಕೆ ಮುಂದೂಡಬೇಕಾಯಿತು.
ಬೆಂಗಳೂರಿನ ನೆಲ
In ಅಂದಂದು on October 17, 2007 at 4:25 pmಬೆಂಗಳೂರಿನ ದಾರಿಯಲ್ಲಿ ಸಿಕ್ಕುವ ಸಿಂಗಪುರವೋ, ಕೌಲಾಲಂಪುರವೋ ಬಂದು ಮುಟ್ಟುವವರೆಗೂ ಎಲ್ಲಾ ಯಾಂತ್ರಿಕವಾಗಿ ಆಗತ್ತೆ. ಸಿಡ್ನಿಯಲ್ಲಿ ಬ್ಯಾಗೇಜ್ ಚಕಿನ್, ಸಿಂಗಪುರದಲ್ಲಿ ಇಳಿದು, ಏರ್ಪೋರ್ಟ್ ಸುತ್ತಿ, ಮತ್ತೆ ವಿಮಾನ ಹತ್ತುವುದು ಎಲ್ಲ. ಆದರೆ ಅಲ್ಲಿಂದ ಮತ್ತೆ ವಿಮಾನದಲ್ಲಿ ಹಾರುವಾಗ, ನೆಲ ನನ್ನಿಂದ ದೂರ ಸರಿಯುವಾಗ ಅಲ್ಲಿಯವರೆಗಿದ್ದ ಯಾಂತ್ರಿಕತೆ ಮಾಯವಾಗಿ ಒಂದು ರೀತಿಯ ಮಾಂತ್ರಿಕತೆ, ಭಾವುಕತೆ ಆವರಿಸಿಕೊಳ್ಳುವುದು ಪ್ರತಿ ಸಲದ ಅನುಭವ.
ಈ ಸಲವೂ ಸಿಂಗಪುರದಿಂದ ವಿಮಾನ ಮೇಲೇರುತ್ತಿದ್ದಂತೆ ವಿಚಿತ್ರವಾಗಿ ಕವಿಯುವ ಈ ಭಾವ ಏನು ಅಂತ ಪ್ರತಿಸಲದಂತೆ ನೋಡಿಕೊಳ್ಳುತ್ತೇನೆ. ನಾನೀಗ ಇಲ್ಲಿ ಬಿಡುತ್ತಿರುವ ನೆಲವನ್ನ ಮತ್ತೆ ಮುಟ್ಟುವುದು ಇಂಡಿಯಾದಲ್ಲಿ, ನನ್ನ ಪ್ರೀತಿಯ ಬೆಂಗಳೂರಲ್ಲಿ ಅನ್ನುವುದು ದಟ್ಟವಾಗಿ ಸುತ್ತಿಕೊಂಡಿತು. ಎರಡೆರಡು ವರ್ಷಕ್ಕೊಮ್ಮೆ ಬರುತ್ತಿದ್ದರೂ ಇದೇನು ಹೀಗೆ ಅಂತ ತಿಳಿಯುವುದಿಲ್ಲ.
ನೆಲದಲ್ಲಿ ರಾತ್ರಿ ದೀಪಗಳ ಚುಕ್ಕೆಯಲ್ಲಿ ಹರಡಿಕೊಂಡಿರುವ ಬೆಂಗಳೂರು ಪ್ರತಿಸಲವೂ ಸುಂದರವಾಗಿ ಕಾಣತ್ತೆ. ಪಿಳಿಪಿಳಿಸುವ ದೀಪದಲ್ಲಿ ಈಗೀಗ ಬಿಳಿ ಮತ್ತು ಕಿತ್ತಳೆ ಬಣ್ಣ ಕೂಡಿಕೊಂಡಿದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ರಸ್ತೆಗಳಲ್ಲಿ ಓಡಾಡುವ ವಾಹನಗಳು ಕೂಡ ಸಣ್ಣ ಮಗುವಿನಂತೆ ಒಳಗೊಳಗೇ ರೋಮಾಂಚನ ಬೆಂಗಳೂರನ್ನು ತಬ್ಬಿಕೊಳ್ಳುವಂತೆ ವಿಮಾನ ನೇರವಾಗಿ ಆ ದೀಪಗಳ ರಾಶಿಯ ನಡುವೇ ಇಳಿಯುತ್ತದೆ, ನೆಲ ಮುಟ್ಟುತ್ತದೆ, ತೆವಳಿ ಬಂದು ನಿಲ್ಲುತ್ತದೆ. ಇವೆಲ್ಲಾ ಏನನ್ನೋ ಎದುರು ನೋಡುತ್ತಿರುವ ಕಾತರದಲ್ಲಿ ತುಂಬಾ ದೀರ್ಘ ಅನಿಸುತ್ತಿದೆ.
ಹೊರಗೆ ಮಳೆಯಲ್ಲಿ ತೇವವಾದ ನೆಲ ಏರ್ಪೋರ್ಟಿನ ದೊಡ್ಡ ದೊಡ್ಡ ದೀಪಗಳ ಬೆಳಕಲ್ಲಿ ಮಿರಿಮಿರಿ ಮಿಂಚುತ್ತಿದ್ದೆ. ಇಳಿಯುವ ಕಾತರ. ವಿಮಾನಕ್ಕೆ ಸಿಕ್ಕಿಸಿದ ತೂಬಿಗೆ ಕಾಲಿಡುತ್ತಿದ್ದಂತೆ ತೂಬಿನ ಮಾಡು ತೂತಾಗಿ ಮಳೆಯ ನೀರು ದಳದಳ ಎಂದು ಸುರಿಯುತ್ತಿದೆ. ಅಲ್ಲಿ ಕಾಲಿಟ್ಟು ಜಾರದಿರಲಿ ಎಂದು ದಿನಪತ್ರಿಕೆಯ ಹಾಳೆಗಳನ್ನೆಲ್ಲಾ ಹರಡಿದ್ದಾರೆ. ಅದು ಇನ್ನೂ ಪಿತಪಿತ ಮಾಡಿಬಿಟ್ಟಿದೆ. ಒಳಗೊಳಗೇ ನಗುತ್ತೇನೆ. ಭಾವುಕನಾಗಿರಲು ಬೆಂಗಳೂರು ಬಿಡುವುದಿಲ್ಲ. ಇಮ್ಮಿಗ್ರೇಷನ್‌ನವ ಕಣ್ಣಿಗೆ ಕಣ್ಣು ಕೊಡಲಿಲ್ಲ. ಕನ್ನಡದಲ್ಲಿ ಮಾತಾಡಲು ಸಿಕ್ಕುವ ಮೊದಲಿಗ. ಮಾತಾಡಲಿಲ್ಲ. ಕ್ಷಣದಲ್ಲಿ ಪಾಸ್‌ಪೋರ್ಟ್ ಗುದ್ದಿ ನನ್ನತ್ತ ತಳ್ಳಿ ನನ್ನ ಹಿಂದಿನವರನ್ನು ಕೈಬೀಸಿ ಕರೆದ. ಥ್ಯಾಂಕ್ಸ್ ಹೇಳಿ ಹೊರ ಬಂದೆ.
ಅಲ್ಲಿಂದ ಕೆಳಗಿಳಿಯುವ ಎಸ್ಕಲೇಟರ್ ಕೆಟ್ಟಿರಬೇಕು. ಆದರೆ ಅದರ ತುಂಬಾ ಮತ್ತು ಪಕ್ಕದ ಮೆಟ್ಟಿಲ ತುಂಬಾ ಜನ. ಏನೋ ಅನಾಹುತ ಆದವರಂತೆ ತುಂಬಿಕೊಂಡಿದ್ದರು. ಓಹೋ. ಕೆಳಗೆ ಹಾಲಿನಲ್ಲಿ ಕಿಕ್ಕಿರಿದಿರುವ ಜನ. ಸ್ಥಳವಿಲ್ಲ. ಅದಕ್ಕೆ ಎಸ್ಕೆಲೇಟರ್ ಆರಿಸಿದ್ದಾರೆ. ಮನೆಯವರನ್ನು ಕಾಣುವ ಕಾತರದ ಕೊನೆಯ ಕ್ಷಣಗಳು. ಸುಲಭವಲ್ಲ. ತಿಣಕಿ, ತೂರಿ, ಹಾರಿ, ನನ್ನ ಸಾಮಾನು ಪಡೆದು ಹೊರಬಂದೆ.
ಹೌದು ಬೆಂಗಳೂರು ಭಾವುಕನಾಗಿರಲು ಬಿಡುವುದಿಲ್ಲ. ಒಳಗೊಳಗೇ ಪ್ರೀತಿಯಿಂದ ನಕ್ಕೆ.
ಅಚ್ಚುಕಟ್ಟು
In ನೀಲುಗಳು, ಪದ್ಯ on October 11, 2007 at 6:59 amಬಿಸಿಲೇರುವವರೆಗೂ
ನನ್ನ ನಲ್ಲನ ತೋಳುಗಳ ನಡುವೆ
ಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.
ಕೂದಲ ಜಿಡುಕಲ್ಲಿ ಆಲಸಿ ಬೆರಳು.
ಬಾಚಿ ಬಿಗಿದು ಕಟ್ಟಿದ ಕೂದಲ
ಏಕಾಂಗಿ ಗೆಳತಿ
ಏನೋ ನೆಪಮಾಡಿ ಸಿಡುಕುತ್ತಾಳೆ-
ಎದುರಾಡಲಿಲ್ಲ
ಎಂದಿನಂತೆ!