ಅನಿವಾಸಿ

Archive for the ‘ಅಂದಂದು’ Category

dust storm in sydney

In ಅಂದಂದು, ಸ್ಥಿರಚಿತ್ರ on September 23, 2009 at 7:46 am

ಕಮಲಾ ದಾಸ್ ಮತ್ತು ಸಿಂಹ

In ಅಂದಂದು, ನಾಟಕ on June 1, 2009 at 8:13 pm
kamala_das

Kamala Das

ಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊಳ್ಳುತ್ತಾಳೆ. ಸಿಂಹದ ರಾಶಿಯ ಅವನ ಜತೆಗೆ ತನ್ನ ಸಂಗವನ್ನು ಕೆಲವೊಮ್ಮೆ ಮಧುರವಾಗಿ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಸಿಟ್ಟಿನಿಂದ ನೆನಪಿಸಿಕೋತಾಳೆ. ಅವನ ದರ್ಪ ಮೋಸ ಅರ್ಥವಾಗಿಯೂ ಕಾತರ ನಿಲ್ಲುವುದಿಲ್ಲ. ಅಸಹಾಯಕತೆಯನ್ನು ಮೀರಿದ ಮತ್ತೇನೋ ಅಲ್ಲಿ ಕೆಲಸಮಾಡುತ್ತಿರುತ್ತದೆ. ಆದರೆ ಕಡೆಗೂ ಆ ನಲ್ಲ ಬರುವುದೇ ಇಲ್ಲ.

ಈ ಕತೇನ ನೆನಪಿಂದ ಹೇಳ್ತಾ ಇದ್ದೀನಿ. ಯಾಕೆಂದರೆ ಕಮಲಾ ದಾಸ್ ಬರೆದ ‘ದ ಸೈನ್ ಆಫ್ ಎ ಲಯನ್’ ಎಂಬ ಕತೆಯನ್ನು ಯಥಾವತ್ತಾಗಿ “ಸಿಂಹ” ಅಂತ ೧೯೮೮ರಲ್ಲಿ ನಾಟಕ ಮಾಡಿದ್ದೆವು. “ಬೆನಕ”ದ “ಮಂಡೇ ಥೇಟರ್‍” ಅನ್ನೋ ಇಂಟಿಮೇಟ್ ಸಭಾಂಗಣದಲ್ಲಿ. Read the rest of this entry »

ದೇವರ ಕಾಣುವ ಕೈ

In ಅಂದಂದು, ವಿಜ್ಞಾನ, ಸ್ಥಿರಚಿತ್ರ on April 16, 2009 at 10:05 pm

ಅರಿಶಿನ ಕುಂಕುಮದ ಡಬ್ಬಕ್ಕೆ ತಡಕಾಡುವ ಮೊದಲೇ ಹೇಳಿಬಿಡುತ್ತೇನೆ – ಇದು ದೇವರ “ಕಾಣದ ಕೈ” ಅಲ್ಲ. ಈ ಹಿಂದೆ “ದೇವರ ಕಣ್ಣು” ಎಂಬ ಚಿತ್ರ ನೀವು ನೋಡಿರಬಹುದು. ಇನ್ನು “ರಾಮಸೇತು” ಥರ ಏನೇನೋ ಆಧಾರ ಕೊಡೋಕೆ ಮುಂದಾಗೋ ಮುಂಚೆ ಹೇಳಿಬಿಡ್ತೀನಿ – ಇದು ಭೂಮಿಯಿಂದ ೫೮೦ ಕಿ.ಮಿ ದೂರದಲ್ಲಿ ಸುತ್ತುತ್ತಿರುವ ನಾಸಾದ “ಚಂದ್ರ ಎಕ್ಸ್-ರೇ” ಅಬ್ಸರರ್ವೇಟರಿಯಿಂದ ತೆಗೆದ ಚಿತ್ರ. Read the rest of this entry »

ಗೋಮೂತ್ರಮಹಿಮೆ [Banned on ಸಂಪದ]

In ಅಂದಂದು, ಪದ್ಯ, ಯೋಚನೆ on March 27, 2009 at 12:59 pm

ಭಕ್ತಿ ತುಳುಕಾಡಿ
ಭಗವದ್ಗೀತೆಯ ನ್ಯೂ
ಎಡಿಷನ್-ಹಾರ್ಡ್ ಬೌಂಡ್ ಕಾಪಿಯನ್ನು
Read the rest of this entry »

ದೇವರೆಂಬ ಭ್ರಾಂತು

In ಅಂದಂದು, ನಾಸ್ತಿಕತೆ, ಪುಸ್ತಕ, ಯೋಚನೆ, ವಿಜ್ಞಾನ on February 28, 2009 at 8:56 pm

[ಇಂದು, ಫೆಬ್ರವರಿ ೨೮ ಇಂಡಿಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ - ಅದಕ್ಕೆ ನನ್ನ ಪುಟ್ಟ ಕಾಣಿಕೆ]

ಈಗಷ್ಟೆ ಡಾ. ರಿಚರ್ಡ್ ಡಾಕಿನ್ಸನ ‘The God Delusion’ ಪುಸ್ತಕ ಓದಿ ಮುಗಿಸಿದೆ. ಅವನ ಇತರ ವೈಜ್ಞಾನಿಕ ಪುಸ್ತಕದ ಹಾಗೆ ಇದು ಡಾರ್ವಿನನ ವಿಕಾಸವಾದದ ಬಗ್ಗೆಗಿನ
ಪುಸ್ತಕವಲ್ಲ. ಆದರೂ, ದೇವರಂಬ ಭ್ರಾಂತಿನ ಬಗ್ಗೆ ವೈಜ್ಞಾನಿಕ ಕಾಣ್ಕೆಗಳ ಆಧಾರದ ಮೇಲೆ ಹಾಗು ಆ ಕಾಣ್ಕೆಗಳ ಬಗ್ಗೆಗಿನ ಸಂಶೋಧನೆಗಳ ಬಗ್ಗೆಗಿನ ಪುಸ್ತಕ. Read the rest of this entry »

ಆಸ್ಕರ್‍ ಗೆಲುವಿನ ನೆರಳಲ್ಲಿ…

In ಅಂದಂದು, ಚಲನಚಿತ್ರ, ಯೋಚನೆ on February 23, 2009 at 9:12 pm

ರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್‍ ಬಂದಿದ್ದು ಖುಷಿಯಾಯಿತು
ಎ.ಆರ್‍.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್‍ ಬಂದಿದ್ದೂ ಖುಷಿಯಾಯಿತು.

ಆದರೆ, ಇದು ಐತಿಹಾಸಿಕ ಘಟನೆ, ಚರಿತ್ರಾರ್ಹ ಸುದ್ದಿ. ಭಾರತಕ್ಕೆ ಸಂದ ಗಣನೀಯ ಆಸ್ಕರ್‍ ಎಂಬುದೆಲ್ಲಾ ಕೇಳಿ ಇದನ್ನು ಬರೆಯೋಣ ಅನಿಸಿತು.

Read the rest of this entry »

ಕೊಲೆಗಾರ ಡಾರ್ವಿನ್!

In ಅಂದಂದು, ಯೋಚನೆ on February 13, 2009 at 11:58 am

ನೆನ್ನೆ ಡಾರ್ವಿನನ ಇನ್ನೂರನೇ ಹುಟ್ಟು ಹಬ್ಬ!

Young Darwin by G.Richmond

Young Darwin by G.Richmond

ಸೃಷ್ಠಿಕರ್ತನ ಕಲ್ಪನೆಯನ್ನು ಕೊಂದ ಅಪಾದನೆ ಅವನ ಮೇಲೆ ಈವತ್ತಿಗೂ ಇದೆ. ಆದರೆ ಡಾರ್ವಿನ್ ಕೊಲೆಗಾರನಲ್ಲ ಎಂದು ಹೇಳುತ್ತಿರುವವರು ಧರ್ಮಿಷ್ಠರು ಹಾಗು ಸೃಷ್ಠಿ ಕಲ್ಪನೆಯನ್ನು ನಂಬುವ, ಸೃಷ್ಠಿಕರ್ತನಲ್ಲಿ ನಂಬಿಕೆಯಿರುವ “ಧರ್ಮಾತ್ಮರು” ಎಂದರೆ ಆಶ್ಚರ್ಯವಲ್ಲವೆ? ಸೃಷ್ಠಿಕರ್ತನನ್ನು ರಕ್ಷಿಸಲು creationism ಹಾಗು intelligent design ಎಂಬಂತ ಕ್ಷುಲ್ಲಕ ವಾದಗಳನ್ನು ಮುಂದಿಟ್ಟು, ವಿಕಾಸವಾದವೆಂದರೆ “ಬರೇ ಆಕಸ್ಮಿಕ” ಎಂಬ ಅಪಪ್ರಚಾರ ಮಾಡುವವರು ಇಂದಿಗೂ ಇದ್ದಾರೆ. ಅಲ್ಲಿ, ಇಲ್ಲಿಯೂ,ಎಲ್ಲಿಯೂ.

ಆದರೆ ನಮ್ಮಂತವರಿಗೆ ಜಗತ್ತಿನ ಜೀವರಾಶಿಗಳ ಬಗೆಗಿನ ಅವನ ವಿವರಣೆಗಳು ಎಷ್ಟು ಚೆಂದ ಮತ್ತು ಗಟ್ಟಿ ಎಂದು ಹೇಳಬೇಕಿಲ್ಲ. ಈ ನೂರಾರು ವರ್ಷದಲ್ಲಿ ಬಂದ ಹಲವಾರು ಸವಾಲುಗಳ ಎದುರು ಅವನ ವಿಕಾಸವಾದ ಸಮರ್ಥವಾಗಿ ನಿಂತಿದೆ. ಅಷ್ಟೇ ಅಲ್ಲ ಇಂದಿಗೂ ಹಲವು ಹೊಸ ಹೊಸ ಆವಿಷ್ಕಾರಗಳು ಅದನ್ನು ಗಟ್ಟಿಗೊಳಿಸುತ್ತಲೇ ಇವೆ.

Read the rest of this entry »

ಅಧರ್ಮೀಯರಾಗುವುದೇ ದಾರಿ

In ಅಂದಂದು, ಯೋಚನೆ on February 1, 2009 at 12:29 pm

dharma-೧-
ಧರ್ಮ ಅಂದರೆ ಏನು? ಧರ್ಮ ನಮ್ಮ ಬದುಕಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ಸಾಮೂಹಿಕವನ್ನು ಮತ್ತು ವಯ್ಯಕ್ತಿಕವನ್ನು ಅದು ಹೇಗೆ ರೂಪಿಸುತ್ತದೆ? ಈ ಕೆಲವು ಪ್ರಶ್ನೆಗಳು ನಮ್ಮ ಸುತ್ತ ಆಗಾಗ ಏಳುತ್ತವೆ.

ಧರ್ಮ ಅಂದರೆ ದೇವರ ಅಥವಾ ಒಂದು ಅತಿಭೌತಿಕ ಶಕ್ತಿಯಲ್ಲಿ ನಂಬಿಕೆಯನ್ನು ಅನುಮೋದಿಸುವ ವಿಚಾರಧಾರೆ. ಆ ವಿಚಾರಧಾರೆಯನ್ನು ಉಳಿಸಿಕೊಳ್ಳಲು ಅದರ ಸುತ್ತ ಆಚರಣೆ. ಧರ್ಮದ ಆ ದೇವರು ಒಂದೇ ಹೆಸರಲ್ಲಿರಬಹುದು, ಕೋಟ್ಯಾಂತರ ಹೆಸರಲ್ಲಿರಬಹುದು. ಧರ್ಮದ ಈ ನಂಬಿಕೆಯೇ “ಮೂಲ ಬೌದ್ಧ” ಹಾಗು ನಾಸ್ತಿಕತೆಗಳನ್ನು ಧರ್ಮದಿಂದ ಹೊರಗೆ ಉಳಿಸುತ್ತವೆ. ಧರ್ಮಶಾಸ್ತ್ರದವರ ಈ ವಿವರಣೆ ಧರ್ಮದ ಬಗ್ಗೆ ಒಂದು ಮೌಲಿಕ ಆಧಾರದ ವಿವರಣೆ ಅಷ್ಟೆ.

ಹೊಸ ಧರ್ಮಿಷ್ಠರು ಮತ್ತೊಂದು ಅರ್ಥವನ್ನು ಹೇಳುತ್ತಾರೆ : Read the rest of this entry »

ಭೈರಪ್ಪನವರ “ಸಂಶೋಧನೆ”

In ಅಂದಂದು, ಯೋಚನೆ on October 30, 2008 at 6:16 am

ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು http://www.christianaggression.org/features_statistics.php ಕೊಟ್ಟರು. ಆ ಬರಹ ಬರೆಯುವಾಗ ಭೈರಪ್ಪನವರ ಅಂಕಿ-ಅಂಶದ ಮೂಲ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಆ ಅಂಕಿ-ಅಂಶ ಬರೇ ತಪ್ಪು ಅನ್ನುವುದಕ್ಕಿಂತ ಹೆಚ್ಚು ಆತಂಕಕಾರಿ ಅನಿಸುತ್ತಿದೆ.

Read the rest of this entry »

ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

In ಅಂದಂದು, ಯೋಚನೆ on October 26, 2008 at 8:18 am

ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.

ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ. ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು. Read the rest of this entry »

ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.

In ಅಂದಂದು, ಯೋಚನೆ on October 5, 2008 at 10:27 pm

ಆಗಲೇ ನಿನ್ನ ಹುಟ್ಟುಹಬ್ಬವಾಗಿ ಮೂರ್ನಾಕು ದಿನ ಕಳೆದಿದೆ. ನಿನ್ನ ನೆನಪೇ ಆಗಲಿಲ್ಲ. ಒಂದು ಗ್ರೀಟಿಂಗ್ ಆದರೂ ಕಳಿಸಬಹುದಿತ್ತು. ಈಗ ಒಳ್ಳೊಳ್ಳೆ ಗ್ರೀಟಿಂಗ್ ಕಾರ್ಡುಗಳು ಸಿಗುತ್ತವೆ. ಬಣ್ಣಬಣ್ಣದ್ದು, ಫಳಫಳ ಹೊಳೆಯುವದು. Read the rest of this entry »

ಒಂದು ವಾಚ್ಯ ಹಂಬಲ

In ಅಂದಂದು, ಯೋಚನೆ on September 24, 2008 at 9:44 am

an atheists view

ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.

ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ, ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು

Read the rest of this entry »

ಮಾನವಹಕ್ಕಿಗೆ ಹೋರಾಡುವವರನ್ನು ದೂರಬೇಡಿ

In ಅಂದಂದು, ಅನುವಾದ on September 17, 2008 at 2:28 pm

[ ಫೀಲ್ಡ್ ಮಾರ್ಷಲ್ ಜನರಲ್ ಮಾನೆಕ್ ಷಾರವರ ಪುತ್ರಿ ಮಾಜ ದಾರುವಾಲಾರವರು "ದ ಹಿಂದು" ಪತ್ರಿಕೆಯಲ್ಲಿ ಬರೆದ ಲೇಖನದ ಅನುವಾದ. ]

ಅಹ್ಮದಾಬಾದ್ ಬಾಂಬಿನ ದಾಳಿ ಮಾಡಿದವರು ದಕ್ಷಿಣದಲ್ಲಿ, ಮುಖ್ಯವಾಗಿ ಕೇರಳದಲ್ಲಿ ತರಬೇತು ಪಡೆದವರೆಂದು ಗುಜರಾತ್ ಸರ್ಕಾರ ದೂರಿತು. ಆಗ ಕೇರಳ ಸರ್ಕಾರ ಹಿಂದುಮುಂದು ನೋಡದೆ ಆತಂಕವಾದವನ್ನು ಹತ್ತಿಕ್ಕುವ ತನ್ನ ಪ್ರಯತ್ನಕ್ಕೆ ಮಾನವಹಕ್ಕು ಹೋರಾಟಗಾರರು ಹುಯಿಲಿಡುವ ಮೂಲಕ ಹೇಗೋ ತಡೆಯೊಡುತ್ತಿದ್ದಾರೆಂದು ಪ್ರತಿಕ್ರಿಯಿಸಿತು. Read the rest of this entry »

ಬಿಗುಮಾನದ ಚಿತ್ರಗಳು

In ಅಂದಂದು, ಯೋಚನೆ on September 6, 2008 at 8:21 am

ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ.

Read the rest of this entry »

ಸೆರಗ ಹಿಂದಿನ ಚಂದ್ರ

In ಅಂದಂದು, ಚಿತ್ರಗಳು on August 17, 2008 at 8:14 am

ಕೋಟಿ ಕೋಟಿ ಕಣ್ಣುಗಳ ಎದುರು ಪಕ್ಷಕ್ಕೊಮ್ಮೆ ಹಿಗ್ಗಿ ಕುಗ್ಗುವ ಚಂದ್ರನಿಗೆ ಇಂದು ಮಾತ್ರ
ತಾಯ ನೆರಳಿನ ಸೆರಗ ಹಿಂದೆ ಅವಿತುಕೊಳ್ಳುವ ನಾಚಿಕೆ

೦೫:೪೩ಕ್ಕೆ ನೆರಳಾವರಿಸಲು ತೊಡಗಿ ಏಳು ನಿಮಿಷವಾಗಿದೆ ಅಷ್ಟೆ

೦೬:೦೭ಕ್ಕೆ ನೆರಳು ಮುತ್ತಿಕ್ಕ ತೊಡಗಿ ೩೧ನಿಮಿಷ ಕಳೆದಾಗ Read the rest of this entry »

ಕ್ರೌರ್ಯ ಮತ್ತು ಬಲಿ

In ಅಂದಂದು, ಯೋಚನೆ on August 4, 2008 at 8:25 pm

ಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್‍ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ.

ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು. ಸ್ಟಾಲಿನ್ನನ ಕ್ರೌರ್ಯವನ್ನು ಬಯಲಿಗೆಳೆದು ಲೋಕಕ್ಕೆ ತಿಳಿಸಿದವನು. ಕಡೆಯವರೆಗೂ ಪ್ರಭುತ್ವದ ಜತೆ ಮುಜುಗರದ ಸಂಬಂಧವನ್ನ ಉಳಿಸಿಕೊಂಡವನು. ಬೋರಿಸ್ ಎಲ್ಸಿನ್ ನೀಡಲು ಬಂದ ರಷ್ಯಾದ ಅತಿ ಉನ್ನತ ಪದವಿ “ಆರ್ಡರ್‍ ಆಪ್ ಸೇಂಟ್ ಆಂಡ್ರೂ”ವನ್ನು ತಿರಸ್ಕರಿಸಿದವನು. ಅವನ “ಒನ್ ಡೇ ಇನ್ ದ ಲೈಫ್ ಆಫ್ ಇವಾನ್ ಡೆನಿಸೋವಿಚ್” ಒಮ್ಮೆ ಓದಿದರೆ ಸಾಕು, ಮತ್ತೆ ಮತ್ತೆ ಕಾಡುವಂತಹದು. ಸದಾ ಜತೆಗೆ ಉಳಿಯುವಂತಹದು. ಅಮೇರಿಕಾದ ರಾಜಕೀಯ ಹಂದರವನ್ನೂ ಒಪ್ಪಲಾರದೆ – ರಷ್ಯಾ ತನ್ನ ಜಾಡನ್ನು ತಾನೇ ಕಂಡುಕೊಳ್ಳಬೇಕೆಂದು ಒತ್ತಿ ಒತ್ತಿ ಹೇಳಿದವನು. ಎಲ್ಸಿನ್ ಮಹಾ ಗಡಿಬಿಡಿಯಲ್ಲಿ ರಷ್ಯಾದ ಆರ್ಥಿಕ ಸ್ಥಿತಿಯನ್ನು ಹಾಳುಗೆಡವಿದ್ದನ್ನು ಹೀಗಳೆದವನು. ತನ್ನ ಅದಮ್ಯ ಚೇತನದಿಂದ ಈ ಜಗತ್ತಿನ ಅತ್ಯಂತ ಕ್ರೂರ ಪ್ರಭುತ್ವಕ್ಕೆ ಸೆಡ್ಡು ಹೊಡೆದು-ಕೊಲ್ಲುತ್ತಾರೆ ಎಂದುಕೊಳ್ಳುತ್ತಲೇ ಬದುಕಿದವನು. ಬರೆದದ್ದು ನಾಶಮಾಡುತ್ತಾರೆ ಎನ್ನುತ್ತಲೇ ಉಳಿಸಿಕೊಂಡವನು.

ಇನ್ನೆರಡು ದಿನಕ್ಕೆ ಮತ್ತೆ “ಹಿರೋಶೀಮಾ ದಿನ”. ಎರಡನೇ ಮಹಾಯುದ್ಧ ಕೊನೆಗೊಳಿಸಿದ ಅತ್ಯಂತ ಭೀಕರವಾದ ಅನಗತ್ಯ ಹತ್ಯಾಕಾಂಡ. ಅಮೇರಿಕಾದ ಜನರಿಗೆ ಏನೂ ಹೇಳದೆ ಮಹಾಗುಟ್ಟಿನಲ್ಲಿ ಓಪನ್‌ಹೈಮರ್ ನಿರ್ದೇಶನದಲ್ಲಿ ಒಟ್ಟುಗೂಡಿಸಿದ ಅಟಾಮಿಕ್ ಬಾಂಬದು. ನಾಜೀಗಳನ್ನು ಮಟ್ಟ ಹಾಕಲು ಹಲ್ಲು ಮಸೆಯುತ್ತಾ ಕಟ್ಟಿಕೊಂಡಿದ್ದು. ಕೊಂದದ್ದು ಮಾತ್ರ ಜಪಾನಿನ ಸಾವಿರಾರು ಜನರನ್ನು. ಅಂದಿನ ಅಣುಭೌತಿಕ ವಿಜ್ಞಾನಿಗಳೂ ಆ ಕ್ರೌರ್ಯದಲ್ಲಿ ಶಾಮೀಲಗಾಗಿದ್ದನ್ನು ಈಗ ಯಾರೂ ಅಲ್ಲಗಳೆಯಲಾರರು.

ಯೋಚಿಸಿದಂತೆಲ್ಲಾ ಇವೆಲ್ಲಕ್ಕೆ ಇಂಡಿಯಾದ ನಾಯಕರ ಮಾತುಗಳು ಮರುದನಿಗೊಡುತ್ತದೆ. ಪಾಕಿಸ್ತಾನದ ಮೇಲೆ ಹಲ್ಲುಮಸೆಯುತ್ತಾ ಕಟ್ಟಿಕೊಳ್ಳುತ್ತಿರುವ ನಮ್ಮ ಬಾಂಬು ಯಾರನ್ನು ಬಲಿ ಪಡೆಯಬಹುದು ಎಂದು ಎಣಿಸದರೆ ಎದೆ ನಡುಗುತ್ತದೆ. ನಾವೂ ಗುಟ್ಟಾಗಿ ಅಣುಬಾಂಬು ಕಟ್ಟಿದ್ದೇವೆ, ಸಿಡಿಸಿದ್ದೇವೆ. ಅದಕ್ಕೆ ಕಾರಣರಾದ ಇಂಜಿನಿಯರನ್ನು “ವಿಜ್ಞಾನಿ” ಎಂದು ತುಂಬಿ ತುಳುಕುವಂತೆ ಹೊಗಳಿ “ಭಾರತ ರತ್ನ” ಮಾಡಿದ್ದೇವೆ, ಪ್ರೆಸಿಡೆಂಟ್ ಮಾಡಿದ್ದೇವೆ. ಗುಟ್ಟನ್ನೇ ರಾಜಕೀಯ ಹಾಗು ವೈಜ್ಞಾನಿಕ ಮಹಾಮಂತ್ರವನ್ನಾಗಿ ಮಾಡಿಕೊಂಡಿದ್ದೇವೆ. ಬಹುಶಃ ನಮಗೂ ಒಬ್ಬ ಸೋಲ್ಸನಿತ್ಸನ್ ಬೇಕೇನೋ…

ಈವೆಲ್ಲಾ ತಲೆ ಕೆಡಿಸುತ್ತಿರುವಾಗ ಮತ್ತೆ ನಮ್ಮ ದೇವಾಸ್ಥಾನದ ಕ್ರೌರ್ಯಕ್ಕೆ ನೂರಾರು ಪುಟ್ಟ ಮಕ್ಕಳು, ತಾಯಂದಿರು ಹಾಗು ವಯಸ್ಸಾದವರು ಬಲಿಯಾಗಿದ್ದಾರೆ. ಈ ಕ್ರೌರ್ಯಕ್ಕೆ ಸೆಡ್ಡು ಹೊಡೆಯಬೇಕಾದವರೇ ಮತ್ತೆ ಮತ್ತೆ ಬಲಿಯಾಗುತ್ತಿದ್ದಾರೆ.

ಈ ಬಗೆಯಲ್ಲಿ ನಮ್ಮ ಜನರನ್ನೇ ನಾವು ವಿಧಿವತ್ತಾಗಿ ನಿಯತಕಾಲಿಕವಾಗಿ ಬಲಿ ತೆಗೆದುಕೊಳ್ಳಲು ಬಾಂಬುಗಳೂ ಬೇಡ, ಆತಂಕವಾದವೂ ಬೇಡ.

ಸಿಟಿಯ ಮೇಲಣ ಗುಳ್ಳೆ

In ಅಂದಂದು, ಸ್ಥಿರಚಿತ್ರ on July 23, 2008 at 7:10 pm

ಸಿಡ್ನಿಯಲ್ಲಿ ಹಾಡುತ್ತಲೋ, ಯಾವುದಾದರೂ ವಾದ್ಯ ನುಡಿಸುತ್ತಲೋ, ಅಥವಾ ವೇಷ ಹಾಕಿಕೊಂಡೋ, ಸರ್ಕಸ್ ಮಾಡುತ್ತಲೋ ಬಸ್ಕ್ ಮಾಡುವುದು ಸದಾ ನೋಡುತ್ತೇವೆ.

Read the rest of this entry »

ಧರ್ಮಿಷ್ಟರ ದಂಧೆ

In ಅಂದಂದು, ಯೋಚನೆ on July 15, 2008 at 10:07 pm

“ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!” ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು. ಒಪ್ಪಿಗೆಯಾಗದವರು ಒಂದೆರಡು ಕ್ಷಣ ದುರುದುರು ಎಂದು ನೋಡಿ “ಹಾಳಾಗಿ ಹೋಗಲಿ” ಎಂಬಂತೆ ಇನ್ನೊಂದತ್ತ ತಿರುಗಿದರು.

Read the rest of this entry »

ಜಗನ್ನಾಥನ ತಬ್ಬಲಿ ಮಕ್ಕಳು

In ಅಂದಂದು, ಪದ್ಯ, ಯೋಚನೆ on July 5, 2008 at 11:19 am

[ಈ ಸಾವಿನ ಸುದ್ದಿ ನೋಡಿ]

ಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?

ಆ ರಥದಲ್ಲಿ ಕೂತ ಗೊಂಬೆಯ
ಒಳಗೇನೋ ಕಂಡಿತೆನ್ನುವ
ಕೋಟಿ ಕೋಟಿ ಜನ ಕುರುಡುರೇ?
ಅನುಮಾನ ಸಹಜ
ಇರಬಹುದು ಎಂದೇಕೆ ಅನಿಸಲಿಲ್ಲ ನಿನಗೆ?

ನಿನ್ನ ಯಾವುದೋ ತಬ್ಬಲಿತನ
ಕಳಕೊಳ್ಳುವ ತವಕದಲ್ಲಿ
ನಿನ್ನ ಮಕ್ಕಳೀಗ ತಬ್ಬಲಿ

ರಥಚಕ್ರಕ್ಕೆ ಸಿಕ್ಕಿ ಸಾಯುವ ಪುಣ್ಯವಿಲ್ಲದಿದ್ದರೆ
ರಥವೆಳೆಯುವ ಕಾಲಿಗೆ ಸಿಕ್ಕಾದರೂ ಸಾಯಬೇಕು
ಮಕ್ಕಳನ್ನು ತಬ್ಬಲಿ ಮಾಡಬೇಕು.

ಅವರು
ತಬ್ಬಲಿಯಾಗಿ ರಥವೆಳೆಯುವ ಕೈಗಳಾಗಬೇಕು
ತುಳಿದು ಕೊಲ್ಲುವ ಕಾಲುಗಳಾಗಬೇಕು
ಅಯ್ಯೋ,
ರಥಚಕ್ರ ಮಾತ್ರ ತಿರುಗುತ್ತಲೇ ಇರಬೇಕು.

ನಾಸ್ತಿಕರು ಯಾರು? ಹೇಗೆ?

In ಅಂದಂದು, ಚಿತ್ರಗಳು on May 5, 2008 at 6:54 am

dawkins_rtಎವಲ್ಯೂಷನ್ ಬಯಾಲಜಿಸ್ಟ್ ಆಗಿರುವ ಡಾ|| ರಿಚರ್ಡ್ ಡಾಕಿನ್ಸ್ ನಾಸ್ತಿಕರೂ ಹೌದು. ಅವರ ಪುಸ್ತಕ ಓದಿದವರಿಗೆ, ಅವರ ಮಾತುಗಳನ್ನು ಕೇಳಿದವರಿಗೆ ಅವರು ಯಾಕೆ ನಾಸ್ತಿಕರು ಮತ್ತು ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಬೇಕಾಗಿಲ್ಲ.
Read the rest of this entry »

ಕನ್ನಡದವರಿಗಾದ ಅವಮಾನ

In ಅಂದಂದು, ಯೋಚನೆ on May 1, 2008 at 7:30 pm

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ.

ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ “ಟ್ರೇನ್ಡ್” ದನಿಯಾಗಲಿ, ತೀಡಿತೀಡಿ ನುಣುಪಾದ “ಕಲ್ಚರ್ಡ್” ದನಿಯಾಗಲಿ ನನ್ನಲ್ಲಿ ಉತ್ಸಾಹ ಕೆರಳಿಸುತ್ತಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇಂಡಿಯಾದ ಹಲವಾರು ಜನಪ್ರಿಯ ಹಾಡುಗಾರರ ತೊಂದರೆ ಇದು ಅನಿಸುತ್ತದೆ. ಇರಲಿ ಅದು ಮತ್ತಾವಾಗಲಾದರೂ ಬೇರೆಯಾಗಿಯೇ ಯೋಚಸಲು ಇಟ್ಟುಕೊಳ್ಳುತ್ತೇನೆ.

Read the rest of this entry »

ಹಂಚಿಕೊಳ್ಳದ ಲೋಕ

In ಅಂದಂದು, ಯೋಚನೆ on April 22, 2008 at 10:12 pm

ನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ್ಲ ಅನ್ನುವುದು ಬರೇ ಕುತೂಹಲವಷ್ಟೇ ಅಲ್ಲ. ತುಂಬಾ ಮುಖ್ಯ ಕೂಡ.

Read the rest of this entry »

ವಿಮಾನ ಮುಳುಗುವ ಮಳೆ

In ಅಂದಂದು on April 22, 2008 at 7:10 am

ಜಾನ್ ಲೀ ಹುಕರ್‍ನ ಒಂದು ಬ್ಲೂಸ್ ಪದ “ಡೀಪ್ ಬ್ಲೂ ಸೀ” ಅಂತ. “ಚಿಲ್ ಔಟ್” ಎಂಬ ಆಲ್ಬಮ್ಮಿನಲ್ಲಿದೆ.

ಹಾಡುತ್ತಿರುವವ ಇರುವ ಊರಿನಲ್ಲಿ ಮಳೆಯೋ ಮಳೆ. ಎಷ್ಟೆಂದರೆ ವಿಮಾನಗಳು ಮುಳುಗಿ ಹೋಗುವಷ್ಟು. ಅವನಿಗೋ ಮನೆಗೆ ಹೋಗಬೇಕು ಹೋಗಬೇಕೆನ್ನುವ ತೀರದ ಒದ್ದಾಟ. ಆದರೆ ಅವನಿರುವ ಊರಿನಲ್ಲಿ ವಿಮಾನ ಮುಳುಗಿ ಹೋಗುವಷ್ಟು ಮಳೆ.

ಆಳದ ನೀಲಿ ಸಾಗರದಲ್ಲೆದ್ದ ಚಂಡಮಾರುತ ಇಷ್ಟು ಮಳೆ ಸುರಿಯಬಹುದೆ ಎಂದು ನಾಯಕನಿಗೆ ಅಚ್ಚರಿ. ಏರ್ಪೋರ್ಟಿಗೆ ಫೋನ್ ಮಾಡಿದರೂ “ಇಲ್ಲಿ ತುಂಬಾ ಮಳೆ. ಮೂರುನಾಕು ದಿನ ಎಲ್ಲಿಗೂ ಹೋಗುವುದಿಲ್ಲ. ವಿಮಾನ ಮುಳುಗುವಷ್ಟು ಮಳೆ” ಎಂಬ ಉತ್ತರ.

ದೂರದ ಊರಲ್ಲಿರುವ ತನ್ನ ನಲ್ಲೆಗೆ ಫೋನ್ ಮಾಡಿ “ನನಗಾಗಿ ಅಳಬೇಡ. ಇಲ್ಲಿ ಎಡೆಬಿಡದ ಮಳೆ. ಆಳದ ನೀಲಿ ಸಾಗರದಲ್ಲಿ ಚಂಡಮಾರುತವೆದ್ದಿದೆ. ನಿನಗಾಗಿ ತಹತಹಿಸುತ್ತಾ ಇದ್ದೀನಿ” ಎಂದು ಸಮಾಧಾನದ ನುಡಿ.

ನಂತರ ವಿಮಾನದ ಕ್ಯಾಪ್ಟನ್‌ ಜತೆ, ಪೈಲೆಟ್ ಜತೆ ಮಾತಾಡುತ್ತಾನೆ. ಅವರೂ “ಇನ್ನು ಮೂರು ನಾಕು ದಿನ ಹೊರಡುವುದಿಲ್ಲ. ನೋಡು ಹವೆ ಎಷ್ಟು ಕೆಟ್ಟದಿದೆ. ಮಳೆ ನೋಡು, ವಿಮಾನ ಮುಳುಗವಷ್ಟು ಮಳೆ” ಎಂದು ವಿವರಣೆ ಕೊಡುತ್ತಾರೆ. Read the rest of this entry »

ಭಾನುವಾರದ ಬೆಳಗಿನ ಮೌನ

In ಅಂದಂದು on April 13, 2008 at 7:55 am

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ನನಗಂತೂ ಭಾನುವಾರ ಎಲ್ಲ ಜಗ್ಗಾಟದ ದಿನಗಳ ನಡುವೆ ತಣ್ಣಗೆ ತೇಲುವ ನಡುಗಡ್ಡೆ.

Read the rest of this entry »

ಜಿಂಬಾಬ್ವೆ ಯುಗಾದಿ

In ಅಂದಂದು, ಯೋಚನೆ on April 8, 2008 at 5:08 pm

ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.
Read the rest of this entry »

ಮುರಿಯುವ ಮಳೆ ಹಾಗು ಮೀರುವ ಮನಸ್ಸು

In ಅಂದಂದು, ಯೋಚನೆ on February 13, 2008 at 8:35 pm
ಎರಡು ವಾರದಿಂದ ಎಡೆಬಿಡದ ಮಳೆ. ಆಸ್ಟ್ರೇಲಿಯಾದ ಮೂಡಲ ಕಡಲತಡಿಯುದ್ದಕ್ಕೂ ಹೊಡೆದಿದ್ದೇ ಹೊಡೆದಿದ್ದು. ಬರಗಾಲ ಕೊನೆಗೊಳಿಸಲು ಹಟತೊಟ್ಟಂತೆ. ಇದು ಯಾವ ನಕ್ಷತ್ರದ ಮಳೆಯೋ ಎಂದುಕೊಳ್ಳುತ್ತೇನೆ. ಹೊಳೆ, ನದಿ, ಕೆರೆ, ಕೊಳ್ಳ ಎಲ್ಲ ತುಂಬಿ ಉಕ್ಕಿ ಹರಿದ ಸಂತಸ.  ಸಿಡ್ನಿಯಲ್ಲಿ ಪುರಂದರ ಆರಾಧನೆ – ಮೊನ್ನೆ ಭಾನುವಾರ. ನನ್ನ ತಲೆಯಲ್ಲಿ ಮರುಕಳಿಸಿದ ಒಂದೆರಡು ಪ್ರಶ್ನೆಗಳು. ಹಿಂದಿನ ದಿನವಷ್ಟೇ ಮಳೆ ನಿಂತು ಎಲ್ಲ ತಿಳಿಯಾಗಿ ಸೂರ್ಯ ಹಚ್ಚಗೆ ನಗುತ್ತಿದ್ದ. Read the rest of this entry »

ಬೆನ್ನ ಮೇಲಿನ ಕೂದಲು

In ಅಂದಂದು, ಕಲ್ಪನೆ, ಯೋಚನೆ on January 28, 2008 at 7:17 am

ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? Read the rest of this entry »

ನೀರು ತಬ್ಬುವ ಬಂಡೆ

In ಅಂದಂದು, ಯೋಚನೆ on January 22, 2008 at 9:48 pm

ಈ ಆಕ್ರಮಣದ ಯುಗದಲ್ಲಿ
ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ
ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ
Read the rest of this entry »

ದೂರ ಕಾಲ

In ಅಂದಂದು, ಯೋಚನೆ on January 16, 2008 at 5:54 am

ಕೆಲಸದಲ್ಲಿ ಮೊನ್ನೆ ಹೊಸ ಸಾಫ್ಟ್‌ವೇರ್‍ ಬಗ್ಗೆ ಒಂದಿಬ್ಬರು ಗೊಣಗಿಕೊಳ್ಳುತ್ತಿದ್ದರು. ನಾನು ತಲೆ ತಗ್ಗಿಸಿ ನನ್ನ ಪಾಡಿಗೆ ಕಾಫಿ ಮಾಡಿಕೊಳ್ತಾ ಇದ್ದೆ. ಗೊಣಗಾಟದ ನಡುವಲ್ಲಿ ಒಬ್ಬಳು ಹೇಳಿದ್ದು Read the rest of this entry »

ಮುಗಿದರೂ ಮುಗಿಯದ್ದು

In ಅಂದಂದು, ಯೋಚನೆ on December 31, 2007 at 6:22 pm

ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ…
ಸ್ವಾರ್ಥದ ಒಳ್ಳೆತನ ಮತ್ತು ಅಗತ್ಯ. Read the rest of this entry »

ಕ್ರಿಸ್ಮಸ್ ದೀಪ ಮತ್ತು ಅಯ್ಯೋ ಪಾಪ

In ಅಂದಂದು, ಚಿತ್ರಗಳು, ಸ್ಥಿರಚಿತ್ರ on December 30, 2007 at 6:35 am

ಪಟ್ಟಣದಲ್ಲಿ ಕ್ರಿಸ್ಮಸ್‌ ದೀಪಗಳು

ಹಬ್ಬದಡುಗೆ ಉಂಡು ತಿಂದು ಕುಡಿದು ಬೀಗಿ ತೇಗಿ…


ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ

ಹರಟೆಯೆಂಬ ಪಾಠಶಾಲೆ

In ಅಂದಂದು, ಕಲ್ಪನೆ, ಯೋಚನೆ on December 26, 2007 at 5:41 pm


ಮೊನ್ನೆ ನಾವು ಕೆಲವರು ಹರಟೆ ಹೊಡೆದ್ದದ್ದರ ಬಗ್ಗೆ ಹೇಳ್ತಾ ಇದ್ದೀನಿ.

ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು. Read the rest of this entry »

ಅದಲು ಬದಲು

In ಅಂದಂದು, ಯೋಚನೆ on December 3, 2007 at 6:23 pm

ಹೋದ ವಾರ ಆಸ್ಟ್ರೇಲಿಯಾದಲ್ಲಿ ಚುನಾವಣೆ ಮುಗಿಯಿತು. ಸರ್ಕಾರ ಬದಲಾಯಿತು.ಅದರ ಬಗ್ಗೆ ಬರೀ ಬೇಕು ಅಂತ ಅನ್ಕೊಂಡರೂ ಆಗಲಿಲ್ಲ. ಈವತ್ತು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತಂತೆ.

ಹೋದ ಸರ್ಕಾರ ಬಿದ್ದಿದ್ದು, ಹೀನಾಮಾನವಾಗಿ ಸೋತಿದ್ದು ಯಾಕಿದ್ದೀತು? ಇದಕ್ಕೆಲ್ಲಾ ಏನು ಅರ್ಥ ಅಂತ ಯೋಚಿಸುತ್ತಿದ್ದೀನಿ. Read the rest of this entry »

ಕನಸಿನ ಹಗಲು ಕಾಟ

In ಅಂದಂದು, ಯೋಚನೆ on November 24, 2007 at 4:56 pm

ಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ. Read the rest of this entry »

ಬಾಣಲೆ ಬೆಂಕಿ

In ಅಂದಂದು, ಯೋಚನೆ on November 17, 2007 at 10:28 am

ಕರ್ನಾಟಕದ “ವಚನಭ್ರಷ್ಟತೆ”, “ಮಾನ-ಅವಮಾನ”, “ಗೌರವ-ಅಗೌರವ” ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.
Read the rest of this entry »

ತಲುಪಿದೆನೆ?

In ಅಂದಂದು, ಯೋಚನೆ on November 14, 2007 at 12:28 pm

ಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ.

Read the rest of this entry »

ಬೆಂಗಳೂರಿಗೆ ವಿದಾಯ

In ಅಂದಂದು, ಯೋಚನೆ on November 4, 2007 at 9:06 am

೩/೧೧/೦೭ ರಾತ್ರಿ ೧೦ ಗಂಟೆ.

ಬೆಂಗಳೂರು ಏರ್‌ಪೋರ್ಟಿನ ವಿಧಿ ವಿಧಾನಗಳನ್ನೆಲ್ಲಾ ಮುಗಿಸಿ ಕೂತು ನಿಟ್ಟುಸಿರುಬಿಡುತ್ತೇನೆ. ಬರುತ್ತಿದ್ದಂತೆಯೇ ಹೊರಟೂ ಬಿಡುತ್ತಿದ್ದೇನೆ. ಬೆಂಗಳೂರನ್ನು ಬಿಡುತ್ತೇನೆ.

Read the rest of this entry »

ಕಡೆಯ ಸಲ

In ಅಂದಂದು, ನಾಟಕ, ಯೋಚನೆ on October 30, 2007 at 2:30 am

ಸಣ್ಣವನಿದ್ದಾಗಲೇ ಅಲೀಬಾಬಾ ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ಆಡಿಸಿದ ಪ್ರೇಮಾ ಕಾರಂತ್ ಈವತ್ತು ಕೊನೆ ಉಸಿರೆಳೆದರು… ಒಂದೆರಡು ವಾರದಿಂದ ಬಳಲುತ್ತಿದ್ದರು… ಆಸ್ಪತ್ರೆಯಲ್ಲಿದ್ದರು…

Read the rest of this entry »

ಮೈಸೂರಿನಲ್ಲಿ ಮಳೆ

In ಅಂದಂದು, ನಾಟಕ, ಯೋಚನೆ on October 29, 2007 at 12:11 pm

ಮೈಸೂರಿನಲ್ಲಿ ಮೊನ್ನೆ ಎಂಬತ್ತರ ಬೆಂಗಳೂರು ಧುತ್ತನೆ ಎದುರಾಯಿತು.

ಮೈಸೂರಿನ ಹೊರವಲಯದ ಬಡಾವಣೆಯಲ್ಲಿ ಇರುವ “ನಟನ” ಎಂಬ ಪುಟ್ಟ ರಂಗಮಂದಿರ. ಸ್ವಲ್ಪ ಉದ್ದವೇ ಅನಿಸಿದ ಈ ವರ್ಷದ ತಿರುಗಾಟದ ನಾಟಕ – ‘ಈ ನರಕ… ಆ ಪುಳಕ…’. ತೆರೆಗಳು, ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳ್ಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ – ಈ ಏಳು ಲಂಕೇಶರ ನಾಟಕಗಳನ್ನು ಕೂಡಿಸಿ ರಘುನಂದನ್ ಈ ನಾಟಕವನ್ನು ರೂಪಿಸಿದ್ದಾರೆ. ಲಂಕೇಶರ ಹರಿತವಾದ ಮಾತುಗಳು, ಸಾಮಾನ್ಯ ನುಡಿಗಳಲ್ಲೇ ಕಾವ್ಯವನ್ನು ಮಿಂಚಿಸುತ್ತಾ ಗಾಢವಾಗುವುದು ತುಂಬಾ ಕುಶಿ ಕೊಟ್ಟಿತು. ನೀನಾಸಂರಿಗರ ನುಡಿರೀತಿ ಯಾಕೋ ಈ ಬಾರಿ, ಈ ನಾಟಕಕ್ಕೆ ಅತಿ ಭಾರವಾದಂತೆ ಅನಿಸಿತು. ಸುಲಭ ವಾಚನದಿಂದ ಪ್ರಭಾವ ಬೀರಬಹುದಾದ ಮಾತುಗಳು ಇಲ್ಲಿ ಹೇಳುವ ರೀತಿಯ ಒತ್ತಿನಿಂದ ಕುಂದಿದಂತೆ ಅನಿಸಿತು. ಏನೋ ಕಳಕೊಂಡಂತೆ ಅನಿಸಿತು. ಇದು ಉದ್ದೇಶಪೂರ್ಣವಿರಬಹುದೆ. ಹೌದಾದರೆ ಏತಕ್ಕಾಗಿರಬಹುದು ಎಂದು ಯೋಚಿಸಿದೆ. ಆದರೆ ಎರಡೂ ಮುಕ್ಕಾಲು ಗಂಟೆಗೂ ಮೀರಿದ ಅವಧಿಯ ಬಗ್ಗೆ ನೀನಾಸಂ ಯೋಚಿಸಿದರೆ ಒಳ್ಳೆಯದಿತ್ತು ಅನಿಸಿತು.

ಹತ್ತು ಗಂಟೆಯ ಸುಮಾರಿಗೆ ಮುಗಿದ ನಾಟಕದಿಂದ ಹೊರಬಂದೆವು. ಸಣ್ಣಕೆ ಮಳೆ ಹನಿಯ ತೊಡಗಿತು. ಜನರೆಲ್ಲಾ ಸ್ಕೂಟರ್‍ ಕಾರುಗಳನ್ನು ಹತ್ತಿ ಕತ್ತಲಲ್ಲಿ ಕರಗಿಹೋಗುತ್ತಿದ್ದರು. ಆಟೋ ಹಿಡಿಯಲು ದೂರದಲ್ಲಿದ್ದ ಮುಖ್ಯ ಬೀದಿಗೆ ಬಂದೆವು. ಯಾರೂ ಓಡಾಡದ ದೊಡ್ಡ ಬೀದಿ. ಇರುಳಲ್ಲಿ ಅಲ್ಲಲ್ಲಿ ಉರಿಯುತ್ತಿದ್ದ ದೀಪಗಳು. ಆಗೊಂದು ಈಗೊಂದು ಓಡಾಡುತ್ತಿದ್ದ ವಾಹನಗಳು. ಆದರೆ ಆಟೋಗಳು ಮಾತ್ರ ಒಂದೂ ಇಲ್ಲ. ದಿಕ್ಕು ತಪ್ಪಿದವರಂತೆ ಅತ್ತಿತ್ತ ಓಡಾಡುತ್ತಿದ್ದಾಗ ಇದ್ದಕಿದ್ದ ಹಾಗೆ ಧೋ ಎಂದು ಸುರಿದ ಮಳೆ. ದೂರದಲ್ಲಿ ಕಾಣುತ್ತಿದ್ದ ಮುಚ್ಚಿದ ಅಂಗಡಿಗೆ ಓಟ. ಅದರ ಮುಂದಿನ ಛಾವಣಿಯಡಿ ಸ್ವಲ್ಪ ಸುಧಾರಿಸಿಕೊಂಡೆವು. ಮುಂದೇನು ಎಂದು ಹೊಳೆಯಲಿಲ್ಲ. ರಂಗಮಂದಿರದ ಕಡೆಯಿಂದಲೇ ತೆವಳುತ್ತಾ ಬರುತ್ತಿದ್ದ ಕಾರಿಗೆ ಅಡ್ಡಹಾಕಿದೆ. ಬೆಳಿಗ್ಗೆ ಸಿಕ್ಕಿದ್ದ ಗೆಳೆಯ ಅದರಲ್ಲಿದ್ದರು. ತುಂಬಿಕೊಂಡಿದ್ದ ಕಾರಿನಲ್ಲಿ ನಾವೂ ತೂರಿಕೊಂಡೆವು. ಮನೆಯ ಹತ್ತಿರ ಬಿಟ್ಟರು.

ಹತ್ತು ನಿಮಿಷದ ಹಿಂದೆ ಮಳೆಯಲ್ಲಿ ಸಿಕ್ಕಿಕೊಂಡು ಚಡಪಡಿಸಿ ದಿಕ್ಕು ತಪ್ಪಿದ್ದು. ನಿರ್ಜನ ಬೀದಿ. ಸಿಗದ ಆಟೋ. ಈಗ ಮನೆಯ ಎದುರು ಕಾರಿನಿಂದ ಇಳಿದದ್ದು. ಎಂಬತ್ತರ ಬೆಂಗಳೂರಿನ ನೆನಪು.

ಮಂಪರಿನಲ್ಲಿ ಘಾಟಿ

In ಅಂದಂದು, ಯೋಚನೆ on October 23, 2007 at 2:08 am

 

ಬೆಂಗಳೂರಿನಿಂದ ಮೂಡುಬಿದ್ರೆಯ ದಾರಿಯಲ್ಲಿ ತೆವಳುತ್ತಿರುವ ಬಸ್ಸು. ನಡುರಾತ್ರಿ. ಬಸ್ಸಿನ ಅಲ್ಪ ಬೆಳಕಿನಲ್ಲಿ ಸರಿದು ಹೋಗುತ್ತಿದ್ದ ಮನೆ, ಅಂಗಳ, ಹಿತ್ತಲು, ಹಾಡಿ, ಕಾಡು… ಬಸ್ಸಿನ ಕ್ಷಣಿಕ ಬೆಳಕಿನಲ್ಲಿ ತೋರಿ ಕಾಣೆಯಾಗುತ್ತಿದ್ದ ದೇವಸ್ಥಾನ, ಮಸೀದಿ, ಇಗರ್ಜಿ ಗೋಪುರಗಳು… ಮತ್ತೆ ಕತ್ತಲೆಯಲ್ಲಿ ಕಾಡು ಬೇಲಿ ಇತ್ಯಾದಿ.

ಸಣ್ಣವನಿದ್ದಾಗ ಘಾಟಿ ಇಳಿದು ಹತ್ತುವುದನ್ನು ನೋಡುವ ಕುತೂಹಲದಲ್ಲಿ ಇವೆಲ್ಲವನ್ನು ಅರ್ಧ ಮಂಪರಿನಲ್ಲಿ ನೋಡುತ್ತಾ ನಿದ್ದೆ ಹತ್ತಿಬಿಡುತ್ತಿತ್ತು. ಘಾಟಿ ಹತ್ತಿ ಇಳಿಯುವುದು ಹಲವು ಸಲ ಸಿಕ್ಕುತ್ತಿರಲಿಲ್ಲ. ಆದರೆ, ಈ ಸಲ ಹಾಗಾಗಲಿಲ್ಲ. ಜೆಟ್‌ಲಾಗಿನ ಅವಾಂತರದಲ್ಲಿ ಎಚ್ಚರವಿತ್ತು. ಮನಸ್ಸಿನಲ್ಲಿ ನೆನಪುಗಳು ಬೆಚ್ಚಗೆ ಅರಳುತ್ತಿದ್ದವು. ಸಣ್ಣ ಮಗುವಿನ ಹಾಗೇ ಇವನ್ನೆಲ್ಲಾ ನೋಡುತ್ತಿದ್ದೇನೆ, ಅದೇ ಮಂಪರಿನಲ್ಲಿ, ಘಾಟಿಯ ಬರುವಿಕೆಯ ಕುತೂಹಲದಲ್ಲಿ ಅನಿಸುತ್ತಿತ್ತು!

ಬಸ್ಸು ಯಾಕೋ ತುಂಬಾ ತಡವಾಗಿ ಚಾರ್ಮಾಡಿ ಘಾಟಿ ತಲುಪಿತ್ತು. ಮುಂಜಾವದ ಬೆಳಕಲ್ಲಿ ಕಾತರದ ಮನಸ್ಸನ್ನು ಚೇಡಿಸುವಂತೆ ಮೆಲ್ಲನೆ ದೂರದ ಗುಡ್ಡ ಬೆಟ್ಟ ಮೋಡ ಎಲ್ಲ ಕಾಣತೊಡಗಿತು.

ಸರಕ್ಕನೆ ಇಳಿಯಬೇಕಾದ ಘಾಟಿಯ ಇಳಿಜಾರಿನಲ್ಲಿ ಏಕಾಏಕಿ ನಿಂತುಬಿಟ್ಟ ಬಸ್ಸು. ಮುಂದೆ ಹತ್ತಾರು ಬಸ್ಸು ಲಾರಿ ವಾಹನಗಳ ಸಾಲು. ತುಂಬಾ ಇಕ್ಕಟ್ಟಾದ ದಾರಿಯಲ್ಲಿ ಮುಂದಿಂದ ಬರುವ ವಾಹನಗಳನ್ನು ಸಂಬಾಳಿಸಿಕೊಂಡು ಹೋಗಬೇಕು. ಕೆಲವು ತಿರುವುಗಳಲ್ಲಿ ಅರ್ಧ ಮುಕ್ಕಾಲು ಗಂಟೆ ನಿಂತುಬಿಡುತಿತ್ತು. ಶಿರಾಡಿ ಘಾಟಿ ಮುಚ್ಚಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಎರಡರಷ್ಷು ಗಾಡಿಗಳು. ನಿಂತ ಬಸ್ಸಿಂದ ಇಳಿದು ಅಡ್ಡಾಡುತ್ತಾ, ಸರ್ಕಾರವನ್ನು ಬಯ್ಯುತ್ತಾ ಕಾಲದೂಡುತ್ತಿದ್ದ ಮಂದಿ. ಹೀಗೆ ಮೆಲ್ಲನೆ ತೆವಳಿ ಇಳಿಯುವಾಗ ನಾಕೈದು ಗಂಟೆ ಕಳೆದು ಬಿಟ್ಟಿತ್ತು. ಬೆಳಕು ಚೆನ್ನಾಗಿಯೇ ಹರಿದಿತ್ತು.

ಅರೆ ಮಂಪರಿನಲ್ಲಿ ಘಾಟಿ ಇಳಿಯುವ ಕಾರ್ಯಕ್ರಮವನ್ನು ಇಷ್ಟವಿಲ್ಲದಿದ್ದರೂ ಮತ್ತೊಂದು ದಿನಕ್ಕೆ ಮುಂದೂಡಬೇಕಾಯಿತು.

ಬೆಂಗಳೂರಿನ ನೆಲ

In ಅಂದಂದು on October 17, 2007 at 4:25 pm

ಬೆಂಗಳೂರಿನ ದಾರಿಯಲ್ಲಿ ಸಿಕ್ಕುವ ಸಿಂಗಪುರವೋ, ಕೌಲಾಲಂಪುರವೋ ಬಂದು ಮುಟ್ಟುವವರೆಗೂ ಎಲ್ಲಾ ಯಾಂತ್ರಿಕವಾಗಿ ಆಗತ್ತೆ. ಸಿಡ್ನಿಯಲ್ಲಿ ಬ್ಯಾಗೇಜ್ ಚಕಿನ್, ಸಿಂಗಪುರದಲ್ಲಿ ಇಳಿದು, ಏರ್ಪೋರ್ಟ್‌ ಸುತ್ತಿ, ಮತ್ತೆ ವಿಮಾನ ಹತ್ತುವುದು ಎಲ್ಲ. ಆದರೆ ಅಲ್ಲಿಂದ ಮತ್ತೆ ವಿಮಾನದಲ್ಲಿ ಹಾರುವಾಗ, ನೆಲ ನನ್ನಿಂದ ದೂರ ಸರಿಯುವಾಗ ಅಲ್ಲಿಯವರೆಗಿದ್ದ ಯಾಂತ್ರಿಕತೆ ಮಾಯವಾಗಿ ಒಂದು ರೀತಿಯ ಮಾಂತ್ರಿಕತೆ, ಭಾವುಕತೆ ಆವರಿಸಿಕೊಳ್ಳುವುದು ಪ್ರತಿ ಸಲದ ಅನುಭವ.

ಈ ಸಲವೂ ಸಿಂಗಪುರದಿಂದ ವಿಮಾನ ಮೇಲೇರುತ್ತಿದ್ದಂತೆ ವಿಚಿತ್ರವಾಗಿ ಕವಿಯುವ ಈ ಭಾವ ಏನು ಅಂತ ಪ್ರತಿಸಲದಂತೆ ನೋಡಿಕೊಳ್ಳುತ್ತೇನೆ. ನಾನೀಗ ಇಲ್ಲಿ ಬಿಡುತ್ತಿರುವ ನೆಲವನ್ನ ಮತ್ತೆ ಮುಟ್ಟುವುದು ಇಂಡಿಯಾದಲ್ಲಿ, ನನ್ನ ಪ್ರೀತಿಯ ಬೆಂಗಳೂರಲ್ಲಿ ಅನ್ನುವುದು ದಟ್ಟವಾಗಿ ಸುತ್ತಿಕೊಂಡಿತು. ಎರಡೆರಡು ವರ್ಷಕ್ಕೊಮ್ಮೆ ಬರುತ್ತಿದ್ದರೂ ಇದೇನು ಹೀಗೆ ಅಂತ ತಿಳಿಯುವುದಿಲ್ಲ.

ನೆಲದಲ್ಲಿ ರಾತ್ರಿ ದೀಪಗಳ ಚುಕ್ಕೆಯಲ್ಲಿ ಹರಡಿಕೊಂಡಿರುವ ಬೆಂಗಳೂರು ಪ್ರತಿಸಲವೂ ಸುಂದರವಾಗಿ ಕಾಣತ್ತೆ. ಪಿಳಿಪಿಳಿಸುವ ದೀಪದಲ್ಲಿ ಈಗೀಗ ಬಿಳಿ ಮತ್ತು ಕಿತ್ತಳೆ ಬಣ್ಣ ಕೂಡಿಕೊಂಡಿದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ರಸ್ತೆಗಳಲ್ಲಿ ಓಡಾಡುವ ವಾಹನಗಳು ಕೂಡ ಸಣ್ಣ ಮಗುವಿನಂತೆ ಒಳಗೊಳಗೇ ರೋಮಾಂಚನ ಬೆಂಗಳೂರನ್ನು ತಬ್ಬಿಕೊಳ್ಳುವಂತೆ ವಿಮಾನ ನೇರವಾಗಿ ಆ ದೀಪಗಳ ರಾಶಿಯ ನಡುವೇ ಇಳಿಯುತ್ತದೆ, ನೆಲ ಮುಟ್ಟುತ್ತದೆ, ತೆವಳಿ ಬಂದು ನಿಲ್ಲುತ್ತದೆ. ಇವೆಲ್ಲಾ ಏನನ್ನೋ ಎದುರು ನೋಡುತ್ತಿರುವ ಕಾತರದಲ್ಲಿ ತುಂಬಾ ದೀರ್ಘ ಅನಿಸುತ್ತಿದೆ.

ಹೊರಗೆ ಮಳೆಯಲ್ಲಿ ತೇವವಾದ ನೆಲ ಏರ್ಪೋರ್ಟಿನ ದೊಡ್ಡ ದೊಡ್ಡ ದೀಪಗಳ ಬೆಳಕಲ್ಲಿ ಮಿರಿಮಿರಿ ಮಿಂಚುತ್ತಿದ್ದೆ. ಇಳಿಯುವ ಕಾತರ. ವಿಮಾನಕ್ಕೆ ಸಿಕ್ಕಿಸಿದ ತೂಬಿಗೆ ಕಾಲಿಡುತ್ತಿದ್ದಂತೆ ತೂಬಿನ ಮಾಡು ತೂತಾಗಿ ಮಳೆಯ ನೀರು ದಳದಳ ಎಂದು ಸುರಿಯುತ್ತಿದೆ. ಅಲ್ಲಿ ಕಾಲಿಟ್ಟು ಜಾರದಿರಲಿ ಎಂದು ದಿನಪತ್ರಿಕೆಯ ಹಾಳೆಗಳನ್ನೆಲ್ಲಾ ಹರಡಿದ್ದಾರೆ. ಅದು ಇನ್ನೂ ಪಿತಪಿತ ಮಾಡಿಬಿಟ್ಟಿದೆ. ಒಳಗೊಳಗೇ ನಗುತ್ತೇನೆ. ಭಾವುಕನಾಗಿರಲು ಬೆಂಗಳೂರು ಬಿಡುವುದಿಲ್ಲ. ಇಮ್ಮಿಗ್ರೇಷನ್‌ನವ ಕಣ್ಣಿಗೆ ಕಣ್ಣು ಕೊಡಲಿಲ್ಲ. ಕನ್ನಡದಲ್ಲಿ ಮಾತಾಡಲು ಸಿಕ್ಕುವ ಮೊದಲಿಗ. ಮಾತಾಡಲಿಲ್ಲ. ಕ್ಷಣದಲ್ಲಿ ಪಾಸ್‌ಪೋರ್ಟ್ ಗುದ್ದಿ ನನ್ನತ್ತ ತಳ್ಳಿ ನನ್ನ ಹಿಂದಿನವರನ್ನು ಕೈಬೀಸಿ ಕರೆದ. ಥ್ಯಾಂಕ್ಸ್ ಹೇಳಿ ಹೊರ ಬಂದೆ.

ಅಲ್ಲಿಂದ ಕೆಳಗಿಳಿಯುವ ಎಸ್ಕಲೇಟರ್‍ ಕೆಟ್ಟಿರಬೇಕು. ಆದರೆ ಅದರ ತುಂಬಾ ಮತ್ತು ಪಕ್ಕದ ಮೆಟ್ಟಿಲ ತುಂಬಾ ಜನ. ಏನೋ ಅನಾಹುತ ಆದವರಂತೆ ತುಂಬಿಕೊಂಡಿದ್ದರು. ಓಹೋ. ಕೆಳಗೆ ಹಾಲಿನಲ್ಲಿ ಕಿಕ್ಕಿರಿದಿರುವ ಜನ. ಸ್ಥಳವಿಲ್ಲ. ಅದಕ್ಕೆ ಎಸ್ಕೆಲೇಟರ್‍ ಆರಿಸಿದ್ದಾರೆ. ಮನೆಯವರನ್ನು ಕಾಣುವ ಕಾತರದ ಕೊನೆಯ ಕ್ಷಣಗಳು. ಸುಲಭವಲ್ಲ. ತಿಣಕಿ, ತೂರಿ, ಹಾರಿ, ನನ್ನ ಸಾಮಾನು ಪಡೆದು ಹೊರಬಂದೆ.

ಹೌದು ಬೆಂಗಳೂರು ಭಾವುಕನಾಗಿರಲು ಬಿಡುವುದಿಲ್ಲ. ಒಳಗೊಳಗೇ ಪ್ರೀತಿಯಿಂದ ನಕ್ಕೆ.

ರಂಜಾನ್ ಅರ್ಥ ಕುರಿತು

In ಅಂದಂದು, ಯೋಚನೆ on September 28, 2007 at 11:45 am

ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ.

ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್‌ದಾ ಪದದ ಅರ್ಥ-ಬಿಸಿಲಿಗೆ ಸುಟ್ಟ ಮರಳು ಎಂದು. ಕೆಲವರು ಹಸಿವಿನಿಂದ ಹೊಟ್ಟೆಯಲ್ಲಿ ಸುಡುವ ಅನುಭವವನ್ನು ಅದು ಸೂಚಿಸುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಬಿಸಿಲು ನೆಲವನ್ನು ಸುಡುವಂತೆ ಸದ್ಭಾವ ದುಷ್ಟತನವನ್ನು ಸುಟ್ಟುಹಾಕುವುದರ ಸಂಕೇತ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ, ಮರಳು ಹಾಗು ಕಲ್ಲುಗಳು ಬಿಸಿಲನ್ನು ಅವಾಹಿಸಿ ತಾವೇ ಸುಡುವಂತೆ, ಹಸಿವಿನಲ್ಲಿ ಅಲ್ಲಾಹುವಿನ ನೆನಪು ಹಾಗು ಪಶ್ಚಾತ್ತಾಪದ ಆವಾಹನೆ ಸುಲಭ ಎನ್ನುತ್ತಾರೆ.

ಅರ್-ರಮದ್- ಮೂಲಪದದಿಂದಲೇ ಹುಟಿದ ಗಾದೆ- ಕಲ್ ಮುಸ್ತಜೀರ್ ಮಿನರ್, ರಮದಾ ಬಿನ್ನರ್. ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದದ್ದು. ಈ ಗಾದೆಯನ್ನು ಓದುತ್ತಿದ್ದಂತೆ, ಜಾಗತಿಕ ಮಹಾಶಕ್ತಿಗಳ ಬೇಗೆಯಡಿ ಸುಡುತ್ತಲೇ ಇರುವ ಪ್ಯಾಲಸ್ಟೇನಿನ ಮಕ್ಕಳ ಮುಖಗಳು ಮನಕ್ಕೆ ಎದುರಾದವು. ಇನ್ನು ಸುಡಲು ಏನೂ ಉಳಿದಿಲ್ಲದಿದ್ದರೂ ಪರಿತಾಪ ಮುಗಿಯದ ಆಫ್ಗಾನಿಸ್ತಾನ್‌ದ ದಿಟ್ಟ ಮಹಿಳೆಯರು ನಕ್ಕರು. ಬಾಣಲೆಯಿಂದ ಬೆಂಕಿಗೆ ಬಿದ್ದು ಕರಟುತ್ತಿರುವ ಇರಾಖಿನಲ್ಲಿ ತಲೆಗೆ ಕೈಹೊತ್ತು ಕೂತವರು ಮನದ ಚಿತ್ರಗಳಾದರು. ಎರಡು ಹೊಟ್ಟೆ ಉರಿಗಳ ನಡುವೆ ಒಣಗಿ ನಲಗುತ್ತಿರುವ ಪ್ರೀತಿಯ ಕಾಶ್ಮೀರದ ತಂಪೆಲ್ಲಿ ಹಾರಿದೆ ಎಂದು ಹುಡುಕುವಂತಾಯಿತು.

ಪರಿಸರದ ಮೇಲೆ ಮನ ಬಂದಂತೆ “ಆಕ್ರಮಣ” ಮಾಡುತ್ತಿದ್ದೇವೆ. ಅಂಥ ಜೀವನ ರೀತಿಯನ್ನೇ ಮೆರೆಯುತ್ತಿದ್ದೇವೆ. ಈ ಬುವಿಯನ್ನು ಕಾದ ಬಾಣಲೆ ಮಾಡುತ್ತಿದ್ದೇವೆ. ಹಾಗೆಂದು ಗೊತ್ತಿದ್ದೂ, ಅದರ ಬಗ್ಗೆ ತಣ್ಣಗೆ ಸಣ್ಣ ಪುಟ್ಟ ಮಾತುಗಳನ್ನಾಡಿಕೊಂಡು ಕೂತಿದ್ದೇವೆ.

ಕಣ್ಣೆದುರಿನಲ್ಲೇ ನಡೆಯುತ್ತಿರುವ ಲೋಕದ ಅನಾಚಾರಗಳನ್ನು, ಹತ್ಯಾಕಾಂಡಗಳನ್ನು ನೋಡುತ್ತಾ ಮೂಕರಾಗಿ ಕೂರವ ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ ಎಂದು ಮನಸ್ಸು ಒಣಗಿ ಮುರುಟುತ್ತದೆ.

ಅಲ್ಲಾಹುವಿನ ದೂತ ಒಂದು ಹಾದಿತ್ತಿನಲ್ಲಿ ಹೇಳುವಂತೆ- `ಬೆಳಗಿನ ಎಳೆಬಿಸಿಲು ಮರಿ ಒಂಟೆಗೆ ಉರಿಯಾಗಿ ತಟ್ಟಿದಾಗ ಬಾಕಿವುಳಿದ ತಪ್ಪಿತಸ್ಥರ ಪ್ರಾರ್ಥನೆಯ ಕಾಲ ಬಂದಿದೆ`.

ವಸಂತದ ವಿಷಾದ, ಏಪೆಕ್ ಮತ್ತು ಸೋಲ್ಸನಿತ್ಸಿನ್

In ಅಂದಂದು, ಪದ್ಯ, ಯೋಚನೆ on September 18, 2007 at 7:13 am

 

boots.jpg

ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ “ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್‌” ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.

ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ “ನೀನು ಏನನ್ನು ವಿರೋಧಿಸುತ್ತಿದ್ದೀಯ?” ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.

ಸಿಡ್ನಿಯಲ್ಲಿ ವಸಂತ ಛಳಿಗಾಲದ ಬಟ್ಟೆ ಕಳಚಿ ಹೊಸ ಉನ್ಮಾದದಿಂದ ಕುಣಿಯುತ್ತಿದೆ. ಹಚ್ಚವಾಗಿ ನಗುವ ಬಿಸಿಲು. ಮಳೆ ಬಂದು ತೊಳೆದಿಟ್ಟ ನೆಲದಲ್ಲಿ ಹಸಿರು ಚಿಗುರು. ಎಲ್ಲ ಹೋದ ವರ್ಷದಂತೆಯೇ. ಆದರೆ ಈ ವರ್ಷ ಆಸ್ಟ್ರೇಲಿಯಾದ ಬರಗಾಲ ಕೊನೆಗಾಣುತ್ತಿರಬಹುದು ಎಂಬ ಉಲ್ಲಾಸವೂ ಇದೆ. ಅದು ಮನಸ್ಸನ್ನು ಹಗುರಾಗಿಸಿದೆ.

ಸೋಲ್ಸನಿತ್ಸಿನ್ ಸೈಬೀರಿಯಾದಲ್ಲಿ ಅಮಾನುಷವಾಗಿ ತಾನೇ ಬಂಧಿಸಲ್ಪಟ್ಟಿದ್ದ. ಹತ್ತಾರು ವರ್ಷ ಮಾರಣಾಂತಿಕ ಹಿಮದಲ್ಲಿ ಹಿಂಸೆ ಅನುಭವಿಸಿದ್ದ. ಸಾಯದೆ ಉಳಿದು ಪಾರಾಗಿ ತನ್ನ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ. ಇವಾನ್‌ ಪಾತ್ರದ ಮೂಲಕ ತನ್ನ ಇಡೀ ಅನುಭವವನ್ನು ಒಂದು ದಿನದ ಆಗು ಹೋಗಿನಲ್ಲಿ ಪ್ರತಿಫಲಿಸುತ್ತಾನೆ. ಅವನು ಅಲ್ಲಿ ಯಾಕೆ ಬಂಧನದಲ್ಲಿದ್ದಾನೆ? ಕತೆಯ ಮೂರನೇ ಒಂದು ಭಾಗದವರೆಗೂ ಕತೆಗಾರ ಹೇಳುವುದಿಲ್ಲ. ನಂತರ ಅದನ್ನು ಸಹಜವಾಗಿ ಹೇಳುತ್ತಾನೆ. ಆದರೆ, ಅಷ್ಟರಲ್ಲಿ ಅದು ಗೌಣ ಎಂದು ಅನಿಸುವಲ್ಲಿಗೆ ಓದುಗ ಬಂದು ನಿಂತಿರುತ್ತಾನೆ. ಅದೊಂದು ಅಚ್ಚರಿ, ಆದರೆ ಸಹಜವೂ ಕೂಡ.

ನಮ್ಮ ವಯ್ಯಕ್ತಿಕದ ಆಚೆಗೆ ನಡೆಯುವ ಅನ್ಯಾಯ ನಮಗೂ ಸಂಬಂಧಪಟ್ಟಿದ್ದು. ಏಪೆಕ್ ಪ್ರೊಟೆಸ್ಟ್ ಬಗ್ಗೆ ನನ್ನನ್ನು ಪ್ರಶ್ನಿಸಿದವರಿಗೆ ಅದನ್ನು ಹೇಗೆ ಹೇಳಲಿ? ಮಾನವೀಯತೆ ಇಲ್ಲದ ಪರಿಸರ ನನ್ನ ಮಾನವೀಯತೆಯನ್ನೂ ಕಸಿದುಕೊಳ್ಳುತ್ತದೆ. ಹೇಗೆ ಅದನ್ನು ಅರ್ಥಮಾಡಿಸಲಿ? ಆರ್ಥಿಕ ಏಳಿಗೆಗೆ ಬಲಿಯಾಗುವವರು ಯಾರು? ಅವರು ಯಾಕೆ ಬಲಿಯಾಗಬೇಕು? ಈ ಪ್ರಶ್ನೆಗಳನ್ನೆಲ್ಲಾ ಹೇಗೆ ಉತ್ತರವನ್ನಾಗಿ ಮಾರ್ಪಡಿಸಿ ಪ್ರಶ್ನಿಸದವರ ಮುಂದೆ ಹಿಡಿಯಲಿ? ಒಳಗೊಳಗೇ ಇದೆಲ್ಲದರ ಜತೆ ಗುದ್ದಾಡುತ್ತಿದ್ದೇನೆ. ಆದರೆ ಹೊರಗೆ ನಗುತ್ತೇನೆ.

ವಸಂತದ ಬಿಸಿಲಿಗೆ ಮುಖವೊಡ್ಡಿ ಅಸಾಧಾರಣ ಸ್ವಾಸ್ಥ್ಯ ಅನುಭವಿಸುತ್ತೇನೆ. ವಸಂತಕ್ಕೆ ತಾನು ಕೊಂಚ ಬೇಗ ಬಂದುಬಿಟ್ಟೆನೆ ಎಂಬ ಅನುಮಾನ. ಮತ್ತೊಂದು ವಾರ ಮಳೆ, ಛಳಿ. ಜನರಿಗೂ ಕೊಂಚ ಗಲಿಬಿಲಿ. ನಿಜವಾಗಿಯೂ ಇದು ವಸಂತವೇ? ವಸಂತ ಬಂದು ಬಿಟ್ಟಿತೆ? ಮರೆತು ಬಿಟ್ಟೆನೆ? ವಸಂತವೆಂದರೆ ಇದೇನೆ? ಇದು ನೋಡಿ ಯಾವಾಗಲೂ ಹೀಗೆ. ಕಾಲ ಬದಲಾಗುವುದು ಸ್ವಿಚ್ ಹಾಕಿದ ಹಾಗಲ್ಲ. ವಿದ್ಯುತ ದೀಪ ಹಾಕಿ ಆರಿಸಿದಂತಲ್ಲ. ಅದು ನಿಧಾನಕ್ಕೆ ಅನುಮಾನದಿಂದ ಜರುಗುತ್ತದೆ. ಅದಕ್ಕೆ ಹಲವಾರು ಸಣ್ಣ ಸಣ್ಣ ಒತ್ತಡಗಳಿರಬೇಕಾಗುತ್ತದೆ. ಅದನ್ನು ನಾನು ನೀವು ತರಬೇಕಷ್ಟೆ. ಸಣ್ಣ ಸಣ್ಣ ಪ್ರಮಾಣದಲ್ಲಾದರೂ ಸರಿಯೆ.

ಸೋಲ್ಸನಿತ್ಸಿನ್ ವಿವರಿಸುವ ದಿನವೂ ಅದರ ಹಿಂದಿನ ದಿನದಿಂದ ಬೇರೆಯಾಗಿ ಕೊಯ್ದಿಟ್ಟದ್ದಲ್ಲ. ಹಿಮದಲ್ಲಿ ಇಡೀ ದಿನ ಒದ್ದಾಡಿ ರಾತ್ರಿ ತನ್ನ ಹಾಸಿಗೆಯ ಹರಕು ಬಟ್ಟೆ, ತೂತು ಕಾಲುಚೀಲಗಳಲ್ಲೇ ಶಾಖ ಹುಟ್ಟಿಸಿಕೊಳ್ಳುವುದು. ಮತ್ತೆ ರೋಲ್-ಕಾಲ್ ಕರೆದು ಬಿಟ್ಟಾರು ಎಂದು ಹೆದರುತ್ತಾ ದೇಹ ನಿದ್ದೆಗಿಳಿಯುವುದು. ಆ ನಿದ್ದೆಯೊಂದೆ ಹಿಂದಿನ ದಿನದಿಂದ ಮುಂದಿನ ದಿನವನ್ನು ಬೇರ್ಪಡಿಸುವುದು. ಓದುತ್ತಿರುವ ವಸಂತದಲ್ಲಿ ನನ್ನನ್ನು ಇವೆಲ್ಲಾ ನಡುಗಿಸುತ್ತದೆ. ಅವನಿಗೆ ನಿದ್ದೆ ಅಗತ್ಯ. ಆದರೆ ಇವಾನ್ ಮಾಡುವ ನಿದ್ದೆ ಎಚ್ಚರ ತುಂಬಿದ ನಿದ್ದೆ. ನಿದ್ದೆಯಲ್ಲೂ ತಪ್ಪು ಮಾಡಿಬಿಟ್ಟರೆ?

ಏಪೆಕ್ ಪ್ರೊಟೆಸ್ಟಿಗೆ ಹೋಗಲು ಏನು ಕಾರಣ ಎಂದು ಕೇಳುವುದೇ ಒಂದು ರಾಜಕೀಯ ಪ್ರಶ್ನೆ ಅನ್ನಿಸಿತು. ಹಲವಾರು ಕಾರಣ ಕೊಟ್ಟು ಸಮರ್ಥಿಸಿಕೊಳ್ಳಬಹುದು. ನಾನು ಅನ್ನುವ ಇದು, ನಾನೊಬ್ಬನೇ ಅಲ್ಲ. ನಾನು ನನ್ನ ಸಮುದಾಯ, ನಾನು ನನ್ನ ಸಮಾಜ ಕೂಡ. ಅದಕ್ಕೆ ಹಿಡಿದ ಹುಳುಕು ನನಗೂ ಹಿಡಿದ ಹಾಗೆ. ನಾನು ನಿದ್ದೆ ಮಾಡುತ್ತಿಲ್ಲ. ಎಚ್ಚರವಾಗಿದ್ದೀನಿ. ಹಾಗೆಂದು ನನಗೆ ನಾನೇ ಹೇಳಿಕೊಳ್ಳುವ ಒಂದು ವಿಧಾನ ಇದು. ಚೆನ್ನಾಗಿ ನಿದ್ದೆ ಮಾಡವಂಥ ಸ್ವಸ್ಧ ಪರಿಸರದಲ್ಲಿ ಏಕೆ ನಿದ್ದೆಗೆಡಬೇಕು? ಎಚ್ಚರ ಸವಲತ್ತಲ್ಲ. ಎಚ್ಚರ ಹೊಟ್ಟೆ ತುಂಬಿದವರ ಸೌಖ್ಯವಲ್ಲ. ಅದೊಂದು ಅಗತ್ಯ. ಅಸಹನೆಯನ್ನು ಹಂಚಿಕೊಳ್ಳುವುದೂ ಅಷ್ಟೆ.

ಸೋಲ್ಸನಿತ್ಸಿನ್ ಕತೆಯನ್ನು ೧೯೬೨ರಲ್ಲಿ ಸೋವಿಯತ್ ಪ್ರಧಾನಿ ಕೃಷೇವ್‌ನ ಪರವಾನಗಿ ಪಡೆದು ಪ್ರಕಟಿಸಿದರಂತೆ. ಅದು ಕಾಲಮಾನದಲ್ಲಿ ತುಂಬಾ ದೂರದ ಸಂಗತಿ. ರಾಜಕೀಯ ಪರಿಸ್ಥಿತಿಯಲ್ಲೂ ಕೂಡ. ಹಾಗಾಗಿಯೇ ಇವಾನ್ ಕತೆ ಚರಿತ್ರೆಯಂತೆ ಕಾಣುತ್ತದೆ. ಆದರೆ ಒಂದು ವಿಪರ್ಯಾಸ ನೋಡಿ. ಮರಣ ಪದ್ಯ ಕೂಡ, ಲೋಕದಲ್ಲೇ ಅತಿ ಹೆಚ್ಚು ಸ್ವಾತಂತ್ಯ್ರವಿರುವ ಅಮೇರಿಕದಂಥ ದೇಶದ ಆಡಳಿತದ ಪರವಾನಗಿ ಪಡೆದು ಪ್ರಕಟವಾಗಬೇಕಾಯಿತು.painting.jpg

ನೋಡಿ – ನಿದ್ದೆ ವಿಪರ್ಯಾಸಗಳನ್ನು ಒಂದಕ್ಕೊಂದು ಹೊಂದಿಸಿಬಿಡುತ್ತದೆ. ಅದನ್ನು ಕನಸಾಗಿ ಹೆಣೆದು ನಾವು ಅದರಲ್ಲಿ ಕಳೆದುಹೋಗುವಂತೆ ಮಾಡಿಬಿಡುತ್ತದೆ. ಎಚ್ಚರ ಮಾತ್ರ ಅದರೊಡನೆ ಗುದ್ದಾಡ ಬೇಕಾಗುತ್ತದೆ.

ವಸಂತದ ಅನುಮಾನ ಈಗ ವಿಷಾದವಾಗಿ ಕಾಡುತ್ತದೆ. ವಿಷಾದದಿಂದ ಕೈಚೆಲ್ಲದೆ, ವಿಷಾದವನ್ನು ಇಟ್ಟುಕೊಂಡೂ ಎಚ್ಚರವಾಗಿರುವುದು ಪಡಬೇಕಾದ ಪಾಡಷ್ಟೇ ಅಲ್ಲ. ಅದು ಜವಾಬ್ದಾರಿ ಕೂಡ. ಅದನ್ನು ನನಗೆ ನಾನೇ ಆಗಾಗ ಹೇಳಿಕೊಳ್ಳುವುದೂ ಮುಖ್ಯ. ಅದು ಯಾವ ರೀತಿಯಲ್ಲಾದರೂ ಆಗಬಹುದು.

ಇವಾನ್ ಹಿಮದ ಆಳದಲ್ಲಿ,
ವಸಂತಕ್ಕೆ ಎದುರು ನೋಡುತ್ತಾ,
ಸಣ್ಣಪುಟ್ಟ ಪ್ರತಿರೋಧವನ್ನು ತೋರಿಸುತ್ತಾ ಬದುಕುಳಿದ ಹಾಗೆ,
ತೋರಿಸಿದ್ದರಿಂದಲೇ ಬದುಕುಳಿದ ಹಾಗೆ…

ಏಪೆಕ್ ಪ್ರೊಟೆಸ್ಟ್

In ಅಂದಂದು on September 8, 2007 at 5:58 pm

ಸಿಡ್ನಿಯಲ್ಲಿ ನಡೆಯುತ್ತಿರುವ ಏಪೆಕ್ ಸಮ್ಮಿಟ್‌ನ ಸಂದರ್ಭದಲ್ಲಿ ಬುಷ್ ಮತ್ತಿತರ ಸಮರಾಕಾಂಕ್ಷಿಗಳ ವಿರುದ್ಧ ನಡೆದ ಪ್ರೊಟೆಸ್ಟ್ ಮಾರ್ಚಿಗೆ ಈವತ್ತು ಹೋಗಿದ್ದೆ. ಮಕ್ಕಳು-ಮರಿಗಳಿಂದ ಹಿಡಿದು ಮುದುಕರವರೆಗೆ ಗಾಂಧಿವಾದಿಗಳಿಂದ ಹಿಡಿದು ವೇಶ್ಯೆಯರವರೆಗೆ ಎಲ್ಲರೂ ಈವತ್ತು ಸೇರಿದ್ದರು.

ವಾರದಿಂದ ಸಿಡ್ನಿಗೇ ಒಂದು ರೀತಿಯ ದಿಗ್ಬಂಧನ ಹಾಕಿಟ್ಟ ಅನುಭವ. ಹತ್ತಾರು ಅಡಿ ಎತ್ತರದ ಕಬ್ಬಿಣದ ಬೇಲಿಗಳನ್ನು ನಗರದ ಮುಖ್ಯ ರಸ್ತೆಗಳಿಗೇ ಹಾಕಿಬಿಟ್ಟಿದ್ದಾರೆ. ಲೋಕದ ೨೧ ರಾಷ್ಟ್ರದ “ಪ್ರತಿಷ್ಟಿತರು” ಓಡಾಡಲು ಅನುಕೂಲವಾಗುವಂತೆ. ನಮ್ಮನಿಮ್ಮಂತವರ ನೆರಳು ಅವರು ತುಳಿಯದಂತೆ ದೂರದಲ್ಲೇ ಹೋಗಬೇಕು!

ಈವತ್ತಿನ ಚಳವಳಿಯೂ ೨ ಕಿ.ಮಿ ದೂರದಲ್ಲೇ ಇಟ್ಟಿದ್ದರು. ಈವತ್ತು ಭಾರಿ ಹಿಂಸಾಚಾರ ನಡೆಯುತ್ತದೆ. ಸಿಡ್ನಿ ಹಿಂದೆಂದೂ ಇಂಥ ಹಿಂಸೆ ಕಂಡಿಲ್ಲ. ೨೦ ಸಾವಿರ ಜನ ಬರುತ್ತಾರೆ. ಯಾರು ಏನು ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಹೀಗೆಲ್ಲಾ ಮೊದಲೇ ಜನರನ್ನು ಪೋಲೀಸರು ಹೆದರಿಸಿದ್ದರು. ಪೋಲೀಸ್ ಕುದುರೆಗಳಿಗೆ ಯಾವುದೋ ಫ್ಲೂ ರೋಗ ಅಂತ ನೀರಿನ ಕಾನೆನ್ ಟ್ರಕ್‌ಗಳು ಬಂದಿದ್ದವು!

ಎಲ್ಲಾ ಹುಸಿಯಾಯಿತು. ೫೦೦೦ಕ್ಕೂ ಮಿಕ್ಕಿ ಬಂದಿದ್ದ ಜನರೆಲ್ಲಾ ಪೋಲೀಸರನ್ನು ನೋಡಿ ಪಕಪಕ ನಗುತ್ತಾ, ಖೂಳರ ವಿರುದ್ಧ ಘೋಷಣೆ ಕೂಗುತ್ತಾ, ಕುಣಿಯುತ್ತಾ ಓಡಾಡಿಕೊಂಡಿದ್ದರು! ಪೋಲೀಸರು ಏನೂ ಹಿಂಸಾಚಾರ ನಡೆಯದ್ದು ನೋಡಿ ಆತಂಕಗೊಂಡು ಕಡೆಯಲ್ಲಿ ಎಲ್ಲರನ್ನೂ ವಿನಾಕಾರಣ ರಸ್ತೆಯ ಒಂದು ಬದಿಗೆ ತಳ್ಳಲು ಶುರು ಮಾಡಿದರು! ಜನ ನಗುತ್ತಾ ಪಕ್ಕದ ಪಾರ್ಕಿನ ಒಳಗೆ ಭಾಷಣ ಕೇಳಲು ಹೋದರು!!
ಪೋಲೀಸ್ ಬಂದೋಬಸ್ತಿಗೆ ನೂರಾರು ಮಿಲಿಯನ್ ಡಾಲರ್‍ ಖರ್ಚು ಮಾಡಿದ್ದು ಏನಕ್ಕೋ ಎಂದು ಎಲ್ಲರ ಪ್ರಶ್ನೆ!

ಇನ್ನೂ ಹೆಚ್ಚಿನ ಚಿತ್ರಗಳಿಗೆ ಇಲ್ಲಿ ನೋಡಿ

ನನ್ನ ಮುಖಚಿತ್ರ

In ಅಂದಂದು, ಯೋಚನೆ on August 31, 2007 at 9:55 pm

ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು.

ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ – ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ ಮೇಲೆ ವಕ್ರವಾಗಿ ಮದ. ಮೋಹದ ಮೂಲೆನಲ್ಲಿ ಮತ್ಸರ. ಹೀಗೆ ಸ್ವಲ್ಪ ಓರೆ ಕೋರೆ ಮಾಡಿ ಜೋಡಿಸಿ. ಎರಡು ಕಣ್ಣಗಳೂ ಸಮವಾಗಿ ಗುಂಡಗೆ ಇಡಬೇಡಿ. ಒಂದು ಸ್ವಲ್ಪ ಆಚೆಗಿಡಿ. ಒಂದು ಕಣ್ಣು ದೂರದಲ್ಲಿರೋದನ್ನ ಎವೆಯಿಕ್ಕದೆ ನೋಡೋ ಹಾಗೆ ಇದ್ದರೆ, ಮತ್ತೊಂದು ಕುರಿ ಕಣ್ಣು ಇಟ್ಟ ಹಾಗೆ ಇರಬೇಕು. ಯಾವ ಕಣ್ಣು ಹ್ಯಾಗೆ ಅಂತ ನಿಮಗೆ ನನ್ನನ್ನ ನೋಡಿದ ತಕ್ಷಣ ಗೊತ್ತಾಗತ್ತೆ. ಹಾಗೆ ಒಳ್ಳೆ ಉದ್ದನೆ ಮೂಗು ಬರೀಬೇಡಿ. ನಂದು ಮೊಂಡು. ಅಲ್ಲಲ್ಲಿ ಕೀರಿದ ಗಾಯ ಇದೆ ಮೂಗಿನ ಮೇಲೆ. ಅದನ್ನು ಮುಜುಗರ ಪಟ್ಕೊಂಡು ನೋಡದೇ ಇರಬೇಡಿ. ಬಾಯೂ ಅಷ್ಟೆ ಒಳ್ಳೇ ಗೆರೆಗಳೇನೂ ಬೇಡ. ತುಟ್ಟಿ ಹರಿದಿದೆ. ಒಂದೊಂದು ಸಲ ಅದಕ್ಕೆ ಪಿನ್ನು ಹಾಕಿಕೊಳ್ಳಬೇಕಾಗತ್ತೆ.

ಈಗ ಕರುಣೆ ಅಸಹ್ಯ ಭಯ ಎಲ್ಲಾ ದೂರಕ್ಕಿಡಿ. ಅಷ್ಟೇ ಅಲ್ಲ ತಮಾಷೆ, ದುಃಖ, ಸಿಟ್ಟು ಎಲ್ಲಾ ಮರೆತು ನನ್ನ ಅವತಾರ ನೋಡಿ. ಬರೆಯೋಕೆ ಮನಸ್ಸು ಆದರೆ, ಬರೀಯೋಕೆ ಆಗತ್ತೆ ಅನ್ನಿಸಿದರೆ ಬಣ್ಣ ಬ್ರಶ್ಶು ತಗೊಳ್ಳಿ ನಾನು ಬಂದು ನಿಮ್ಮ ಮುಂದೆ ಮಗು ಥರ ಕೂತ್ಕೋತೀನಿ.

ದೊಡ್ಡಕ್ಕೆ ಮುಖ ಬರೆದು ಅದಕ್ಕೆ ಚೆನ್ನಾಗಿ ಬಣ್ಣ ಬಳಿರಿ.
ಓರೆ-ಕೋರೆ, ಹರಿದ ತುಟಿ, ಮೂಗಿನ ಗಾಯ, ಕುರಿ ಕಣ್ಣು ಇದೆಲ್ಲಾ ಯಾರಿಗೂ ಕಾಣದ ಹಾಗೆ ಮಾಡಿಬಿಡಿ.
ಹಾಗೇ ಮುಖಕ್ಕೆ ಅಡಿಪಾಯದಂತಿದೆಯಲ್ಲ ಈ ಮದ ಮತ್ಸರ ಲೋಭ ಮೋಹ ಅದನ್ನೂ ಮುಚ್ಚಿಬಿಡಬೇಕು.
ಆವಾಗ ಎಲ್ಲಾರಿಗೂ ಇಷ್ಟ ಆಗೋ ಅಂತ ನನ್ನ ಚಿತ್ರ ತಯಾರಾಗತ್ತೆ.

ನಾನು ಹೂ?

In ಅಂದಂದು, ಯೋಚನೆ on August 21, 2007 at 11:14 pm

ನಾನು ಯಾರಾಗಿದ್ದೀನಿ?
ಇದಕ್ಕೆ ಆನ್ಸರಿಸುವ ಕೆಲಸವನ್ನು ಆಧ್ಯಾತ್ಮಿಗಳು ಹೈಜಾಕ್ ಮಾಡೋಕೆ ಬಿಡಬಾರದು. ಅವರನ್ನು ಸ್ಟಾಪ್ ಮಾಡೋಕೆ ಆಗದೇ ಇರೋದರಿಂದ ಅವರು ಗಿಣಿಪಾಟ ಒಪ್ಪಿಸೋ ಡಲ್ಲಾದ ಆನ್ಸರ್‍ಗಿಂತ ಸಕತ್ತಾದ ಆನ್ಸರ್‍ಗಳನ್ನು ನಾವೇ ಹುಡುಕೊಂಡು ಬಿಡಬೇಕು.
ಫಸ್ಟ್, ಪರ್ಸನಲ್‌ ಆಗಿ ನೋಡಿದರೆ; ನೆನ್ನೆನೋ, ಟೆನ್ ವರ್ಷದ ಮುಂಚೆನೋ ಹೇಗಿದ್ದೆ, ಹೇಗೆ ತಿಂಕ್ ಮಾಡ್ತಿದ್ದೆ, ಈಗ ಹೇಗೆ ತಿಂಕ್ ಮಾಡ್ತೀನಿ ಅಂತ ಫೈಂಡೌಟ್ ಮಾಡಿಕೊಂಡರೆ ಸೆವೆರಲ್ ವಿಷಯಗಳು ಗೊತ್ತಾಗಿ ಬಿಡಬಹುದು.
ಇನ್ನು ನಮ್ಮ ಕಮ್ಯುನಿಟಿನಲ್ಲಿ ನಾನು ಯಾರಾಗಿದ್ದೆ. ನನ್ನ ಜನರ ಜತೆ ಯಾವ ಥರ ರಿಲೇಟ್ ಮಾಡ್ಕೋತಾ ಇದ್ದೆ. ಅವರ ಹ್ಯಾಪಿನೆಸ್ಸು ವರೀಸು ಹೇಗೆ ತಿಳಿಕೋತಾ ಇದ್ದೆ, ಈಗ ಹೇಗೆ ತಿಳ್ಕೋತಾ ಇದ್ದೀನಿ ಇದು ಇಂಪಾರ್ಟೆಂಟು.
ನೆಕ್ಸ್‌ಟು-ನಮ್ಮ ಸಮಾಜದಲ್ಲಿ ನಾನು ಯಾರಾಗಿದ್ದೆ. ನಮ್ಮ ಸಮಾಜದ ಪೀಪಲ್ಸ್‌ನಲ್ಲಿ ಯಾರು ನನಗೆ ಕರೆಕ್ಟ್ ಅನ್ಸತ್ತೆ. ಯಾರು ಹೋಪ್‌ಲೆಸ್ ಅನ್ಸತ್ತೆ. ಹೀಗೇ ಬಿಫೋರೂ ಅನ್ನಿಸ್ತಾ ಇತ್ತ? ಆರ್‍, ಈಗ ಡಿಫರೆಂಟ್ ಆಗಿ ಅನ್ಸತ್ತ? ಅಂತ ನೋಡಿಕೋಬೌದು.
ಫಿನಿಷ್ ಅನ್ಕೊಂಡರ?
ಇನ್ನೊಂದೆರಡು ಸ್ಟೆಪ್ಸ್ ಇದೆ.
ನಮ್ಮ ಕಂಟ್ರಿನಲ್ಲಿ ನಾನು ಯಾರಾಗಿದ್ದೆ, ಈವಾಗ ಯಾರಾಗಿದ್ದೀನಿ? ನಮ್ಮ ನೇಷನ್‌ನ ಯಾವ ಲೇಯರ್‌ಗೆ ನಾನು ಸೇರ್‍ತಿದ್ದೆ, ಈವಾಗ ಯಾವ ಲೇಯರ್‌ಗೆ ಅಡ್ಚಸ್ಟ್ ಆಗ್ತೀನಿ? ಇದನ್ನ ನೋಡಿಕೊಂಡರೂ ಪ್ರಾಫಿಟ್ ಇದೆ.
ಫೈನಲ್ಲಾಗಿ, ವರ್ಲ್‌ಡ್‌ನ ಎಲ್ಲ ಜನರನ್ನು ಕೌಂಟಿಗೆ ತಗೊಂಡರೆ ನಾನು ಎಲ್ಲಿ ಏನು ಯಾರಾಗಿದ್ದೀನಿ? ಇದೂ ವೆರಿ ವೆರಿ ಇಂಪಾರ್ಟೆಂಟ್.
ಹೀಗೆಲ್ಲಾ ಫೈಂಡೌಟ್ ಮಾಡಿಕೊಳ್ಳೊಕೆ ಹೋದರೆ ಕನ್ಫ್ಯೂಸ್ ಆಗತ್ತೆ ಅಂತ ವರಿ ಮಾಡಿಕೊಬೇಡಿ. ಏನೂ ಆಗಲ್ಲ. ಸ್ಟೆಪ್-ಬೈ-ಸ್ಟೆಪ್ ಹೋಗಬೇಕು ಅಷ್ಟೆ.

ನಾನು ಹೂ ಆಗಿದ್ದೀನಿ? ಒಳ್ಳೆ ಕ್ವೆಸ್ಚೆನ್ ಅಲ್ವ?

ಹಬ್ಬಿರುವ ಮಬ್ಬಿನೊಳಗೊಬ್ಬನೇ

In ಅಂದಂದು, ಯೋಚನೆ on August 17, 2007 at 9:44 pm

ಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣಿಸಕೊಂಡರು ತಬ್ಬುವ ಮೋಡಿಗೆ ಮಡಕೇರಿಯಲ್ಲಿ ಮುಗ್ಧರಾಗುತ್ತಾ. ಎಲ್ಲಿ ಹೋದರೂ ಬಿಡದ ಇವರೆಲ್ಲರ ಸಾಂಗತ್ಯದ ಅದೃಷ್ಟ.
ದಟ್ಟವಾಗಿ ಮುಚ್ಚಿದ ಮಂಜಿನ ನಡುವೆ ನೆರಳುಗಳಂತೆ ಸರಿದಾಡುವ ಜನ. ನೀರವ. ಎಲ್ಲರೂ ಪಿಸುಗುಡುತ್ತಿರುವಂತೆ ಅನಿಸುತ್ತಿದೆ. ಜೋರಾಗಿ ಮಾತಾಡಿದರೆ ಎಲ್ಲಿ ಮಂಜು ಚದುರಿಬಿಡುತ್ತದೋ, ಚಳಿಗಾಲ ಓಡಿಬಿಡುತ್ತದೋ ಎಂಬ ಅಂಜಿಕೆಯೆ? ಚಳಿಗಾಲದಲ್ಲಿ ನಲಿಯುವ, ಚಳಿಯನ್ನು ಪ್ರೀತಿಸುವ ಜನರಿವರು. ಈಗೀಗ ನಾನೂ…?

ಹತ್ತಾರು ಅಡಿಗಳಾಚೆ ಏನೂ ಕಾಣದ ಮಂಜು. ರೈಲು ಬಂತೇ ಎಂದು ಬಿಳಿಯ ಗೋಡೆಯಲ್ಲಿ ಹುಡುಕುವ ಕಣ್ಣುಗಳು. ಕಣ್ಣಿಗೆ ಬೀಳುವ ಎಷ್ಟೋ ಮುಂಚೆ ರೈಲಿನ ಸದ್ದು ಎಲ್ಲರಿಗೂ ಕಚಗುಳಿಯಿಟ್ಟಾಗ ನನಗೆ ಕಾಣಿಸಿದ್ದು-
‘ಹಬ್ಬಿರುವ ಮಬ್ಬಿನೊಳಗೊಬ್ಬನೇ ಮುದುಕ
ಕೋಲೂರಿ ನಡೆದಿದ್ದಾನೆ’
ಗಾಂಧಿ ಶತಮಾನೋತ್ಸವದಲ್ಲಿ ಶಿವರುದ್ರಪ್ಪ ಬಂದಾಡುತ್ತಾರೆ. ಗಾಂಧಿ ಕತ್ತಲೆಯಲ್ಲಿ ಧಡಗುಟ್ಟಿ ಬರುವ ರೈಲಿನ ಹಾಗೆ, ಬಂದು ಹಾಗೇ ಕತ್ತಲಲ್ಲಿ ಲೀನವಾಗುವ ಹಾಗೆ ಎಂದಿದ್ದಾರಲ್ಲವೆ? ಸಾಲುಗಳು ನೆನಪಿಲ್ಲ. ಆದರೆ ಪ್ರತಿಮೆ ತಲೆಯಲ್ಲಿ ಸುಳಿದಾಡುತ್ತದೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಆಸ್ಟ್ರೇಲಿಯಾದ ಆದಿನಿವಾಸಿಗಳು ಗಾಂಧಿಯ ಬಗ್ಗೆ ಚಿಂತಿಸಿದ್ದರಂತೆ. ಬ್ರಿಟೀಷರ ಎದುರು ಗಾಂಧಿಯ ಪ್ರತಿರೋಧ, ಚಳವಳಿಗಳು ತಮಗೂ ಮಾದರಿಯಾಗಬಲ್ಲವೆ ಎಂದು ಚರ್ಚಿಸಿದ್ದರಂತೆ. ಅದರ ಬಗ್ಗೆ ಇನ್ನಷ್ಟು ಓದಬೇಕು ಎಂದು ಮನಸ್ಸಿನ ಮೂಲೆಯಲ್ಲಿ ಒಂದು ಪುಟ್ಟ ಗುರುತು ಹಾಕಿಕೊಳ್ಳುತ್ತೇನೆ. ಅಂದಿಗೂ-ಇಂದಿಗೂ, ಅಲ್ಲಿಗೂ-ಇಲ್ಲಿಗೂ ಕೊಂಡಿ ಹುಡುಕುವುದು, ಅಂದಿಗೂ-ಇಂದಿಗೂ-ಅಲ್ಲಿಗೂ-ಇಲ್ಲಿಗೂ ಸಲ್ಲುವ ಒಂದು ದಾರಿ ಅನಿಸುತ್ತದೆ. ಅರವತ್ತರ ದಶಕದ ಅಬಾರಿಜಿನಗಳ “freedom ride”, ನಂತರ ಅವರಿಗೆ ಸಿಕ್ಕ ಓಟಿನ ಹಕ್ಕು, ಅಬಾರಿಜಿನಿ ಸಮುದಾಯದ ಬದುಕನ್ನು ಚೆನ್ನಾಯಿಸಿತೆ? ಗಾಂಧಿ ನಮಗಿಂದು ಎಷ್ಟು ದಕ್ಕುತ್ತಾರೆ? ದಕ್ಕಲೇಬೇಕೆ?

ಇನ್ನೂ ಮಂಜು ಚದುರಿಲ್ಲ. ಆದರೂ ಹಕ್ಕಿಗಳಿಗೆ “ಋತುಗಳ ರಾಜ ವಸಂತ” ಬರುತ್ತಿದ್ದಾನೆ ಎಂದು ಗೊತ್ತಾಗಿಬಿಟ್ಟಿದೆ. (ಯಾರದು-ಬಿಎಂಶ್ರಿ-ಅನುವಾದ?).

ಮರಿಹಕ್ಕಿಗಳು ಎಡೆಬಿಡದೆ ಚಿಲಿಪಿಲಿ ಅನ್ನುತ್ತಲೇ ಇವೆ.

ಎಲ್ಲಿಯ ಯಾವ ವಾಸನೆ ತಟ್ಟಿ ಎಬ್ಬಿಸಿದೆ ಅವನ್ನು?

ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

In ಅಂದಂದು on August 14, 2007 at 10:19 pm

ia2007

ಭಾನುವಾರ ಆಗಸ್ಟ್ ೧೨, ಸಿಡ್ನಿಯ ಒಲಂಪಿಕ್ ಅಥ್ಲೆಟಿಕ್ ಸೆಂಟರ್‌ನಲ್ಲಿ ಇಂಡಿಯಾದ ಅರವತ್ತನೇ ವರ್ಷದ ಸ್ವಾತಂತ್ಯ್ರ ಉತ್ಸವ. ಇದು ಭಾರತದ ಹೊರಗೆ ನಡೆಯೋ ಸ್ವಾತಂತ್ಯ್ರ ಉತ್ಸವಗಳಲ್ಲಿ ಅತಿ ದೊಡ್ಡದಂತೆ. ಹತ್ತಾರು ಸಾವಿರ ಜನ ಇಂಡಿಯಾದವರು ಸೇರತಾರೆ.

dsc_0321.jpg

ದಿನವಿಡೀ ಹಾಡು ಕುಣಿತ ಊಟ ತಿಂಡಿ ಜಾತ್ರೆ. ಇದರ ನಡುವೆ ಆಸ್ಟ್ರೇಲಿಯಾದ ಕೆಲವು ರಾಜಕಾರಣಿಗಳನ್ನ ಕರೆಸಿ ಬೆನ್ನು ತಟ್ಟಿಸಿಕೊಳ್ಳೋ ಬೇಜವಾಬ್ದಾರಿತನ ನಮ್ಮ ಸೂಟುಧಾರಿ ಇಂಡಿಯನ್ “ಎಂಟರ್‌ಪ್ರೆನರ್ಸ್‌”ಗಳಿಗೆ. ಹಲ್ಲುಗಿಂಜಿಕೊಂಡು ಅವರ ಜತೆ “ಸಭ್ಯತೆಯ ಲಂಚ್” ಬೇರೆ.

dsc_0344.jpg

ಅವರೆಲ್ಲಾ ಭಾಷಣದ ಬೊಗಳೆ ಮುಗಿಸಿ “ಸಭ್ಯತೆಯ ಲಂಚ್”ಗೆ ತೊಲಗತ್ತಲೂ, ಕನ್ನಡದವರು ನಾವು ಕೆಲವರು “ಈ ಮಣ್ಣು ನಮ್ಮದು, ಈ ಗಾಳಿ ನಮ್ಮದು” ಅನ್ನೋ ದೊಡ್ಡರಂಗೇಗೌಡರ ಹಾಡು ಹಾಡಿದೆವು. (ಯಾವ ಮಣ್ಣು-ಯಾವ ಗಾಳಿ ಅಂತ ಗೊಂದಲ ಇದೆ ಬಿಡಿ!)

cheluvayya_cheluvo.jpg

ಆಮೇಲೆ ಕನ್ನಡದ ಪುಟ್ಟ ಪುಟ್ಟ ಮಕ್ಕಳು ಹುರುಪಿನಿಂದ “ಚಲುವಯ್ಯ ಚಲವೋ” ಹಾಡಿಗೆ ಕುಣಿದರು.

dsc_0367.jpg

ಅಲ್ಲದೆ, ತಮಿಳರು, ತೆಲುಗರು, ಹಿಂದಿಯವರು, ಪಂಜಾಬಿಗಳು, ಮಲಯಾಳಿಗಳು, ಮರಾಟಿಗರು, ಬಂಗಾಳಿಗಳು, ಎಲ್ರೂ ಅವರ ಅವರ ಹಾಡು ಹಾಕಿಕೊಂಡು/ಹೇಳಿಕೊಂಡು ಕುಣಿದರು.

dsc_0388.jpg

ಇನ್ನೊಂದು ಕಡೆ ನಾವು ಸಿಕ್ಕ ಸಿಕ್ಕ ಕನ್ನಡದವರಿಗೆಲ್ಲಾ ಜೋಕುಮಾರಸ್ವಾಮಿ ಮತ್ತೆ ಆಡ್ತಾ ಇದ್ದೀವಿ ಬನ್ನಿ ಅಂತ ಹೇಳ್ಕೊಂಡು ತಿರುಗತಾ ಇದ್ದಿವಿ. ಆವಾಗ ಆಸ್ಟ್ರೇಲಿಯಾದ ಪ್ರಧಾನಿ ಜಾನ್ ಹವಾರ್ಡ್‌ ಅನ್ನೋ ಧೂರ್ತನ್ನ ಅವನ ಕ್ಷೇತ್ರದಲ್ಲೇ ಸೋಲಿಸೋ ಹಾಗೆ ಕಾಣೋ, ತನ್ನ ಟಿವಿ ಪ್ರೆಸೆಂಟರ್‍ ಕೆಲಸ ಬಿಟ್ಟು ಎಲೆಕ್ಷನ್‌ಗೆ ನಿಂತಿರೋ ದಿಟ್ಟ ಹೆಂಗಸು ಮಾಕ್ಸೀನ್ ಮೆಕ್ಯೂ ಬಂದು ನಮ್ಮ ಜತೆ ಮಾತಾಡಿದಳು. ಅವಳ ಬಗ್ಗೆ ನಮಗೆ ಸ್ವಲ್ಪ ಜಾಸ್ತೀನೆ ಪ್ರೀತಿ. ಮುಂದೆ ಅವಳಿಗೆ ಆ ಪ್ರೀತಿಯ ಭಾರ ಹೊರಕ್ಕಾಗದೇ ಇರಬಹುದು ಅನ್ನೋ ಎಚ್ಚರಿಕೇನೂ ಇದೆ. ಜೋಕುಮಾರಸ್ವಾಮಿ ನಾಟಕಕ್ಕೆ “ನೀನೂ ಬಾ, ನಿನ್ನ ಸಂಗಾತಿಗಳಿಗೂ ಹೇಳು” ಅಂತ ಚೀಟಿ ಕೊಟ್ಟು ಕರೆದವು. ಅವಳ ಹಿಂದೆ ಟೀವಿ ಕ್ಯಾಮೆರಾಗಳು ಇದ್ದವು. ಅವಳು ಯಾವುದಾದರೂ ಹಾಡು ಹೇಳಿ ಅಂದಳು. ತಕ್ಕೊ ಅಂತ “ಶರಣು ಹೇಳೇವ್ರಿ” ಹಾಡನ್ನು ಹಾಡಿದವು. ಅದು ಆವತ್ತು ಸಂಜೆ ಟೀವಿ ನ್ಯೂಸಲ್ಲೆಲ್ಲಾ ಮರುದಿನ ಪೇಪರಲ್ಲಿ ಬಂದದ್ದು ನೀವು ಇಲ್ಲಿ ನೋಡಬಹುದು.

Sydney Morning Herald ನಲ್ಲಿ
ಸಂಜೆ ಟಿವಿ ಸುದ್ದಿಯಲ್ಲಿ

ವಲಸೆ

In ಅಂದಂದು, ಯೋಚನೆ on August 13, 2007 at 7:04 am

ಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.
ಮೊದಲನೇ ಪ್ರಶ್ನೆ – ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ ಇಷ್ಟ ಇಲ್ಲದೇ ಇರೋ ಪ್ರಶ್ನೆನೂ ಆಗಬಹುದು. ಅದೇನೇ ಆದರೂ ಈ ಪ್ರಶ್ನೆ, ಮತ್ತು ಉತ್ತರದ ಅಪೇಕ್ಷೆಯ ಸಂವಾದದಲ್ಲಿ ಒಂದು ಬಗೆಯ ಖುಷಿಯಿದೆ, ಮಜಾಯಿದೆ.

ಎರಡನೇದು – ನೀನು ಈ ದೇಶಕ್ಕೆ ಬಂದು ಎಷ್ಟು ದಿನ ಆಯಿತು? ಇದು “ನೀನು ಈ ದೇಶದಲ್ಲೇ ಹುಟ್ಟಿದ್ದ?” ಅನ್ನೋದಕ್ಕಿಂತ ಸಕ್ಕತ್ ಖುಷಿ ಕೊಡೋ ಪ್ರಶ್ನೆ. ಬೇಜಾನ್ ಒಳತಿರುವುಗಳಿರೋ ಪ್ರಶ್ನೆ. ಏಕ್‌ದಂ ಉತ್ತರಕೊಡೋ ಬದಲು ಪ್ರಶ್ನೆಗೊಂದು ಪ್ರಶ್ನೆ ಎಸೀಲಾ ಅಂತ ಇರಾದೆ ಹುಟ್ಟಿಕೊಳ್ಳತ್ತೆ. ಆ ಇರಾದೆ ತೋರಿಸಿಕೊಳ್ಳೋದು ಕುಚೋದ್ಯವಾಗಿ. “ದಿನಗಳಲ್ಲಿ ಬೇಕಾ ಗಂಟೆಗಳಲ್ಲಿ ಬೇಕಾ” ಅಂತ ಕೇಳೋದಕ್ಕೆ ಒಂದರೆ ಕ್ಷಣ ಯೋಚನೆ ಮಾಡ್ತೀನಿ. ಇದ್ದಕ್ಕಿದ್ದ ಹಾಗೆ ಅಷ್ಟೊಂದು ರಾಜಕೀಯ ಯಾಕೆ ಅಂತ ಮುಚ್ಕೋತೀನಿ. ಆದರೂ ನಾನು ಕಟ್ಟಿಕೊಂಡು ಬಂದಿದ್ದು ಇನ್ನೂ ಕಾಣತಲ್ಲ ಅಂತ ತಕತಕ ಕುಣೀತೀನಿ.

ಉತ್ತರ ಮಾತ್ರ ವಿಪರೀತ ಬೋರಿಂಗ್ ಅಂದೆ ಆಲ್ಲವ? ಏನಾದರೂ ಮಾಡಿ ಆಸಕ್ತಿ ಹುಟ್ಟಿಸಬೇಕು ಅಂತ ಶುರು ಮಾಡ್ತೀನಿ:
“ನಾನು ಎಲ್ಲಿ ಹುಟ್ಟಿದ್ದೋ ಗೊತ್ತಿಲ್ಲ. ಹಸುಳೆ ಆಗಿದ್ದಾಗ ಯಾರೋ ಧೂರ್ತ ರಾಜನ ಕಾಟ ತಡೆಯೋಕೆ ಆಗದೆ ನನ್ನ ಅಪ್ಪ-ಅಮ್ಮ ರಾತ್ರೋ ರಾತ್ರಿ ಪುಟ್ಟ ದೋಣೀಲಿ ತಪ್ಪಿಸಿಕೊಂಡರಂತೆ. ಅದು ಬಿರುಗಾಳಿಗೆ ಸಿಕ್ಕಿ ಮುಳುಗೋ ಹಾಗೆ ಆಗಿತ್ತಂತೆ. ಆವಾಗ ದೂರದಲ್ಲಿ ಒಂದು ಸುಭಿಕ್ಷ ದೇಶ ಕಾಣಿಸ್ತಂತೆ. ಆದರೆ ಹತ್ತಿರ ಹೋಗುತ್ತಲೂ, ಆ ದೇಶದ ದೊಡ್ಡ ಹಡಗು ನಮ್ಮ ದೋಣೀನ ಕಾಪಾಡೋದು ಬಿಟ್ಟು, ಅವರ ರಾಜನ ಅಪ್ಪಣೆ ಮೇರೆಗೆ, ದೊಡ್ಡ ಕೋಲಿಂದ ‘ಬರಬೇಡಿ ಹೋಗಿ’ ಅಂತ ದೂರಕ್ಕೆ ತಳ್ಳಿದರಂತೆ. ಆ ದೇಶದ ಹಡಗು ಅತ್ತಲಾಗಿ ಹೋಗುತ್ತಲೂ ನಮ್ಮ ದೋಣಿ ಮುಳುಗಿ ಹೋಯ್ತಂತೆ. ಅದಕ್ಕೆ ನನ್ನ ಅಪ್ಪ-ಅಮ್ಮನ ಮುಖ ನಾನು ನೋಡೇ ಇಲ್ಲ. ನಾನು ಸೊಳ್ಳೆ ಪರದೆ ಗಂಟಿನ ಮೇಲೆ ತೇಲಿಕೊಂಡು ಆ ಸುಭಿಕ್ಷ ನಾಡಿನ ಚಿನ್ನದಂಥ ಕಡಲತಡೀಲಿ ಯಾರದೋ ಕೈಗೆ ಸಿಕ್ಕನಂತೆ. ಅವರು ಮೊದಲು ಯಾವುದೋ ಪ್ರಾಣಿ ಅಂತ ನನ್ನನ್ನ ಮುಟ್ಟೋಕೂ ಹೆದರಿಕೊಂಡು ಆಮೇಲೆ ಮನಸ್ಸು ಬದಲಾಯಿಸಿ ಮನೆ ಒಳಗೆ ಇಟ್ಟಕೊಂಡು ಪ್ರೀತಿಯಿಂದ ಸಾಕಿದರಂತೆ. ಒಂದು ಚೂರು ದೊಡ್ಡೋನಾಗತಲೂ ಕಟ್ಟಿಹಾಕೋ ಅವರ ಪ್ರೀತಿಯಿಂದ ತಪ್ಪಿಸಿಕೊಂಡು ಮತ್ತೆ ನನ್ನ ನಾಡಿಗೆ ಓಡಿ ಹೋಗಿ ದೊಡ್ಡೋನಾದ ಮೇಲೆ ಈಗಷ್ಟೆ ಬಂದು ಇಲ್ಲಿ ಇಳಿದೆ.”

ನನ್ನ ತಲೆ ಸಾವಿರ ಹೋಳಾಗದೆ ಇರೋದು ಆಶ್ಚರ್ಯ ಅಲ್ಲ ಅಲ್ಲವೆ?

ತೊಡಕು

In ಅಂದಂದು, ಯೋಚನೆ on August 10, 2007 at 12:26 pm

ಇದ್ದಕಿದ್ದ ಹಾಗೆ ಬಣ್ಣದ ಪಲ್ಯ ಮಾಡೋಣ ಅಂತ ಮನಸಾಯಿತು. ಬಾಣಲಿಯಲ್ಲಿ ಒಂದಷ್ಟು ಬಣ್ಣ ಉದುರಿಸಿ, ತಟಕ್ಕು ಎಣೆ ಹಾಕಿ ಹುರಿಯೋಕೆ ಶುರು ಮಾಡಿದೆ. ಹುರಿದಾಗ ಬಣ್ಣಗಳೆಲ್ಲಾ ಒಂದೇ ರೀತಿ ಆಗಲ್ಲ. ಒಂದೊಂದು ಬಣ್ಣ ಒಂದೊಂದು ರೂಪ ರಾದ್ಧಾಂತ ಮಾಡ್ಕೋತಾವೆ. ಕೆಲವು ಮುರುಟಿಕೊಂಡರೆ ಕೆಲವು ಅರಳಕೋತಾವೆ. ಕೆಲವು ಹರಡಿಕೊಂಡರೆ ಇನ್ನು ಕೆಲವು ಸುರಟಿಕೋತಾವೆ. ಒಟ್ಟಿನಲ್ಲಿ ಏನೋ ಒಂದು ಹದ ಅಂತೂ ಇರತ್ತೆ. ಮುರುಟಿಕೊಂಡಿದ್ದು ಅರಳಿಕೊಂಡಿದ್ದು ಪಕ್ಕಪಕ್ಕದಲ್ಲಿ ಬಿದ್ದುಕೊಂಡು ಕಷ್ಟಸುಖ ಮಾತಾಡಿಕೋತಾ ಇರೋದು ನೋಡೋಕೆ ತುಂಬಾ ಚೆನ್ನಾಗಿರತ್ತೆ. ಕೆಲವು ಬಣ್ಣಗಳು ಬದಲಾಗ್ತಾ ಬಿಳಿಯಾಗ್ತಾವೆ, ಇನ್ನು ಕೆಲವು ಕಪ್ಪಾಗ್ತಾವೆ. ಆದರೆ ಮಜಕೊಡೋದು ಯಾವುದು ಗೊತ್ತಾ? ಹುರೀತಾ ಹುರೀತಾ ದಟ್ಟವಾಗ್ತಾ ಹೋಗವು.
ಆದರೂ ಬಾಣಲಿಯ ಬಣ್ಣದ ಪಲ್ಯದಲ್ಲಿ ಯಾಕೋ ಏನೋ ಸರಿಯಿಲ್ಲ ಅನ್ನಿಸಿ ಏನಿರಬಹುದು ಅಂತ ಯೋಚಿಸ್ತಾ ಬಾಣಲೀನ ದಿಟ್ಟಿಸ್ತಾ ಹುರೀತಿದ್ದೆ. ಇನ್ನು ಹೆಚ್ಚು ಹುರಿದರೆ ಕೆಟ್ಟು ಹೋಗತ್ತೆ ಅಂತ ಬೇರೆ ಚಿಂತೆ ಹತ್ತಿಕೋತು. ಹುರಿಯೋದು ಸಾಕು ಅನ್ನಿಸಿದರೂ ಇನ್ನೇನೋ ಒಂದು ಬಣ್ಣ ಕಡಿಮೆ ಆಗಿದೆ ಅಂತ ಒಳಗೊಳಗೇ ಒದ್ದಾಡ್ತಿದ್ದೆ. ನೀಲಿ ಇರಬಹುದ ಅಂತ ಹೊರಗಿನ ಆಕಾಶ ನೋಡಿದೆ. ಹಸಿರು ಇರಬಹುದ ಅಂತ ದೂರದ ಹುಲ್ಲುಗಾವಲು ನೋಡಿದೆ. ಕೆಂಪು ಇರಬಹುದಾ ಅಂತ ಉರೀತಿದ್ದ ಸೂರ್ಯನ್ನ ನೋಡಿದೆ. ಹಳದಿ ಇರಬಹುದ ಅಂತ ಉದುರಿ ಕೊಳೀತಿದ್ದ ಎಲೆಗಳ ರಾಶೀನ ನೋಡಿದೆ. ಇಷ್ಟೆಲ್ಲಾ ಮೇಲೆ ಕೆಳಗೆ, ಒಳಗೆ ಹೊರಗೆ ನೋಡ್ತಾ ನೋಡ್ತಾ ಆನಂದವಾಗಿರೋವಾಗ ಬಾಣಲಿ ಒಳಗಿದ್ದ ಬಣ್ಣಗಳು ತಮ್ಮನ್ನು ತಾವೇ ಮರೆತು ಒಂದೇ ಬಿಳಿ ಇಲ್ಲ ಕಪ್ಪು ಆಗಿ ನನ್ನನ್ನೇ ಮಿಕಮಿಕ ನೋಡ್ತಿದ್ವು. ಅದಕ್ಕೇ ಒಗ್ಗರಣೆ ಹಾಕಿ ಹೊಡದು ಬಿಡೋಣ ಅಂತ ಆಸೆ ಆದರೂ, ಮಾಡೋಕೆ ಹೊರಟಿದ್ದು ಇದು ಅಲ್ವಲ್ಲ ಅಂತ ತಬ್ಬಿಬ್ಬಾಗಿ ನಿಂತೆ.

ಇದು ನಡೆದು ಎಷ್ಟೋ ವರ್ಷ ಆಗಿದ್ದರೂ ಈವತ್ತಿಗೂ ಸರಿಯಾದ ಬಣ್ಣ ಬಳಸದೇ ಮಾಡಿದ ಪಲ್ಯ ಗಂಟಲಲ್ಲಿ ಇಳಿಯೋಲ್ಲ. ಹಾಗೇನೆ ಕಪ್ಪೋ ಬಿಳಿಯೋ ಆಗಿಬಿಟ್ಟ ಪಲ್ಯ ಕಂಡರೆ ಮೈ ಝುಮ್ಮನ್ನತೆ.

ಎಷ್ಟೋ ಜನ ಕಿವಿನಲ್ಲಿ ಪಿಸುಗುಟ್ಟಿದ್ದಾರೆ- ಯಾಕೆ ಸುಮ್ಮನೆ ಬಣ್ಣದ ಬಗ್ಗೆ ತಲೆ ಕೆಡಿಸ್ಕೋತೀಯ, ಕಪ್ಪೋ ಬಿಳೀನೋ ಮೂಡಿಗೆ ಸರಿಯಾಗಿ ಯಾವುದು ಹೊಂದತ್ತೋ ತಿಂದು ಬಿಡು, ಬಂದವರಿಗೆ ಬಡಿಸಿಬಿಡು ಅಂತ.

ನಾನೂ ಅವರ ಕಿವಿನಲ್ಲಿ ಪಿಸುಗುಡಿತೀನಿ- ಬಣ್ಣ ಒತ್ತು ಕಳಕೊಂಡು ಬಣ ಕಟ್ಟಿಕೊಂಡರೆ ಎಲ್ಲ ಬಣಬಣ ಅಂತ.

ಅವರು ಉಂಡಿದ್ದು ಉಗುಳೋದೋ ಬೇಡವೋ ಅಂತ ಮುಖಮುಖ ನೋಡತಾರೆ.

ಬರ್ಗ್‌ಮನ್‌ನ ‘ವಿಂಟರ್‍ ಲೈಟ್’

In ಅಂದಂದು, ಚಲನಚಿತ್ರ on August 5, 2007 at 12:33 pm

ಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.

ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ ಸೈನಿಕ ಮತ್ತು ಅವನ ಬಸುರಿ ಹೆಂಡತಿ. ಬೆನ್ನು ನೋವಿಂದ ನರಳುವ, ನಿದ್ದೆ ಬಾರದೆ, ಸದಾ ಮದ್ದಿನ ಮೇಲೆ ಬದುಕಿರುವ ಗೂನು ಬೆನ್ನಿನ ಚರ್ಚಿನ ಸಹಾಯಕ. ಹಗುರ ಮನೋಭಾವದ ಚರ್ಚಿನ ಪಿಯಾನೋ ವಾದಕ. ಇಷ್ಟೇ ವಿಂಟರ್‌ಲೈಟ್ ಚಿತ್ರದ ಜಗತ್ತಿನ ಪಾತ್ರಗಳು.

ಹಿಮ ಮುಚ್ಚಿದ ಚಳಿಗಾಲದ ಒಂದು ಮಧ್ಯಾಹ್ನ-ಸಂಜೆ ನಡುವಿನ ಹೊತ್ತು. ತನ್ನ ಚರ್ಚಿನ ಸೇವೆ ಮುಗಿಸುವಲ್ಲಿಂದ ಮೂರು ಗಂಟೆಯ ನಂತರವಿರುವ ಇನ್ನೊಂದು ಚರ್ಚಿನ ಸೇವೆಯ ನಡುವೆ ನಡೆಯುವ ಘಟನೆಗಳು ಈ ಚಿತ್ರದ ಬಿತ್ತರ.

ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಗೆ ಗೆಳತಿಯ ಪತ್ರ ಓದಲು ಬಿಡುವಿಲ್ಲ. ಆಗ ಮಾತನ್ನೇ ಆಡದ ಸೈನಿಕ ಮತ್ತು ಅವನ ಆಂತರಿಕ ಹಿಂಸೆಯನ್ನು ಹೋಗಲಾಡಿಸಲು ಹವಣಿಸುತ್ತಿರುವ ಅವನ ಹೆಂಡತಿ ಪಾದ್ರಿಯನ್ನು ಭೇಟಿಮಾಡುತ್ತಾರೆ. ತನ್ನ ಗಂಡನೊಡನೆ ಮಾತಾಡಿ ಅವನ ವೇದನೆಯನ್ನು ಕಡಿಮೆ ಮಾಡಬೇಕೆಂದು ಸೈನಿಕನ ಬಸುರಿ ಹೆಂಡತಿ ಕೇಳಿಕೊಳ್ಳುತ್ತಾಳೆ. ಪಾದ್ರಿ ಒಂದು ಗಂಟೆ ಬಿಟ್ಟು ಬರುವಂತೆ ಹೇಳುತ್ತಾನೆ.

ಆ ಒಂದು ಗಂಟೆಯಲ್ಲಿ ಗೆಳತಿಯ ಪತ್ರ ಓದುತ್ತಾನೆ. ನಂತರ ಬಂದ ಸೈನಿಕನಿಗೆ ಸಾಂತ್ವನ ಹೇಳಬೇಕಾದವನು ತನ್ನ ಒಳಗನ್ನು ಅವನ ಮುಂದೆ ಸುರಿದುಕೊಳ್ಳುತ್ತಾನೆ. ಮದುವೆಯಾಗೆಂದು ಈ ಹಿಂದೆ ಪೀಡಿಸುತ್ತಿದ್ದ ಗೆಳತಿ ಅವಳ ಶಾಲೆಯ ಕೋಣೆಯಲ್ಲಿ ಪಾದ್ರಿಗೆ ಮುಖಾಮುಖಿಯಾಗುತ್ತಾಳೆ. ಪಾದ್ರಿ ಅವಳನ್ನು ತಾನೇಕೆ ಮದುವೆಯಾಗಲಾರೆ ಎಂದು ಹೇಳಿಕೊಳ್ಳುತ್ತಾನೆ. ಅವಳ ಸ್ವಭಾವವನ್ನು ಎತ್ತಾಡಿ ಹಳಿಯುತ್ತಾನೆ. ಅಷ್ಟರಲ್ಲಿ ಸೈನಿಕ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಪಾದ್ರಿಯೇ ಹೋಗಿ ಸೈನಿಕನ ಬಸುರಿ ಹೆಂಡತಿಗೆ ಅವಳ ಗಂಡ ಜೀವ ತೆಗೆದುಕೊಂಡ ಸುದ್ದಿ ಮುಟ್ಟಿಸುತ್ತಾನೆ.

ಪಾದ್ರಿಯ ಗೆಳತಿ ಅವನನ್ನು ಮತ್ತೊಂದು ಚರ್ಚಿಗೆ ಕರೆದುಕೊಂಡು ಹೋಗುತ್ತಾಳೆ. ಒಂದು ರೈಲ್ವೆ ಕ್ರಾಸಿಂಗಿನಲ್ಲಿ ಒಂದು ಕ್ಷಣ ಕಾಯುವಾಗ ತಾನು ಪಾದ್ರಿಯಾಗಬೇಕೆಂದು ತನ್ನ ತಂದೆಯ ಕನಸಾಗಿತ್ತು ಎನ್ನುತ್ತಾನೆ. ಹೆಣದ ಪೆಟ್ಟಿಗೆಗಳಂಥ ಗೂಡ್ಸ್ ಗಾಡಿ ಹಾದು ಹೋಗುತ್ತದೆ.

ಗೂನು ಬೆನ್ನಿನ, ನೋವಿನಿಂದ ನರಳುತ್ತಿರುವ ಪಾದ್ರಿಯ ಸಹಾಯಕ ಜೀಸಸ್ಸಿನ ನರಳಾಟದ ಬಗ್ಗೆ ತನ್ನ ವ್ಯಾಖ್ಯೆಯನ್ನು ಕೊಡುತ್ತಾನೆ. ತಾನು ಅನುಭವಿಸುತ್ತಿರುವ ವೇದನೆಯ ಮುಂದೆ ಜೀಸಸನ ಹಿಂಸೆ ಹೆಚ್ಚೇನೂ ಅಲ್ಲ ಎಂದು ನಮ್ರತೆಯಿಂದ ಹೇಳುತ್ತಾನೆ. ಆದರೆ, ಕಡೆ ಗಳಿಗೆಯಲ್ಲಿ ಜೀಸಸ್ಸಿಗೆ ತನ್ನ ದೇವರ ಬಗ್ಗೆ ಹುಟ್ಟಿದ ಅನುಮಾನ ತಂದಿರಬಹುದಾದ ನೋವು ದೈಹಿಕ ನೋವು ಹಿಂಸೆಗಿಂತ ಅತ್ಯಂತ ತೀವ್ರವಲ್ಲವೆ ಎಂದು ಕೇಳುತ್ತಾನೆ.

ಪಾದ್ರಿ ಮತ್ತೆ ಸ್ಥಿಮಿತ ಕಂಡುಕೊಂಡವನಂತೆ ಭದ್ರ ಧ್ವನಿಯಲ್ಲಿ ಚರ್ಚ್ ಸೇವೆ ಶುರುಮಾಡುತ್ತಾನೆ. ಅವನ ಗೆಳತಿ ಅವನ ಪ್ರವಚನ ಕೇಳಲು ಹಿಂದಿನ ಸಾಲಲ್ಲಿ ಕೂತಿದ್ದಾಳೆ.

ಬರ್ಗ್‌ಮನ್‌ನ ವಿಂಟರ್‌ಲೈಟ್ ಚಿತ್ರ ಆ ಹಳ್ಳಿಯಲ್ಲಿ ತಟಸ್ಥವಾಗಿ ಹರಿಯುವ ನದಿಯಂತೆ ಹರಿದು ಕೊನೆಗೊಳ್ಳುತ್ತದೆ.

ಅತ್ತು ಉಳಿದದ್ದು

In ಅಂದಂದು, ಯೋಚನೆ on August 3, 2007 at 11:00 pm

ಅಳು ಬರುತ್ತದೆ: ಅಳುವಂಥದ್ದನ್ನು ನೋಡಿ ಜನ ನಕ್ಕಾಗ ಅಥವಾ ನಗದೇ ತುಟಿ ಬಿಗಿದು ಹಿಡಿದಾಗ ಅಥವಾ ಏನು ಮಾಡಬೇಕೆಂದು ಗೊತ್ತಾಗದೇ ಮುಖಮುಖ ನೋಡಿದಾಗ.
ಅಳು ಬರುತ್ತದೆ: ನೆನಪಿಟ್ಟುಕೊಳ್ಳಬೇಕಾದ್ದನ್ನು ಜನ ಮರೆತಾಗ ಅಥವಾ ನೆನಪು ಮಾಡಿಕೊಳ್ಳಲು ಹೆಣಗಿದಾಗ ಅಥವಾ ನೆನಪಾಗದೇ ಮಿಕಮಿಕ ನೋಡಿದಾಗ.
ಅಳು ಬರುತ್ತದೆ: ನೋಡಬೇಕಾದ್ದನ್ನು ಜನ ನೋಡದೇ ಹೋದಾಗ ಅಥವಾ ನೋಡಿ ಮುಖ ತಿರುಗಿಸಿದಾಗ ಅಥವಾ ನೋಡಿಯೂ ಬಿಂಕದಲ್ಲಿ ಕಣ್ಣು ಮುಚ್ಚಿ ಧ್ಯಾನಕ್ಕಿಳಿದಾಗ.

ಚಳಿಗಾಲದಲ್ಲಿ ಬಿಸಿಗಾಳಿಯ ಆಸೆಗೆ ಮೈಯೊಡ್ಡಿದಾಗ ಚರ್ಮ ನಗುತ್ತದೆ. ಚರ್ಮ ನಕ್ಕಿತೆಂದು ಮೂಳೆ ಸಿಟ್ಟುಮಾಡಿಕೊಂಡು ಸೆಟೆದುಕೊಳ್ಳುತ್ತದೆ. ಉಗುರುಗಳೆಲ್ಲಾ ಬೆಳೆಯುವ ಬದಲು ಕರಗಿ ಹೋಗುತ್ತದೆ.

ಇಪ್ಪತ್ತು ಮೂವತ್ತಿಗೆ ಜಾರಿ, ನಲವತ್ತಕ್ಕೆ ಮುಟ್ಟಿ ಐವತ್ತನ್ನೋ ಅರವತ್ತನ್ನೋ ತಬ್ಬುತ್ತದೆ ನಾಳೆ. ಹತ್ತರ ಮನಸ್ಸು ಮಾತ್ರ ಕಿರುಬೆರಳನ್ನು ಹಿಡಿದು ಪುಟ್ಟಪುಟ್ಟ ಹೆಜ್ಜೆ ಇಟ್ಟು ಹಿಂಬಾಲಿಸುತ್ತದೆ.

ಎಲ್ಲ ದಾಟಿ ಹೋದರೂ ಏನೋ ಉಳಿದುಬಿಡುತ್ತದೆ.

ಒಂದು ಅರ್ಜಿ

In ಅಂದಂದು, ಯೋಚನೆ on July 31, 2007 at 11:14 pm

ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಒಪ್ಪಲೇ ಬೇಕೆಂದು ಒತ್ತಾಯ ಮಾಡಲಾರೆ. ಆದರೂ, ಪ್ರತೀಕವಾದರೆ ಎಲ್ಲಕ್ಕೂ ಹೆಚ್ಚು ಅರ್ಥಬರುತ್ತದೆ ಎಂದು ನನ್ನ ಮನಸ್ಸಿನಾಳದ ಆಸೆ.
ಪಕ್ಕದಲ್ಲೇ ಡೊಂಕು ಬಾಲ ಆಡಿಸುತ್ತಿದ್ದ ನಾಯಿ ನನ್ನ ಆಸೆ ಗೊತ್ತಾಗಿ ಹಂಗಿಸುವಂತೆ ಅಂಡು ತಿರುಗಿಸಿ ಹೊರಟು ಹೋಯಿತು. ಅದು ಎಚ್ಚರಿಕೆಯಿಂದ ತುಳಿಯದೇ ಇಟ್ಟ ಕಾಲ ನಡುವೆ ಹೊರಟ ಇರುವೆ ಸಾಲು. ಅದರ ಅಡಿಯ ಗಾರೆಯ ಮೇಲೆ ಇನ್ನೂ ಹಸಿಯಿದ್ದಾಗ ತುಂಟಾಟದಲ್ಲಿ ಮಾಡಿದ ಯಾರದೋ ಅಂಗೈ ಗುರುತು. ಎಲ್ಲಕ್ಕೂ ನನ್ನ ಆಸೆ ಗೊತ್ತಾಗಿ ಪಕಪಕ ನಗುತ್ತಿರುವುದು ನನಗೆ ಖಾತ್ರಿಯಾಯಿತು.
ಸರಿ, ಹಾಳಾಗಿ ಹೋಗಲಿ ಅಂದು ಕೊಂಡು ನನ್ನ ಕೈಯಲ್ಲಿ ವಕ್ರವಾಗಿ ಬೆಳೆದಿದ್ದ ಉಗುರನ್ನು ನೋಡಿಕೊಂಡೆ. ಅದರ ನೆರಳು ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಬಿದ್ದ ಕಡೆ ಹಳ್ಳವಾಯಿತು ಎಂಬ ಅನುಮಾನ ಬಂತು. ಬಗ್ಗಿ ನೋಡಿದೆ. ನೆರಳು ಬಿದ್ದದ್ದು ಎಲ್ಲಿ ಎಂದು ಗೊಂದಲವಾಗಿ ಸಣ್ಣಗೆ ಸಿಟ್ಟೂ ಬಂತು. ಯಾಕೆ ಯಾವುದರ ಮೇಲೆ ಅನ್ನುವುದಕ್ಕಿಂತ, ಎಷ್ಟು ಹೊತ್ತು ಎಷ್ಟು ಜೋರಾಗಿ ಎಂದು ಕೇಳುವುದು ಸೂಕ್ತ ಎಂದು ಹಲ್ಲು ಕಡಿದೆ.
ಹೆಚ್ಚು ಅರ್ಥ ಬರುವುದಿರಲಿ ಈ ಪ್ರತೀಕದ ಗಲಾಟೆಯಲ್ಲಿ ಇರುವ ಅರ್ಥವೂ ಕಳೆದುಕೊಳ್ಳುವ ಅಪಾಯ ನಿಜವಾಗ ತೊಡಗಿತು. ಕಣ್ಣು ಮುಚ್ಚಿದಾಗ ಆಗುವ ಅನುಭವ ಕತ್ತಲೆಯೇ? ಇದಕ್ಕೆ ಉತ್ತರ ಕಂಡು ಕೊಂಡರೆ ಸಾಕು, ಪ್ರತೀಕಗಳ ಗೋಜಿಗೇ ಹೋಗಬಾರದು. ಬೇಕಾದರೆ ಅವೇ ಬರಲಿ ಎಂದು ಮೊಂಡು ಹಿಡಿದು ಕೂತೆ.

“ಕುವೆಂಪು ಕವಿಯೇ ಅಲ್ಲ”

In ಅಂದಂದು, ಯೋಚನೆ on July 23, 2007 at 10:17 pm

ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಪುಸ್ತಕದಲ್ಲಿ ಕುವೆಂಪುರವರ “ರಾಮಾಯಣ ದರ್ಶನಂ” ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. “ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ. ಕುವೆಂಪು ಕವಿ ಎನ್ನುವುದಾದರೆ ನಾನು ಕವಿಯೇ ಅಲ್ಲ, ನಾನು ಕವಿ ಎನ್ನುವುದಾದರೆ ಅವರು ಕವಿಯೇ ಅಲ್ಲ ಎಂದೆಲ್ಲ ಅಡಿಗರು ಕಿಡಿಕಾರಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ.
ಕನ್ನಡ ಕಾವ್ಯಲೋಕಕ್ಕೆ ಹೊಸ ತಿರುವನ್ನು ಕೊಟ್ಟ ಅತ್ಯಂತ ಪ್ರಭಾವಶಾಲಿ ಕವಿಯಾದ ಅಡಿಗರ ಎಷ್ಟೋ ಪದ್ಯಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ, ಪ್ರತಿಸಲವೂ ಮತ್ತೇನೋ ಹೊಸದು ಕಾಣುತ್ತದೆ. ಮುಂದೆ “ನಾನು ಹಿಂದು, ನಾನು ಬ್ರಾಹ್ಮಣ” ಎಂದು ಪದ್ಯ ಬರೆದು, ಜನಸಂಘಕ್ಕಾಗಿ ಚುನಾವಣೆಗೆ ಕೂಡ ಅಡಿಗರು ನಿಂತಿದ್ದರು. ಯಾಕೋ ತೇಜಸ್ವಿಯವರ ನೆನಪು ಓದುವಾಗ ಅಡಿಗರ ಈ ಎಲ್ಲ ಮಗ್ಗಲು ನೆನಪಾಯಿತು.
ಅಷ್ಟು ತೀಕ್ಷ್ಣವಾಗಿ ಕುವೆಂಪು ಕಾವ್ಯದ ಬಗ್ಗೆ ಪ್ರತಿಕ್ರಯಿಸುವುದಕ್ಕೆ ಅಡಿಗರಿಗಿದ್ದ ಒತ್ತಡದ ಬಗ್ಗೆ ಯೋಚಿಸಿದೆ. ತನ್ನ ಕಾವ್ಯದ ಬಗ್ಗೆ, ಕಾವ್ಯದ ಶೈಲಿಯ ಬಗ್ಗೆ ಆಳವಾದ ವಿಶ್ವಾಸವನ್ನು ಇಂಥ ಪ್ರತಿಕ್ರಿಯೆಗಳು ತೋರುತ್ತವೆಯೆ? ಒಬ್ಬ ಬರಹಗಾರನಿಗೆ, ಅದರಲ್ಲೂ ಅಡಿಗರಂಥ ಪ್ರತಿಭಾವಂತರಿಗೆ ಅಂಥ ಆತ್ಮವಿಶ್ವಾಸ ಸಹಜವೇನೋ? ಅಂಥ ಆತ್ಮವಿಶ್ವಾಸದ ಬಲದ ಮೇಲೇ ಸೂಕ್ಷ್ಮವಾದ, ಗಟ್ಟಿಯಾದ ಕೃತಿಗಳು ಹುಟ್ಟಲು ಸಾಧ್ಯವೇನೋ? ಈಗ ಅನಂತಮೂರ್ತಿಯವರು ಭೈರಪ್ಪನವರ ಬಗ್ಗೆ ಆಡಿದ ಮಾತುಗಳನ್ನು ಈ ವಿಚಾರಗಳ ಬೆಳಕಿನಲ್ಲಿ ನೋಡುವುದು ವಿವಾದದ ಬಿಸಿ ತಗ್ಗಿರುವಾಗ ಸಾಧ್ಯ ಎಂದು ಬಗೆಯುತ್ತೇನೆ. ಅದರಿಂದ ಪ್ರಯೋಜನವೂ ಇದೆ ಎಂದು ನನ್ನ ಎಣಿಕೆ.

ತೇಜಸ್ವಿಯವರು ಅಡಿಗ-ಕುವೆಂಪು ವಿವಾದದ ಬಗ್ಗೆ ಮಾತು ಮುಂದುವರಿಸಿ ಮತ್ತೂ ಮಹತ್ವದ ಮಾತುಗಳನ್ನು ಹೇಳಿದ್ದಾರೆ. ಆಗಿನ ಕಾಲದ ಹೊಸ ಪೀಳಿಗೆಯ ಬರಹಗಾರರು ಆ ವಿವಾದದ ಬಗ್ಗೆ ತಲೆ ಕೆಡಿಸಿಕೊಳಲಿಲ್ಲ ಎಂದು ಹೇಳುತ್ತಾ ಅದಕ್ಕೆ ಮೂರು ಕಾರಣಗಳನ್ನು ಕೊಡುತ್ತಾರೆ.
ಮೊದಲನೆಯದಾಗಿ – “ಸಮಾಜವಾದೀ ಆಂದೋಳನದಲ್ಲಿ ಭಾಗಿಗಳಾಗಿ ಸಾಹಿತ್ಯ ಕ್ಷೇತ್ರದಿಂದಲೇ ದೂರಾಗುತ್ತಿದ್ದುದು. ಸಾಹಿತ್ಯವನ್ನು ವಿಪರೀತ ಗಂಭೀರವಾಗಿ ಪರಿಗಣಿಸಿ ಶ್ರೇಷ್ಠತೆ ನಮ್ಮ ಜೀವನ್ಮರಣದ ಪ್ರಶ್ನೆ ಎಂದು ಪರಿಭಾವಿಸುವುದು ನಮಗೆ ಆಗ ಭ್ರಾಂತಿಯ ಪರಮಾವಧಿಯಂತೆ ಕಾಣುತ್ತಿತ್ತು.”
ಎರಡನೆಯದಾಗಿ – “ಬೇರೆ ಬೇರೆ ಕ್ಷೇತ್ರಗಳ ಚಟುವಟಿಕೆಗಳಿಂದಾಗಿ ದೊರತ ಹೊಸ ಹೊಸ ಮೌಲ್ಯ, ಅಳತೆಗೋಲುಗಳಿಂದ ಇಡೀ ಸಾಹಿತ್ಯ ಕ್ಷೇತ್ರದಲ್ಲೇ ಅರ್ಥವಂತಿಕೆಗಾಗಿ ಹುಡುಕಾಟ ನಡೆಯುತ್ತಿತ್ತು”
ಮೂರನೆಯದಾಗಿ- “ಬಹುಮುಖ್ಯವಾಗಿ … ಪ್ರತಿಕ್ರಯಿಸಲು ಅಗತ್ಯವಾದ ಧಾರ್ಮಿಕತೆ, ಮತ್ತು ಶ್ರದ್ಧೆಗಳು ಹೊಸ ಪೀಳಿಗೆಯ ಬರಹಗಾರರಲ್ಲಿ ಯಾರಲ್ಲೂ ಇರಲೇ ಇಲ್ಲ … ಕುವೆಂಪು ಕವಿಯೇ ಅಲ್ಲದೆ ಅಡಿಗರು ಮಾತ್ರವೇ ಕವಿಯೆಂದಾದರೂ ನಮಗೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಅನ್ನಿಸಿತು”
ಇಷ್ಟು ಹೇಳಿ ನಂತರ ಒಂದು ರೀತಿಯಲ್ಲಿ ಕುವೆಂಪುರವರು ಅಪ್ರಸ್ತುತ ಮತ್ತು ಅರ್ಥಹೀನ ಆಗಿದ್ದರು ಎನ್ನುತ್ತಾರೆ. ಹಾಗೆಯೇ – “ಆಗಿನ ನವ್ಯಕಾವ್ಯದ ಮುಂಚೂಣಿಯಲ್ಲಿದ್ದ ವಿಪ್ರೋತ್ತಮರಿಗೆ ಕುವೆಂಪು ಅವರನ್ನು ಅಮಾನ್ಯಗೊಳಿಸುವ ಭರದಲ್ಲಿ ಅದಕ್ಕಿಂತಲೂ ಆಳವಾಗಿ ತಮ್ಮನ್ನೇ ತಾವು ಅಮಾನ್ಯಗೊಳಿಸಿಕೊಳ್ಳುತ್ತಿರುವುದರ ಪರಿವೆಯೇ ಇರಲಿಲ್ಲ” ಎನ್ನುತ್ತಾರೆ.

ತೇಜಸ್ವಿಯವರ ಈ ಮೇಲಿನ ಮಾತುಗಳ ಬೆಳಕಲ್ಲಿ ನನಗೆ ಒಂದು ಅನುಮಾನ. ಅಂದಿನ ಕುವೆಂಪುವಿನ ಹಾಗೆ, ಭೈರಪ್ಪನವರು ಸಾಹಿತ್ಯಿಕವಾಗಿ ಇಂದು ಅಪ್ರಸ್ತುತರೇ ಮತ್ತು ಅರ್ಥಹೀನರೆ? ಅನಂತಮೂರ್ತಿಯವರ ಮಾತು ಯಾವುದೇ ನಿಜವಾದ ಸಾಹಿತ್ಯಕ ವಿವಾದಕ್ಕೂ ಇಲ್ಲಿ ಎಡೆಮಾಡಿ ಕೊಟ್ಟೇ ಇಲ್ಲ, ಅಲ್ಲವೆ? ಪತ್ರಿಕೆಗಳು ಮತ್ತೊಂದು ಬಿಸಿ ಸುದ್ದಿ ಸಿಕ್ಕುವವರೆಗೂ ಎಡೆಬಿಡದೆ ವಿವಾದವನ್ನು ವರದಿ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ ಅದರಲ್ಲಿ ತಾವೂ ತೊಡಗಿಕೊಂಡಿದ್ದಾರೆ. ಆದರೂ ಇಂದಿನ ಹೊಸ ಪೀಳಿಗೆಯ ಸಾಹಿತಿಗಳು ಈ ವಿವಾದದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಬಣಗಳಾಗಿ ಒಡೆಯದೆ ಉಳಿದಿದ್ದಾರೆ ಅಲ್ಲವೆ? ಹೊಸ ಪೀಳಿಗೆಯ ಬರಹಗಾರರು ಯಾವ ಹೊಸ ಮಗ್ಗುಲಿನ ಶೋಧದಲ್ಲಿ ನಿರತರಾಗಿ ಈ ವಿವಾದವನ್ನು ಕಡೆಗಣಿಸಿದ್ದಾರೆ? ಅವರ ಮೌನ ತಾವು ತಳೆದ ಯಾವ ಆಳದ ತಾತ್ವಿಕ ನಿಲುವನ್ನು ತೋರಿಸುತ್ತದೆ? ಅಥವಾ ಬರೇ ಅವಕಾಶವಂಚಿತರಾಗುವುದಕ್ಕೆ ಹೆದರಿದ ಸಮಯಸಾಧಕತನವೋ ಎಂಬ ಪ್ರಶ್ನೆಯೂ ಕಾಡುತ್ತದೆ. ಉತ್ತರಕ್ಕಾಗಿ ಕಾದು ನೋಡಬೇಕು.

ಹನೀಫ್ ಎಂಬ ಮೂಡಿಗೆರೆ ಹುಡುಗ

In ಅಂದಂದು, ಯೋಚನೆ on July 20, 2007 at 10:14 pm

ಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್‌ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ ‘ದ ಆಸ್ಟ್ರೇಲಿಯನ್’ ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ ‘ಲೀಕ್, ಲೀಕ್’ ಎಂದು ಬೊಬ್ಬೆ ಹೊಡೆಯಿತು. ಹನೀಫ್ ಬಗ್ಗೆ ಜಡ್ಚಮೆಂಟಲ್ಲಾಗಿ ಮೊದಲಿಂದಲೂ ಮಾಧ್ಯಮದ ಜತೆ ಮಾತಾಡುತ್ತಲೇ ಬಂದಿದ್ದ ಪ್ರಧಾನಿಯಾದಿಯಾಗಿ ಎಲ್ಲರೂ ಈಗ ಕೂಗಲು ತೊಡಿದ್ದು ವಿಪರ್ಯಾಸವೆಂದು ಎಲ್ಲರಿಗೂ ತೋರಿತು. ಆಗ ಹನೀಫ್ ಲಾಯೆರ್‍ ಮುಂದೆಬಂದು “ನಾನೇ ಮಾಧ್ಯಮಕ್ಕೆ ಕೊಟ್ಟಿದ್ದು. ಆ ಸಂದರ್ಶನ ಪೋಲೀಸರಿಗೆ ಆಸ್ತಿಯಾಗಿರುವಷ್ಟೇ ತನ್ನ ಕ್ಲೈಂಟಿಗೂ ಸೇರಿದ್ದು. ನಾನು ತಪ್ಪು ಮಾಡಿದ್ದರೆ, ಬಂದು ಹಿಡಿದುಕೊಂಡು ಹೋಗಿ” ಎಂದು ಪ್ರಧಾನಿ, ಅಟರ್ನಿ-ಜನರಲ್ ಆದಿಯಾಗಿ ಎಲ್ಲರನ್ನೂ ಹೆಸರಿಸಿ ಸವಾಲೆಸದ. ಗಪ್‌ಚಿಪ್.

12 ದಿನಗಳ ಕಾಲ ಚಾರ್ಜ್ ಮಾಡದೆ ಬಂಧಿಸಿಟ್ಟುಕೊಂಡು, ಕಡೆಗೆ ಕೋರ್ಟಿನಲ್ಲಿ ನಿಲ್ಲಿಸಿದಾಗ, ಕೇವಲ ಹತ್ತು ಸಾವಿರದ ಶೂರಿಟಿ ಮೇಲೆ ಹನೀಫ ಬಿಡುಗಡೆಯಾದಾಗ, ಆಸ್ಟ್ರೇಲಿಯಾದ ಸರ್ಕಾರ ತಲೆಯಿಂದ ಕಾಲವರೆಗೆ ಕಂಪಿಸಿತು. ಸಿಟ್ಟಿನಿಂದ, ಹನೀಫ್‌ನ ವರ್ಕ್-ವೀಸಾ ರದ್ದು ಮಾಡಿತು. ಆಧಾರವಿಲ್ಲದ ಬಂಧನ, ಆರೋಪ ಸಾಬೀತಾದಾಗ ಹನೀಫ ಆಸ್ಟ್ರೇಲಿಯಾದಲ್ಲಿದ್ದರೆ ತಮ್ಮನ್ನು ಸೂ ಮಾಡಬಹುದು ಎಂದು ಹೆದರಿದರು ಅಂದುಕೊಂಡೆ. ಆದರೆ, ಅದಕ್ಕಿಂತ ನೀಚತನವಿದು ಎಂದು ಗೊತ್ತಾಗಿದ್ದು ಆನಂತರ. ಕೋರ್ಟ್ ಬಿಡುಗಡೆ ಮಾಡಿದರೂ, ಹನೀಫ್ ವೀಸ ರದ್ದಾದ ಕಾರಣ ಸಿಡ್ನಿಯಲ್ಲಿ ಡಿಟೆಂಶನ್‌ಗೆ ಹೋಗಬೇಕಾಗುತ್ತದೆ. ಬ್ರಿಸ್ಬೆನಿನಿಂದ ಲಾಯರ್‍ ಪದೇ ಪದೇ ಸಿಡ್ನಿಗೆ ಬಂದು ಹೋಗುವುದು ಹೆಚ್ಚು ಖರ್ಚು ತಗುಲುವಂಥ ವಿಚಾರ. ಮೇಲಾಗಿ, ಹನೀಫ್ಸಜ್ಜನ ಎಂದು ಜನತೆ ಅಂದುಕೊಂಡಾರು ಎಂಬ ಆತಂಕ ಕೂಡ. ಜನರಿಗೆ ಗೊತ್ತಾಗಲಿ ಎಂದೇ ಹನೀಫ್‌ನ ಲಾಯರ್‍ ಅವನ ಸಂದರ್ಶವನ್ನು ಹೊರಹಾಕಿದ್ದು ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ.

ಹನೀಫ್ ಶೂರಿಟಿ ಹಣ ಕೊಡದೆ ಪೋಲೀಸರ ಸುಪರ್ದಿಯಲ್ಲೇ ಇರಲು ನಿರ್ಧರಿಸಿದಾಗ ಅವನನ್ನು ದಿನಕ್ಕೆ 23 ಗಂಟೆಗಳ ಕಾಲ ಸಾಲಿಟೆರಿ ಕನ್‌ಫೈನ್‌ಮೆಂಟಿನಲ್ಲಿ ಇಟ್ಟಿದ್ದಾರೆ. ಕೋರ್ಟು ಹನೀಫ್‌ನನ್ನು ಬಿಡುಗಡೆ ಮಾಡಿ ಸಮಾಜದಲ್ಲಿ ಅವನು ವಾಸವಾಗಿರುವುದುಅಪಾಯವಲ್ಲ ಎಂದಿದ್ದರೂ ಜೈಲಿನ ಈ ಕಠೋರತೆಗೆ ಕಾರಣ ಮತ್ತು ಹಿನ್ನೆಲೆ ರಾಜಕೀಯವಲ್ಲದೆ ಬೇರೇನೂ ಇಲ್ಲ ಎಂಬುದು ಈಗ ಜನಜನಿತವಾಗಿದೆ.

ಹೊರಬಿದ್ದಿರುವ 142 ಪುಟಗಳ ಸಂದರ್ಶನವನ್ನು ಓದುತ್ತಾ ಹೋದಂತೆ ಬೋರಾಗುವಷ್ಟು ಅವರಿವರ ಹೆಸರು, ಹೆಸರಿನ ಸ್ಪೆಲಿಂಗ್, ಕಾಲೇಜಿನ ಹೆಸರು, ಅದರ ಸ್ಪೆಲ್ಲಿಂಗ್, ಅಡ್ರೆಸ್‌ಗಳು ಅವುಗಳ ಸ್ಪೆಲಿಂಗ್‌ಗಳು ತುಂಬಿದ್ದು, ಅದೆಲ್ಲದರ ನಡುವೆ ಮುಖ್ಯವಾದ ವಿಷಯಗಳಿಗೆ ಹನೀಫ್ ನೀಡಿದ ಉತ್ತರಗಳು ಹುಡುಕಿ ತೆಗೆಯುವುದು ಪ್ರಾಯಾಸದ ಕೆಲಸವೇ. ಆದರೂ ಪೂರ್ತಿ ಓದಿದಾಗ ಏನು ಹುಚ್ಚು ಅನಿಸಿತು.

ಕಾಲೇಜು ಮುಗಿಸಿ ಲಂಡನ್‌ಗೆ ಹೋದಾಗಿನಿಂದ ಶುರುವಾಗಿ ಪೋಲೀಸರ ಪ್ರಶ್ನೆಗಳಿಗೆ ಸರಳವಾಗಿ, ನಾವು ನೀವು ಕೊಡುವಂತೆ ಉತ್ತರ ಕೊಟ್ಟಿರುವುದು ಕಾಣುತ್ತದೆ. ಮೊದಲಿಂದ ಕಡೆಯವರೆಗೂ “ಈ ಸಂದರ್ಶನಕ್ಕೆ ಲಾಯರ್‍ ಸಹಾಯ ಬೇಡ, ನೀವು ಕೇಳುತ್ತಿರುವುದಕ್ಕೆ ಸಮಂಜಸ ಉತ್ತರ ಕೊಟ್ಟುಬಿಡುತ್ತೇನೆ” ಎಂಬ ಮುಗ್ಧತೆ ಕಾಣುತ್ತದೆ. ಪ್ರತಿ ಪ್ರಶ್ನೆಗೂ ಉತ್ತರಗಳು ಸಮಂಜಸವಾಗಿರುವುದನ್ನು ಪೋಲೀಸರೇ ಒಪ್ಪಿಕೊಳ್ಳುತ್ತಾ ಹೋಗಿದ್ದಾರೆ. ಹಾಗೆ ನೋಡಿದರೆ, ಪೋಲೀಸರು ತುಂಬಾ ಸಜ್ಜನರಾಗಿಯೇನಡೆದು ಕೊಂಡಿದ್ದಾರೆ ಅನಿಸಿತು.
ಒಂದು ಕಡೆ, ಹನೀಫನ ಡೈರಿಯಿಂದ ಒಂದು ಕಾಗದದ ಹಾಳೆ ತೆಗೆದು “ಇದನ್ನು ನೀನು ಬರೆದಿದ್ದ?” ಎಂದು ಕೇಳುತ್ತಾರೆ. ಹನೀಫ “ಇದು ನನ್ನ ಕೈಬರಹ ಅಲ್ಲ” ಎಂದು ಮತ್ತೆ ಮತ್ತೆ ಹೇಳುತ್ತಾನೆ. ಪೋಲೀಸರು “ಇದು ನಿನ್ನ ಡೈರಿಯಲ್ಲಿ ಇದ್ದದ್ದು. ಬೇರೆಯವರದುಆಗಿರಲು ಹೇಗೆ ಸಾಧ್ಯ” ಎಂದು ಜಬರದಸ್ತು ಮಾಡುತ್ತಾರೆ. ಕ್ಷಣ ತಡೆದು, ಪೋಲೀಸ್ ಒಬ್ಬ ಹೊರಗೆ ಹೋಗಿ ಬಂದು “ಕ್ಷಮಿಸು, ಆ ಹಾಳೆಯ ಬರವಣಿಗೆ ನಿನ್ನ ಕೈಬರಹ ಅಲ್ಲ ಎಂದುದು ಸರಿಯೇ. ಅದನ್ನು ಒಬ್ಬ ಪೇದೆ ಬರೆದುದು ಎಂದು ಈಗ ಹೇಳಿದರು” ಎಂದು ಹೇಳುತ್ತಾನೆ. ಎಂಥ ಕ್ಷುಲ್ಲಕ ತಪ್ಪು ಮಾಡುತ್ತಾರೆ ಎಂದು ನಗು ಬಂದರೂ, ಕೂಡಲೇ ತಮ್ಮ ತಪ್ಪೊಪ್ಪಿಕೊಂಡು ಅದನ್ನು ದಾಖಲಿಸಿದ್ದರ ಬಗ್ಗೆ ಕಿಂಚಿತ್ತು ಒಳ್ಳೆಯದೆನಿಸಿತು. (ಇದು ನೋಡಿ: ಜನರ ಜತೆ ದಿನವಹಿ ವ್ಯವಹರಿಸುವ ಪೋಲೀಸರು, ಪತ್ರಕರ್ತರು ಸಜ್ಜನರಾಗಿಯೇ ಇರುತ್ತಾರೆ, ಅವರ ಮೇಲೆ ಪ್ರಭಾವ ತರುವ ಮೇಲೆ ಕೂತ ಮಂದಿ ದೌರ್ಜನ್ಯದ ಪ್ರತಿರೂಪಗಳಾಗಿರುತ್ತಾರೆ ಎಂಬ ಕಹಿ ಸತ್ಯ)

ಈ ವರ್ಷ ಆಸ್ಟ್ರೇಲಿಯಾದಲ್ಲಿ ಫೆಡರಲ್ ಚುನಾವಣೆ. ಸೋಲಬೇಕಾಗಿದ್ದ ಹಿಂದಿನ ಎರಡು ಚುನಾವಣೆ ಸಮಯದಲ್ಲಿ ಇದೇ ಧೂರ್ತ ಪ್ರಧಾನಿ ನಾಚಿಕೆಬಿಟ್ಟು ಸುಳ್ಳು ಮೋಸ ತಟವಟಗಳ ಮೂಲಕ ಅಧಿಕಾರಕ್ಕೆ ಬಂದ. ಇರಾಖ್ ಮತ್ತು ಆಫ್ಘಾನಿಸ್ತಾನದ ರೆಫ್ಯೂಜೀಸ್ ಬಗ್ಗೆ ನೀಚವಾಗಿ ಮಾತಾಡಿ ಅವರನ್ನು ಪ್ರಾಣಿಗಳಂತೆ ಚಿತ್ರಿಸಿ ಜನರ ಕಣ್ಣಿಗೆ ಮಣ್ಣೆರಚಿದ. ಮುಂದಿನ ಚುನಾವಣೆಯಲ್ಲಿ ಇಂಟೆರೆಸ್ಟ್ ರೇಟ್ ಬಗ್ಗೆ ಗಾಬರಿ ಹುಟ್ಟಿಸಿ, ಜನರನ್ನು ಆತಂಕಗೊಳಿಸಿ ಅಧಿಕಾರಕ್ಕೆ ಬಂದ. ಈಗಲೂ ಸೋಲುವ ಹಾಗೆ ಕಾಣುತ್ತಿದ್ದಾನೆ. ಹನೀಫನನ್ನು ತನ್ನ ರಾಜಕೀಯ ಉಳಿವಿನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಹಾಗೇನಾದರೂ ಆದರೆ, ಆಸ್ಟ್ರೇಲಿಯಾದ ಜನತೆ ತಾವು ಇಂಥ ನೀಚ ದರಿದ್ರ ಜನಗಳಿಂದ ಆಳಿಸಿಕೊಳ್ಳಲು ತಕ್ಕವರು ಎಂದು ಲೋಕಕ್ಕೇ ಸಾರುತ್ತಿದ್ದಾರೆ ಎಂದು ಮನಸ್ಸು ಕಹಿಯಾಗುತ್ತದೆ.

ಆಸ್ಟ್ರೇಲಿಯಾದ ರಾಜಕೀಯವಷ್ಟೇ ಅಲ್ಲದೆ, ಜಾಗತಿಕವಾಗಿ ಯೋಚಿಸಿದಾಗ: ಗುಹೆಯಲ್ಲೋ, ಅರಮನೆಯಲ್ಲೋ ಕೂತ ಬಿನ್-ಲಾದಿನ್‌ನಂಥ ನೀಚರು ಗೆದ್ದನಗೆ ನಗುತ್ತಿರುತ್ತಾರೆ. ಬಿಳಿಯರ ಸೇವೆ ಮಾಡಲು ಹೋಗಿರುವ ಹನೀಫನಂತವರಿಗೆ ಹೀಗಾಗುವುದು ಅವರಿಗೆ ಖುಷಿಯ ಸಂಗತಿಯೇ. ಇವನಿಗಾದುದನ್ನು ನೋಡಿಯಾದರೂ ಉಳಿದವರು ಬಿಳಿಯರ ಕ್ರೂರತೆಯ ಬಗ್ಗೆ ಅರಿತುಕೊಳ್ಳಲಿ, ಬಂದೂಕು ಬಾಂಬು ಎತ್ತಿ ಹುಚ್ಚರಂತೆ ಹೊಡೆದಾಡಲಿ ಎಂದು ಸಾರುತ್ತಾರೆ. ಅಲ್ಲದೆ, ಇಷ್ಟು ದಿನ ದತ್ತವಾಗಿದ್ದ- ಪಾಶ್ಚಿಮಾತ್ಯ ಪ್ರಭುತ್ವಗಳಿಗೆ ಕಂಟಕವಾಗಿದ್ದ ಅಭಿವ್ಯಕ್ತಿ ಸ್ವಾತಂತ್ಯ್ರದಂಥ ಹಲವಾರು ಸ್ವಾತಂತ್ಯ್ರಗಳು ಈಗ ಗಂಟುಮೂಟೆ ಕಟ್ಟಿ ಮೋರಿಗೆಸೆಯುವ ಮಟ್ಟಕ್ಕೆ ಬಂದು ನಿಂತಿರುವುದು ಯಾರಿಂದಾದ ತಪ್ಪು ಎಂದು ಯೋಚನೆಗೀಡಾಗುತ್ತೇನೆ. ಹನೀಫನ ಸಂದರ್ಶನದ ಈ ಕಡೆಯ ಮಾತುಗಳು ಕಿವಿಯಲ್ಲಿ ಹಾಗೇ ಉಳಿಯುತ್ತದೆ-

Just want to let you know. And I, I don’t want to spoil my name and my profession. That’s the main thing. And I’ve been a professionalist until now and I haven’t been involved in any kind of extra activities,.. And I want, just want to live in life as a professinalist in the medical profession. That’s what I want

ಹವಾಮಾನೋವಾಚ

In ಅಂದಂದು, ಯೋಚನೆ on June 8, 2007 at 9:28 am

[ಸಾವಿರಾರು ಜನರ ಮುಂದೆ ಕೂಗುವ ಹಾಗೆ ಕೊಂಚ ಎತ್ತರದ ದನಿಯಲ್ಲಿ ಓದಿಕೊಳ್ಳಬೇಕು]
ಛಳಿಯ ಹಿನ್ನೆಡೆ! ಪಶ್ಚಿಮದಿಂದ ಮೋಡಗಳ ಮುನ್ನಡೆ! ಎರಡು ದಿನದಿಂದ ಸಿಡ್ನಿ ಸುತ್ತಮುತ್ತ ರಾಚುತ್ತಿರುವ ಜಡಿಮಳೆ ಇನ್ನೂ ಮೂರು ನಾಕು ದಿನ ನಿಲ್ಲುವ ಸೂಚನೆಯಿಲ್ಲ! ವಾರವಿಡೀ “ಮೋಡ ಮುಸುಕಿದ ವಾತಾವರಣ”! ಜನಗಳ ಗೊಣಗಾಟ! ಸಿಡ್ನಿಗೆ ನೀರೂಡಿಸುವ ವಾರಗಂಬ ಜಲಾಶಯದ ಮಟ್ಟವೂ ಏರುತ್ತಿರುವು ಸೂಚನೆ! ಉತ್ತರದ ಕ್ವೀನ್ಸ್‌ಲಾಂಡಿನ ದಕ್ಷಿಣದಲ್ಲೂ ಭಾರಿ ಮಳೆ! ಒಳನಾಡಿನಲ್ಲಿ ಈ ವರ್ಷ ಹೀಗೆ ಮಳೆಯಾದರೆ ಬರಗಾಲ ಕೊನೆಗೊಳ್ಳಬಹುದೆಂಬ ಆಶಾಕಿರಣ!
[ಈಗ ಕೊಂಚ ದನಿ ತಗ್ಗಿಸಿಕೊಳ್ಳಬಹುದು]
ನಮ್ಮ ಮನೆಯ ಹತ್ತಿರದ ತೊರೆಯಲ್ಲೂ ಈವತ್ತು ಬೆಳಿಗ್ಗೆ ನೀರಿನ ಓಟ ಹೆಚ್ಚಿದೆ! ಅದಕ್ಕೆ ಕಟ್ಟಿರುವ ಕಾಲ್ಸೇತುವಿನವರೆಗೂ ನೀರು ತುಂಬಿ ಹರಿದ ದಿನಗಳು ನೆನಪಿದೆ! ಮತ್ತೆ ಅಂಥ ದಿನಗಳು ಈ ವರ್ಷ ಬರಬಹುದು ಎಂಬುದು ಎಲ್ಲರ ಅಂಬೋಣ! ಇವಿಷ್ಟೂ ನಾನಿರುವ ಊರಿನ ಹವಾಮಾನದ ವಿಶೇಷ ಸಮಾಚಾರ!
[ಇನ್ನು ಮನದಲ್ಲೇ ಓದಿಕೊಳ್ಳಬಹುದು]
ನಮ್ಮಲ್ಲಿನ ಬರಗಾಲದಷ್ಟು ಹರಿತ ಇಲ್ಲಿಯ ಬರಗಾಲಕ್ಕಿಲ್ಲ. ಕೆಲವು ರೈತರು ಇಲ್ಲಿಯೂ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೂಡ. ನೂರಾರು ವರ್ಷ ಕಂಡಿರದಂಥ ಮಳೆಬಾರದ ಈ ಬರಗಾಲ ಜನರಲ್ಲಿ ನೀರಿನ ಬಗ್ಗೆ, ಭೂಶಾಖದ ಬಗ್ಗೆ ಎಚ್ಚರಿಕೆಯಂತೂ ಮೂಡಿಸಿದೆ ಎನ್ನುವದು ಸುಳ್ಳಲ್ಲ.

ಪಳೆಯುಳಿಕೆಗಳ ಪಿಸುನುಡಿ

In ಅಂದಂದು, ಕಲ್ಪನೆ, ಯೋಚನೆ on June 1, 2007 at 11:14 am

ಒಂದೊಂದು ಸಲ ನೂರಾರು ವರ್ಷ ಸುಮ್ಮನೆ ಕೂತಿರೋ ಪಳೆಯುಳಿಕೆಗಳು ಮಾತಾಡ್ತಾವಂತೆ. ಜಗಳ ಆಡ್ತಾವಂತೆ. ನಾನು ನಿನಗಿಂತ ಹಳೆಯ ಪಳೆಯುಳಿಕೆ. ಆದರೆ ನಿನಗಿಂತ ನಾನು ಹೆಚ್ಚು ಆಳದಲ್ಲಿದ್ದೀನಿ. ನೀನು ಬರೀ ನೂರಾರು ವರ್ಷದ ಹಿಂದಿನ ಮಾತಾಡಿದರೆ ನಾನು ಸಾವಿರಾರು ವರ್ಷದ ಹಿಂದಿನ ಮಾತಾಡ್ತೀನಿ. ನಿನ್ನ ಸಾವಿರಾರು ವರ್ಷದ ಮಾತು ಯಾರಿಗೆ ಬೇಕು, ನೂರಾರು ವರ್ಷದ ಮಾತೇ ಮುಖ್ಯ ರೆಲವೆಂಟು. ಹೀಗೆ ಏನೇನೋ ಮಾತಡ್ಕಂಡು ಅವುಗಳು ಪಿಸುದನೀಲಿ ಕೊಸರಾಡೋದು.

ಆ ಒಂದೊಂದು ಸಲದ ಮಾತು ಒಂದೊಂದು ಸಲ, ವಾಂತಿ ಮಾಡೋಕೆ ಅಂತ ಒಂದೊಂದು ಸಲ ರಾತ್ರಿ ಎದ್ದೋನಗೆ ಕೇಳಿಬಿಟ್ಟರೆ ಮುಗೀತು.

ಇದ್ದಕಿದ್ದಂಗೆ ಬೋರಾದ ಊರಲ್ಲಿ ದೊಂಬರಾಟ ಶುರು ಆಗತ್ತೆ. ಊರಿಗೆ ಸರ್ಕಸ್ ಬಂದು ಟೆಂಟು ಹಾಕಿ ಬಿಡತ್ತೆ. ಸರ್ಕಸಿಂದ ತಪ್ಪಿಸಿಕೊಂಡ ಪ್ರಾಣಿಗಳು ಊರೆಲ್ಲಾ ಓಡಾಡ್ತವೆ. ಒಂದರ ಮೇಲೊಂದು ಬಿದ್ದು ಹರಿದು ಮುಕ್ಕೋಕೆ ಹೊರಡ್ತಾವೆ. ಸರ್ಕಸ್ ಮಾಲೀಕ ಎಲ್ಲೋ ಕೂತ್ಕೊಂಡು ನಗ್ತಾನೆ. ಪ್ರಾಣಿ ಹಿಡಿಯೋರು ಕರೆಸಿ ಎಲ್ಲ ಪ್ರಾಣೀನೂ ಒಂದೊಂದಾಗಿ ಹಿಡಿಸ್ತಾನೆ. ಅವಕ್ಕೇ ಅಂತಲೇ ಕಟ್ಟಿಸಿರೋ ಬೋನ್ನಲ್ಲಿ ಹಾಕೋ ತನಕ ಅಪ್ಪ ಅಮ್ಮಂದಿರು ಮಕ್ಕಳನ್ನ ಮನೆಯಿಂದ ಆಚೆ ಕಳಿಸದೆ ಹಿಡ್ಕೊಂಡು ಕೂತಿರ್ತಾರೆ.

ಈ ಪಳೆಯುಳಿಕೆಗಳು ಯಾವುದೋ ಭೂಮಿಯ ಪದರದಿಂದ ಮಾತಾಡಿದರೆ ಯಾರಿಗೆ ಕೇಳತ್ತೆ ಅಂತ ಗುಮಾನಿ ಪಡಬೇಡಿ. ಅದಕ್ಕೂ ಒಂದು ಸಮಯ ಸಂದರ್ಭ ಪರಿಸ್ಥಿತಿ ಬೇಕು. ಅವುಗಳ ಕೊನರಾಟ ಕೇಳಿಸಬೇಕು ಅಂದರೆ ಅಕ್ಕಪಕ್ಕದಲ್ಲಿರೋರೆಲ್ಲ ಗಪ್‌ಚಿಪ್ಪಾಗಿ ಇರಬೇಕು. ಅದಕ್ಕೆ ಉಪ್ಪು ಮಾರೋರು, ತರಕಾರಿ ಮಾರೋರು ಸುಮ್ಮನಿರಬೇಕು. ಸಾಣೆ ಹಿಡಿಯೋರು, ಬೀಗ ರಿಪೇರಿ ಮಾಡೋರು ಸುಮ್ಮನೆ ಇರಬೇಕು. ಕಸ ಗುಡಿಸೋರು, ಬೀದಿ ತೊಳೆಯೋರು ಸುಮ್ಮನಿರಬೇಕು. ಮಕ್ಕಳಿಗೆ ಕತೆ ಹೇಳೋರು, ಜೋಗುಳ ಹಾಡೋರು ಸುಮ್ಮನಿರಬೇಕು. ಹಾಡೋ ಪ್ರೇಮಿಗಳು, ನಲ್ಲನ ಕಿವೀಲಿ ಪಿಸುನುಡಿಯೋ ನಲ್ಲೇರು ಸುಮ್ಮನಿರಬೇಕು. ಅಂಥ ಮೌನದಲ್ಲಿ ಮಾತ್ರ ಈ ಪಳೆಯುಳಿಕೆಗಳ ಮಾತು ಕೇಳತ್ತೆ, ಮುಖ್ಯ ಅನಿಸತ್ತೆ.

ಮುಂಜಾನೆ ಮನಸ್ಸು

In ಅಂದಂದು on May 29, 2007 at 9:17 am

ದಕ್ಷಿಣ ಭೂಗೋಲಕ್ಕೆ ಚಳಿಗಾಲ ಕಾಲಿಡುತ್ತಿದ್ದಂತೆ ತಡವಾಗಿಯಾದರೂ ಸಿಡ್ನಿಯನ್ನೂ ಚಳಿ ಆವರಿಸುತ್ತಿದೆ. ದಪ್ಪ ದಪ್ಪನೆ ಬಟ್ಟೆಗಳು ಪೆಟ್ಟಿಗೆಯಿಂದ, ಗೂಡುಗಳಿಂದ ಹೊರಗೆ ಬಂದು ಮೈಗಳನ್ನು ತಬ್ಬಿಕೊಂಡು ಇನ್ನು ಮೂರು ನಾಕು ತಿಂಗಳು ನಗಾಡುತ್ತವೆ. ಅಡ್ಡಕ್ಕೆ ಬೀಳುವ ಬೆಳಗಿನ ಸೂರ್ಯನ ಬೆಳಕು ಶಾಖ ಹುಟ್ಟಿಸಲು ಮನಸ್ಸೇ ಇಲ್ಲದಂತೆ ರಸ್ತೆ, ರೈಲು ಹಳಿಗಳ ಮೇಲೆ ಬಿದ್ದುಕೊಂಡಿರುತ್ತದೆ. ಅನಾಥವಾಗಿ ಆದರೆ ತುಂಬಾ ತಾಜಾತನದಿಂದ.

ಇಂಥ ಮುಂಜಾನೆ ಆಪ್ತತೆ ಎಂದರೇನು ಎಂಬ ಪ್ರಶ್ನೆ ಮನಸ್ಸನ್ನಾವರಿಸಿತು. ಇಷ್ಟು ವರ್ಷ ಸಿಡ್ನಿಯಲ್ಲಿದ್ದರೂ ಇನ್ನೂ ಆಪ್ತವಾಗದ ಜಾಗ ಇರುವುದು ಸೋಜಿಗವಾಗುತ್ತದೆ. ಹಾಗೆಯೇ, ಈ ನೆಲಕ್ಕೆ ಕಾಲಿಟ್ಟ ಮೊದಲ ದಿನದಿಂದ ಆಪ್ತವಾದ ನಮ್ಮ ಹಳ್ಳಿಯನ್ನು ನೆನಪಿಸುವ ಮನೆಯ ಮಾಡುಗಳು ಈವತ್ತಿಗೂ ಮುದಕೊಡುವುದೂ ಸೋಜಿಗವಾಗುತ್ತದೆ. ಬೆಂಗಳೂರಿನಲ್ಲೂ ಹೀಗಾಗಬಹುದು ಅಂದುಕೊಂಡು ಸಮಾಧಾನದ ಜತೆಗೆ ಆತಂಕವಾಗುತ್ತದೆ.

ರೈಲು ಹಳಿಗಳ ಅಕ್ಕಪಕ್ಕ ಕಪ್ಪು ಕಟ್ಟಿದ ಜಲ್ಲಿ ಕಲ್ಲುಗಳನ್ನು ದಿಟ್ಟಿಸುತೀನಿ. ಒಂದೊಂದು ಕಲ್ಲಿಗೂ ತನ್ನದೇ ನಿರ್ದಿಷ್ಟ ಜಾಗ ಅಂತ ಇಲ್ಲ. ಆದರೆ ಆ ಕಲ್ಲಿನ ರಾಶಿಗೆ ತನ್ನದೇ ಜಾಗವಿದೆ, ಕೆಲಸವಿದೆ. ವ್ಯಕ್ತಿ-ಸಮಷ್ಟಿಯ ಯೋಚನೆ. ಪ್ಲಾಟ್‌ಫಾರ್ಮನಲ್ಲಿ ಅಲಂಕಾರ ಮಾಡಿಕೊಂಡು ಪಕ್ಕದಲ್ಲಿ ಬಂದು ನಿಲ್ಲುವ ತರುಣಿ, ಅಷ್ಟು ದೂರದಲ್ಲಿ ಎದೆಯುಬ್ಬಿಸಿ ನಿಂತ ಸೂಟ್‌ಧಾರಿ ಇವರೆಲ್ಲರೂ ಆ ಯೋಚನೆಯನ್ನು ಪ್ರಶ್ನೆಯಾಗಿಸುತ್ತಾರೆ.

ಬೆಂಗಳೂರಿನಲ್ಲಿ ಫ್ಯಾಕ್ಟರಿಯ ಮೊದಲ ಶಿಫ್ಟಿಗೆ ಮಂಜು ಮುಸುಕಿದ ಚಳಿಯಲ್ಲಿ ಸೈಕಲ್‌ ತುಳಿದು ಹೋಗುತ್ತಿದ್ದದ್ದು ನೆನಪಿಗೆ ಬಂತು. ಬರ್ಲಿನ್ ಗೋಡೆ ಬಿದ್ದ ಚರಿತ್ರೆಯ ಕ್ಷಣದಂತೆ ಭಾರತಕ್ಕೆ ಆರ್ಥಿಕ ಲಿಬರಲೈಸೇಶನ್‌ ಹೊಕ್ಕ ಕ್ಷಣವಿದೆಯೆ ಎಂದು ನನ್ನ ಅಲ್ಪ ತಿಳುವಳಿಕೆಯ ಬುಟ್ಟಿಯಲ್ಲಿ ಕೈಯಾಡಿಸುತೀನಿ. ವಾಸ್ತವದಲ್ಲಿ ಕ್ಷಣಗಳಿಗೆ ಹೆದರುವ, ಕ್ಷಣಗಳನ್ನು ಗುರುತಿಸಲು ಹೆದರುವ ಮನಸ್ಸು. ಹಾಗಾಗಿಯೇ ಅಮೂರ್ತವಾಗಿ ರಾಹುಕಾಲ ಗುಳಿಕಕಾಲ ಲೆಕ್ಕ ಹಾಕುವ ಮನಸ್ಸು ನನ್ನವರದು ಎಂದು ಆತಂಕ ತುಂಬಿದ ಸಮಾಧಾನ ತಾಳುತೀನಿ.

ನನ್ನನ್ನು ಬೆಚ್ಚಗಿಟ್ಟಿರುವ ಜಾಕೆಟ್ಟನ್ನು ಒಮ್ಮೆ ಸವರುತೀನಿ. ತುಂಬಾ ತಣ್ಣಗಿದೆ. ಅದಕ್ಕೂ ಚಳಿಯಾಗುತ್ತಿರಬಹುದು ಎಂದು ಮುಗಳು ನಗುತೀನಿ.

ನಾನಿಲ್ಲದೆ ನನ್ನ ಬದುಕು

In ಅಂದಂದು, ಚಲನಚಿತ್ರ on May 18, 2007 at 8:41 am

ಒಂದೆರಡು ದಿನದ ಕೆಳಗೆ my life without me (2003) ಎಂಬ ಚಿತ್ರ ನೋಡಿದೆ. ಕೆನಡಾ ದೇಶದ್ದು. ನಿರ್ದೇಶಕಿ Isabel Coixet ಎಂಬ ಸ್ಪಾನಿಶ್ ಮಹಿಳೆ. (ಈ ಚಿತ್ರ ಸ್ಪಾನಿಶ್ ಮತ್ತು ಫ್ರೆಂಚ್‌ ಭಾಷೆಯಲ್ಲೂ ಒಟ್ಟಿಗೆ ಮಾಡಿದ್ದಾರೆ)

ಹೊಟ್ಟೆಯ ಟ್ಯೂಮರ್‌ನಿಂದ ಸಾವಿಗೆ ಒಂದೆರಡು ತಿಂಗಳು ಮಾತ್ರ ಉಳಿದಿರುವ ಆನ್ ಎಂಬವಳು ರಾತ್ರಿ ಯೂನಿವರ್ಸಿಟಿ ಕ್ಲೀನ್ ಮಾಡುವ 23 ವರ್ಷದ ಹೆಣ್ಮಗಳು. ಗೊತ್ತಾದಾಗಿನಿಂದ ಕಡೆಯವರೆಗೂ ಅವಳ ಪ್ರತಿಕ್ರಿಯೆ ಯಾವುದೇ ಭಾವೋದ್ವೇಗಕ್ಕೂ ಒಳಗಳ್ಳದೆ ಉಳಿಯುವುದು ಒಂದು ವಿಶೇಷ. ಎರಡು ಪುಟ್ಟ ಮಕ್ಕಳು ಮತ್ತು ಗಂಡನ ಜತೆ ತಾಯಿಯ ಮನೆಯ ಹಿತ್ತಲಲ್ಲಿರುವ ಟ್ರೈಲರ್‌ನಲ್ಲಿ ವಾಸ ಮಾಡುವ ಇವಳು (ಕೊಂಚ eclectic ಅನ್ನಿಸುವ ಪಾತ್ರ) ಸಾಯುವ ಮುಂಚೆ ಏನೇನು ಮಾಡಬೇಕು ಎಂದು ಪಟ್ಟಿ ಮಾಡುತ್ತಾಳೆ. ಎಲ್ಲವನ್ನೂ ಯಾವುದೇ ಭಾವೋದ್ವೇಗವಿಲ್ಲದೆ ಮಾಡುತ್ತಾ ಹೋಗುತ್ತಾಳೆ. ಅತಿ ಭಾವುಕವಾಗಬಹುದಾದ ಎಲ್ಲ ಸಾಧ್ಯತೆಗಳಿದ್ದರೂ ಚಿತ್ರ ಸಲೀಸಾಗಿ ಸಾಗುತ್ತದೆ. ಆದರೆ ನೋಡುವವರಿಗೆ ಒಂದು ರೀತಿಯ ಯಾತನೆಯಾಗುವಂತಿದೆ.

ಹದಿನೇಳನೇ ವಯಸ್ಸಿನಲ್ಲಿ ತನ್ನನ್ನು ಚುಂಬಿಸಿದ ಮೊದಲ ಹುಡುಗನ ಜತೆ ಮದುವೆಯಾಗಿ ಎರಡು ಮಕ್ಕಳನ್ನು ಹೆತ್ತಿರುವ ಈಕೆ, ಇನ್ನಾದರೂ ಮತ್ತೊಬ್ಬ ಗಂಡಿನ ಸಹವಾಸ ಪಡೆಯಬೇಕು ಎಂದು ಪಟ್ಟಿಯಲ್ಲಿ ಬರೆಯುತ್ತಾಳೆ. ಈ “ಅನೈತಿಕ ಹಂಬಲ”ದ ಮೇಲೆ ಸಾವಿನ ನೆರಳು ಚಾಚಿರುವುದರಿಂದ ಅದಕ್ಕೆ ಹೇಗೆ ಪ್ರತಿಕ್ರಯಿಸಬೇಕು? ನನಗಂತೂ ಚಿತ್ರ ನೋಡುವಾಗ ಸರಿ/ತಪ್ಪುಗಳ ನಿಲುವಿನಾಚೆ ಆಕೆಯ ಬದುಕಿಗೆ ಸ್ಪಂದಿಸುವಂತಾಯಿತು. ಚಿತ್ರ ಮಾಡಿರುವುದೂ ಮಹಿಳೆಯಾದ್ದರಿಂದ ಆ “ಅನೈತಿಕ”ವೂ ರೋಚಕವಾಗುವ ಹಾಗೆ ಚಿತ್ರಿಸಿಲ್ಲ.

ಪಾಶ್ಚಿಮಾತ್ಯ ದೇಶವೊಂದರ ಕೂಗಾಟ, ಹಾರಾಟವಿಲ್ಲದ ಚಿತ್ರ ಮನಸ್ಸಿನಲ್ಲಿ ಉಳಿಸಿದ್ದು ಆನ್ ಪಾತ್ರ ಮಾಡಿದ ಸಾರಾ ಪಾಲಿ. ಭಾವವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ನಟಿಸಿ ಮನಸ್ಸಿನಲ್ಲಿ ಉಳಿಯುತ್ತಾಳೆ.

ರಾಜಕುಮಾರನ ಕಿವಿಗಳು

In ಅಂದಂದು, ಕಲ್ಪನೆ, ಯೋಚನೆ on April 29, 2007 at 8:34 am

ತನ್ನ ಅಣ್ಣ ಹುಡುಗಿಯೊಬ್ಬಳ ಜತೆ ಪಕ್ಕದ ಕೋಣೆಯಲ್ಲಿ ರಾತ್ರಿಯೆಲ್ಲಾ ಆಡುತ್ತಿದ್ದ ಚೆಲ್ಲಾಟವನ್ನು ರಾಜಕುಮಾರ ನಿದ್ದೆ ಬಿಟ್ಟು ಕದ್ದು ನೋಡುತ್ತಿದ್ದನಂತೆ. ಇತ್ತೀಚೆಗೆ ಅವರ ಅತಿಯಾದ ಚೆಲ್ಲಾಟ ನೋಡಿ ಬೆವರುತ್ತಿದ್ದನಂತೆ. ಚೆಲ್ಲಾಟ ವಿಕೃತವಾದಾಗ ತಡೆದುಕೊಳ್ಳಲಾಗದೆ ಅಣ್ಣನ ಗೆಳತಿ ಅರಮನೆ ವಾಸವೂ ಬೇಡ, ರಾಜಕುಮಾರನ ಸಹವಾಸವೂ ಬೇಡ ಅಂತ ಅಣ್ಣನ ಮುಖಕ್ಕೆ ಉಗಿದು ಅರೆಬಟ್ಟೆಯಲ್ಲೇ ನಡುರಾತ್ರಿ ಕಿಟಕಿ ಹಾರಿ ಹೋಗಿದ್ದನ್ನೂ ನೋಡಿದನಂತೆ. ಅಂದಿನಿಂದ ನಮ್ಮ ರಾಜಕುಮಾರನಿಗೆ ಮಾಡಲು ಏನೂ ಇಲ್ಲದೆ, ಜೀವನವೇ ಬೇಸರವಾಗಿ ಯುದ್ಧಕ್ಕೆ ಹೋಗಿ ತಾನೂ ಏನಾದರೂ ಸಾಧಿಸಬೇಕು ಅಂತ ಅನಿಸಿತಂತೆ. ಏಳು ಸಾಗರದಾಚೆ ಯಾವುದೋ ದೇಶದ ಮೇಲೆ ಯುದ್ಧವೊಂದು ನಡೆಯುತ್ತಿರುವುದನ್ನು ಯಾರಿಂದಲೋ ಅರಿತುಕೊಂಡು ತನ್ನನ್ನೂ ಕಳಿಸಿ ಎಂದು ಜಾರುತ್ತಿದ್ದ ಚಡ್ಡಿ ಎಳೆದುಕೊಂಡು ಅಳತೊಡಗಿದನಂತೆ. ಸೇನಾನಿಗೆ ತಲೆನೋವಾಗಿ ಮುದಿರಾಣಿಗೆ ದೂರು ಹೊತ್ತೋಯ್ದನಂತೆ.
ಸುದ್ದಿ ಕೇಳಿ ರಾಜಕುಮಾರನ ಅಜ್ಜಿ ಮುದಿರಾಣಿ, ಕಟ್ಟಿಸಿದ ತನ್ನ ಹಲ್ಲನ್ನು ಕಟಕಟ ಕಡಿದ ಸದ್ದು ಅರಮನೆಯಲ್ಲಾ ಮಾರ್ದನಿಗೊಂಡು ಎಲ್ಲರ ಎದೆ ನಡುಗಿಸಿತಂತೆ. ಸಾಯಲು ಬೇಕಾದಷ್ಟು ಜನರಿದ್ದಾರೆ ಬೇಡ ಎಂದು ಸೇನಾನಿ ಎಷ್ಟು ಬುದ್ಧಿ ಹೇಳಿದರೂ ಕೇಳದ ರಾಜಕುಮಾರ ಹಟ ಹಿಡಿದು ಬಾಯಿಗಿಟ್ಟ ಹೆಬ್ಬೆಟ್ಟನ್ನು ಚೀಪುವ ಬದಲು ಕಚ್ಚಿಕೊಳ್ಳುತ್ತಿದ್ದಾನೆ ಎಂದು ಎಚ್ಚರಿಸಿದನಂತೆ. ಮಕ್ಕಳನ್ನು ಮುಟ್ಟಬಾರದ ಖಾಯಿಲೆಯಿರುವ ಮುದಿರಾಣಿ ರಾಜಕುಮಾರನನ್ನು ದೂರದಿಂದಲೇ ಮುದ್ದಿಸಿದ ದಿನಗಳನ್ನು ನೆನೆಸಿಕೊಂಡು ತಡೆಯಲಾರದ ನೋವಿನಿಂದ ಕಿವಿಗಳಿರುವ ಅರಮನೆ ಕಂಬ, ಗೋಡೆ, ಬಾಗಿಲುಗಳನ್ನು ಉಗುರಿಂದ ಪರಪರ ಕೆರೆದಳಂತೆ. ಅದನ್ನು ನೋಡಲಾರದೆ ಸೇನಾನಿ ಗಡಗಡ ನಡುಗುತ್ತಾ ಏನಾದರೂ ಉಪಾಯ ಮಾಡುತ್ತೇನೆಂದು ಅಲ್ಲಿಂದ ಕಾಲ್ಕಿತ್ತನಂತೆ.
ಏಳು ಸಮುದ್ರದಾಚೆಯ ದೇಶದವರು ರಾಜಕುಮಾರ ಬಂದರೆ ಅವನ ಕಿವಿಯನ್ನು ನೀಟಾಗಿ ಕೊಯ್ದು, ಹಳೆ ಪೇಪರಿನಲ್ಲಿ ಪೊಟ್ಟಣ ಕಟ್ಟಿ ಅವನೊಂದಿಗೆ ಕಳಿಸುತ್ತೇವೆ ಎಂದು ನಗುತ್ತಿದ್ದಾರೆಂಬ ಸುದ್ದಿಯನ್ನು ಸೇನಾನಿಯೇ ಹಬ್ಬಿಸಿದನಂತೆ. ಇದನ್ನು ಕೇಳಿ ರಾಜಕುಮಾರನ ಜತೆ ಇರಬೇಕಾದ ಸೈನಿಕರು, ಒಂದ ಮಾಡಬೇಕು ಎಂದು ಹೇಳಿ ಹೋದವರು ಪಾಯಿಖಾನೆ ಹಿಂದಿನ ದಿಡ್ಡಿ ಗೋಡೆ ಹಾರಿ ಪರಾರಿಯಾಗುತ್ತಿದ್ದಾರಂತೆ. ಸುದ್ದಿಯನ್ನು ನಂಬಿ ರಾಜಕುಮಾರನ ಕಿವಿ ಕೆಂಪಾದುದನ್ನು ನೋಡಿ ಅವನ ಅಣ್ಣ ಲೊಚಗೊಟ್ಟಿದನಂತೆ. ಎಳೆ ಹೂವಿನಂತಿರುವ ರಾಜಕುಮಾರನ ಕಿವಿಯಲ್ಲಿ ಯಾರಾದರೂ ಹುಡುಗಿಯ ಹತ್ತಿರ ಕಿವಿ ಕಚ್ಚಿಸಿಕೊಂಡರೆ ಎಷ್ಟು ಹಿತವಾಗಿರುತ್ತದೆ ಗೊತ್ತ ಎಂದು ಪಿಸುಗುಟ್ಟಿದನಂತೆ.
ರಾಜಕುಮಾರನ ಕಿವಿಗೂ ನಮಗೂ ಸಂಬಂಧವಿಲ್ಲ ಅಂತ ನೀವೇನಾದರೂ ನಿಶ್ಚಿಂತೆಯಿಂದ ಇದ್ದು ಬಿಟ್ಟರೆ ನಿಮ್ಮ ಜೀವನವೇ ವ್ಯರ್ಥ ಎಂದು ಡಂಗುರದವರು ಎಚ್ಚರಿಕೆ ನೀಡಿದ್ದಾರೆ.

ಯುದ್ಧನಿರತ ದೇಶದಲ್ಲಿ ತೇಲುವ ಅಮರಾವತಿಗಳು

In ಅಂದಂದು on March 31, 2007 at 5:01 am

ಇರಾಕಿನ ಮಾರಣ ಹೋಮದಲ್ಲಿ ಪಾಲಿರುವ ಆಸ್ಟ್ರೆಲಿಯಾದಲ್ಲಿ ಕ್ವೀನ್ ಏಲಿಸಬೇತ್ ಮತ್ತು ಕ್ವೀನ್ ಮೇರಿ ಎಂಬ ವಿಲಾಸೀ ಹಡಗುಗಳು ಬಂದಾಗ ಸಿಡ್ನಿಯ ಜನ ಹೀಗೆಲ್ಲಾ ಹುಚ್ಚಾಗುತ್ತಾರೆ.
ಅದೆ ದಿನ ನನ್ನ ಕೆಲಸದ ಕಿಟಕಿಯ ಹೊರಗೇ ಅಭ್ಯಾಸೀ ಯುದ್ಧ ಹೆಲಿಕಾಪ್ಟರುಗಳು ಗುಡುಗಿ ಎದೆ ನಡುಗಿಸಿದಾಗ ಹಡಗುಗಳನ್ನು ನೋಡಿ ಬೆರಗಾಗುವ ಕಣ್ಣುಗಳೇ, ಚಪ್ಪರಿಸುವ ನಾಲಿಗೆಗಳೇ, ಯುದ್ಧದ ಹೆಲಿಕಾಪ್ಟರಿನ ಗುಡುಗಿಗೂ ಕಣ್ಣರಳಿಸುತ್ತವೆ, ಓಹೊ ಏನ್ನುತ್ತವೆ.
ಇಲ್ಲೇನೊ ವ್ಯಂಗವಿದೆ ಅಂತ ಅನಿಸುತ್ತದೆ.
ಅಥವಾ ಇದು ನನ್ನ ತಲೆಯಲ್ಲಿ ಮಾತ್ರ ಇರಬೇಕು ಎಂದುಕೊಳ್ಳುತ್ತೇನೆ. ಏಕೆಂದರೆ, ಬರಗಾಲದಲ್ಲೂ ಹಬ್ಬಗಳನ್ನು ಮಾಡುವುದು ನಿಲ್ಲುವುದಿಲ್ಲ ಎಂದು ನನಗೆ ಗೊತ್ತು!

ಮಾಯಾಲೋಕ-೧: ವಿಹಾರಾನಂದ

In ಅಂದಂದು, ಪುಸ್ತಕ on March 31, 2007 at 4:57 am

ಇತ್ತೀಚೆಗೆ ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕ-೧ ಓದಿದೆ. ತುಂಬಾ ಖುಷಿಪಟ್ಟೆ. ರೈಲಿನಲ್ಲಿ ಓದುತ್ತಾ ಉಕ್ಕಿ ಬರುವ ನಗುವನ್ನು ತಡೆದುಕೊಂಡು ಓದುವುದು ಸುಲಭದ ಕೆಲಸವಲ್ಲ. ತೇಜಸ್ವಿಯವರೇ ಹೇಳಿರುವಂತೆ Read the rest of this entry »

ಇಂಗ್‌ಮಾರ್‌ ಎಂಬ ಕುನ್ನಿಯ ಬದುಕು

In ಅಂದಂದು, ಚಲನಚಿತ್ರ on March 31, 2007 at 4:55 am

ನಾಯಿಮರಿಯಾಗಿ ನನ್ನ ಬದುಕು (my life as a dog –1985) ಸ್ವೀಡಿಶ್ ನಿರ್ದೇಶಕ ಲಾಸ್ ಹಾಲ್‌ಸ್ಟ್ರಾಮ್ ಎಂಬವನ ಚಿತ್ರವನ್ನು ಈವತ್ತು ನೋಡಿದೆ. ಮನಸ್ಸಿಗೆ ತುಂಬಾ ಹತ್ತಿಕೊಂಡಿತು.
ಅಸ್ವಸ್ಥ ಅಮ್ಮ, ತುಂಟ ಅಣ್ಣ, ಸೋದರ ಮಾವ, ಅವನ ಊರಿನ ಜನ ಎಲ್ಲರ ನಡುವೆ ಸುಮಾರು ಹತ್ತು ವರ್ಷದ ವಿಲಕ್ಷಣ ಪ್ರಕೃತಿಯ ಇಂಗ್‌ಮಾರ್‍. ಜಗತ್ತಿನಲ್ಲಾಗುತ್ತಿರುವ ಅತಿದಾರುಣ ಘಟನೆಗಳ ನಡುವೆ ತನ್ನ ಕಷ್ಟಗಳು ಕಷ್ಟಗಳೇ ಅಲ್ಲ ಎಂದು ವಿವರಿಸಿಕೊಳ್ಳುತ್ತಾ ಹೋಗುತ್ತಾನೆ. ಸ್ಪುಟ್ನಿಕ್‌ನಲ್ಲಿ ಲೈಕಾ ಎಂಬ ನಾಯಿಮರಿಯನ್ನು ಇಟ್ಟು ಕಳಿಸಿದ್ದು ಮೊದಲಿಗೆ ಅವನನ್ನು ಕಾಡಲು ಶುರುಮಾಡುತ್ತದೆ. ಅಸ್ವಸ್ಥ ತಾಯಿ ಆರಾಮ ಪಡೆಯಲಿ ಎಂದು ಇಂಗ್‌ಮಾರ್‍ನನ್ನು ಸೋದರಮಾವನ ಹಳ್ಳಿಗೆ ಅವನ ಇಷ್ಟದ ವಿರುದ್ಧ ಕಳಿಸಿದಾಗ ತನ್ನ ನಾಯಿಮರಿ ಸಿಕ್‌ಯಾನ್‌ನಿಂದ ವಿಯೋಗವಾಗುತ್ತದೆ. ಅಲ್ಲಿ ಬೇಸಿಗೆಯ ಜೀವೋನ್ಮಾದಕ ಪರಿಸರದಲ್ಲಿ ಹೊಸ ಜನ, ಹೊಸ ಗೆಳೆಯ ಗೆಳೆತಿಯರೊಂದಿಗೆ ಸ್ನೇಹವಾಗುತ್ತದೆ. ತನ್ನ ಲೈಂಗಿಕತೆಯ ಅರಿವಾಗುತ್ತಾ ಹೋಗುತ್ತದೆ.
ನಂತರ ಅಸ್ವಸ್ಥ ತಾಯಿಗೆ ನೀಡಿದ ಚುಟುಕು ಭೇಟಿ ಅವನ ಜೀವವನ್ನೇ ಅಲುಗಾಡಿಸಿಬಿಡುತ್ತದೆ. ಮತ್ತೆ ಸೋದರಮಾವನ ಮನೆಗೆ ಬಂದಾಗ ಹಿಮಾಚ್ಛಾದಿತ ಚಳಿಗಾಲ, ಅದರ ನಡುವೆ ತೀವ್ರ ಅಂತರ್ಮುಖಿಯಾಗಿಬಿಟ್ಟಿರುವ ಇಂಗ್‌ಮಾರ್‍. ಅವನು ಕಳೆಯುವ ಒಂದೊಂದು ಕ್ಷಣವೂ, ಫಟನೆಯೂ ಮನವನ್ನು ಕದಡುತ್ತದೆ, ಹಿಂಡುತ್ತದೆ. ಇದೆಲ್ಲವೂ ತೆಳುಹಾಸ್ಯದ ಹೊದಿಕೆಯಲ್ಲೇ ನಡೆಯುತ್ತದೆ ಎನ್ನುವುದು ಕಥಾಹಂದರದಡಿಯ ನೋವನ್ನು ಮತ್ತಷ್ಟು ತೀವ್ರವಾಗಿಸುತ್ತದೆ.
ಈ ಚಿತ್ರದ ನಿರ್ದೇಶಕ ಚಿತ್ರಿಸುವ ಮಕ್ಕಳ ಜಗತ್ತು ಅದ್ಭುತ ಮತ್ತು ಅದ್ವಿತೀಯ ಎನಿಸಿತು. ಇಂಗ್‌ಮಾರ್‌ ವಯಸ್ಸಿನ ಪಥೇರ್‍ಪಾಂಚಾಲಿ ಯ ಅಪು ನೆನಪಾದ, ಬಿಲ್ಲಿ ಎಲಿಯಟ್ ನ ಬಿಲ್ಲಿ ನೆನಪಾದ.

ಇಲ್ಲೇನು ಹಾಕಬಹುದು?

In ಅಂದಂದು, ಯೋಚನೆ on March 28, 2007 at 12:18 am

ಇಲ್ಲಿ ಏನು ಬ್ಲಾಗಿಸಬಹುದು, ಏನು ಬ್ಲಾಗಿಸಲಾರೆ ಎನ್ನುವುದನ್ನು ಈಗಲೇ ಠರಾವಿನ ಹಾಗೆ ನಿರ್ಧರಿಸುವ ಬದಲು, ದಾರಿ ಸವೆಸುತ್ತಾ ತೋಚಿದ್ದನ್ನು ಆ ಹೊತ್ತಿನಲ್ಲಿ ಬ್ಲಾಗಿಸಬಹುದು ಅನಿಸಿದಾಗ ಹಾಕುತ್ತೇನೆ.
ನನ್ನ ಅಭಿರುಚಿ, ನಾಟಕ, ಸಾಹಿತ್ಯ, ಚಲನಚಿತ್ರ ಇತ್ಯಾದಿ ಇರುವುದರಿಂದ ಅದರ ಬಗ್ಗೆ ಹೆಚ್ಚು ಹಾಕುತ್ತೇನೇನೋ. ಆದರೆ, ಅದರಡಿಯಲ್ಲಿ ಏನಾದರೂ ಒಂದು ರಾಜಕೀಯದ ಛಾಯೆ ಇರಬಹುದು. ಸಾಮಾಜಿಕ ಛಾಯೆ ಇರಬಹುದು. ಇಲ್ಲದಿದ್ದರೆ ಇಲ್ಲಿ ಹಾಕಿ ಏನು ಪ್ರಯೋಜನ ಅನಿಸುತ್ತದೆ ಈಗ.
ಇಲ್ಲಿಗೆ ನನ್ನ ಸಂಪದದ ಬ್ಲಾಗಿನ ತಂತು ಕೊಟ್ಟಿರುತ್ತೇನೆ. ಅಲ್ಲಿಗೂ ಹೋಗಿ ನೋಡಬಹುದು.
ಸದ್ಯಕ್ಕಿಷ್ಟೆ.