You are currently browsing the category archive for the 'ಕಲ್ಪನೆ' category.
ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ.
ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? Read the rest of this entry »
ಮೊನ್ನೆ ನಾವು ಕೆಲವರು ಹರಟೆ ಹೊಡೆದ್ದದ್ದರ ಬಗ್ಗೆ ಹೇಳ್ತಾ ಇದ್ದೀನಿ.
ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು. Read the rest of this entry »
ಗಡದ್ದಾಗಿ ಊಟ ಮುಗಿಸಿ, ಕೈ ತೊಳೆದು ದೀಪದ ಮುಂದೆ ಕೂತೆ. ನಿದ್ದೆ ಬರುಷ್ಟರಲ್ಲಿ ಒಂದು ನೀತಿ ಕತೆ ಬರೀಬೇಕು ಅಂತ ಮನಸ್ಸು ಬಂತು.
ಹೇಗಿರಬೇಕಪ್ಪಾಂದರೆ, ಎಂಥವರಿಗೂ ನೀತಿ ಹೇಳೋ ಕತೆ ಆಗಿರಬೇಕು. ಧರ್ಮಿಷ್ಠ ಪಿಕ್‌ಪಾಕಟ್‌ರಿಗೂ, ಕಳ್ಳ ನೀತಿವಂತರಿಗೂ. ಮತ್ತು ಇವೆರಡು ಆಗಿದ್ದೂ ಎರಡಕ್ಕೂ ಸೇರದವರಿಗೂ ಅದು ಸಲ್ಲಬೇಕು.
ಹೇಗಿರಬೇಕಪ್ಪಾಂದರೆ, ಚುಚ್ಚಬೇಕು, ಹೊಳೆಸಬೇಕು, ಮಿಡಿಬೇಕು. ಕತೆಯ ಕೊನೆ ಸಾಲು ಮುಗಿಯೋ ಅಷ್ಟರಲ್ಲಿ ಓದಿದವರು ಬದಲಾಗಿ ಬಿಟ್ಟಿರಬೇಕು. ನೀತಿವಂತರು ಕಳ್ಳರಾಗಬೇಕು. ಕಳ್ಳರು ನೀತಿವಂತರಾಗಬೇಕು.
ಹೇಗಿರಬೇಕಪ್ಪಾಂದರೆ, ಬರೀ ಈವತ್ತಿನವರಿಗೆ ಮಾತ್ರ ಆದರೆ ಸಾಲದು. ಸಾವಿರಾರು ವರ್ಷದ ಹಿಂದಿನವರಿಗೂ, ಮುಂದೆ ಬರೋ ಸಾವಿರಾರು ವರ್ಷದವರೆಗೂ ಸಲ್ಲಬೇಕು. ಈವತ್ತಿನ ಬೆಳಕು ಯಾವತ್ತಿಗೂ ಬಿದ್ದು ಕತ್ತಲೆಯ ಒಳಗನ್ನ ಬೆಳಗಬೇಕು.
ಹೇಗಿರಬೇಕಪ್ಪಾಂದರೆ, ಮತ್ತೆ ಮತ್ತೆ ಓದಿದವರಿಗೆ ಬೇರೆ ಬೇರೆ ನೀತಿ ಹೇಳೋ ಅಂಥ ಕತೆ ಆಗಬೇಕು. ಮೊದಲ ಸಲ ಓದಿದಾಗ ಒಳ್ಳೇವ್ರಾದೋರು, ಎರಡನೇ ಸಲ ಓದಿದಾಗ ಕೆಟ್ಟವರಾಗಬೇಕು. ಮೂರನೇ ಸಲ ಓದಿದಾಗ ಕೆಟ್ಟವ್ರು ಒಳ್ಳೇವ್ರು ಒಟ್ಟೊಟ್ಟಿಗೆ ಆಗಬೇಕು. ಒಂದೇ ಸಲ ಕೆಟ್ಟವರೂ ಒಳ್ಳೆವರೂ ಆಗೋದು ಹ್ಯಾಗೆ ಅನ್ನೋ ಪ್ರಶ್ನೇನೆ ನಾಶ ಆಗಿಬಿಡಬೇಕು. ಅಂಥ ಕತೆ ಆಗಿರಬೇಕು.
ಅಂಥ ಕತೆ ಬರೆದು ಮುಗಿಸೋ ಅಷ್ಟರಲ್ಲಿ ನಾನು ಏನೇನು ಆಗಿರಬೇಕಾಗತ್ತಲ್ಲ ಅಂತ ವರಿ ಮಾಡಿಕೊಂಡು ಕೂತೆ. ಎದುರಿಗಿದ್ದ ದೀಪ ವಾಲಾಡ್ತಾ ಇತ್ತು.
ಒಂದೊಂದು ಸಲ ನೂರಾರು ವರ್ಷ ಸುಮ್ಮನೆ ಕೂತಿರೋ ಪಳೆಯುಳಿಕೆಗಳು ಮಾತಾಡ್ತಾವಂತೆ. ಜಗಳ ಆಡ್ತಾವಂತೆ. ನಾನು ನಿನಗಿಂತ ಹಳೆಯ ಪಳೆಯುಳಿಕೆ. ಆದರೆ ನಿನಗಿಂತ ನಾನು ಹೆಚ್ಚು ಆಳದಲ್ಲಿದ್ದೀನಿ. ನೀನು ಬರೀ ನೂರಾರು ವರ್ಷದ ಹಿಂದಿನ ಮಾತಾಡಿದರೆ ನಾನು ಸಾವಿರಾರು ವರ್ಷದ ಹಿಂದಿನ ಮಾತಾಡ್ತೀನಿ. ನಿನ್ನ ಸಾವಿರಾರು ವರ್ಷದ ಮಾತು ಯಾರಿಗೆ ಬೇಕು, ನೂರಾರು ವರ್ಷದ ಮಾತೇ ಮುಖ್ಯ ರೆಲವೆಂಟು. ಹೀಗೆ ಏನೇನೋ ಮಾತಡ್ಕಂಡು ಅವುಗಳು ಪಿಸುದನೀಲಿ ಕೊಸರಾಡೋದು.
ಆ ಒಂದೊಂದು ಸಲದ ಮಾತು ಒಂದೊಂದು ಸಲ, ವಾಂತಿ ಮಾಡೋಕೆ ಅಂತ ಒಂದೊಂದು ಸಲ ರಾತ್ರಿ ಎದ್ದೋನಗೆ ಕೇಳಿಬಿಟ್ಟರೆ ಮುಗೀತು.
ಇದ್ದಕಿದ್ದಂಗೆ ಬೋರಾದ ಊರಲ್ಲಿ ದೊಂಬರಾಟ ಶುರು ಆಗತ್ತೆ. ಊರಿಗೆ ಸರ್ಕಸ್ ಬಂದು ಟೆಂಟು ಹಾಕಿ ಬಿಡತ್ತೆ. ಸರ್ಕಸಿಂದ ತಪ್ಪಿಸಿಕೊಂಡ ಪ್ರಾಣಿಗಳು ಊರೆಲ್ಲಾ ಓಡಾಡ್ತವೆ. ಒಂದರ ಮೇಲೊಂದು ಬಿದ್ದು ಹರಿದು ಮುಕ್ಕೋಕೆ ಹೊರಡ್ತಾವೆ. ಸರ್ಕಸ್ ಮಾಲೀಕ ಎಲ್ಲೋ ಕೂತ್ಕೊಂಡು ನಗ್ತಾನೆ. ಪ್ರಾಣಿ ಹಿಡಿಯೋರು ಕರೆಸಿ ಎಲ್ಲ ಪ್ರಾಣೀನೂ ಒಂದೊಂದಾಗಿ ಹಿಡಿಸ್ತಾನೆ. ಅವಕ್ಕೇ ಅಂತಲೇ ಕಟ್ಟಿಸಿರೋ ಬೋನ್ನಲ್ಲಿ ಹಾಕೋ ತನಕ ಅಪ್ಪ ಅಮ್ಮಂದಿರು ಮಕ್ಕಳನ್ನ ಮನೆಯಿಂದ ಆಚೆ ಕಳಿಸದೆ ಹಿಡ್ಕೊಂಡು ಕೂತಿರ್ತಾರೆ.
ಈ ಪಳೆಯುಳಿಕೆಗಳು ಯಾವುದೋ ಭೂಮಿಯ ಪದರದಿಂದ ಮಾತಾಡಿದರೆ ಯಾರಿಗೆ ಕೇಳತ್ತೆ ಅಂತ ಗುಮಾನಿ ಪಡಬೇಡಿ. ಅದಕ್ಕೂ ಒಂದು ಸಮಯ ಸಂದರ್ಭ ಪರಿಸ್ಥಿತಿ ಬೇಕು. ಅವುಗಳ ಕೊನರಾಟ ಕೇಳಿಸಬೇಕು ಅಂದರೆ ಅಕ್ಕಪಕ್ಕದಲ್ಲಿರೋರೆಲ್ಲ ಗಪ್‌ಚಿಪ್ಪಾಗಿ ಇರಬೇಕು. ಅದಕ್ಕೆ ಉಪ್ಪು ಮಾರೋರು, ತರಕಾರಿ ಮಾರೋರು ಸುಮ್ಮನಿರಬೇಕು. ಸಾಣೆ ಹಿಡಿಯೋರು, ಬೀಗ ರಿಪೇರಿ ಮಾಡೋರು ಸುಮ್ಮನೆ ಇರಬೇಕು. ಕಸ ಗುಡಿಸೋರು, ಬೀದಿ ತೊಳೆಯೋರು ಸುಮ್ಮನಿರಬೇಕು. ಮಕ್ಕಳಿಗೆ ಕತೆ ಹೇಳೋರು, ಜೋಗುಳ ಹಾಡೋರು ಸುಮ್ಮನಿರಬೇಕು. ಹಾಡೋ ಪ್ರೇಮಿಗಳು, ನಲ್ಲನ ಕಿವೀಲಿ ಪಿಸುನುಡಿಯೋ ನಲ್ಲೇರು ಸುಮ್ಮನಿರಬೇಕು. ಅಂಥ ಮೌನದಲ್ಲಿ ಮಾತ್ರ ಈ ಪಳೆಯುಳಿಕೆಗಳ ಮಾತು ಕೇಳತ್ತೆ, ಮುಖ್ಯ ಅನಿಸತ್ತೆ.
ನನ್ನೊಳಗೆ ಸಾಯಂಕಾಲ ಸೂರ್ಯ ಮುಳುಗಿತು. ಕ್ಷಣಕ್ಷಣಕ್ಕೂ ಕಪ್ಪು ಆವರಿಸುತ್ತಿದ್ದರೂ ಆಕಾಶದಂಚು ಇನ್ನೂ ಸೋತಿಲ್ಲ ಎಂಬಂತೆ ಕೆಂಪನ್ನು ಹಿಡಿದೇ ಇದೆ. ಸ್ವಲ್ಪ ಹೊತ್ತಿನ ಮುಂಚಷ್ಟೇ ನಿಚ್ಚಳವಾಗಿ ಕಾಣುತ್ತಿದ್ದದ್ದು ಕತ್ತಲಲ್ಲಿ ಸದ್ದು ಮಾಡದೆ ಕರಗುತ್ತಿದೆ. ಲೀನವಾಗುವುದು ಎಂದರೆ ಹೀಗೇ ಇರಬೇಕು, ಅದನ್ನು ಕಲಿಯಬೇಕು ಅಂತ ಸುತ್ತಮುತ್ತ ದಿಟ್ಟಿಸುತ್ತಾ ಉಳಿದೆ. ಕತ್ತಲು ಪೂರ್ತಿ ತುಂಬಿಕೊಳ್ಳೋವರೆಗೂ.
ಆದರೆ ಈಗ ಒಂದಷ್ಟು ಬೆಳಕು ಎರವಲು ಪಡೀಬೇಕು. ನಾನು ಬೆಳಕು ಎರವಲು ಕೇಳಿದವರೆಲ್ಲಾ ನಗತಾರೆ. ಯಾವಾಗ ವಾಪಸು ಕೊಡುತ್ತೀ ಅಂತ ಕುಹಕವಾಡತಾರೆ. ಬೆಳಿಗ್ಗೆ ಕೊಡತೀನಿ ಅಂತಂದು ನಾಲಗೆ ಕಚ್ಚಿಕೋತ್ತೀನಿ. ಹೌದಲ್ಲ, ಬೇಡ ಅಂದರೂ ಕಣ್ತುಂಬೊ ಬೆಳಕು ಇರೋ ಬೆಳಿಗ್ಗೆ ನಾನು ವಾಪಸು ಕೊಡೋ ಜುಜುಬಿ ಬೆಳಕು ಯಾರಿಗೆ ಬೇಕು? ಅವರಿಗೆ ನಗು ಬರೋದು ಸರೀನೆ. ಆದರೆ ಕುಹಕ ಬೇಕಾಗಿಲ್ಲ. ಅವರಿಗೂ ಒಂದಲ್ಲ ಒಂದು ದಿನ ಬೆಳಕು ಎರವಲು ಪಡೆಯೋ ಸಂದರ್ಭ ಬಂದೇ ಬರುತ್ತಲ್ವ? ಯಾಕೆಂದರೆ ಬೆಳಕು ಎರವಲು ಬೇಡ್ಕೊಂಡು ನಿಮ್ಮ ಮುಂದೇನೆ ಓಡಾಡ್ತಾ ಇರುತೀವಿ. ಒಂದು ಸಲ ನಮ್ಮ ಕಣ್ಣು ನೋಡಿ ಗೊತ್ತಾಗತ್ತೆ. ಎಂಥ ದಾಹದಲ್ಲಿ ಹುಡುಕ್ತಾ ಇರತ್ತೆ ಅಂತ. ಅಥವಾ ಇದು ನನಗೆ ಮಾತ್ರ ಆಗತಿರಬಹುದು. ಒಳಗಿನ ಕತ್ತಲೆಲ್ಲಾ ಅನುಮಾನ ತುಂಬಿಕೋತು. ಅಥವಾ ಅನುಮಾನಾನೆ ಕತ್ತಲ?
ಹೋಗಲಿ ನನ್ನದೇ ಒಂದು ದೀಪ ಹಚ್ಚಕೋಬೇಕು. ಹಣತೆಯೋ, ಮೋಂಬತ್ತಿಯೋ, ಕಂದೀಲೋ. ಸಿಡ್ನಿಯಲ್ಲಿ ಮನೆ ಮಠ ಇಲ್ಲದೇನೋ ಅಥವಾ ಮನೆ ಮಠದಲ್ಲಿ ಇರೋರು ಬೇಡದೇನೋ ಪಾರ್ಕ್‌ನಲ್ಲಿ, ಅಂಗಡಿ ಬಾಗಲಲ್ಲಿ ಪೇಪರ್ ಹೊದ್ದು ನಡಗತಾ ರಾತ್ರಿ ಕಳಿಯೋ ಮಂದೀನ ಕೇಳಬೇಕು. ಹೇಗೆ ಮಾಡ್ತೀರ ಅಂತ. ಎಲ್ಲಾರ ಹತ್ರಾನೂ ಕಲಿಯೋದು ಇರತ್ತೆ ನೋಡಿ. ಅವರು ನನ್ನನ್ನ ಉಗೀಬಹುದು ಅಥವಾ ನನ್ನ ಭುಜದ ಮೇಲೆ ತಲೆಯಿಟ್ಟು ಯಾರನ್ನೋ ನೆನಸ್ಕೊಂಡು ಅಳಬಹುದು. ಆಮೇಲೆ ಅವರ ಹತ್ತಿರ ಮಾತ್ರ ಉಳಿದರೋ ಗುಟ್ಟನ್ನ ಹಂಚ್ಕೋಬಹುದು.
ದೀಪ ಹಚ್ಚಿಕೊಂಡ ಮೇಲೆ ಇದ್ದೇ ಇದೆ. ಅದರ ಮುಂದೆ ಕೈ ಹಿಡಿದು ಗೋಡೆ ಮೇಲೆ ಅಕರಾಳ ವಿಕರಾಳ ಎಲ್ಲ ದೊಂಬಿ ಎಬ್ಬಿಸೋದು. ಅಕರಾಳ ವಿಕರಾಳ ಕಂಡಿದ್ದಕ್ಕೆ ಹೆದರೋದು. ಹೆದರಿಕೆ ಮರೆಯೋದಕ್ಕೆ ಕೋಡಂಗಿ ಥರ ಬೆರಳು ಕುಣಿಸಿ ನಗೋದು. ಗೋಡೆ ಮೇಲೆ ಮೂಡೋ ಒಂದೊಂದು ನೆರಳೂ ಜೀವ ಪಡ್ಕೊಂಡು ಆಡೋದು. ಆಟ ಅಂತ ಶುರು ಆಗಿದ್ದು ತಪ್ಪಿಸ್ಕೊಳ್ಳೋಕೆ ಆಗದಂಥ ಮತ್ತಾಗೋದು; ಆಮೇಲೆ ಅದೇ ಜೈಲಾಗೋದು.
ಮತ್ತೆ ಬೆಳಗಾಗತ್ತೆ. ಎಲ್ಲ ಸರಿಯಾಗಿದೆ ಅಂತ ಅನ್ಸೋದಕ್ಕೆ ಶುರು ಆಗತ್ತೆ.
ನನ್ನ ಹತ್ತಿರ ಎರಡು ತುದಿಗಳು ಇವೆ. ಯಾವಾಗಿಂದ ಇದೆ, ಎಲ್ಲಿ ಸಿಕ್ಕಿತು ಅನ್ನೋದೆಲ್ಲ ಮರೆತುಹೋಗಿದೆ. ನಾನು ಹೇಳಬೇಕಂತಿರೋದಕ್ಕೆ ಅದು ಮುಖ್ಯಾನೂ ಅಲ್ಲ ಬಿಡಿ. ಯಾಕೆಂದರೆ ಎಲ್ಲರಿಗೂ ಅಂಥವು ಎಲ್ಲೆಲ್ಲೋ ಯಾವಾವಾಗಲೋ ಸಿಕ್ತವೆ. ಆದರೆ ನನಗಂತೂ ಈ ತುದಿಗಳು ತುಂಬಾ ಕಷ್ಟಕೊಡ್ತಾವೆ. ಅವು ಇಲ್ಲದೆ ಇದ್ದರೆ ಆಗಲ್ಲ. ಇದ್ದಾಗ ಏನು ಮಾಡಬೇಕು ಅಂತ ಹೊಳೆಯೋದಿಲ್ಲ. ಯಾವ ತುದೀನ ಎಲ್ಲಿ ಕೈಗೆತ್ತಿಕೋಬೇಕು ಅನ್ನೋದೆ ಗೊತ್ತಾಗಲ್ಲ. ಮೊನ್ನೆ ನಡೆದಿದ್ದು ಕೇಳಿ ಏನು ಹೇಳ್ತಾ ಇದೀನಿ ಅನ್ನೋದು ಗೊತ್ತಾಗತ್ತೆ.
ಯಾರನ್ನೋ ಸ್ವಲ್ಪ ಘಾಸಿ ಮಾಡಬೇಕಾದಂತ ಪ್ರಸಂಗ ಬಂತು. ಘಾಸಿ ಅಂದರೆ ಸಾಯೋ ಹಾಗೆ ಅಲ್ಲ ಅಂತಿಟ್ಕೊಳ್ಳಿ. ಸುಮ್ಮನೆ ಬೆದರಸಿ ನನ್ನ ತಂಟೆಗೆ ಬರದೇ ಇರೋ ಹಾಗೆ ಮಾಡೋದು ಅಷ್ಟೆ. ಒಂದು ತಿಂಗಳಿಂದ ತುಂಬಾ ಯೋಚನೆ ಮಾಡಿ ಯಾವ ತುದಿ ತಗೊಂಡು ಹೋದರೆ ಒಳ್ಳೇದು, ಎದುರು ಬಂದಾಗ ಹೇಗೆ ತುದಿಯಿಂದ ತಿವಿಯೋದು, ಎದುರಾಳಿ ಹತ್ತಿರಾನೂ ತುದಿ ಇದ್ದರೆ ಅದನ್ನು ಹೊಡೆದು ಹೇಗೆ ನೆಲಕ್ಕೆ ಬೀಳ್ಸೋದು, ಎಲ್ಲ ಚೆನ್ನಾಗಿ ತಲೆಯೊಳಗೆ ಚಿತ್ರ ಕಟ್ಟಿಕೊಂಡು ಹೋದೆ.
ನನ್ನ ಮಿಕ ಸಿಕ್ಕಿತು. ಕೈಕುಲುಕಿ, ಕ್ಷೇಮ ಸಮಾಚಾರ ಎಲ್ಲ ವಿಚಾರಿಸಿ, ಹಲ್ಲು ಕಿರಿದು, ಮಳೆ ಬೆಳೆ ಬಗ್ಗೆ ಎಲ್ಲ ಲೋಕಾರೂಢಿ ಮಾತಾಡಿ ತುಂಬಾ ಹೊತ್ತು ಹಾಳಾಯ್ತು. ಹೊತ್ತು ಹಾಳಾಯ್ತು ಅಂತ ಯಾಕೆ ಹೇಳಿದೆ ಅಂದರೆ, ಉಭಯಕುಶಲೋಪರಿ ನಡೀತಿದ್ದಾಗ ನನ್ನ ತಲೆ ಒಳಗೆ ಕಟ್ಟಿಕೊಂಡಿದ್ದ ಚಿತ್ರದ ಕೈಕಾಲು ಕಳಚಿಕೊಳ್ಳೋಕೆ ಶುರು ಆಗ್ತಿತ್ತು. ಕಳವಳ ಅಲ್ಲದಿದ್ದರೂ ದಾರಿ ಕಾಣಿಸದೆ ಈ ಪ್ರಾಣಿನ ಹ್ಯಾಗೆ ತಿವಿಯೋದು ಅನ್ನೋದೇ ಮರೆತುಹೋದ ಹಾಗಾಯ್ತು. ಮಹಾಭಾರತದಲ್ಲಿ ಅದ್ಯಾವನಿಗೋ ಸರಿಯಾದ ಹೊತ್ತಿಗೆ ಎಲ್ಲ ಮರೆತು ಹೋಗೋ ಶಾಪ ಇತ್ತಂತಲ್ಲ, ಹಾಗೆ. ಒಳ್ಳೆ ಪಜೀತಿಗಿಟ್ಟುಕೊಂಡ್ತಲ್ಲ ಅಂತ ಪರದಾಡೋ ಹೊತ್ತಿಗೆ ನನ್ನ ಮಿಕ ತಟ್ಟಂತ ನನಗೇ ಪೆಟ್ಟು ಮಾಡಿಬಿಡ್ತು. ಇನ್ನು ಹೀಗಿದ್ದರೆ ಆಗಲ್ಲ ಅಂತ ಮೂಟೇಲಿದ್ದ ತುದಿ ತೆಗೆದು ನಾನೂ ಚುಚ್ಚಿದೆ. ಎದುರಾಳಿಗೆ ಏನೂ ಆದ ಹಾಗೇ ಕಾಣಲಿಲ್ಲ. ಅಷ್ಟೆ ಅಲ್ಲ, ನಾನು ಚುಚ್ಚಿದಾಗ ನೋವಾಗೋದಿರಲಿ ಜೋರಾಗಿ ನಗ್ತಾ ಇದೆ ಪ್ರಾಣಿ! ಇದೇನಾಯ್ತು ಅಂತ ಮೆಲ್ಲನೆ ತಿರುಗಿ ನಿಂತು ನೋಡ್ಕೊಂಡರೆ, ತುದಿ ನುಣ್ಣಗೆ ಬಡ್ಡಾಗಿ ಗುಂಡಾಗಿ ಹೋಗಿದೆ! ನಾನು ತಿವಿದಾಗ ನೋವಾಗೋ ಬದಲು ಕಚಕುಳಿ ಇಟ್ಟಂಗಾಗಿರಬೇಕು! ಏನು ಮಾಡೋದು ಅಂತ ಯೋಚಿಸೋ ಅಷ್ಟರಲ್ಲಿ, ಹಿಂದಿಂದ ಒಂದು ಪೆಟ್ಟು ನನ್ನ ಬೆನ್ನಿಗೆ ಸರಿಯಾಗೇ ಬಿತ್ತು. ಇದು ಯಾಕೆ ಹೀಗಾಯ್ತು ಅಂತ ಗೊತ್ತಾಗಲಿಲ್ಲ. ತಪ್ಪು ತುದಿ ತಂದನಾ ಅಂದರೆ, ಇಲ್ಲ ಸರಿಯಾದ ತುದೀನೆ. ಹಾಗಾದರೆ, ನನ್ನ ಲೆಕ್ಕಾಚಾರಾನೆ ತಪ್ಪಾಗಿ ಹೋಯ್ತ? ಇಷ್ಟೆಲ್ಲ ಮನಸ್ಸಲ್ಲೇ ಮಂಡಿಗೆ ತಿನ್ನೋಷ್ಟರಲ್ಲಿ ನಾನು ತಿವಿಯೋಕೆ ಹೋಗಿದ್ದ ಪ್ರಾಣಿ ನನ್ನ ಮೈಯೆಲ್ಲಾ ಚೆನ್ನಾಗಿ ತಿವಿದು ಕೈಕಾಲು ಆಡದ ಹಾಗಿ ಮಾಡಿ ಮಾಯ ಆಗಿತ್ತು. ಎದುರಾಳಿಯಿಂದಾನಾದರೂ ಕಲಿಯೋಣ ಅಂದರೆ ತನ್ನ ಕೆಲಸ ಮುಗಿಸಿದ ಪ್ರಾಣಿ ಅಲ್ಲಿದ್ದರೆ ತಾನೆ?
ಗೊತ್ತಾಯ್ತ ನನ್ನ ಈ ತುದಿಗಳ ಸಂಕಟ? ಚೂಪು ಮಾಡಿಕೊಂಡು ಹೋದ ತುದಿ ಸರಿಯಾದ ಹೊತ್ತಿಗೆ ಬಡ್ಡಾಗಿ ಬಿಟ್ಟಿರತ್ತೆ. ಆದರಾಗಲೀ ದೊಣ್ಣೇಲಿ ಬಡಿದ ಹಾಗೆ ಬಡಿಯೋಣ ಅಂದರೆ ಇದ್ದಕಿದ್ದ ಹಾಗೆ ತುದಿ ಚೂಪಾಗಿಬಿಟ್ಟು ಎದುರಾಳಿ ರಕ್ತ ಬಂದು ಸತ್ತೇ ಹೋದರೇನು ಗತಿ ಅಂತ ಹೆದರಿಕೆ ಆಗತ್ತೆ. ಅದಕ್ಕೆ ಹೇಳಿದ್ದು ಈ ತುದಿಗಳು ಬೇಕೇ ಬೇಕು. ಆದರೆ ಸರಿಯಾದ ಹೊತ್ತಿಗೆ ಸರಿಯಾದ ತುದೀನ ಸರಿಯಾಗಿ ಬಳಸದಿದ್ದರೆ ಒಂದೋ ತುದಿಗಳು ಇರೋದೇ ವ್ಯರ್ಥ, ಇಲ್ಲ ತುದಿಗಳು ಜಾಸ್ತಿ ಅಪಾಯ ಮಾಡಿಬಿಡ್ತಾವೆ. ಎರಡೇ ತುದಿಯಿರೋದು ಈ ಎಲ್ಲಾ ಕಷ್ಟಕ್ಕೂ ಕಾರಣ ಇರಬೇಕು ಅನ್ನೋ ನಿರ್ಧಾರಕ್ಕೆ ಬಂದು ಈಗ ಹಲವಾರು ತುದಿಗಳನ್ನ ಕಲೆ ಹಾಕೋದಕ್ಕೆ ಶುರು ಮಾಡಿದೀನಿ.
ಮಾಡಿನ ಕಿಂಡಿ ಮತ್ತು ತೆರೆದ ಕಿಟಕಿಯಿಂದ ತೂರಿ ಬಂದು ದಿನವಿಡೀ ನನ್ನ ಮೈಗೆಲ್ಲಾ ಕಚಗುಳಿಯಿಟ್ಟು, ಬಿಡುಬೀಸಾಗಿ ಮನೆಯೆಲ್ಲಾ ಮೈ ಹರಡಿ ನನ್ನ ಜತೆ ಚಕ್ಕಂದವಾಡಿ ಸಂಜೆ ಹೋಗುವಾಗ “ಮುಳುಗುವ ಸಮಯ ಬಂತು, ನಾನು ಇಲ್ಲಿಂದ ಹೋಗುತ್ತಲೂ ಕತ್ತಲಾಗೋಕೆ ಬಿಡದ ಹಾಗೆ ಬಿಳಿಯ ಬೆಳಕಿನ ಮೋಡಿ ಹಾಕಿ, ರಾತ್ರಿ ಇಡೀ ಚುಂಬಿಸ್ತೀನಂತ ಆ ಮಾಯಗಾತಿ ಬರುತ್ತಾಳೆ. ಹುಷಾರಾಗಿರು. ಸುಮ್ಮನೆ ನಿದ್ದೆ ಮಾಡು” ಎಂದು ಹಿಂದೆ ತಿರುಗಿ ನೋಡದೆ ಮಾಯವಾದಳು. ಅವಳ ಚೆಲುವಿಗೆ ಸೋತು ಅವಳ ಕನಸೇ ಕಾಣಬೇಕೆಂದು ಗಟ್ಟಿಮಾಡಿಕೊಂಡೆ.
ಮಾಡಿನ ಕಿಂಡಿಗೆಲ್ಲಾ ಹಲಗೆ ಅಡ್ಡಮಾಡಿ, ಕಿಟಕಿಯೆಲ್ಲಾ ಮುಚ್ಚಿ ಮೇಣದಬತ್ತಿ ಹತ್ತಿಸಿ ಮೂಲೆಯಲ್ಲಿ ಕೂತೆ. ಮೈಬಿಸಿ ಮಾಡುವ ಅವಳ ಕನಸು ತರಲಿ ಅನ್ನೋ ಆಸೆಯಿಂದ ಗೋಡೆಯ ಮೇಲೆ ತೆವಳಾಡುವ ನೆರಳನ್ನು ನೋಡಿದೆ. ಕನಸೇನೋ ಬಿತ್ತು. ಆದರೆ ಬಿಳಿಯ ಬೆಳಕು ಮೈಯೆಲ್ಲಾ ಮೆತ್ತಿಕೊಂಡು ಇರುಳಿಡೀ ಕುಣಿದ ಹಾಗೆ. ದಣಿವಾದ ಹಾಗೆ. ಮೈಗೆ ಮೈಕೊಟ್ಟು ನಿಜವೇ ಅನ್ನಿಸೋ ಮತ್ತೇರಿದ ಹಾಗೆ. ಎಷ್ಟು ಬೇಕೆಂದು ತಹತಹಿಸಿದರೂ ಇರುಳು ಮೆಲ್ಲನೆ ಜಾರಿ ಹೋದ ಹಾಗೆ. ದಿನದ ಬೆಳಕು ತುಂಬಿಕೊಂಡ ಹಾಗೆ. ಕನಸ್ಸಲ್ಲೇ ಕನಸ್ಸಿಂದ ಎಚ್ಚರವಾದ ಹಾಗೆ. ಎಷ್ಟು ಕಷ್ಟಪಟ್ಟರೂ ಮೈಗೆ ಹತ್ತಿದ ಬಿಳಿಯನ್ನು ಒರೆಸಿ ತೆಗೆಯಲಾಗದ ಹಾಗೆ. ಉಜ್ಜಿ ಉಜ್ಜಿ ರಕ್ತ ಒಸರಿದ ಹಾಗೆ.
ಮತ್ತು-ಆತಂಕ-ಕಳವಳ.
ಕಿಟಕಿ ಬಡಿತಕ್ಕೆ ಎಚ್ಚತ್ತಾಗ ಬೆಳಗಾಗಿ ಬಿಟ್ಟಿತ್ತು. ಕಿಟಕಿ ಮೆಲ್ಲನೆ ತೆಗೆದರೆ ಸರಕ್ಕನೆ ಒಳಗೆಲ್ಲಾ ತುಂಬಿಕೊಂಡುಬಿಟ್ಟಳು. ವೈಯ್ಯಾರದಿಂದ ಅನುಮಾನ ತೋರದ ಹಾಗೆ ನಗುತ್ತಾ ಸುತ್ತೆಲ್ಲಾ ನೋಡಿದಳು. “ಕಿಂಡಿಗಳನ್ನು ಯಾಕೆ ಮುಚ್ಚಿ ಬಿಟ್ಟೆಯೋ?” ಕೊಂಕಾಡಿದಳು.
“ನೀನು ನನ್ನ ಮುದ್ದು ಮೊಲ ಗೊತ್ತ?” ಅಂತ ರಮಿಸಿದಳು.
“ನೀನು ಮೋಸಮಾಡೋನಲ್ಲ ಅಂತ ಗೊತ್ತಿತ್ತು” ಅಂತ ಅಪ್ಪಿದಳು.
“ಆ ಸೋಗಲಾಡಿ ತಾನೇ ಸುರಸುಂದರಿ ಅನ್ಕೊಂಡು ಅಗ್ಗವಾಗಿ ಆಡಿದಳು ಅಲ್ವ?” ಎಂದು ಮುಖ ಮುರಿದಳು.
“ತನ್ನದೇ ಬೆಳಕು ಅನ್ನೋ ಹಾಗೆ ಆಡುತ್ತಾಳೆ ಕೊಂಕಿನ ರಾಣಿ! ಅವಳು ಬಿಂಬಿಸಿದ ಬಿಳಿ ಬೆಳಕು ಸ್ವಂತದ್ದು ಅಂತ ನಂಬಿಸೋಕೆ ಬಂದಳ?” ಎಂದು ಪ್ರಶ್ನಿಸಿದಳು.
“ನನ್ನ ಬೆಳಕನ್ನೇ ರಾತ್ರಿ ಎಲ್ಲ ಬಿಂಬಿಸಿ, ನಾನು ಬರೋ ಹೊತ್ತಿಗೆ ಜಾರಿಕೋತಾಳೆ. ನಾನಿದ್ದರೆ ಅವಳೆಲ್ಲಿ ಕಾಣತಾಳೆ?” ಎಂದು ಗರ್ವಿಸಿದಳು.
“ನೀನು ಅವಳನ್ನು ಒಳಗೆ ಬಿಡಲಿಲ್ಲವಲ್ಲ. ಮುಚ್ಚಿದ ಕಿಟಕಿ ನೋಡಿ ನಿನ್ನ ಪ್ರಾಮಾಣಿಕತೆಗೆ ಕರಗಿ ಹೋದೆ” ಎಂದು ಗೆದ್ದವಳಂತೆ ಬಿಂಕ ತೋರಿದಳು.
ಬಿಳಿ ಒರೆಸಲು ಉಜ್ಜಿಕೊಂಡಾಗ ಆದ ಗಾಯದಿಂದ ಇನ್ನೂ ಒಸರುತ್ತಿದ್ದ ರಕ್ತವನ್ನು ಏನು ಮಾಡಿಕೊಂಡೆಯೋ ಎನ್ನುತ್ತಾ ಆದರಿಸಿದಳು. ಅದರ ಮೇಲೆ ಕೈಯಾಡಿಸಿ ಒಂದು ಕ್ಷಣದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಒಣಗಿಸಿಬಿಟ್ಟಳು.
ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಬರುತ್ತಿದ್ದ ಒಬ್ಬ ಮಾವನವರು ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧಿ. ಸಂಬಂಧದಲ್ಲಿ ಮಾವ ಎಂಬುದಕ್ಕಿಂತ ಅವರು ನನ್ನೊಡನೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವರನ್ನು ಮಾವ ಎಂದು ಕರೆಯತೊಡಗಿದೆ ಎಂದು ಕಾಣುತ್ತದೆ. ಅದಕ್ಕೆ ಯಾರೂ ಅಕ್ಷೇಪಣೆ ಎತ್ತಿರಲಿಲ್ಲ. ಅವರ ಹೆಸರು ಅರಳೆ ಪುಟ್ಟಣ್ಣ ಎಂದು ಎಲ್ಲರೂ ಕರೆಯುತ್ತಿದ್ದುದು. ಆದರೆ ತನ್ನ ಹೆಸರು ಅರಳಿ ಪುಟ್ಣಣ್ಣ ಎಂದು ಎಲ್ಲರನ್ನೂ ಸದಾ ತಿದ್ದುತ್ತಿದ್ದರು. ಅಜಾನುಬಾಹುವಾಗಿದ್ದ ಅವರೊಡನೆ ಯಾರೂ ಜಗಳವಾಡುವ ಧೈರ್ಯ ಮಾಡುತ್ತಿರಲಿಲ್ಲ.
ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಹಳೆಗನ್ನಡ ಪದ್ಯ ಉರು ಹೊಡೆಯುವುದನ್ನು ಕೇಳಿ ಅವರು ನನಗೆ ಹೇಳಿದ ವಿಷಯವಿದು. ನೆನಪಿದ್ದಷ್ಟು ವಿವರಿಸುತ್ತೇನೆ.
ಸುಮಾರು ಹದಿಮೂರನೇ ಶತಮಾನದಲ್ಲಿ ರಚಿಸಲಾಯಿತೆನ್ನಲಾದ ಒಂದು ವಿಶಿಷ್ಟ ಕನ್ನಡ ಕೃತಿ ಕವಿಕಾಯಚೂಡಾಮಣಿ. ಕುಗ್ರಾಮವೊಂದರಲ್ಲಿ ಒಂಟಿಯಾಗಿ ವಾಸವಾಗಿರುವ ಒಬ್ಬ ಕುರುಡು ಅಜ್ಜಿಯ ವಿಶಾಲವಾದ ಮನೆಯ ಅಟ್ಟದಲ್ಲಿ ಕವಿಕಾಯಚೂಡಾಮಣಿ ಸಿಕ್ಕತು. ಕಾಗದದ ಮೇಲೆ ಮೂಲದಿಂದ ಮಾಡಿಕೊಂಡ ಪ್ರತಿಯಾಗಿದ್ದು, ಲಭ್ಯವಿರುವ ಏಕಮಾತ್ರ ಪ್ರತಿ. ಸುಮಾರು ೭೦೦ಕ್ಕೂ ಹೆಚ್ಚು ಪದ್ಯಗಳಿದೆ ಎಂದು ಊಹಿಸಲಾಗಿರುವ ಈ ಕೃತಿಯ ಕೇವಲ ೧೦೬ ಪದ್ಯಗಳು ಈಗ ಲಭ್ಯವಿದೆ. ಹೆಚ್ಚು ಜನ ಕನ್ನಡ ವಿದ್ವಾಂಸರಿಗೇ ಇನ್ನೂ ಈ ಕೃತಿಯ ಬಗ್ಗೆ, ಅದರ ಕರ್ತೃವಿನ ಬಗ್ಗೆ ಗೊತ್ತಿರುವಂತಿಲ್ಲ. ಗೊತ್ತಿರುವವರೂ ಈ ಕೃತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಂತೆ ತೋರುವುದಿಲ್ಲ. ಅದಕ್ಕೆ ಬಹುಶಃ ಎರಡು ಕಾರಣಗಳಿವೆ. ಒಂದು - ಕವಿಕಾಯಚೂಡಾಮಣಿ ಯಾವುದೇ ಪುರಾಣವನ್ನಾಗಲಿ, ಹಿಂದಿನ ಕವಿಯ ಬಗ್ಗೆಯಾಗಲಿ ಅಥವಾ ಕಾವ್ಯದ ಪುರ್ನಸೃಷ್ಠಿಯಾಗಲಿ ಅಲ್ಲ. ಎರಡದನೆಯದಾಗಿ - ಕವಿಕಾಯಚೂಡಾಮಣಿ ಕನ್ನಡದಲ್ಲಿದ್ದರೂ ಕೂಡ ಕನ್ನಡ ನಾಡು ನುಡಿ ಬಗ್ಗೆ ಒಂದು ಚೂರೂ ಪ್ರಸ್ತಾಪ ಮಾಡುವುದಿಲ್ಲ.
ಹಾಗಾದರೆ, ಕವಿಕಾಯಚೂಡಾಮಣಿ ಯಾವುದರ ಬಗ್ಗೆ ಚಿಂತಿಸುತ್ತದೆ ಎಂದು ನಿಮಗೆ ಸಹಜವಾಗಿಯೇ ಕುತೂಹಲವಾಗಬಹುದು. ಅದರ ಬಗ್ಗೆಯೂ ವಿವಾದವಿದೆ. ಕೃತಿಯ ಹೆಸರಿನಲ್ಲಿರುವ “ಕವಿಕಾಯ” ಪದವನ್ನು ಹೇಗೆ ಅರ್ಥೈಸುವದೆಂಬುದೇ ಆ ವಿವಾದ. ಏಕೆಂದರೆ ನೇರವಾಗಿ “ಕವಿಯ ಕಾಯ” ಎಂದು ವಿವರಣೆ ಕೊಡಬಹುದಾದರೂ ಅದರಿಂದ ವಿದ್ವಾಂಸರಿಗೆ ಸಮಾಧಾನವಿಲ್ಲ. ಇಲ್ಲಿ ಕವಿಯ ಕಾಯ ಅನ್ನುವುದಕ್ಕಿಂತ ಕವಿಯ ಕಾವ್ಯದ ಕಾಯ ಅಂದರೆ ಕಾವ್ಯದ ಸ್ವರೂಪದ ಬಗ್ಗೆ ಚಿಂತನೆಯಿದೆ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಆದರೆ ಈ ವಾದಕ್ಕೆ ಪುಷ್ಟಿಕೊಡುವಂಥ ಯಾವುದೇ ಸಾಲುಗಳೂ ಕವಿಕಾಯಚೂಡಾಮಣಿಯಲ್ಲಿ ಇಲ್ಲದಿರುವುದರಿಂದ, ಈ ಕೃತಿ ನಿಜವಾಗಿಯೂ ಕಾವ್ಯದ ಬಗ್ಗೆ ಆಗಿರದೆ, ಕವಿಯ ದೇಹವನ್ನು ಕುರಿತದ್ದು ಎಂದು ಹೇಳಬಹುದು. ಈ ಕೆಳಗಿನ ಸಾಲುಗಳನ್ನು ಸ್ವಲ್ಪ ಗಮನಿಸಿ-
೧) ನೀರಲ್ತುಪಾನಕದಿಂಮತ್ತಿನವಸರಕುಪಕಾರಮಕ್ಕು
೨) ಪುಗೆವುಗುಳುವಾಗರಿವಕ್ಕುಅಕಟಕಟಾಪೊಡೆದಧರಸಂಕಟ
೩) ಚಳಿಕಾಲದೋಳ್ಕಾಲ್ವೊಡೆದಪಕಾಲಪ್ರಾಪ್ತವಾಗಲೊರೆಕವಿಗೆ
ಕಡೆಯ ಸಾಲಿನಲ್ಲಿರುವ “ಒರೆಕವಿ” ಎಂಬ ತುಂಬಾ ವಿಶಿಷ್ಟವಾದ ಪ್ರಯೋಗ ಗಮನಿಸಿ. ಒರೆ ಎಂದರೆ ಪದ, ನುಡಿ ಎಂಬ ಅರ್ಥವಿದೆ. ಅಂದರೆ ನುಡಿಯ ಕವಿ ಎಂದಾಯಿತು. ಹಾಗಾದರೆ ನುಡಿಯಲ್ಲದೆ, ಪದವಲ್ಲದೆ ಬೇರೆ ಪದಾರ್ಥಗಳಲ್ಲೂ ಕವಿತ್ವವನ್ನು ತೋರಬಹುದು ಎಂಬ ಸೂಚ್ಯಭಾವ ಈ ಪ್ರಯೋಗದಲ್ಲಿರುವುದು ವಿಶೇಷವಲ್ಲವೆ? ಇದಕ್ಕೂ ವಿದ್ವಾಂಸರು ಹೆಚ್ಚು ಗಮನ ಕೊಡದೆ ಅದೊಂದು ಸಡಿಲ ಪ್ರಯೋಗ ಎಂದು ಪಕ್ಕಕ್ಕೆ ತಳ್ಳಿಬಿಟ್ಟಿರುವಂತಿದೆ. ಕವಿಕಾಯಚೂಡಾಮಣಿ ಕಾವ್ಯದ ಸ್ವರೂಪದ ಬಗ್ಗೆ ಅಲ್ಲದಿದ್ದರೂ ಕವಿಯ ಭೌತಿಕ ದೇಹದ ಬಗ್ಗೆ ಅಪಾರ ಕಾಳಜಿ ಮತ್ತು ಚಿಂತನೆಯನ್ನು ನಡೆಸುತ್ತದೆ. ವಿದ್ವಾಂಸರು ಕೃತಿಯಲ್ಲಿನ ಚಿಂತನ ಮತ್ತು ಅರ್ಥವನ್ನು “ಕಾವ್ಯ ಸ್ವರೂಪದ ಬಗ್ಗೆ” ಎಂದು ತಿರುಗಿಸುವಲ್ಲಿ ಸಫಲರಾಗಿಲ್ಲದ್ದರಿಂದ, ಕವಿಯ ಭೌತಿಕ ದೇಹವನ್ನು ವಿದ್ವಾಂಸರು ತುಚ್ಛವಾಗಿ ಕಾಣುವ ಪ್ರತೀತಿಯಿರುವುದರಿಂದ ಕವಿಕಾಯಚೂಡಾಮಣಿ ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಗೊಳ್ಳದೆ ಉಳಿದುಬಿಟ್ಟಿರುವುದು ತುಂಬಾ ವಿಷಾದಕಾರಿ.
ಕವಿಕಾಯಚೂಡಾಮಣಿಯ ಭಾಗಗಳು ಕಳೆದು ಹೋದುದಕ್ಕೆ ಅವರು ಹೇಳಿದ ತುಂಬಾ ಕುತೂಹಲಕಾರಿಯಾದ ಕತೆ: ಪ್ರತಿ ಸಿಕ್ಕಿರುವುದು ಒಂದು ಕುರುಡು ಅಜ್ಜಿಯ ಹತ್ತಿರ ಎಂದು ಹೇಳಿದೆನಷ್ಟೆ. ಕಳೆದು ಹೋದ ಭಾಗದ ಬಗ್ಗೆ ಕಿವಿಯೂ ಕೇಳದ ಅಜ್ಜಿಯನ್ನು ಕೂಗಿ ಕೂಗಿ ಕೇಳಿದಾಗ ಅವಳು ಹೇಳಿದ್ದಿಷ್ಟು. ಒಂದು ದಿನ ಸೂರ್ಯ ನೆತ್ತಿಯ ಮೇಲೆ ಉರಿಯುತ್ತಿದ್ದ ನಡು ಹಗಲಂತೆ. ತನ್ನ ಮನೆಯ ಬೇಲಿಯಾಚೆ ನಿಂತಿದ್ದ ಕತ್ತೆಯೊಂದನ್ನು ತನ್ನ ನೆಚ್ಚಿನ ಹಸು ಅಂದುಕೊಂಡಳಂತೆ. ಹುಲ್ಲು ಅಂದುಕೊಂಡು ಕವಿಕಾಯಚೂಡಾಮಣಿಯ ಹಾಳೆಗಳನ್ನು ಅದಕ್ಕೆ ಹರಿದು ತಿನ್ನಿಸಿಬಿಟ್ಟಳಂತೆ. ಅಂದಿನಿಂದ ಆ ಕತ್ತೆ ದಿನವೂ ನಡುಹಗಲು ಆ ಬೇಲಿ ಪಕ್ಕದಲ್ಲಿ ಬಂದು ನಿಂತು ಒದರುತ್ತದೆಯಂತೆ. ಆದರೆ ಅಟ್ಟದಲ್ಲಿದ್ದ ಕವಿಕಾಯಚೂಡಾಮಣಿ ಹುಲ್ಲಿನ ಮೆದೆಗೆ ಹೇಗೆ ಬಂತು ಎಂಬುದು ಇನ್ನೂ ಬಿಡಿಸಲಾಗದ ರಹಸ್ಯವಾಗಿ ಉಳಿದಿದೆಯಂತೆ.
ಇಷ್ಟು ಹೇಳಿ ಅರಳಿ ಪುಟ್ಟಣ್ಣ ನನ್ನತ್ತ ಕಣ್ಣು ಮಿಟುಕಿಸಿ ತುಂಟನಗೆ ನಕ್ಕದ್ದು ಯಾಕೋ ಮನಸ್ಸಿನಲ್ಲಿ ಬಲವಾಗಿ ಬೇರೂರಿ ಬಿಟ್ಟಿದೆ. ಅವರೀಗ ತೀರಿಕೊಂಡಿರುವುದರಿಂದ ಈ ವಿಷಯದಲ್ಲಿ ಹೆಚ್ಚು ವಿವರಗಳು ಗೊತ್ತುಮಾಡಿಕೊಳ್ಳುವುದು ಸಾಧ್ಯವಿಲ್ಲವಾಗಿದೆ.
ತನ್ನ ಅಣ್ಣ ಹುಡುಗಿಯೊಬ್ಬಳ ಜತೆ ಪಕ್ಕದ ಕೋಣೆಯಲ್ಲಿ ರಾತ್ರಿಯೆಲ್ಲಾ ಆಡುತ್ತಿದ್ದ ಚೆಲ್ಲಾಟವನ್ನು ರಾಜಕುಮಾರ ನಿದ್ದೆ ಬಿಟ್ಟು ಕದ್ದು ನೋಡುತ್ತಿದ್ದನಂತೆ. ಇತ್ತೀಚೆಗೆ ಅವರ ಅತಿಯಾದ ಚೆಲ್ಲಾಟ ನೋಡಿ ಬೆವರುತ್ತಿದ್ದನಂತೆ. ಚೆಲ್ಲಾಟ ವಿಕೃತವಾದಾಗ ತಡೆದುಕೊಳ್ಳಲಾಗದೆ ಅಣ್ಣನ ಗೆಳತಿ ಅರಮನೆ ವಾಸವೂ ಬೇಡ, ರಾಜಕುಮಾರನ ಸಹವಾಸವೂ ಬೇಡ ಅಂತ ಅಣ್ಣನ ಮುಖಕ್ಕೆ ಉಗಿದು ಅರೆಬಟ್ಟೆಯಲ್ಲೇ ನಡುರಾತ್ರಿ ಕಿಟಕಿ ಹಾರಿ ಹೋಗಿದ್ದನ್ನೂ ನೋಡಿದನಂತೆ. ಅಂದಿನಿಂದ ನಮ್ಮ ರಾಜಕುಮಾರನಿಗೆ ಮಾಡಲು ಏನೂ ಇಲ್ಲದೆ, ಜೀವನವೇ ಬೇಸರವಾಗಿ ಯುದ್ಧಕ್ಕೆ ಹೋಗಿ ತಾನೂ ಏನಾದರೂ ಸಾಧಿಸಬೇಕು ಅಂತ ಅನಿಸಿತಂತೆ. ಏಳು ಸಾಗರದಾಚೆ ಯಾವುದೋ ದೇಶದ ಮೇಲೆ ಯುದ್ಧವೊಂದು ನಡೆಯುತ್ತಿರುವುದನ್ನು ಯಾರಿಂದಲೋ ಅರಿತುಕೊಂಡು ತನ್ನನ್ನೂ ಕಳಿಸಿ ಎಂದು ಜಾರುತ್ತಿದ್ದ ಚಡ್ಡಿ ಎಳೆದುಕೊಂಡು ಅಳತೊಡಗಿದನಂತೆ. ಸೇನಾನಿಗೆ ತಲೆನೋವಾಗಿ ಮುದಿರಾಣಿಗೆ ದೂರು ಹೊತ್ತೋಯ್ದನಂತೆ.
ಸುದ್ದಿ ಕೇಳಿ ರಾಜಕುಮಾರನ ಅಜ್ಜಿ ಮುದಿರಾಣಿ, ಕಟ್ಟಿಸಿದ ತನ್ನ ಹಲ್ಲನ್ನು ಕಟಕಟ ಕಡಿದ ಸದ್ದು ಅರಮನೆಯಲ್ಲಾ ಮಾರ್ದನಿಗೊಂಡು ಎಲ್ಲರ ಎದೆ ನಡುಗಿಸಿತಂತೆ. ಸಾಯಲು ಬೇಕಾದಷ್ಟು ಜನರಿದ್ದಾರೆ ಬೇಡ ಎಂದು ಸೇನಾನಿ ಎಷ್ಟು ಬುದ್ಧಿ ಹೇಳಿದರೂ ಕೇಳದ ರಾಜಕುಮಾರ ಹಟ ಹಿಡಿದು ಬಾಯಿಗಿಟ್ಟ ಹೆಬ್ಬೆಟ್ಟನ್ನು ಚೀಪುವ ಬದಲು ಕಚ್ಚಿಕೊಳ್ಳುತ್ತಿದ್ದಾನೆ ಎಂದು ಎಚ್ಚರಿಸಿದನಂತೆ. ಮಕ್ಕಳನ್ನು ಮುಟ್ಟಬಾರದ ಖಾಯಿಲೆಯಿರುವ ಮುದಿರಾಣಿ ರಾಜಕುಮಾರನನ್ನು ದೂರದಿಂದಲೇ ಮುದ್ದಿಸಿದ ದಿನಗಳನ್ನು ನೆನೆಸಿಕೊಂಡು ತಡೆಯಲಾರದ ನೋವಿನಿಂದ ಕಿವಿಗಳಿರುವ ಅರಮನೆ ಕಂಬ, ಗೋಡೆ, ಬಾಗಿಲುಗಳನ್ನು ಉಗುರಿಂದ ಪರಪರ ಕೆರೆದಳಂತೆ. ಅದನ್ನು ನೋಡಲಾರದೆ ಸೇನಾನಿ ಗಡಗಡ ನಡುಗುತ್ತಾ ಏನಾದರೂ ಉಪಾಯ ಮಾಡುತ್ತೇನೆಂದು ಅಲ್ಲಿಂದ ಕಾಲ್ಕಿತ್ತನಂತೆ.
ಏಳು ಸಮುದ್ರದಾಚೆಯ ದೇಶದವರು ರಾಜಕುಮಾರ ಬಂದರೆ ಅವನ ಕಿವಿಯನ್ನು ನೀಟಾಗಿ ಕೊಯ್ದು, ಹಳೆ ಪೇಪರಿನಲ್ಲಿ ಪೊಟ್ಟಣ ಕಟ್ಟಿ ಅವನೊಂದಿಗೆ ಕಳಿಸುತ್ತೇವೆ ಎಂದು ನಗುತ್ತಿದ್ದಾರೆಂಬ ಸುದ್ದಿಯನ್ನು ಸೇನಾನಿಯೇ ಹಬ್ಬಿಸಿದನಂತೆ. ಇದನ್ನು ಕೇಳಿ ರಾಜಕುಮಾರನ ಜತೆ ಇರಬೇಕಾದ ಸೈನಿಕರು, ಒಂದ ಮಾಡಬೇಕು ಎಂದು ಹೇಳಿ ಹೋದವರು ಪಾಯಿಖಾನೆ ಹಿಂದಿನ ದಿಡ್ಡಿ ಗೋಡೆ ಹಾರಿ ಪರಾರಿಯಾಗುತ್ತಿದ್ದಾರಂತೆ. ಸುದ್ದಿಯನ್ನು ನಂಬಿ ರಾಜಕುಮಾರನ ಕಿವಿ ಕೆಂಪಾದುದನ್ನು ನೋಡಿ ಅವನ ಅಣ್ಣ ಲೊಚಗೊಟ್ಟಿದನಂತೆ. ಎಳೆ ಹೂವಿನಂತಿರುವ ರಾಜಕುಮಾರನ ಕಿವಿಯಲ್ಲಿ ಯಾರಾದರೂ ಹುಡುಗಿಯ ಹತ್ತಿರ ಕಿವಿ ಕಚ್ಚಿಸಿಕೊಂಡರೆ ಎಷ್ಟು ಹಿತವಾಗಿರುತ್ತದೆ ಗೊತ್ತ ಎಂದು ಪಿಸುಗುಟ್ಟಿದನಂತೆ.
ರಾಜಕುಮಾರನ ಕಿವಿಗೂ ನಮಗೂ ಸಂಬಂಧವಿಲ್ಲ ಅಂತ ನೀವೇನಾದರೂ ನಿಶ್ಚಿಂತೆಯಿಂದ ಇದ್ದು ಬಿಟ್ಟರೆ ನಿಮ್ಮ ಜೀವನವೇ ವ್ಯರ್ಥ ಎಂದು ಡಂಗುರದವರು ಎಚ್ಚರಿಕೆ ನೀಡಿದ್ದಾರೆ.
ಒಂದು ಕತೆ ಹೇಳ್ತೀನಿ ಅಂತ ಗೆಳೆಯ ಶುರು ಮಾಡಿದ. ಅವನು ಎಷ್ಟೋ ವರ್ಷಗಳ ಹಿಂದೆ ಯಾವುದೋ ಊರಿನಲ್ಲಿ ಕಗ್ಗತ್ತಲ ನಡುರಾತ್ರಿ ಗೊತ್ತಿಲ್ಲದ ಊರೊಂದರ ಹೊರಗೆ ಬಸ್ಸು ಕೆಟ್ಟು ಹೋದಾಗ ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಗುಡಿಸಿಲಿನಂದ ಹೊರಬಂದ ಒಬ್ಬ ಮುದುಕನ ಬಗ್ಗೆ.
ತನ್ನ ಹೆಸರು ಹೇಳದೆ ಮುದುಕ ಆ ಕೊರೆಯುತ್ತಿದ್ದ ರಾತ್ರಿ ಬಸ್ಸಿಂದ ಇಳಿದವರಿಗೆಲ್ಲಾ ಚಳಿಯಾಗತ್ತದೆಂದು ಅಲ್ಲೇ ಬೆಂಕಿ ಹಾಕಿ ಕೂಡಿಸಿದನಂತೆ. ಆಮೇಲೆ ಎಲ್ಲರೂ ಮೈಯೆಲ್ಲಾ ಕಿವಿಯಾಗಿ ಕೂತು ಕೇಳುವಂಥ ಕತೆ ಹೇಳಿದನಂತೆ. ಮುದುಕ ಸಣ್ಣವನಿದ್ದಾಗ ಅವನ ಹಳ್ಳಿಯಲ್ಲಿ ಅಂಥದೇ ರಾತ್ರಿ ಅಪ್ಪನಿಂದ ಜಗಳ ಆಡಿಕೊಂಡು ಊರು ಬಿಟ್ಟು ಹೊರಟಿದ್ದನಂತೆ. ಊರ ಹೊರಗೆ ಬಂದಾಗ ಯಾರೋ ಯಾರನ್ನೋ ಅಟ್ಟಿಸಿಕೊಂಡು ಹೋಗೋದು ಕಾಣಿಸ್ತಂತೆ. ದೂರದಲ್ಲಿ ಅಟ್ಟಿಸಿಕೊಂಡು ಹೋದವನು ಮುಂದೆ ಹೋಗ್ತಿದ್ದವಳನ್ನು ಕೈಯಲ್ಲಿದ್ದ ಮಚ್ಚಿಂದ ಕೊಚ್ಚಿ ಹಾಕಿದನಂತೆ. ಅವನ ಮೈಯೆಲ್ಲಾ ರಕ್ತ ಆಗಿತ್ತಂತೆ. ಮುದುಕ ಹೆದರಿಕೆಯಾಗಿ ಗರಬಡಿದವನಂತೆ ಕೂತಿರುವಾಗ ಇವನತ್ತಲೇ ಓಡಿಬಂದು ಕೊಲೆಗಾರ ಇವನನ್ನು ನೋಡಿದನಂತೆ. ಇವನಿಗೆ ಆ ಕೊಲೆಗಾರ ಗೊತ್ತಿದ್ದನಂತೆ. ಅವನು ಕೊಂದಿದ್ದು ಅವನ ಹೆಂಡಿತಿಯನ್ನಂತೆ. ಸಣ್ಣ ಹುಡುಗನಾಗಿದ್ದ ಮುದುಕನನ್ನು ಕೊಲೆಗಾರ ಕೂರಿಸಿಕೊಂಡು ಅವನ ಮತ್ತು ಹೆಂಡತಿಯ ಕತೆ ಹೇಳಿದನಂತೆ. ಕೊಲೆಗಾರನ ಹೆಂಡತಿ ಇವನ ಬೆನ್ನ ಹಿಂದೆ ಇನ್ನಾರನ್ನೋ ಒಲಿದಿದ್ದು ಅವನೊಡನೆ ಸಂಬಂಧ ಇಟ್ಟುಕೊಂಡದ್ದಿಳಂತೆ. ಅದು ಊರಿಗೆಲ್ಲಾ ಗೊತ್ತಿದ್ದರೂ ಕೊಲೆಗಾರನಿಗೆ ಗೊತ್ತಾಗಿದ್ದು ಮಾತ್ರ ತುಂಬಾ ತಡವಾಗಿಯಂತೆ. ಅದು ಕೂಡ ಕೊಲೆಗಾರನ ಗೆಳೆಯ ಅವನಿಗೆ ಹೇಳಿದ ಒಂದು ಕತೆಯ ಮೂಲಕವಂತೆ. ಕೊಲೆಗಾರನ ಗೆಳೆಯ ಒಂದು ಸಂಜೆ ಹೊಲದಿಂದ ಕೆಲಸ ಮುಗಿಸಿ ಹಳ್ಳಿಗೆ ವಾಪಸು ಬರುತ್ತಿದ್ದಾಗ ಗಂಡನಿಗೆ ಮೋಸಮಾಡಿ ಅವನ ಗೆಳೆಯನೊಡನೆ ಚಕ್ಕಂದ ಆಡುತ್ತಿದ್ದ ಒಬ್ಬ ಹೆಂಗಸಿನ ಕತೆ ಹೇಳಿದನಂತೆ. ಆ ಹೆಂಗಸು ಅವಳ ಕತೆಯನ್ನು ಕೊಲೆಗಾರನ ಗೆಳೆಯನ ತಂಗಿಗೆ ಹೇಳಿದ್ದಳಂತೆ. ಆ ಹೆಂಗಸು ಗಂಡನ ಸಿಟ್ಟು ಸೆಡವು ದರ್ಪದಿಂದ ಬೇಸತ್ತು ಹೋಗಿದ್ದಳಂತೆ. ಆವಾಗ ಒಂದು ದಿನ ನೀರು ಕೇಳಿಕೊಂಡು ಮನೆಯ ಬಾಗಿಲಿಗೆ ಬಂದ ಒಬ್ಬ ಸುಂದರಾಂಗ ಅಲ್ಲೇ ಕೂತು ಮಾತಿಗೆ ತೊಡಗಿದ್ದನಂತೆ. ಅವನ ಮಾತು ಹಾವಭಾವ ಕತೆ ಹೇಳುವ ಉತ್ಸಾಹ ಇವಳ ಮೇಲೆ ಮೋಡಿ ಹಾಕಿತಂತೆ. ಅವನನ್ನು ಮನೆಯ ಒಳಗೆ ಬರಮಾಡಿಕೊಂಡಳಂತೆ. ಎಲ್ಲಿಂದಲೋ ಎಲ್ಲಿಗೋ ಹೋಗುತ್ತಿದ್ದ ಅವನು ಆ ಊರಿಗೆ ಬಂದ ಬಗ್ಗೆ ತುಂಬಾ ಕುತೂಹಲಕಾರಿಯಾದ ಕತೆ ಹೇಳಿದನಂತೆ. ಅವನಿಗೆ ಹಿಂದಿನ ರಾತ್ರಿ ಬಿದ್ದ ಕನಸಿನಲ್ಲಿ ಆ ಊರಲ್ಲಿ ಬೇಸತ್ತಿರುವ ಒಬ್ಬ ಮದುವೆಯಾದ ಹೆಂಗಸಿರುವುದು ಕಂಡಿತಂತೆ. ಅದೇ ಕನಸಿನಲ್ಲಿ ಆ ಹೆಂಗಸು ಸತ್ತಿದ್ದಳಂತೆ. ಅದಕ್ಕೇ ಅವನು ಅವಳು ಸಾಯುವ ಮುಂಚೆ ತನ್ನ ಕತೆ ಹೇಳಬೇಕಂದು ಕೊಂಡು ಅವಳಲ್ಲಿಗೆ ಬಂದಿದ್ದನಂತೆ….
ಬಸ್ಸು ರಿಪೇರಿಯಾಗಿತ್ತು. ಬಸ್ಸು ಹತ್ತಬೇಕು ಅಂತ ಡ್ರೈವರ್ ಹಾರ್ನ್ ಮಾಡಿದ ಎಂದು ಗೆಳೆಯ ಕತೆ ಮುಗಿಸಿದ…
ಮೊನ್ನೆ ನಡು ಹಗಲೇ ಮನೆಯ ಪಕ್ಕದ ಓಣಿಯಲ್ಲಿ ಒಂದು ಬೆಳ್ಳನೆಯ ಭೂತಾಕೃತಿ ಕಂಡಿತು. ಎಲೆಯಡಿಕೆ ಅಗಿಯುತ್ತಾ ಹಿಂದುಮುಂದು ನೋಡುತ್ತಾ ಹೆದರಿ, ಹೆದರಿ ಹೆಜ್ಜೆ ಹಾಕುತ್ತಿತ್ತು. ಸುಮ್ಮನೆ ಹತ್ತಿರ ಹೋಗಿ ಕಿಚಾಯಿಸುವ ಬದಲು ದೂರದಿಂದಲೇ ಏನು ಮಾಡುತ್ತದೆ ಎಂದು ನೋಡುತ್ತಾ ನಿಂತೆ.
ಭೂತದ ಕೈ ಸ್ವಲ್ಪ ಗಿಡ್ಡವಾಗಿತ್ತು. ಅದರ ಹಸ್ತಗಳು ಕೈತುದಿಯಲ್ಲಿರುವ ಬದಲು ಮೊಣಕೈಯಿಂದ ಹೊರಬಂದಿರುವುದು ಕಂಡಿತು. ಹಸ್ತ ಇರಬೇಕಾದಲ್ಲಿ ಕತ್ತರಿಸಿ ಹಾಕಿದ ಹಾಗೆ ಮೂಳೆ ಮಾಂಸ ಹಸಿಹಸಿಯಾಗಿ ನೇತಾಡುತ್ತಾ ರಕ್ತ ಒಸರುತ್ತಿತ್ತು. ಮೊಣಕೈ ಜಾಗದಿಂದ ಹೊರಚಾಚಿದ ಹಸ್ತದ ನಡುವೆ ಅಗಲವಾದ ತೂತಿದ್ದು, ಹಸ್ತದ ತುದಿಗೆ ಒಂದೇ ಗೆಣ್ಣಿರುವ ಒಂದಷ್ಟು ಬೆರಳುಗಳು ಸೆಟೆದುಕೊಂಡಿದ್ದವು. ಆದ್ದರಿಂದ ಅದಕ್ಕೆ ಮೂಗೊರೆಸಿಕೊಳ್ಳುವಂಥ ಸುಲಭದ ಕೆಲಸವೂ ಕಷ್ಟವಾಗುತ್ತಿತ್ತು. ನೆಗಡಿಯಿಂದ ಸೊರಸೊರ ಎನ್ನುತ್ತಿದ್ದ ಮೂಗನ್ನು ಒರೆಸಿಕೊಳ್ಳಲು ಹೆಣಗುತ್ತಿತ್ತು. ಅದರ ಹೆಣಗಾಟದ ನೋಡಿದಾಗಲೇ ಅದಕ್ಕೆ ಕತ್ತು ಕೊಂಕಿಸಲು ಆಗುವುದಿಲ್ಲ ಎಂಬುದೂ ಗೊತ್ತಾಯಿತು. ಕತ್ತನ್ನು ಕೋಲಿಗೆ ಸಿಕ್ಕಿಸಿದ ಮಡಕೆಯಂತೆ ಅತ್ತಿತ್ತ ತಿರುಗಿಸಲು ಮಾತ್ರ ಆಗುವಂತಿತ್ತು. ಮಡಕೆಗೆ ತೂತು ಮಾಡಿದಂತೆ ಎರಡು ಮೂಗಿನ ಹೊಳ್ಳೆಗಳು. ಮೂಗೇ ಇಲ್ಲ ಎಂಬಷ್ಟು ಅಪ್ಪಚ್ಚಿ. ಆದರೂ ನೆಗಡಿಯಾಗಿದ್ದರಿಂದ ಮೂಗಿನಿಂದ ಸಣ್ಣಗೆ ನೀರು ಸೋರುತ್ತಿತ್ತು. ಒರೆಸಿಕೊಳ್ಳಲು ಆಗದೆ ಹೆಣಗಾಡುತ್ತಿತ್ತು. ಮೂಗಿನಿಂದ ಸೋರಿದ್ದು ಮೈ ಮೇಲೆ ಬೀಳದೆ, ಅದರ ಮೂಲಕ ನೆಲಕ್ಕೆ ಬಿದ್ದು ಅರೆಕ್ಷಣ ಹೊಳೆದು ಮಾಯವಾಗುತಿತ್ತು.
ನಾನು ಹಿಂದೆ ನಿಂತಿದ್ದು ಭೂತಕ್ಕೆ ಭಾಸವಾಗಿರಬೇಕು. ಸರ ಸರ ಮುಂದೆ ಸರಿಯಿತು. ಆರು ಕಾಲಿಂದ ನಡೆಯಲು ಮಹಾ ಪಜೀತಿ ಪಡುತ್ತಾ, ತನ್ನ ಕಾಲಿಗೆ ತಾನೇ ಎಡವುತ್ತಾ ತೂಕವಿದ್ದಿದ್ದರೆ ಮುಗ್ಗರಿಸಿ ಬೀಳುತ್ತಿತ್ತು. ಆದರೆ ಯಾಕೋ ತೇಲುತ್ತಿರುವಂತೆ ಕಾಣುತ್ತಿತ್ತು. ಆರು ಕಾಲಿಂದ ಹೇಗೆ ನಡೆಯಬೇಕೆಂದು ಇನ್ನೂ ಕಲಿತಿಲ್ಲವೆಂದು ಸ್ಪಷ್ಟವಾಗುತ್ತಿತ್ತು. ವಾಲುತ್ತಾ ಸಾವರಿಸಿಕೊಂಡು ಬೀಳುವಂತಾದಾಗ ಹಗುರಾಗಿ ತೇಲುವಂತೆ ಮತ್ತೆ ನೇರವಾಗುತ್ತಿತ್ತು.
ಅದರ ಪಜೀತಿ ನೋಡಿ ಕನಿಕರವಾಯಿತು. ಹೇಗೆಂದು ಗೊತ್ತಿಲ್ಲದಿದ್ದರೂ ಹತ್ತಿರ ಹೋಗಿ ಸಹಾಯಮಾಡಬೇಕೆಂದು ಒಂದೆರಡು ಹೆಜ್ಜೆ ಇಟ್ಟದ್ದೆ ಅದು ಥಟ್ಟನೆ ಸೆಟೆದು ನಿಂತಿತು. ನನಗೂ ಯಾಕೋ ದಿಗಿಲಾಯಿತು. ಅಲ್ಲೇ ನಿಂತುಬಿಟ್ಟೆ. ಮೆಲ್ಲಗೆ ಅದರ ತಲೆ ತಿರುಗತ್ತಾ ಕರಕರ ಸದ್ದು ಮಾಡಿತು. ನನ್ನ ಎದೆಯ ಢವಢವ ಜೋರಾಗುತ್ತಲೇ ಹೋಯಿತು. ಏನಾಗುತ್ತಿದೆ, ಯಾಕಾಗುತ್ತಿದೆ ಎಂಬ ಅರಿವಾಗುವ ಮೊದಲೇ ನನ್ನತ್ತ ತಿರುಗಿದ ತಲೆಬುರುಡೆಯ ನಡುವೆ ಕಣ್ಣಿರಬೇಕಾದಲ್ಲಿ ಆಳವಾದ ಎರಡು ಕಪ್ಪು ತೂತುಗಳು. ಆ ತೂತುಗಳ ನಡುವ ಗುಡ್ಡೆ ಇಲ್ಲದಿದ್ದರೂ ಅದು ನನ್ನತ್ತಲೇ ನೋಡುತ್ತಿದೆ, ಅಳುತ್ತಿದೆ ಎಂದು ತಿಳಿದುಬಿಟ್ಟಿತು. ನನ್ನ ಹಿಂದಿಂದ ಅಳುವ ಸದ್ದು ಕೇಳಿತು. ಹಿಂದಿಂದ ಬರುತ್ತಿದ್ದರೂ ಅದು ನನ್ನ ಮುಂದಿರುವ ಭೂತ ಅಳುತ್ತಿರುವುದು ಎಂದು ನನಗೆ ಅನುಮಾನವೇ ಇರಲಿಲ್ಲ. ಆದ್ದರಿಂದಲೇ ಅದನ್ನೇ ನೋಡುತ್ತಾ ನಿಂತುಬಿಟ್ಟೆ. ಅದೂ ಒಂದು ಕ್ಷಣ ನನ್ನನ್ನೇ ನೋಡುತ್ತಿತ್ತು. ನನ್ನ ಹಿಂದಿಂದ ಅಳು ಕೇಳುತ್ತಲೇ ಇತ್ತು. ಥಟ್ಟನೆ ಯಾರೋ ಅಲುಗಾಡಿಸಿದವರಂತೆ ಅಲುಗಿ ನನ್ನತ್ತ ಬರತೊಡಗಿತು. ನಾನು ಬೇರು ಬಿಟ್ಟವನಂತೆ ನಿಂತೇ ಇದ್ದೆ. ಮೆಲ್ಲನೆ ಹತ್ತಿರ ಬಂದು ಇನ್ನೇನು ಡಿಕ್ಕಿ ಹೊಡೆಯುತ್ತದೆ ಅನ್ನುವಾಗ ನನ್ನ ಮೈಯೆಲ್ಲಾ ತಣ್ಣಗಾಯಿತು. ಅದು ನನ್ನ ಮೂಲಕ ಹಾದು ನನ್ನ ಹಿಂದೆ ಹೊರಟು ಹೋಯಿತು. ನಾನು ತಿರುಗಿ ನೋಡಲಿಲ್ಲ. ಯಾಕೆಂದರೆ ಅದರ ಅಳುವಿನ ಸದ್ದೇ ಅದು ದೂರ ದೂರ ಹೋಗುತ್ತಿದೆ ಎಂದು ಸಾರಿ ಸಾರಿ ಹೇಳುತ್ತಿತ್ತು.
ಭೂತಗಳು ಯಾವಾಗಲೂ ಹಾಗೆ ಹೆದರಿಸುತ್ತವೆ, ಆದರೆ ನಿಜವಾಗಿಯೂ ನೋಡಿದರೆ ಅಳುತ್ತಿರುತ್ತವೆ. ಸಿಟ್ಟಿನಿಂದಲೋ, ದುಃಖದಿಂದಲೋ ತಿಳಿಯುವುದಿಲ್ಲ. ಅಳು ಮಾತ್ರ ಕೇಳಿದ್ದೇನೆ.
February 9, 2007 - 11:36 — anivaasi
ಪದ್ಯ ಬರೆಯುವ ದಿನ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ಮುಖ ತೊಳೆಯುವಾಗ ಕನ್ನಡಿಯಲ್ಲಿ ನನ್ನ ಮುಖವನ್ನು ಒಂದು ಕ್ಷಣ ದಿಟ್ಟಿಸುತ್ತೀನಿ - ಯಾರಿದು ಅನ್ನೊ ಹಾಗೆ. ನಂತರ ಕಾಫಿ ಕುಡಿದು ಪೇಪರ್ ಓದದೇ ಸ್ನಾನ ಮಾಡಿ ಮೈ ಒರೆಸಿಕೊಂಡು ಒದ್ದೆ ಟವಲನ್ನು ಬೇಗ ಒಣಗುವಂತೆ ಬಿಡಿಸಿ ಹರವುತ್ತೇನೆ. ಕೆಲಸಕ್ಕೆ ಹೊರಡಲು ಹೊತ್ತಾಯಿತ್ತೆಂದು ಓಡುವಾಗ ಏಕತಾನದಲ್ಲಿ ಕೂಗುವ ಕೋಗಿಲೆಯೊ ಕಾಕಟೂನೊ ಮನೆಯ ಮುಂದಿನ ಮರದಲ್ಲಿ ಕೂತಿದ್ದರೆ ಕಿರಿಕಿರಿಗೊಂಡು, ಅದಕ್ಕೆ ಕಲ್ಲು ಹೊಡೆಯುವ ಹಂಬಲವನ್ನು ಹತ್ತಿಕ್ಕಿ ರೈಲ್ವೇ ಸ್ಟೇಷನ್ನಿಗೆ ಓಡುತ್ತೇನೆ. ರೈಲಿನಲ್ಲಿ ಪಕ್ಕದಲ್ಲಿ ಕೂತ ಹುಡುಗಿಯರಿಬ್ಬರು ತಮ್ಮ ಬಾಯ್-ಫ್ರೆಂಡುಗಳ ಬಗ್ಗೆ ಜೋರಾಗಿ ಚರ್ಚಿಸುವುದನ್ನು ಕೇಳದವನಂತೆ ನಟಿಸುತ್ತಾ ಅವರ ಹುಡುಗಾಟದ ಕತೆಯಲ್ಲಿ ಮೈಮರೆಯುತ್ತೇನೆ. ಕೆಲಸದಲ್ಲಿ “ಆ ಪದ್ಯ ಓದಿದ್ದೀಯ, ಈ ಪದ್ಯ ಓದಿದ್ದೀಯ” ಅಂತ ಪೀಡಿಸೊ ಸಹೋದ್ಯೋಗಿಯಿಂದ ತಲೆ ಮರೆಸಿಕೊಂಡು ಓಡಾಡುತ್ತೇನೆ. ಕೆಲಸ ಮುಗಿಸಿ ಕೆಲಸದವರ ಜತೆ ಪಬ್ಬಿನಲ್ಲಿ ಬೀರ್ ಕುಡಿಯುತ್ತಾ, ಎಲ್ಲರ ಹುಚ್ಚು ಮಾತುಗಳಲ್ಲಿ ಏನಾದರೂ ಸಿಕ್ಕತ್ತಾ ಎಂದು ಹುಡುಕುತ್ತೇನೆ. ನನ್ನ ತಲೆಯಲ್ಲಿ ಗುಂಯ್ ಗುಡುತ್ತಿರುವ ಸಾಲೊಂದನ್ನ ಇಂಗ್ಲಿಷಿಗೆ ತರ್ಜುಮೆ ಮಾಡಿ ಮಾತಿನ ಮಧ್ಯೆ ತೂರಿಸಿ ಅವರ ಮುಖದಲ್ಲಿ ಬರುವ ಅಥವಾ ಬರದೇ ಇರುವ ಪ್ರತಿಕ್ರಿಯೆಗೆ ಕಾಯುತ್ತೇನೆ. ಬೆಳಿಗ್ಗೆ ಒಣಗಿಸಿದ ಟವಲ್ಲು ಒಣಗಿಬಿಟ್ಟಿರಬಹುದೆ ಅಂತ ಮನಸ್ಸಿನಲ್ಲಿ ಹಾದು ಹೋಗತ್ತೆ. ಇನ್ನೂ ಕತ್ತಲಾಗದಿದ್ದರೂ, ತುಂಬ ಮುಖ್ಯವಾದ ಕೆಲಸ ಇದೆ ಎಂದು ಸುಳ್ಳು ಹೇಳಿ ಮನೆಯ ರೈಲು ಹತ್ತುತ್ತೇನೆ. ಆವತ್ತಿಡೀ ಪದ್ಯಕ್ಕಾಗಿ ಹೆಕ್ಕಿಟ್ಟುಕೊಂಡದ್ದನ್ನು ಸೀರೆ ಉಟ್ಟಿದ್ದರೆ ಸೆರಗಿನ ತುದಿಯಲ್ಲಿ ಗಂಟು ಹಾಕಿ ಬಿಗಿದುಕೊಂಡು, ಪ್ಯಾಂಟು ಹಾಕಿಕೊಂಡಿದ್ದರೆ ಎಡ ಹಿಪ್ ಪಾಕೆಟಲ್ಲಿ (ಬಲ ಪಾಕೆಟ್ಟಿನಲ್ಲಿ ದುಡ್ಡಿನ ವಾಲೆಟ್ಟಿರುತ್ತದೆ) ಮಳೆಗೆ ಒದ್ದೆಯಾಗದ ಹಾಗೆ ಕಾಪಾಡಿಕೊಂಡು ಮನೆಗೆ ತರುತ್ತೇನೆ. ಎಲ್ಲ ಮಲಗುವುದನ್ನೇ ಕಾದಿದ್ದು ರೂಮಿನ ಬಾಗಿಲು ಹಾಕಿ ಟೇಬಲ್ಲಿನ ಮೇಲೆ ಚೆಲ್ಲಿ ಏನಾದರೂ ವಿನ್ಯಾಸ ಕಾಣುತ್ತದಾ ಅಂತ ತುಂಬಾ ಹೊತ್ತು ಹುಡುಕುತ್ತೇನೆ. ಗೊತ್ತಾಯ್ತ? ನಾನು ಪದ್ಯ ಬರೆಯೋದರಲ್ಲಿ ಗೌರವದ ವಿಷಯ ಏನೂ ಇಲ್ಲ. ಯೋಗಿಯ ಹಾಗೇ ಕಾವ್ಯದ ಧ್ಯಾನ ಅಲ್ಲ. ರೈತನ ಹಾಗೆ ಉತ್ತು ಬಿತ್ತು, ಬೆವರು ಸುರಿಸಿ ಫಸಲು ತೆಗೆಯುವ ಹಾಗೂ ಅಲ್ಲ. ಹೆಚ್ಚೆಂದರೆ, ನಮ್ಮ ಹಕ್ಕಿಪಿಕ್ಕಿಗಳ ಹಾಗೆ ಅಥವಾ ಆಸ್ಟ್ರೆಲಿಯಾದ ಆದಿವಾಸಿಗಳ ಹಾಗೆ ನಾಚಿಕೆ ಬಿಟ್ಟು ಬೇಟೆ ಆಡೋದು, ಅಲೆದಾಡಿ ಹಣ್ಣು, ಬೇರು ನಾರು- ಹೆಕ್ಕಿ ಗುಡ್ಡೆ ಹಾಕಿಕೊಳ್ಳೋದು. ಅಷ್ಟೆ.





ನಿಮ್ಮ ಮಾತು