ತುಂಬಾ ದಿನದ ಹಿಂದೆ ತಂದಿಟ್ಟುಕೊಂಡು ನೋಡಿರದ september ಎಂಬ ಆಸ್ಟ್ರೇಲಿಯದ ಚಿತ್ರವನ್ನು ಮೊನ್ನೆ ನೋಡಿದೆ. ೧೯೬೮ರಲ್ಲಿ ಅಬಾರಜಿನಿ ಕೆಲಸಗಾರರಿಗೂ ಬಿಳಿಯರಂತೇ ಸಮಾನ ಸಂಬಳ ಕೊಡಬೇಕೆಂಬ ಕಾನೂನು ಬಂದ ಹಿನ್ನೆಲೆಯಲ್ಲಿ ನಡೆಯುವ ಚಿತ್ರ. 
Archive for the ‘ಚಲನಚಿತ್ರ’ Category
ಗುದ್ದಾಡುವ ಮನಗಳು
In ಚಲನಚಿತ್ರ on April 27, 2009 at 11:05 amಆಸ್ಕರ್ ಗೆಲುವಿನ ನೆರಳಲ್ಲಿ…
In ಅಂದಂದು, ಚಲನಚಿತ್ರ, ಯೋಚನೆ on February 23, 2009 at 9:12 pmರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್ ಬಂದಿದ್ದು ಖುಷಿಯಾಯಿತು
ಎ.ಆರ್.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್ ಬಂದಿದ್ದೂ ಖುಷಿಯಾಯಿತು.
ಆದರೆ, ಇದು ಐತಿಹಾಸಿಕ ಘಟನೆ, ಚರಿತ್ರಾರ್ಹ ಸುದ್ದಿ. ಭಾರತಕ್ಕೆ ಸಂದ ಗಣನೀಯ ಆಸ್ಕರ್ ಎಂಬುದೆಲ್ಲಾ ಕೇಳಿ ಇದನ್ನು ಬರೆಯೋಣ ಅನಿಸಿತು.
ಪತನದ ಕತೆ
In ಚಲನಚಿತ್ರ on October 8, 2008 at 9:17 pm
ಮೊನ್ನೆ “ಡೌನ್‌ಫಾಲ್” ಎಂಬ ಚಿತ್ರ ನೋಡಿದೆ. ಹಿಟ್ಲರನ ಕಡೆಯ ದಿನಗಳ ಬಗ್ಗೆ. ಕಳೆದ ಅರವತ್ತು ಮಿಕ್ಕ ವರ್ಷಗಳಲ್ಲಿ ಹಿಟ್ಲರನ ರಾಕ್ಷಸತೆಯ ಬಗ್ಗೆ ಸಾಕಪ್ಪ ಅನಿಸುವಷ್ಟು ಪುಸ್ತಕ, ಡಾಕ್ಯುಮೆಂಟರಿ ಎಲ್ಲಾ ಬಂದಿವೆ. ಬರುತ್ತಿವೆ. ಆದರೂ, ಹಿಟ್ಲರನ ಕಡೆಗಾಲದಲ್ಲಿ ಅವನನ್ನು ಹತ್ತಿರದಿಂದ ನೋಡುವ, ಹಲವು ಚರಿತ್ರೆ ಮತ್ತು ಆತ್ಮಚರಿತ್ರೆಯ ಪುಸ್ತಕಗಳನ್ನು ಆಧರಿಸಿದ ಈ ಚಿತ್ರಕ್ಕೆ ವಿಚಿತ್ರ ಮೋಹಕ ಶಕ್ತಿಯಿದೆ. ಹಿಟ್ಲರನ ಬಗ್ಗೆ ಹೊಸದಾಗಿ ಕಣ್ಣು ತೆರೆಸುವಂತಹ ಸಂಗತಿಗಳೇನೂ ಇಲ್ಲಿಲ್ಲ. ಆದರೆ ಸಾವಿಗೆ ಹತ್ತಿರ ನಿಂತ ಅವನ ನಡೆವಳಿಕೆ, ಉಳಿದ ಮನುಷ್ಯರಿಗಿಂತ ಹೇಗೆ ಭಿನ್ನವಾಗಿತ್ತು ಎನ್ನುವುದು ಒಂದಂಶವಾದರೆ, ಜಗತ್ತಿನ ಮಹಾಕೃತ್ಯವೊಂದಕ್ಕೆ ಕೇವಲ ಒಬ್ಬ ಮನುಷ್ಯ ಎಷ್ಟು ಮತ್ತು ಹೇಗೆ ಕಾರಣನಾಗಬಲ್ಲ ಎಂಬುದು ಇನ್ನೊಂದು.
“ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ”
In ಚಲನಚಿತ್ರ on June 2, 2008 at 9:17 pmಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ.
ಅಂತಹ ದೇಶದಲ್ಲಿ ಅಕಿರಾ ಕುರೊಸಾವ “ಐ ಲೀವ್ ಇನ್ ಫಿಯರ್” ಎಂಬ ಚಿತ್ರ ಮಾಡಿದ್ದಾನೆ – ೧೯೫೫ರಲ್ಲಿ – ಅಟಾಮಿಕ್ ಬಾಂಬ್ ಸಿಡಿದ ಹತ್ತು ವರ್ಷಕ್ಕೆ. ಚಿತ್ರದ ನಾಯಕ ಒಂದು ಕೋಲ್ ಫೌಂಡ್ರಿಯ ಮಾಲೀಕ. ಬಾಂಬಿಂದ ತಪ್ಪಿಸಿಕೊಳ್ಳಲು ಬ್ರೆಜಿಲ್ಲಿಗೆ ವಲಸೆ ಹೋಗುವುದೊಂದೇ ಉಳಿದಿರುವ ದಾರಿ ಎಂಬ ಅಚಲವಾದ ನಿರ್ಧಾರಕ್ಕೆ ಬಂದಿದ್ದಾನೆ. “ಸಾಯುವುದು ಹೌದು, ಆದರೆ ಕೊಲ್ಲಲ್ಪಡಬಾರದು” ಎಂಬುದು ಅವನ ಸವಾಲು. ಕುಟುಂಬಕ್ಕೆ ಸೇರಿದ ಫೌಂಡ್ರಿಯನ್ನು ಮಾರಿ ಬಂದ ದುಡ್ಡಲ್ಲಿ ಕುಟುಂಬವೆಲ್ಲಾ ಬ್ರೆಜಿಲ್ಲಿಗೆ ಹೋಗಬೇಕೆಂದು ಅವನ ಯೋಚನೆ. ಅದಕ್ಕೆ ಅವನ ಮಕ್ಕಳಿಂದ ತೀವ್ರ ವಿರೋಧ. ಅವನಿಗೆ ಹುಚ್ಚೆಂದು ಸಾಬೀತು ಮಾಡಿ ವಲಸೆ ತಪ್ಪಿಸಲು ಅವನ ಮಕ್ಕಳು ಫ್ಯಾಮಿಲಿ ಕೋರ್ಟಿಗೆ ಹೋಗುತ್ತಾರೆ.
ಮೋರನ ನಿಜ ಮೋರೆ
In ಚಲನಚಿತ್ರ, ಯೋಚನೆ on December 5, 2007 at 9:21 pmಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. “ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ” ಎಂದು ಆತನ ಸಹಾಯಕರಿಂದ ಹೇಳಿಸಿಕೊಂಡು ಹೋಗುತ್ತಾಳೆ. ಅಲ್ಲಿ ಈಕೆಯನ್ನು ಗೋಡೆಗಳ ಮೇಲಿನ ಕೆಲವು ಸೆಕ್ಯುರಿಟಿ ಕ್ಯಾಮೆರಾಗಳಷ್ಟೆ ಎದುರುಗೊಳ್ಳುತ್ತವೆ. ಉಳಿದಂತೆ ಖಾಲಿ. ಆಗಷ್ಟೆ ಮೋರನ “ಬೌಲಿಂಗ್ ಫಾರ್ ಕಾಲಂಬೈನ್” ಬಿಡುಗಡೆಯಾಗಿ ಜನಪ್ರಿಯವಾಗಿದ್ದ ದಿನಗಳು. Read the rest of this entry »
ಬರ್ಗ್‌ಮನ್‌ನ ‘ವಿಂಟರ್ ಲೈಟ್’
In ಅಂದಂದು, ಚಲನಚಿತ್ರ on August 5, 2007 at 12:33 pmಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.

ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ ಸೈನಿಕ ಮತ್ತು ಅವನ ಬಸುರಿ ಹೆಂಡತಿ. ಬೆನ್ನು ನೋವಿಂದ ನರಳುವ, ನಿದ್ದೆ ಬಾರದೆ, ಸದಾ ಮದ್ದಿನ ಮೇಲೆ ಬದುಕಿರುವ ಗೂನು ಬೆನ್ನಿನ ಚರ್ಚಿನ ಸಹಾಯಕ. ಹಗುರ ಮನೋಭಾವದ ಚರ್ಚಿನ ಪಿಯಾನೋ ವಾದಕ. ಇಷ್ಟೇ ವಿಂಟರ್‌ಲೈಟ್ ಚಿತ್ರದ ಜಗತ್ತಿನ ಪಾತ್ರಗಳು.
ಹಿಮ ಮುಚ್ಚಿದ ಚಳಿಗಾಲದ ಒಂದು ಮಧ್ಯಾಹ್ನ-ಸಂಜೆ ನಡುವಿನ ಹೊತ್ತು. ತನ್ನ ಚರ್ಚಿನ ಸೇವೆ ಮುಗಿಸುವಲ್ಲಿಂದ ಮೂರು ಗಂಟೆಯ ನಂತರವಿರುವ ಇನ್ನೊಂದು ಚರ್ಚಿನ ಸೇವೆಯ ನಡುವೆ ನಡೆಯುವ ಘಟನೆಗಳು ಈ ಚಿತ್ರದ ಬಿತ್ತರ.
ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಗೆ ಗೆಳತಿಯ ಪತ್ರ ಓದಲು ಬಿಡುವಿಲ್ಲ. ಆಗ ಮಾತನ್ನೇ ಆಡದ ಸೈನಿಕ ಮತ್ತು ಅವನ ಆಂತರಿಕ ಹಿಂಸೆಯನ್ನು ಹೋಗಲಾಡಿಸಲು ಹವಣಿಸುತ್ತಿರುವ ಅವನ ಹೆಂಡತಿ ಪಾದ್ರಿಯನ್ನು ಭೇಟಿಮಾಡುತ್ತಾರೆ. ತನ್ನ ಗಂಡನೊಡನೆ ಮಾತಾಡಿ ಅವನ ವೇದನೆಯನ್ನು ಕಡಿಮೆ ಮಾಡಬೇಕೆಂದು ಸೈನಿಕನ ಬಸುರಿ ಹೆಂಡತಿ ಕೇಳಿಕೊಳ್ಳುತ್ತಾಳೆ. ಪಾದ್ರಿ ಒಂದು ಗಂಟೆ ಬಿಟ್ಟು ಬರುವಂತೆ ಹೇಳುತ್ತಾನೆ.

ಆ ಒಂದು ಗಂಟೆಯಲ್ಲಿ ಗೆಳತಿಯ ಪತ್ರ ಓದುತ್ತಾನೆ. ನಂತರ ಬಂದ ಸೈನಿಕನಿಗೆ ಸಾಂತ್ವನ ಹೇಳಬೇಕಾದವನು ತನ್ನ ಒಳಗನ್ನು ಅವನ ಮುಂದೆ ಸುರಿದುಕೊಳ್ಳುತ್ತಾನೆ. ಮದುವೆಯಾಗೆಂದು ಈ ಹಿಂದೆ ಪೀಡಿಸುತ್ತಿದ್ದ ಗೆಳತಿ ಅವಳ ಶಾಲೆಯ ಕೋಣೆಯಲ್ಲಿ ಪಾದ್ರಿಗೆ ಮುಖಾಮುಖಿಯಾಗುತ್ತಾಳೆ. ಪಾದ್ರಿ ಅವಳನ್ನು ತಾನೇಕೆ ಮದುವೆಯಾಗಲಾರೆ ಎಂದು ಹೇಳಿಕೊಳ್ಳುತ್ತಾನೆ. ಅವಳ ಸ್ವಭಾವವನ್ನು ಎತ್ತಾಡಿ ಹಳಿಯುತ್ತಾನೆ. ಅಷ್ಟರಲ್ಲಿ ಸೈನಿಕ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಪಾದ್ರಿಯೇ ಹೋಗಿ ಸೈನಿಕನ ಬಸುರಿ ಹೆಂಡತಿಗೆ ಅವಳ ಗಂಡ ಜೀವ ತೆಗೆದುಕೊಂಡ ಸುದ್ದಿ ಮುಟ್ಟಿಸುತ್ತಾನೆ.
ಪಾದ್ರಿಯ ಗೆಳತಿ ಅವನನ್ನು ಮತ್ತೊಂದು ಚರ್ಚಿಗೆ ಕರೆದುಕೊಂಡು ಹೋಗುತ್ತಾಳೆ. ಒಂದು ರೈಲ್ವೆ ಕ್ರಾಸಿಂಗಿನಲ್ಲಿ ಒಂದು ಕ್ಷಣ ಕಾಯುವಾಗ ತಾನು ಪಾದ್ರಿಯಾಗಬೇಕೆಂದು ತನ್ನ ತಂದೆಯ ಕನಸಾಗಿತ್ತು ಎನ್ನುತ್ತಾನೆ. ಹೆಣದ ಪೆಟ್ಟಿಗೆಗಳಂಥ ಗೂಡ್ಸ್ ಗಾಡಿ ಹಾದು ಹೋಗುತ್ತದೆ.

ಗೂನು ಬೆನ್ನಿನ, ನೋವಿನಿಂದ ನರಳುತ್ತಿರುವ ಪಾದ್ರಿಯ ಸಹಾಯಕ ಜೀಸಸ್ಸಿನ ನರಳಾಟದ ಬಗ್ಗೆ ತನ್ನ ವ್ಯಾಖ್ಯೆಯನ್ನು ಕೊಡುತ್ತಾನೆ. ತಾನು ಅನುಭವಿಸುತ್ತಿರುವ ವೇದನೆಯ ಮುಂದೆ ಜೀಸಸನ ಹಿಂಸೆ ಹೆಚ್ಚೇನೂ ಅಲ್ಲ ಎಂದು ನಮ್ರತೆಯಿಂದ ಹೇಳುತ್ತಾನೆ. ಆದರೆ, ಕಡೆ ಗಳಿಗೆಯಲ್ಲಿ ಜೀಸಸ್ಸಿಗೆ ತನ್ನ ದೇವರ ಬಗ್ಗೆ ಹುಟ್ಟಿದ ಅನುಮಾನ ತಂದಿರಬಹುದಾದ ನೋವು ದೈಹಿಕ ನೋವು ಹಿಂಸೆಗಿಂತ ಅತ್ಯಂತ ತೀವ್ರವಲ್ಲವೆ ಎಂದು ಕೇಳುತ್ತಾನೆ.
ಪಾದ್ರಿ ಮತ್ತೆ ಸ್ಥಿಮಿತ ಕಂಡುಕೊಂಡವನಂತೆ ಭದ್ರ ಧ್ವನಿಯಲ್ಲಿ ಚರ್ಚ್ ಸೇವೆ ಶುರುಮಾಡುತ್ತಾನೆ. ಅವನ ಗೆಳತಿ ಅವನ ಪ್ರವಚನ ಕೇಳಲು ಹಿಂದಿನ ಸಾಲಲ್ಲಿ ಕೂತಿದ್ದಾಳೆ.
ಬರ್ಗ್‌ಮನ್‌ನ ವಿಂಟರ್‌ಲೈಟ್ ಚಿತ್ರ ಆ ಹಳ್ಳಿಯಲ್ಲಿ ತಟಸ್ಥವಾಗಿ ಹರಿಯುವ ನದಿಯಂತೆ ಹರಿದು ಕೊನೆಗೊಳ್ಳುತ್ತದೆ.
ಮುಂಗಾರು ಮಳೆ ನೋಡಿದ ಮೇಲೆ
In ಚಲನಚಿತ್ರ on June 12, 2007 at 8:36 pm-೧-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ ಜನ ತುಂಬಿದ್ದರು.
ಪ್ರೀತಂನ ಮಾತುಗಳಿಗೆ ಮೊದಮೊದಲು ಜನ ನಗುತ್ತಲೇ ಚಿತ್ರ ಮೊದಲುಗೊಂಡಿತು. ಪ್ರೀತಂನ ಮಾತುಕತೆ ಎಲ್ಲಾ, ಬೆಂಗಳೂರಿನ ಶ್ರೀಮಂತ ಹುಡುಗನ ಉಡಾಫೆ, ಸಲೀಸಾಗಿ ಹರಿಯುವ ಇಂಗ್ಲೀಷ್ ಮಿಶ್ರಿತ ಕನ್ನಡ, ಮನಸ್ಸಿಗೆ ಹಿಡಿದ ಹುಡುಗಿ ಬೇಕೇ ಬೇಕು ಎಂಬಂತೆ ಹಿಂಬಾಲಿಸುವ ಮನೋಧರ್ಮ, ಇದರ ಸುತ್ತಲೇ ಸುತ್ತುತ್ತ ಢಾಳಾಗಿ ನಮ್ಮ ಮುಂದೆ ನಿಲ್ಲುತ್ತದೆ. ಒಳಗೇನೂ ಇಟ್ಟುಕೊಳ್ಳದೆ ಬೇಕಾದ್ದನ್ನು ಆಡುವ, ಆಡಿದಂತೆ ನಡೆಯುವ ಹುಡುಗ. ಇವೆಲ್ಲಾ ಹೊಸದೇನಲ್ಲ. ಆದರೆ, ಹೊಸ ಬಗೆಯ ಸ್ವಾವಹೇಳನ (self-depricating) ಹಾಸ್ಯ ಕನ್ನಡ ಚಿತ್ರದ ಹೀರೋಗೆ ಹೊಸದಿರಬಹುದು. ಆ ಅಂಶ ಅಲ್ಲಲ್ಲಿ ಕನ್ನಡದ ಚಿತ್ರಗಳಲ್ಲಿ ಈ ಹಿಂದೆ ಬಂದಿದ್ದರೂ, ಇಲ್ಲಿ ಅದು ಪ್ರೀತಂನ ಸ್ವಭಾವದ ಒಂದು ದೊಡ್ಡ ಭಾಗವೇ ಆಗಿರುವುದು ಹೊಸದೇನೋ ಅನಿಸಿತು. ಆಗಾಗ ಸಂದರ್ಭದ ಹೊರಗೆ ನಿಂತು ಚಟಾಕಿ ಹಾರಿಸುವ ಕ್ಷಣಗಳು ಮುದಕೊಡುವಂಥವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಂ ಬಳಸುವ ಬೆಂಗಳೂರಿನಂಥ ನಗರದ ಭಾಷೆಯಿಂದಾಗಿ ಅದು ಹೊಸದಾಗಿ ಕಾಣುತ್ತವೆ ಕೂಡ. ಆದರೆ ಚಿತ್ರದ ಉತ್ತರಾರ್ಧದ ಹೊತ್ತಿಗೆ ಅವನ ಮಾತು ಕತೆ ಹಾಗೇ ಮುಂದುವರೆಯುವುದು ಪಿಚ್ ಎನಿಸುತ್ತದೆ.
ಸುಂದರ ಸ್ಥಳಗಳು, ಧಾರ್ಮಿಕ ಕೋನದ ಸೀನು, ಸರ್ಕಾರಿ ನೌಕರರನ್ನು ತಮಾಷೆ ಮಾಡುವ ಸೀನು ಇವೆಲ್ಲಾ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಅಂಶಗಳು. ಅವುಗಳನ್ನು ತಪ್ಪದೆ ಎಚ್ಚರಿಕೆಯಿಂದ ಸೇರಿಸಿಕೊಂಡಿದ್ದಾರೆ. ಎಲ್ಲ ರೀತಿಯ ನೋಟಗರನ್ನು ತೆಕ್ಕೆಗೆ ತೆಗೆದುಕೊಳ್ಳುವ ಜರೂರು ಇಂಥ ಚಿತ್ರಗಳಿಗೆ ಇರುತ್ತವೆ.
ಸುಂದರ ಛಾಯಾಗ್ರಹಣ ಅನ್ನುವುದೇನೋ ನಿಜ. ಆದರೆ ಅದು ಕ್ಯಾಲೆಂಡರ್ ಚಿತ್ರಗಳ ಹಾಗೆ ಸುಂದರವಷ್ಟೆ. ಚಿತ್ರದಲ್ಲಿನ ಸಂದರ್ಭಗಳ ಮೂಡನ್ನು ಸ್ಥಾಪಿಸುತ್ತದೆ ಅನ್ನುವುದು ನಿಜ. ಆದರೆ ಅದನ್ನು ಏರಿಸುವ, ತೀವ್ರಗೊಳಿಸುವ ಕೆಲಸ ನನಗೆ ಕಾಣಲಿಲ್ಲ. ಎಲ್ಲರೂ ಮೆಚ್ಚುವ ಜೋಗದ ಶಾಟ್‌ಗಳನ್ನೇ ತೆಗೆದುಕೊಂಡರೂ, ಪ್ರೀತಿಸುವಾಗ ಮತ್ತು ಹಳಹಳಿಸುವ ಎರಡು ಸಂದರ್ಭದಲ್ಲೂ ಒಂದೇ ಬಗೆಯ ಕ್ಯಾಮೆರಾ ಚಲನೆಯಿದೆ. ಎರಡನೇ ಸಲ ಬಣ್ಣದ ತೀವ್ರತೆ ಸ್ವಲ್ಪ ಕಡಿಮೆ ಮಾಡಿ, ನೀಲಿಯಾಗಿಸಿದ್ದು ಮಾತ್ರ ಕಾಣುತ್ತದೆ. ಇನ್ನು ಆಗಾಗ ಕ್ಯಾಮೆರಾವನ್ನು ಸೊಟ್ಟಗಿಡುವ ಖಯಾಲಿ-ಖುಷಿ ನನಗೆ ಅರ್ಥವಾಗಲಿಲ್ಲ.
ಇನ್ನು ಸಂಗೀತ ಮತ್ತು ನೃತ್ಯ ನನ್ನ ಮನಸ್ಸಿನಲ್ಲಿ ಉಳಿಯಲಿಲ್ಲ. mtv ಮಾದರಿಯ ಹಾಡಿನ ಕಟಿಂಗಗಳು (ಮತ್ತು ಮೇಲೆ ಹೇಳಿದ ಸೊಟ್ಟ ಕ್ಯಾಮೆರಾ) ಕನ್ನಡದ ಕಮರ್ಷಿಯಲ್ ಜಗತ್ತಿಗೆ ಹೊಸದೇನೋ ನನಗೆ ಗೊತ್ತಿಲ್ಲ. ಆದರೆ ನನ್ನ ಮನೋಭಾವಕ್ಕೆ ಅದು ಸ್ವಲ್ಪ ಕಿರಿಕಿರಿಯೇ ಅನ್ನಬಹುದು. ಆದರೆ ಎಲ್ಲರೂ ಅದನ್ನು ತುಂಬಾ ಇಷ್ಟಪಟ್ಟಿದ್ದಾರೆ ಅನಿಸುತ್ತದೆ. ನನಗೇನಾಗಿದೆ ಅಂದುಕೊಳ್ಳುತ್ತೇನೆ!
ಕತೆಯನ್ನು ಗಂಭೀರವಾಗಗೊಡದೆ, ಒಂದೇ ಸ್ತರದಲ್ಲಿ ನಡೆಯುವುದು ಕೂಡ ಸ್ವಲ್ಪ ಪಿಚ್ ಎನಿಸಿತು. ಯಾಕೆಂದರೆ ಕತೆಯನ್ನು ಹಲವು ಸ್ತರಗಳಲ್ಲಿ ಹೇಳುವ ಉದಾಹರಣೆಗಳನ್ನು ಕನ್ನಡದ ಕಳಪೆ ಕಮರ್ಷಿಯಲ್ ಚಿತ್ರಗಳಲ್ಲೂ ಈ ಹಿಂದೆ ನೋಡಿದ್ದೇವೆ. ಇಲ್ಲಿ ಮಾತ್ರ, ಪ್ರೀತಿಸುವುದು, ಪ್ರೀತಿಸುವ ಹುಡುಗಿ ತನಗೆ ಬೇಕೆನಿಸುವುದು, ಅದಕ್ಕಾಗಿ ಹಾತೊರೆಯುತ್ತಾ ಅವಳ ಹಿಂದೆ ಓಡುವುದು ಅದೇ ಕತೆ, ಕತೆಯೆಲ್ಲಾ ಅದೆ! ಮೊದಲೆರಡು ಭಾಗ ಚುರುಕಾಗಿರುವ ನಿರೂಪಣೆ ಮೂರನೇ ಭಾಗದಲ್ಲಿ ಕಾಲು ಮುರಿದು ಬಿದ್ದಂತೆ ಅನಿಸುತ್ತದೆ. ಯಾವ ದಿಕ್ಕಲ್ಲಿ ಚಿತ್ರಕ್ಕೆ ಮೋಕ್ಷವಿದೆ ಎಂದು ತಡಕಾಡುತ್ತಿರುವಂತೆ ಕಾಣುತ್ತದೆ.
-೨-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಇಷ್ಟೆಲ್ಲಾ ಕಮರ್ಷಿಯಲ್ ಚಿತ್ರಗಳ ಗುಣಗಳಿರುವುದು ಕಂಡೂ ಕೂಡ ನಾನು ಮೊದಲು ಎತ್ತಿದ ಪ್ರಶ್ನೆ ಇನ್ನೂ ಕಾಡುತ್ತದೆ.
ಅದಕ್ಕೆ ಸ್ವಲ್ಪ ಕೆದಕಿ ನೋಡಿದಾಗ ಒಂದೆರಡು ಗಂಭೀರವಾದ ಪ್ರಶ್ನೆಗಳು ಎದ್ದವು. ಬರೇ ಶ್ರೀಮಂತರ ಮನೆಯ ಕತೆ ಹೇಳುವ ಚಾಳಿ ಇತ್ತೀಚೆಗೆ ನಮ್ಮ ಚಿತ್ರಗಳಲ್ಲಿ ಇರುವುದು ಹೆಚ್ಚೇನೋ. ಇದು ತನ್ನಷ್ಟಕ್ಕೆ ಏನೂ ತೊಂದರೆಯಿಲ್ಲದ ವಿಷಯ. ಆದರೆ ಅದಕ್ಕೊಂದು ಕೌಂಟರ್ ಪಾಯಿಂಟಿಲ್ಲದೆ ಇರುವುದು ಸ್ವಲ್ಪ ಅಪಾಯ. ಕೌಂಟರ್‍ಪಾಯಿಂಟ್ ಬಡತನವೇ ಆಗಬೇಕಾಗಿಲ್ಲ ಮತ್ತು ಕತೆಯ ಹೊರಗಿನಿಂದ ಬರಬೇಕಾಗಿಲ್ಲ. ಅದು ಕತೆಯ ಒಳಗೇ ಇರಬಹುದು, ಈಗಿರುವ ಪಾತ್ರಗಳೇ ಆಗಿರಬಹುದು. ಅದು ವಿವೇಚನೆ, ವಿವೇಕವನ್ನು ಮೆರೆಯುವ ಪಾತ್ರವಾಗಬಹುದು. ಇದೂ ಕೂಡ ಕಮರ್ಷಿಯಲ್ ಚಿತ್ರಗಳಿಗೆ ಹೊಸದೇನೂ ಅಲ್ಲ. ಮತ್ತು ಈ ಹಿಂದೆ ಕಮರ್ಷಿಯಲ್ ಚಿತ್ರಗಳಲ್ಲೇ ಇವನ್ನು ಚೆನ್ನಾಗಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾವಾಬ್ದಾರಿಯನ್ನು ಕಮರ್ಷಿಯಲ್ ಚಿತ್ರಕಾರರಲ್ಲಿ ಅಪೇಕ್ಷಿಸಕೂಡದು ಎಂಬ ಮಾತು ಯಾಕೋ ಸ್ವಲ್ಪ ಹಳಸಲು ಎನಿಸುತ್ತದೆ.
ಮತ್ತೊಂದು ಗಂಭೀರವಾದ ಪ್ರಶ್ನೆ ಮತ್ತು ನನ್ನನ್ನು ತುಂಬಾ ಚಿಂತೆಗೀಡು ಮಾಡಿದ್ದು ನಂದಿನಿಯ ಪಾತ್ರ ಚಿತ್ರಣದ ಕುರಿತು. ಒಂದು ಆಟದ ಗೊಂಬೆಯಾಗಿ (ಐಟಂ ಸಾಂಗಿಂನಿಂದ ಹಿಡಿದು) ಕಡೆಯವರೆಗೂ ತನ್ನ ಒಂದೇ ಒಂದು ಇಚ್ಛೆಯನ್ನು ಪೂರೈಸಲು ಕಿರು ಬೆರಳೂ ಎತ್ತದ ಹುಡುಗಿಯಾಗಿ ಚಿತ್ರಿತವಾಗಿರುವುದು. ಪ್ರೀತಂನನ್ನು ಒಂದು ಸಾರೆ ಕಪಾಳಕ್ಕೆ ಬಿಗಿಯುತ್ತಾಳೆ ಅಷ್ಟೆ. ಅದೂ ತನಗೋಸ್ಕರವಾಗಿಯೇ! ಪ್ರೀತಂ ಅಷ್ಟೆಲ್ಲಾ ತಿಣಕಲಾಡುತ್ತಿರುವಾಗ ಕೂಡ ಅವನ ಪ್ಲಾನಿನ ಕೈಗೊಂಬೆಯಾಗಿ ಮಾತ್ರ ನಂದಿನಿ ಚಿತ್ರಿತವಾಗಿದ್ದಾಳೆ. ಅವಳ ಸ್ವಭಾವದ ಬಗ್ಗೆ ಯಾವುದೇ ಇಣುಕು ನೋಟವೂ ಚಿತ್ರದಲ್ಲಿ ಇಲ್ಲ. ಪ್ರೀತಂನನ್ನು ಅಷ್ಟೊಂದು ರಂಗಾಗಿ ಚಿತ್ರಿಸಿ ನಂದಿನಿಯನ್ನು ಒಂದು ಬೋರಿಂಗ್ ಪಾತ್ರವಾಗಿ ಮಾಡುವುದರ ಹಿಂದಿನ ಉದ್ದೇಶವೇನಿರಬಹುದು ಎಂದು ಯೋಚಿಸುತ್ತೇನೆ. ಇನ್ನೂ ಕೂಡ ನಮ್ಮ ಹೆಣ್ಣುಮಕ್ಕಳನ್ನು ಗೊಂಬೆಗಳ ಹಾಗೆ ಮಾತ್ರ ಚಿತ್ರಿಸಿ ನಮ್ಮ ಚಿತ್ರಗಳು ಜಯಭೇರಿ ಹೊಡೆಯಬಲ್ಲವಲ್ಲ ಎಂದು ಅಚ್ಚರಿಪಡುತ್ತೇನೆ. ಈ ಹಿಂದಿನ ಕಳಪೆ ಕಮರ್ಷಿಯಲ್ ಚಿತ್ರಗಳಲ್ಲೂ ಕೂಡ ನಂದಿನಿಗಿಂತ ಗಟ್ಟಿಯಾದ, ರಂಗುರಂಗು ಸ್ವಭಾವದ ಹೆಣ್ಣು ಪಾತ್ರಗಳು ನಮಗೆ ಸಿಗುತ್ತವೆ! ಇಲ್ಲಿ ಏಕೆ ಹೀಗಾಗಿದೆ? ಗಂಡು ಕೇಂದ್ರಿತ ಕತೆಯಾದ್ದರಿಂದ ಏನಾದರೂ ಲಾಭವಿದೆಯೆ? ಲಾಭವಿಲ್ಲದ ಹಾಗೆ ಕಮರ್ಷಿಯಲ್ ಚಿತ್ರಗಳು ಮಾಡಲ್ಪಡುತ್ತವೆಯೆ? ಹೆಣ್ಣು ಕೇಂದ್ರಿತ ಆಗಬೇಕೆಂದೇನೂ ಇಲ್ಲ, ಆದರೆ ಸಹಜವಾಗಿ ಇರಬೇಕಾದ ಒತ್ತು ಕೂಡ ಈ ಚಿತ್ರದ ಹೆಣ್ಣು ಪಾತ್ರಕ್ಕೆ ಇಲ್ಲವಲ್ಲ! ನಮ್ಮ ನೋಟಗರು ಹೀಗೇ ಇಷ್ಟಪಡುತ್ತಾರೆಯೆ?
-೩-
ಈ ಎಲ್ಲಾ ಯೋಚನೆಗಳೂ ನಾನು ಮೊದಲು ಎತ್ತಿದ ಪ್ರಶ್ನೆಗೆ ಪರಿಪೂರ್ಣ ಉತ್ತರ ಕೊಡುವುದಿಲ್ಲ. ಹಾಗೊಂದು ನಿಚ್ಚಳವಾದ ಉತ್ತರವೇ ಇಲ್ಲದಿರಬಹುದು! ಆದರೂ ಅದೊಂದು ಮುಖ್ಯವಾದ ಪ್ರಶ್ನೆ ಎಂದು ಎಣಿಸುತ್ತೇನೆ. ಯಾಕೆಂದರೆ, ಮುಂದೆ ಬರುವ ಚಿತ್ರಗಳಿಗೆ ಜಯಭೇರಿ ಹೊಡೆದ ಮುಂಗಾರು ಮಳೆಯಂಥ ಚಿತ್ರಗಳು ಮಾದರಿಯಾಗುವ ಸಾಧ್ಯತೆಗಳಿದೆ. ಎರಡನೇ ಭಾಗದಲ್ಲಿ ಎತ್ತಿದ ಪ್ರಶ್ನೆಗಳು ಚಿತ್ರದಲ್ಲಿ ಪಡೆದ ಒತ್ತಿನಿಂದಾಗಿ ಈ ಚಿತ್ರ ಜಯಭೇರಿ ಹೊಡೆಯಿತೇ? ಅಥವಾ ಮೊದಲನೇ ಭಾಗದಲ್ಲಿ ಹೇಳಿದ ಗುಣಗಳಿಂದಾಗಿ ಚಿತ್ರ ಜಯಭೇರಿ ಹೊಡೆಯಿತೇ?
ಯೋಚಿಸಬೇಕಾದ ಸಂಗತಿಗಳು.
ನಾನಿಲ್ಲದೆ ನನ್ನ ಬದುಕು
In ಅಂದಂದು, ಚಲನಚಿತ್ರ on May 18, 2007 at 8:41 amಒಂದೆರಡು ದಿನದ ಕೆಳಗೆ my life without me (2003) ಎಂಬ ಚಿತ್ರ ನೋಡಿದೆ. ಕೆನಡಾ ದೇಶದ್ದು. ನಿರ್ದೇಶಕಿ Isabel Coixet ಎಂಬ ಸ್ಪಾನಿಶ್ ಮಹಿಳೆ. (ಈ ಚಿತ್ರ ಸ್ಪಾನಿಶ್ ಮತ್ತು ಫ್ರೆಂಚ್ ಭಾಷೆಯಲ್ಲೂ ಒಟ್ಟಿಗೆ ಮಾಡಿದ್ದಾರೆ)
ಹೊಟ್ಟೆಯ ಟ್ಯೂಮರ್‌ನಿಂದ ಸಾವಿಗೆ ಒಂದೆರಡು ತಿಂಗಳು ಮಾತ್ರ ಉಳಿದಿರುವ ಆನ್ ಎಂಬವಳು ರಾತ್ರಿ ಯೂನಿವರ್ಸಿಟಿ ಕ್ಲೀನ್ ಮಾಡುವ 23 ವರ್ಷದ ಹೆಣ್ಮಗಳು. ಗೊತ್ತಾದಾಗಿನಿಂದ ಕಡೆಯವರೆಗೂ ಅವಳ ಪ್ರತಿಕ್ರಿಯೆ ಯಾವುದೇ ಭಾವೋದ್ವೇಗಕ್ಕೂ ಒಳಗಳ್ಳದೆ ಉಳಿಯುವುದು ಒಂದು ವಿಶೇಷ. ಎರಡು ಪುಟ್ಟ ಮಕ್ಕಳು ಮತ್ತು ಗಂಡನ ಜತೆ ತಾಯಿಯ ಮನೆಯ ಹಿತ್ತಲಲ್ಲಿರುವ ಟ್ರೈಲರ್‌ನಲ್ಲಿ ವಾಸ ಮಾಡುವ ಇವಳು (ಕೊಂಚ eclectic ಅನ್ನಿಸುವ ಪಾತ್ರ) ಸಾಯುವ ಮುಂಚೆ ಏನೇನು ಮಾಡಬೇಕು ಎಂದು ಪಟ್ಟಿ ಮಾಡುತ್ತಾಳೆ. ಎಲ್ಲವನ್ನೂ ಯಾವುದೇ ಭಾವೋದ್ವೇಗವಿಲ್ಲದೆ ಮಾಡುತ್ತಾ ಹೋಗುತ್ತಾಳೆ. ಅತಿ ಭಾವುಕವಾಗಬಹುದಾದ ಎಲ್ಲ ಸಾಧ್ಯತೆಗಳಿದ್ದರೂ ಚಿತ್ರ ಸಲೀಸಾಗಿ ಸಾಗುತ್ತದೆ. ಆದರೆ ನೋಡುವವರಿಗೆ ಒಂದು ರೀತಿಯ ಯಾತನೆಯಾಗುವಂತಿದೆ.
ಹದಿನೇಳನೇ ವಯಸ್ಸಿನಲ್ಲಿ ತನ್ನನ್ನು ಚುಂಬಿಸಿದ ಮೊದಲ ಹುಡುಗನ ಜತೆ ಮದುವೆಯಾಗಿ ಎರಡು ಮಕ್ಕಳನ್ನು ಹೆತ್ತಿರುವ ಈಕೆ, ಇನ್ನಾದರೂ ಮತ್ತೊಬ್ಬ ಗಂಡಿನ ಸಹವಾಸ ಪಡೆಯಬೇಕು ಎಂದು ಪಟ್ಟಿಯಲ್ಲಿ ಬರೆಯುತ್ತಾಳೆ. ಈ “ಅನೈತಿಕ ಹಂಬಲ”ದ ಮೇಲೆ ಸಾವಿನ ನೆರಳು ಚಾಚಿರುವುದರಿಂದ ಅದಕ್ಕೆ ಹೇಗೆ ಪ್ರತಿಕ್ರಯಿಸಬೇಕು? ನನಗಂತೂ ಚಿತ್ರ ನೋಡುವಾಗ ಸರಿ/ತಪ್ಪುಗಳ ನಿಲುವಿನಾಚೆ ಆಕೆಯ ಬದುಕಿಗೆ ಸ್ಪಂದಿಸುವಂತಾಯಿತು. ಚಿತ್ರ ಮಾಡಿರುವುದೂ ಮಹಿಳೆಯಾದ್ದರಿಂದ ಆ “ಅನೈತಿಕ”ವೂ ರೋಚಕವಾಗುವ ಹಾಗೆ ಚಿತ್ರಿಸಿಲ್ಲ.
ಪಾಶ್ಚಿಮಾತ್ಯ ದೇಶವೊಂದರ ಕೂಗಾಟ, ಹಾರಾಟವಿಲ್ಲದ ಚಿತ್ರ ಮನಸ್ಸಿನಲ್ಲಿ ಉಳಿಸಿದ್ದು ಆನ್ ಪಾತ್ರ ಮಾಡಿದ ಸಾರಾ ಪಾಲಿ. ಭಾವವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ನಟಿಸಿ ಮನಸ್ಸಿನಲ್ಲಿ ಉಳಿಯುತ್ತಾಳೆ.
ಇಂಗ್‌ಮಾರ್ ಎಂಬ ಕುನ್ನಿಯ ಬದುಕು
In ಅಂದಂದು, ಚಲನಚಿತ್ರ on March 31, 2007 at 4:55 amMarch 16, 2007 – 20:47 — anivaasi
ನಾಯಿಮರಿಯಾಗಿ ನನ್ನ ಬದುಕು (my life as a dog –1985) ಸ್ವೀಡಿಶ್ ನಿರ್ದೇಶಕ ಲಾಸ್ ಹಾಲ್‌ಸ್ಟ್ರಾಮ್ ಎಂಬವನ ಚಿತ್ರವನ್ನು ಈವತ್ತು ನೋಡಿದೆ. ಮನಸ್ಸಿಗೆ ತುಂಬಾ ಹತ್ತಿಕೊಂಡಿತು.
ಅಸ್ವಸ್ಥ ಅಮ್ಮ, ತುಂಟ ಅಣ್ಣ, ಸೋದರ ಮಾವ, ಅವನ ಊರಿನ ಜನ ಎಲ್ಲರ ನಡುವೆ ಸುಮಾರು ಹತ್ತು ವರ್ಷದ ವಿಲಕ್ಷಣ ಪ್ರಕೃತಿಯ ಇಂಗ್‌ಮಾರ್. ಜಗತ್ತಿನಲ್ಲಾಗುತ್ತಿರುವ ಅತಿದಾರುಣ ಘಟನೆಗಳ ನಡುವೆ ತನ್ನ ಕಷ್ಟಗಳು ಕಷ್ಟಗಳೇ ಅಲ್ಲ ಎಂದು ವಿವರಿಸಿಕೊಳ್ಳುತ್ತಾ ಹೋಗುತ್ತಾನೆ. ಸ್ಪುಟ್ನಿಕ್‌ನಲ್ಲಿ ಲೈಕಾ ಎಂಬ ನಾಯಿಮರಿಯನ್ನು ಇಟ್ಟು ಕಳಿಸಿದ್ದು ಮೊದಲಿಗೆ ಅವನನ್ನು ಕಾಡಲು ಶುರುಮಾಡುತ್ತದೆ. ಅಸ್ವಸ್ಥ ತಾಯಿ ಆರಾಮ ಪಡೆಯಲಿ ಎಂದು ಇಂಗ್‌ಮಾರ್‍ನನ್ನು ಸೋದರಮಾವನ ಹಳ್ಳಿಗೆ ಅವನ ಇಷ್ಟದ ವಿರುದ್ಧ ಕಳಿಸಿದಾಗ ತನ್ನ ನಾಯಿಮರಿ ಸಿಕ್‌ಯಾನ್‌ನಿಂದ ವಿಯೋಗವಾಗುತ್ತದೆ. ಅಲ್ಲಿ ಬೇಸಿಗೆಯ ಜೀವೋನ್ಮಾದಕ ಪರಿಸರದಲ್ಲಿ ಹೊಸ ಜನ, ಹೊಸ ಗೆಳೆಯ ಗೆಳೆತಿಯರೊಂದಿಗೆ ಸ್ನೇಹವಾಗುತ್ತದೆ. ತನ್ನ ಲೈಂಗಿಕತೆಯ ಅರಿವಾಗುತ್ತಾ ಹೋಗುತ್ತದೆ.
ನಂತರ ಅಸ್ವಸ್ಥ ತಾಯಿಗೆ ನೀಡಿದ ಚುಟುಕು ಭೇಟಿ ಅವನ ಜೀವವನ್ನೇ ಅಲುಗಾಡಿಸಿಬಿಡುತ್ತದೆ. ಮತ್ತೆ ಸೋದರಮಾವನ ಮನೆಗೆ ಬಂದಾಗ ಹಿಮಾಚ್ಛಾದಿತ ಚಳಿಗಾಲ, ಅದರ ನಡುವೆ ತೀವ್ರ ಅಂತರ್ಮುಖಿಯಾಗಿಬಿಟ್ಟಿರುವ ಇಂಗ್‌ಮಾರ್. ಅವನು ಕಳೆಯುವ ಒಂದೊಂದು ಕ್ಷಣವೂ, ಫಟನೆಯೂ ಮನವನ್ನು ಕದಡುತ್ತದೆ, ಹಿಂಡುತ್ತದೆ. ಇದೆಲ್ಲವೂ ತೆಳುಹಾಸ್ಯದ ಹೊದಿಕೆಯಲ್ಲೇ ನಡೆಯುತ್ತದೆ ಎನ್ನುವುದು ಕಥಾಹಂದರದಡಿಯ ನೋವನ್ನು ಮತ್ತಷ್ಟು ತೀವ್ರವಾಗಿಸುತ್ತದೆ.
ಈ ಚಿತ್ರದ ನಿರ್ದೇಶಕ ಚಿತ್ರಿಸುವ ಮಕ್ಕಳ ಜಗತ್ತು ಅದ್ಭುತ ಮತ್ತು ಅದ್ವಿತೀಯ ಎನಿಸಿತು. ಇಂಗ್‌ಮಾರ್ ವಯಸ್ಸಿನ ಪಥೇರ್‍ಪಾಂಚಾಲಿ ಯ ಅಪು ನೆನಪಾದ, ಬಿಲ್ಲಿ ಎಲಿಯಟ್ ನ ಬಿಲ್ಲಿ ನೆನಪಾದ.

