-೧-
ಧರ್ಮ ಅಂದರೆ ಏನು? ಧರ್ಮ ನಮ್ಮ ಬದುಕಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ಸಾಮೂಹಿಕವನ್ನು ಮತ್ತು ವಯ್ಯಕ್ತಿಕವನ್ನು ಅದು ಹೇಗೆ ರೂಪಿಸುತ್ತದೆ? ಈ ಕೆಲವು ಪ್ರಶ್ನೆಗಳು ನಮ್ಮ ಸುತ್ತ ಆಗಾಗ ಏಳುತ್ತವೆ.
ಧರ್ಮ ಅಂದರೆ ದೇವರ ಅಥವಾ ಒಂದು ಅತಿಭೌತಿಕ ಶಕ್ತಿಯಲ್ಲಿ ನಂಬಿಕೆಯನ್ನು ಅನುಮೋದಿಸುವ ವಿಚಾರಧಾರೆ. ಆ ವಿಚಾರಧಾರೆಯನ್ನು ಉಳಿಸಿಕೊಳ್ಳಲು ಅದರ ಸುತ್ತ ಆಚರಣೆ. ಧರ್ಮದ ಆ ದೇವರು ಒಂದೇ ಹೆಸರಲ್ಲಿರಬಹುದು, ಕೋಟ್ಯಾಂತರ ಹೆಸರಲ್ಲಿರಬಹುದು. ಧರ್ಮದ ಈ ನಂಬಿಕೆಯೇ “ಮೂಲ ಬೌದ್ಧ” ಹಾಗು ನಾಸ್ತಿಕತೆಗಳನ್ನು ಧರ್ಮದಿಂದ ಹೊರಗೆ ಉಳಿಸುತ್ತವೆ. ಧರ್ಮಶಾಸ್ತ್ರದವರ ಈ ವಿವರಣೆ ಧರ್ಮದ ಬಗ್ಗೆ ಒಂದು ಮೌಲಿಕ ಆಧಾರದ ವಿವರಣೆ ಅಷ್ಟೆ.
ಹೊಸ ಧರ್ಮಿಷ್ಠರು ಮತ್ತೊಂದು ಅರ್ಥವನ್ನು ಹೇಳುತ್ತಾರೆ : ಅದೊಂದು ಜೀವನ ಶೈಲಿ/ಪದ್ಧತಿ ಅಂತ. ಧರ್ಮದ ನಂಬಿಕಸ್ತರೆಲ್ಲಾ ಒಂದು ಬಗೆಯಲ್ಲಿ ಬದುಕುತ್ತಾರೆ ಹಾಗಾಗಿ ಅದೊಂದು ಜೀವನ ಶೈಲಿ/ಪದ್ಧತಿ ಹೌದಲ್ಲವೆ ಅನಿಸುತ್ತದೆ. ಆದರೆ ತುಸು ಗಮನಿಸಿ ನೋಡಿದರೆ, ಧರ್ಮ ನಮ್ಮ ಯೋಚನೆಗಳನ್ನು ಪ್ರಭಾವಿಸುವುದರಿಂದ – ಅದೊಂದು ಜೀವನ ಶೈಲಿಯಾಗಿ ಕಾಣಿಸಿಕೊಳ್ಳುತ್ತದೆ ಅಷ್ಟೆ. ಜೀವನ ಪದ್ಧತಿ/ಶೈಲಿಗೆ ಬರೇ ಧರ್ಮವಲ್ಲ; ಹಣ, ರಾಜಕೀಯ, ಭೂಗೋಳ, ಪರಿಸರ ಹೀಗೆ ಹಲವು ಅಂಶಗಳೂ ಸ್ಪೂರ್ತಿ/ಒತ್ತಡಗಳಾಗುತ್ತವೆ. ದೇವರಲ್ಲಿ ನಂಬಿಕೆಯನ್ನು ಪ್ರಚೋದಿಸಿ, ಆಚರಣೆಗಳ ಮೂಲಕ ಅದನ್ನು ಪ್ರಚುರಪಡಿಸುವ ಧರ್ಮ ಜೀವನಶೈಲಿಯನ್ನು ರೂಪಿಸುವ ಒಂದು ಅಂಶವಷ್ಟೆ. ಹಾಗಾಗಿ ಒಂದು ಜೀವನ ಪದ್ಧತಿ/ಶೈಲಿಯನ್ನೇ ಧರ್ಮ ಎನ್ನಲಾಗುವುದಿಲ್ಲ.
ಪ್ರತಿದಿನ ಬದಲಾಗುವ ಸಂಸ್ಕೃತಿ ಹಾಗು ಸಮಾಜವು ಧರ್ಮವನ್ನು ಬದಲಾಗುವಂತೆ ಒತ್ತಾಯಿಸುತ್ತದೆ. ಧರ್ಮ ಅಳುತ್ತಾ ಕೂಗುತ್ತಾ ಬದಲಾಗುವುದಕ್ಕೆ ಇಷ್ಟವಿಲ್ಲದೆ ತುಸುತುಸುವೇ ಬದಲಾಗುತ್ತದೆ. ಹಾಗಾಗಿ ಧರ್ಮ ಅಂದರೆ ಏನು ಎಂಬುದಕ್ಕೆ ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥವಿರುತ್ತದೆ. ಮೂಲದಲ್ಲಿ ಮೇಲೆ ಹೇಳಿದ ಧರ್ಮಶಾಸ್ತ್ರದವರ ವಿವರಣೆ ಎಲ್ಲ ಕಾಲಕ್ಕೂ ಹೊಂದುತ್ತದೆ. ಆದರೆ ಎಲ್ಲ ಸಂದರ್ಭಕ್ಕೂ ಹೊಂದದಿರಬಹುದು.
-೨-
ಧರ್ಮ ನಮ್ಮ ಬದುಕಲ್ಲಿ ಕಾಣಿಸಕೊಂಡು, ಅಂಟಿಕೊಳ್ಳುವುದೂ ಗಮನಿಸಬೇಕಾದ ಇನ್ನೊಂದು ಅಂಶ. ಎಲ್ಲಿಯವರೆಗೆ ಇಂದಿನ ಬದುಕಲ್ಲಿ ಹತಾಶೆ ಹಾಗು ಮುಂದಿನ ಬದುಕಲ್ಲಿ ನಮಗೆ ನಿಯಂತ್ರಣ ಇರುವುದಿಲ್ಲವೋ – ಅಲ್ಲಿಯವರೆಗೂ ಧರ್ಮ, ದೇವರು, ಆಧ್ಯಾತ್ಮ ನಮ್ಮ ನೆರವಿಗೆ ಬೇಕಾಗುತ್ತದೆ. ಇದರ ಅಗತ್ಯವನ್ನು ನೀವು ವೈಚಾರಿಕವಾಗಿ ಬೆಂಬಲಿಸಬಹುದು ಅಥವಾ ಭಾವನಾತ್ಮಕವಾಗಿ ಬೆಂಬಲಿಸಬಹುದು. ಆದರೆ ಮೂಲದ ಹತಾಶೆಯನ್ನು ಹೋಗಲಾಡಿಸುವುದು ಹಾಗು ನಿಯಂತ್ರಣವನ್ನು ಮತ್ತೆ ಪಡೆದುಕೊಳ್ಳುವುದು ಹಲವಾರು ಕಾರಣಕ್ಕೆ ಮುಖ್ಯವಾಗುತ್ತದೆ.
ಇಲ್ಲೊಂದು ವಿಪರ್ಯಾಸ ಗಮನಿಸಿ. ಮನುಷ್ಯನ ನೆರವಿಗೆ ಧಾವಿಸುವ ಧರ್ಮ/ಆಧ್ಯಾತ್ಮ ಜನರಲ್ಲಿ ಬದುಕಿನ ಬಗ್ಗೆ ಹತಾಶೆ ನಿರಂತರವಾಗುವಂತೆ ನೋಡಿಕೊಳ್ಳುತ್ತದೆ. ಹತಾಶೆ ಕಡಿಮೆಯಾದಾಗ ಅದನ್ನು ಜಾಗೃತಗೊಳಿಸುತ್ತದೆ. ಹಾಗೆಯೇ ನಮ್ಮ ಬದುಕು/ಭವಿಷ್ಯದ ಮೇಲೆ ನಮಗಿರಬೇಕಾದ ನಿಯಂತ್ರಣವನ್ನು ತಿರಸ್ಕರಿಸಿ, ದೇವರು/ನಂಬಿಕೆಗಳನ್ನು ತರುತ್ತದೆ. ಆ ಮೂಲಕವಾಗಿ ನಿಯಂತ್ರಣವನ್ನು ಸಡಿಲಗೊಳಿಸುವ ಕೆಲಸವನ್ನು ಸತತವಾಗಿ ಮಾಡುತ್ತಿರುತ್ತದೆ.
-೩-
ಮನುಷ್ಯ ಯಾವತ್ತೂ ತನ್ನನ್ನು ತಾನು ವಿವರಿಸಿಕೊಳ್ಳುವ ಕೆಲಸ ಮಾಡುತ್ತಿರುತ್ತಾನೆ. ಇದು ಬರೇ ಪದ ಮಾತುಗಳ ಮೂಲಕವಷ್ಟೇ ಅಲ್ಲ. ಕ್ರಿಯೆಗಳ ಮೂಲಕವೂ ಕೂಡ. ಮತ್ತು ಈ ವಿವರಿಸುವ ಕೆಲಸ ಬೇಡವೆಂದರೂ ನಡೆಯುತ್ತಿರುತ್ತದೆ. ಆದರೆ ಆಧುನಿಕ ಯುಗದಲ್ಲಿ ಅದು ನಮಗೆ ಬೇಕಾದ ಹಾಗೆ ಆಗುತ್ತಿಲ್ಲ. ಮತ್ತು ಅದು ದಿನದಿನಕ್ಕೂ ಕಷ್ಟವಾಗುತ್ತಿದೆ. ಎಲ್ಲವೂ ಪುಡಿಪುಡಿಯಾದ ಪ್ರಯತ್ನಗಳಾಗುತ್ತಿವೆ. ಪೂರ್ಣವಾಗಿ ವಿವರಿಸಿಕೊಳ್ಳುವ ಹಂಬಲ ನಮಗೆ ಇರುವವರೆಗೂ – ಅದಕ್ಕೊಂದು ಶಾರ್ಟ್ ಕಟ್ ರೂಪದಲ್ಲಿ ಸರಳೀಕೃತವಾಗಿ ಧರ್ಮ ಬೇಕಾಗುತ್ತದೆ. ಆ ಬಗೆಯ ವಿವರಣೆ ತುಂಬಾ ಜಡವಾದ ವಿವರಣೆಯಾಗಿರುತ್ತದೆ. ಬದಲಾಗುತ್ತಿರುವ ಪರಿಸ್ಥಿತಿ, ಮೌಲ್ಯ ಹಾಗು ಮನುಷ್ಯನ ಒಳಗನ್ನು ವಿವರಿಸಲು ಧರ್ಮ ಸೋಲುತ್ತದೆ ಎಂಬುದು ನಮಗೆಲ್ಲಾ ಆಗಾಗ ಅರಿವಿಗೆ ಬಂದೇ ಇರುತ್ತದೆ. ಆದರೆ ಅದನ್ನು ನಮ್ಮದೇ ಕುಂದು ಎಂದು ಸಮಜಾಯಿಷಿ ಹೇಳಿಕೊಳ್ಳುತ್ತೇವೆ.
ನಮ್ಮನ್ನು ನಾವು ವಿವರಿಸಿಕೊಳ್ಳುವುದು ದಿಟಕ್ಕೂ ಜಟಿಲವಾದ ಸಂಗತಿ; ವಿವರಿಸಿಕೊಂಡೇ ಎನ್ನುವಾಗಲೂ ಮತ್ತೇನೋ ಆಗಿರುತ್ತದೆ, ಹೊಸದೇನೋ ಬಂದು ಸೇರಿಕೊಂಡು, ಇನ್ನೇನೋ ಕಳೆದಿರುತ್ತದೆ. ಇದು ವಯ್ಯಕ್ತಿಕವಷ್ಟೇ ಅಲ್ಲ, ಜಾಗತಿಕವಾಗಿಯೂ ನಮ್ಮ ವಿವರಣೆ ಹಲವಾರು ಹೊಡೆತಗಳಿಗೆ ಒಳಪಡುತ್ತದೆ. “ಒಂದು ವಿವರಣೆ”, “ಪೂರ್ಣ ವಿವರಣೆ” ಸಾಧ್ಯವೇ ಇಲ್ಲದಂತೆ ಆಗಿದೆ. (ಹಾಗೆ ನೋಡಿದರೆ, ಅದು ಎಂದೂ ಸಾಧ್ಯವಿರಲಿಲ್ಲ!)
ಇವನ್ನೆಲ್ಲಾ ಮನಗಂಡಾಗಲೇ, ಗೊಡ್ಡಲ್ಲದ, ಜಡವಲ್ಲದ ಹೊಸ ಬಗೆಗಳಲ್ಲಿ ನಮ್ಮನ್ನು ವಿವರಿಸಿಕೊಳ್ಳುವ ಸಣ್ಣಪುಟ್ಟ ದಾರಿಗಳು ತೆರೆದುಕೊಳ್ಳುತ್ತವೆ. ಆಗ ಧರ್ಮದ ನೆರವು ಬೇಕಾಗುವುದಿಲ್ಲ – ಅಷ್ಟೇ ಅಲ್ಲ ಅದು ತೊಡರೇ ಆಗಿರುತ್ತದೆ. ಧರ್ಮವನ್ನು ಬಿಟ್ಟು ಮುನ್ನಡೆಯುವದೇ ಮೊದಲ ಅರ್ಥಪೂರ್ಣ ಹೆಜ್ಜೆಯಾಗುತ್ತದೆ.
ಧರ್ಮ-ಚಿಂತನೆ( ಧರ್ಮ ಅಧರ್ಮದ ಗೊಡವೆಯ ವಿಮರ್ಶೆ ಇತ್ಯಾದಿ) ಮಾಡಿ ಹೊತ್ತುಪೋಲು ಮಾಡಬಾರದು.
ಅದಕ್ಕೆ ನಾನು ನಿಮ್ಮೀ ಬರಹವನ್ನು ಮೇಲೆ ಮೇಲೆ ಓದಿಕೊಂಡೆನು.
ಕೊನೆಯ ಪ್ಯಾರವನ್ನು, ಅದು ಕೊನೆಯ ಪ್ಯಾರವಾದುದರಿಂದ ತುಸು ನಿಗವಿಟ್ಟು ಓದಿದೆ.
“ಧರ್ಮವನ್ನು ಬಿಟ್ಟು ಮುನ್ನಡೆಯುವದೇ ಮೊದಲ ಅರ್ಥಪೂರ್ಣ ಹೆಜ್ಜೆಯಾಗುತ್ತದೆ.”
ಏನ್ರೀ, ಸುಮ್ನೆ ಹೆಚ್ಚೆ ಹಾಕ್ತಾ ಇರಬೇಕು, ಅದನ್ನು ಧರ್ಮದ ಹೆಜ್ಜೆಯೋ, ಅಧರ್ಮದ ಹೆಜ್ಜೆಯೋ ಅಂತ ಮನಸ್ಸಿಲ್ಲಿ ಚೂರೂ ಯೋಚನೆ ಬರಬಾರದು. ಅದು ಬರೀ ಹೆಚ್ಚೆಯಷ್ಟು.!
ಈ ಧರ್ಮ ಕರ್ಮಗಳನ್ನು ಬಿಸಾಕಿ, ಮೈಮನಗಳ ಸುಳಿಯಲ್ಲಿರುವ ನಲಿವನ್ನು ಸವಿದು ಜೀವನವನ್ನು ಪುಳಕಿತ ಸಾರ್ಥಕ, ದೇಹದ ಸಕ್ಕತ್ ಉಪಯೋಗ ಮಾಡಿಕೊಬೇಕು.
ಮಾಯ್ಸ-
ಈ ಬಗೆಯ ಚಿಂತನೆ ಸುಮ್ಮನೆ ಹೊತ್ತು ಪೋಲು ಅನಿಸಬಹುದು. ಆದರೆ, ಇದು ಮುಖ್ಯವೇ. ನಾವೆಷ್ಟೇ ಇಂಡಿವಿಡುಯಲ್ ಅಂದುಕೊಂಡರೂ, ನಮ್ಮನ್ನು ನಮ್ಮ ಪರಿಸರ ರೂಪಿಸತ್ತೆ. ಅಂತಹ ಪರಿಸರದಲ್ಲಿ ಗೊಡ್ಡು/ಜಡ ವಿಚಾರಗಳಿದ್ದರೆ ಅದನ್ನು ಎಚ್ಚರಿಕೆಯಿಂದ ನೋಡಿಕೋ ಬೇಕು. ಸರಿ ಅನ್ನಿಸದೇ ಇರೋದರ ಬಗ್ಗೆ ಮಾತಾಡಿಕೋಬೇಕು. ಅದಕ್ಕೆ ತರ್ಕ ವಿಜ್ಞಾನದ ನೆರವು ಪಡಕೋಬೇಕು.
ಈ ಧರ್ಮ/ಆಧ್ಯಾತ್ಮ ನಮ್ಮನ್ನು ಮುಂದಕ್ಕೆ ಹೋಗೋಕೆ ಬಿಡದೆ ಜಗ್ಗತಾ ಇರೋ ಡೆಡ್ ವೇಟು. ಚಿಟಕಿ ಹೊಡದು ಅದರಿಂದ ಬಿಡಿಸಿಕೊಳ್ಳೋಕೆ ಆಗಲ್ಲ, ಅಲ್ಲವ?
“ಈ ಧರ್ಮ/ಆಧ್ಯಾತ್ಮ ನಮ್ಮನ್ನು ಮುಂದಕ್ಕೆ ಹೋಗೋಕೆ ಬಿಡದೆ ಜಗ್ಗತಾ ಇರೋ ಡೆಡ್ ವೇಟು. ಚಿಟಕಿ ಹೊಡದು ಅದರಿಂದ ಬಿಡಿಸಿಕೊಳ್ಳೋಕೆ ಆಗಲ್ಲ, ಅಲ್ಲವ?”
ಹು ರಿ.. ಅದಕ್ಕೆ ನಾನು
ಸುಜ್ಞಾನವೆಂಬ ಹೊಲಸು! ತಲೆಯೆಂಬ ತಿಪ್ಪೇ ಗುಂಡಿ!
ಹಿಂಗೆ ಊಂಕೊಂಡಿವ್ನಿ… ವಸಿ ಓದಿ!