You are currently browsing the category archive for the 'ಪದ್ಯ' category.

ಕೇಳಿದ್ದು ಹೇಳಿದ್ದು

“ಬಾಗಿಲು ತಟ್ಟಿದ ಸದ್ದಾಯಿತು” ಅಂದ ಅವನು.
“ಸದ್ದು ಬಾಗಿಲ ತಟ್ಟಿತು” ಅಂದ ಇವನು.
Read the rest of this entry »

[ಈ ಸಾವಿನ ಸುದ್ದಿ ನೋಡಿ]

ಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?

ಆ ರಥದಲ್ಲಿ ಕೂತ ಗೊಂಬೆಯ
ಒಳಗೇನೋ ಕಂಡಿತೆನ್ನುವ
ಕೋಟಿ ಕೋಟಿ ಜನ ಕುರುಡುರೇ?
ಅನುಮಾನ ಸಹಜ
ಇರಬಹುದು ಎಂದೇಕೆ ಅನಿಸಲಿಲ್ಲ ನಿನಗೆ?

ನಿನ್ನ ಯಾವುದೋ ತಬ್ಬಲಿತನ
ಕಳಕೊಳ್ಳುವ ತವಕದಲ್ಲಿ
ನಿನ್ನ ಮಕ್ಕಳೀಗ ತಬ್ಬಲಿ

ರಥಚಕ್ರಕ್ಕೆ ಸಿಕ್ಕಿ ಸಾಯುವ ಪುಣ್ಯವಿಲ್ಲದಿದ್ದರೆ
ರಥವೆಳೆಯುವ ಕಾಲಿಗೆ ಸಿಕ್ಕಾದರೂ ಸಾಯಬೇಕು
ಮಕ್ಕಳನ್ನು ತಬ್ಬಲಿ ಮಾಡಬೇಕು.

ಅವರು
ತಬ್ಬಲಿಯಾಗಿ ರಥವೆಳೆಯುವ ಕೈಗಳಾಗಬೇಕು
ತುಳಿದು ಕೊಲ್ಲುವ ಕಾಲುಗಳಾಗಬೇಕು
ಅಯ್ಯೋ,
ರಥಚಕ್ರ ಮಾತ್ರ ತಿರುಗುತ್ತಲೇ ಇರಬೇಕು.

ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ
ಆತನ ಸುಕ್ಕುಗಟ್ಟಿದ ಅಂಗೈ
ದಾರಿಯುದ್ದಕ್ಕೂ ಮಾತುಕತೆ-
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”

ಅಂಗೈಗಳು
ಒಂದನ್ನೊಂದು ಸವರುತ್ತಲೇ ಇದ್ದವು.

ಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು “ಮಾಯಿಯ ಮೂರು ಮುಖಗಳು” ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು ಸ್ವಾತಂತ್ಯ್ರದ ಬಗ್ಗೆಯೂ ಇದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಪದ್ಯ. ಆದರೆ ಅದರೊಳಗಿನ ಒಂದು ಅಂಶ ಮಾತ್ರ ನನ್ನ ನೆನಪಿನಲ್ಲಿ ಉಳಿದಿದ್ದೇ ಅದನ್ನು ಮತ್ತೆ ಓದಲು ಪ್ರೇರಣೆಯಾಯಿತು.
Read the rest of this entry »

ರಾಮಾವತಾರ

ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ
Read the rest of this entry »

ಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ

Read the rest of this entry »

ನಡುನಡುವೆ

ಪಟ್ಣಣದತ್ತ ಕಣ್ಣಿಟ್ಟ ಬೆಸ್ತರ ಹುಡುಗ
“ಮೀನಲ್ಲಿ… ಭವಿಷ್ಯ… ಇಲ್ಲ… ಏನು ಮಾಡೋದು” ಅಂತ
ತಡೆತಡೆದು ಆಡಿದ ಮಾತುಗಳ ನಡುವೆಲ್ಲಾ
Read the rest of this entry »

ಹಾಲಿವುಡ್ಡಿನ
ಮರಗಳಿಗೇ ಬೇರು
Read the rest of this entry »

ಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿ
ಕಣ್ಣೆದುರೇ ಬಂದು ಕುಣಿಯೋ ಜಗತ್ತು
Read the rest of this entry »

ಪ್ರೀತಿಯ ಗಾಢತೆಯಲ್ಲಿ ಸದಾ ಸಿಗುತ್ತಿದ್ದ ನಲ್ಲ
ಈಗೀಗ
ಸಮಯ ಸಿಕ್ಕಾಗ ಸಿಗುತ್ತಾನೆ

Read the rest of this entry »

ಮುಟ್ಟಲಾರದ ಕೆಂಡದ ಕೆಂಪು
ಹೊತ್ತು ಹೊರೆಯುವ ಬಸಿರ ಹಸಿರು
Read the rest of this entry »

ನನ್ನ ನಲ್ಲ ಗಡ್ಡಬಿಟ್ಟಾಗ
ಅವನ ಕೆನ್ನೆಯ ನುಣುಪು ನೆನಪಾಗುತ್ತದೆ

Read the rest of this entry »

ಕಬ್ಬಿಣ, ಚಿನ್ನ, ಪೆಟ್ರೋಲು
ಗಣಿಯಾಳದಲ್ಲಿ
ಅದಿರು ಆಸೆಯ ಹೊಳೆ
ಕೈಯಲ್ಲಿ ಮಣ್ಣು Read the rest of this entry »

ಮಾತಿಗೆ ಸಿಕ್ಕ ಒಂದು ಮಧ್ಯಾಹ್ನ
“ಗುಂಡಿಲ್ಲದೆ ಎಕ್ಸೈಟ್‌ಮೆಂಟ್ ಸಿಗೋದಾದರೆ ಕುಡೀಬೇಡಿ”
ಎಂದು ಹೇಳಿಕೊಂಡು ತನಗೊಬ್ಬಳಿಗೇ
ವಿಸ್ಕಿ ಸುರಿದುಕೊಳ್ಳುತ್ತಾ ತುಂಟ
ನಗೆಯಲ್ಲಿ ಮಗ್ನಳಾದಳು

(ಲಂಕೇಶ್ ಹುಟ್ಟು ಹಬ್ಬ-ನೆನಪು ಮತ್ತು ಮಹಿಳಾ ದಿನಾಚರಣೆ!)

ಹದಿನಾರರ ಈಚೆ
ಖುಷಿಯೂ ಅಳಲೂ ತಟ್ಟತಟ್ಟನೆ ದಟ್ಟ.
ಹದಿನಾರರ ಆಚೆ
ಖುಷಿ ಮತ್ತು ಅಳಲು
ಯಾವುದರೊಳಗೆ ಯಾವುದು
ಹುಡುಕಿಕೊಳ್ಳುವುದೇ ದೊಡ್ಡ ಪಾಠ.

ಎಷ್ಟು ಜಗ್ಗಾಡಿದರೂ
ಕಾವ್ಯವಾಗದ ಪದದ ಸಾಲಿಗೆ
ಗಿಲೀಟು ಮಾಡುವುದು ಬರೇ ಪೋಲು. Read the rest of this entry »

ಅರೆಬಿರಿದ ನನ್ನ ತುಟಿಗಳ ಮಾದಕತೆ
ನಲ್ಲನಿಗೆ ಮತ್ತೇರಿಸುವುದು
Read the rest of this entry »

ತೊಡೆ ಸೊಂಟ ಮತ್ತು ಮೊಲೆಯನ್ನು
ಗಂಡಸರು ಚಪ್ಪರಿಸುವಂತಾದಾಗ
ಚಂದದ ಕುಣಿತವೂ
ತನ್ನ ಪ್ರಶ್ನೆಯ ಮೊನಚು ಕಳಕೊಂಡು
ಅರೆಭಾವಕ್ಕೆ ಉತ್ತರದಂತೆ.

ರೈಲು ಬ್ರಿಡ್ಜಿನಡಿ ತೊರೆಯ ನೀರಲ್ಲಿ
ಆಡುವ ಬಾತುಕೋಳಿ ಜೋಡಿ
ಉರುಳುವ ಗಾಲಿ ಎಬ್ಬಿಸುವ ನೀರ ಕಂಪನಕ್ಕೆ
ಮೈ ಒಡ್ಡುತ್ತ ನಲಿದಿದೆ


ಹದ್ದು ಮೀರಿದ ನಗರಕ್ಕೆ ಸಾಕ್ಷಿ-
ಕೊಟ್ಟಿಗೆಯಲ್ಲಿ ಕರು
ಹಾಕಿ ಬಂದ ದನ ಬಸ್‌ಸ್ಟಾಂಡಿನಲ್ಲಿ
“ಅಂಬಾ”
ಎಂದು ಕೂಗುವುದು.


ನಮ್ಮ ನೆರಳುಗಳನ್ನು
ಸಹಜ ನಿರ್ಲಜ್ಜೆಯಿಂದ
ತಬ್ಬಿಸುತ್ತಾನೆ ಬೆಳಗಿನ ಸೂರ್ಯ
ನನ್ನ ನಲ್ಲ ಸಿಟ್ಟಾಗಿ
ದೂರ ನಿಂತಾಗಲೂ ಕೂಡ

ಬೀದೀಲಿ, ಪೇಟೇಲಿ
ತಮತಮಗೆ ಬೇಕಾದ್ದನ್ನ
ನನ್ನ ಮುಖದ ಮೇಲೆ ಓದಿಕೋತಾರಲ್ಲ
ಜನ
ಅದು ಯಾವ ಭಾಷೇಲಿ
ಅಂತ ಕೇಳೋದು ಹೇಗೆ?


ಸಿಡ್ನಿಯಲ್ಲಿ ಹುಲ್ಲು
ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು
ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ
ಮೂಲೆಯಲ್ಲಿ
ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು
ಶಿಕಾಗೋದ ಏ.ಕೆ.ರಾಮಾನುಜಂ
“ಹಚ್ಚಗೆ” ನಗುತ್ತಾರಲ್ಲ!


ಆಗಸಕ್ಕೇ ಪರದೆ ಹಿಡಿಯಲು ಹೊರಟ
ಮರ
ನಾಕು ಜನಕ್ಕೆ ಸೊಂಪಾದ
ನೆರಳಂತೂ ಆಗಿಯೇ ಆಯಿತು.

ದಟ್ಟತೆ ತೆಳುವಾಗೋದನ್ನು ಸಹಿಸಲಾಗದೆ
ಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟ
ಗೆಳತಿ
ಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗ
ನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.

ಪದ್ಯಕ್ಕೆರಡು
ಕಾಲಿರೋದು ಒಳ್ಳೇದಂತೆ
ನಿಲ್ಲೋದಕ್ಕೆ
ಜತೇನಲ್ಲಿ ಕುಣಿಯೋದಕ್ಕೆ
ಸಿಟ್ಟಾದವರ ಕೈಗೆ ಸಿಕ್ಕದ ಹಾಗೆ
ಓಡಿ
ಬಚ್ಚಿಟ್ಟುಕೊಳ್ಳೋದಕ್ಕೆ.

ತಲೆಯಲ್ಲೇಳುವ ಅನುಮಾನ
ಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು
ಕಗ್ಗಂಟಾಗಿ ಎದೆಗಿಳಿದು
ಗಪ್ಪಾಗಿ ಬಿಗಿಯುವವರೆಗೂ
ಪದ್ಯ
ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ…!

ತಾನು ಬರೆದ ಬೃಹತ್‌ಗ್ರಂಥವನ್ನು
ಪಕ್ಕಕ್ಕೆ ಸರಿಸಿ
ನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;
ಅದರೊಳಗಿರುವ ಜೊಳ್ಳಿನ ಬಗ್ಗೆ
ನನ್ನ ಟೀಕೆಗೆ ಹೆದರಿಯೇ ಇರಬೇಕೆಂದು
ಅನುಮಾನಿಸಿದಾಗ
ಅವನ ಸಿಟ್ಟಿಗೆ ಪಾರವೇ ಇಲ್ಲ!

ಬಿಸಿಲೇರುವವರೆಗೂ
ನನ್ನ ನಲ್ಲನ ತೋಳುಗಳ ನಡುವೆ
ಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.
ಕೂದಲ ಜಿಡುಕಲ್ಲಿ ಆಲಸಿ ಬೆರಳು.
ಬಾಚಿ ಬಿಗಿದು ಕಟ್ಟಿದ ಕೂದಲ
ಏಕಾಂಗಿ ಗೆಳತಿ
ಏನೋ ನೆಪಮಾಡಿ ಸಿಡುಕುತ್ತಾಳೆ-
ಎದುರಾಡಲಿಲ್ಲ
ಎಂದಿನಂತೆ!

tonge-neelu.jpg

ಬೆಳದಿಂಗಳಲ್ಲಿ ಬೆಳ್ಳಗೆ ನಿಂತ
ಅಪಾರ್ಟ್‌ಮೆಂಟಿನ ಎದುರಿನ ಹೆದ್ದಾರಿಯಲ್ಲಿ
ದಾರಿ ಕಾಣದೆ
ಎರಡು ಬಾತುಕೋಳಿಗಳ
ಚಟ್ಟೆಗಾಲಿನ ತಡಕಾಟ

 

boots.jpg

ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ “ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್‌” ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.

ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ “ನೀನು ಏನನ್ನು ವಿರೋಧಿಸುತ್ತಿದ್ದೀಯ?” ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.

ಸಿಡ್ನಿಯಲ್ಲಿ ವಸಂತ ಛಳಿಗಾಲದ ಬಟ್ಟೆ ಕಳಚಿ ಹೊಸ ಉನ್ಮಾದದಿಂದ ಕುಣಿಯುತ್ತಿದೆ. ಹಚ್ಚವಾಗಿ ನಗುವ ಬಿಸಿಲು. ಮಳೆ ಬಂದು ತೊಳೆದಿಟ್ಟ ನೆಲದಲ್ಲಿ ಹಸಿರು ಚಿಗುರು. ಎಲ್ಲ ಹೋದ ವರ್ಷದಂತೆಯೇ. ಆದರೆ ಈ ವರ್ಷ ಆಸ್ಟ್ರೇಲಿಯಾದ ಬರಗಾಲ ಕೊನೆಗಾಣುತ್ತಿರಬಹುದು ಎಂಬ ಉಲ್ಲಾಸವೂ ಇದೆ. ಅದು ಮನಸ್ಸನ್ನು ಹಗುರಾಗಿಸಿದೆ.

ಸೋಲ್ಸನಿತ್ಸಿನ್ ಸೈಬೀರಿಯಾದಲ್ಲಿ ಅಮಾನುಷವಾಗಿ ತಾನೇ ಬಂಧಿಸಲ್ಪಟ್ಟಿದ್ದ. ಹತ್ತಾರು ವರ್ಷ ಮಾರಣಾಂತಿಕ ಹಿಮದಲ್ಲಿ ಹಿಂಸೆ ಅನುಭವಿಸಿದ್ದ. ಸಾಯದೆ ಉಳಿದು ಪಾರಾಗಿ ತನ್ನ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ. ಇವಾನ್‌ ಪಾತ್ರದ ಮೂಲಕ ತನ್ನ ಇಡೀ ಅನುಭವವನ್ನು ಒಂದು ದಿನದ ಆಗು ಹೋಗಿನಲ್ಲಿ ಪ್ರತಿಫಲಿಸುತ್ತಾನೆ. ಅವನು ಅಲ್ಲಿ ಯಾಕೆ ಬಂಧನದಲ್ಲಿದ್ದಾನೆ? ಕತೆಯ ಮೂರನೇ ಒಂದು ಭಾಗದವರೆಗೂ ಕತೆಗಾರ ಹೇಳುವುದಿಲ್ಲ. ನಂತರ ಅದನ್ನು ಸಹಜವಾಗಿ ಹೇಳುತ್ತಾನೆ. ಆದರೆ, ಅಷ್ಟರಲ್ಲಿ ಅದು ಗೌಣ ಎಂದು ಅನಿಸುವಲ್ಲಿಗೆ ಓದುಗ ಬಂದು ನಿಂತಿರುತ್ತಾನೆ. ಅದೊಂದು ಅಚ್ಚರಿ, ಆದರೆ ಸಹಜವೂ ಕೂಡ.

ನಮ್ಮ ವಯ್ಯಕ್ತಿಕದ ಆಚೆಗೆ ನಡೆಯುವ ಅನ್ಯಾಯ ನಮಗೂ ಸಂಬಂಧಪಟ್ಟಿದ್ದು. ಏಪೆಕ್ ಪ್ರೊಟೆಸ್ಟ್ ಬಗ್ಗೆ ನನ್ನನ್ನು ಪ್ರಶ್ನಿಸಿದವರಿಗೆ ಅದನ್ನು ಹೇಗೆ ಹೇಳಲಿ? ಮಾನವೀಯತೆ ಇಲ್ಲದ ಪರಿಸರ ನನ್ನ ಮಾನವೀಯತೆಯನ್ನೂ ಕಸಿದುಕೊಳ್ಳುತ್ತದೆ. ಹೇಗೆ ಅದನ್ನು ಅರ್ಥಮಾಡಿಸಲಿ? ಆರ್ಥಿಕ ಏಳಿಗೆಗೆ ಬಲಿಯಾಗುವವರು ಯಾರು? ಅವರು ಯಾಕೆ ಬಲಿಯಾಗಬೇಕು? ಈ ಪ್ರಶ್ನೆಗಳನ್ನೆಲ್ಲಾ ಹೇಗೆ ಉತ್ತರವನ್ನಾಗಿ ಮಾರ್ಪಡಿಸಿ ಪ್ರಶ್ನಿಸದವರ ಮುಂದೆ ಹಿಡಿಯಲಿ? ಒಳಗೊಳಗೇ ಇದೆಲ್ಲದರ ಜತೆ ಗುದ್ದಾಡುತ್ತಿದ್ದೇನೆ. ಆದರೆ ಹೊರಗೆ ನಗುತ್ತೇನೆ.

ವಸಂತದ ಬಿಸಿಲಿಗೆ ಮುಖವೊಡ್ಡಿ ಅಸಾಧಾರಣ ಸ್ವಾಸ್ಥ್ಯ ಅನುಭವಿಸುತ್ತೇನೆ. ವಸಂತಕ್ಕೆ ತಾನು ಕೊಂಚ ಬೇಗ ಬಂದುಬಿಟ್ಟೆನೆ ಎಂಬ ಅನುಮಾನ. ಮತ್ತೊಂದು ವಾರ ಮಳೆ, ಛಳಿ. ಜನರಿಗೂ ಕೊಂಚ ಗಲಿಬಿಲಿ. ನಿಜವಾಗಿಯೂ ಇದು ವಸಂತವೇ? ವಸಂತ ಬಂದು ಬಿಟ್ಟಿತೆ? ಮರೆತು ಬಿಟ್ಟೆನೆ? ವಸಂತವೆಂದರೆ ಇದೇನೆ? ಇದು ನೋಡಿ ಯಾವಾಗಲೂ ಹೀಗೆ. ಕಾಲ ಬದಲಾಗುವುದು ಸ್ವಿಚ್ ಹಾಕಿದ ಹಾಗಲ್ಲ. ವಿದ್ಯುತ ದೀಪ ಹಾಕಿ ಆರಿಸಿದಂತಲ್ಲ. ಅದು ನಿಧಾನಕ್ಕೆ ಅನುಮಾನದಿಂದ ಜರುಗುತ್ತದೆ. ಅದಕ್ಕೆ ಹಲವಾರು ಸಣ್ಣ ಸಣ್ಣ ಒತ್ತಡಗಳಿರಬೇಕಾಗುತ್ತದೆ. ಅದನ್ನು ನಾನು ನೀವು ತರಬೇಕಷ್ಟೆ. ಸಣ್ಣ ಸಣ್ಣ ಪ್ರಮಾಣದಲ್ಲಾದರೂ ಸರಿಯೆ.

ಸೋಲ್ಸನಿತ್ಸಿನ್ ವಿವರಿಸುವ ದಿನವೂ ಅದರ ಹಿಂದಿನ ದಿನದಿಂದ ಬೇರೆಯಾಗಿ ಕೊಯ್ದಿಟ್ಟದ್ದಲ್ಲ. ಹಿಮದಲ್ಲಿ ಇಡೀ ದಿನ ಒದ್ದಾಡಿ ರಾತ್ರಿ ತನ್ನ ಹಾಸಿಗೆಯ ಹರಕು ಬಟ್ಟೆ, ತೂತು ಕಾಲುಚೀಲಗಳಲ್ಲೇ ಶಾಖ ಹುಟ್ಟಿಸಿಕೊಳ್ಳುವುದು. ಮತ್ತೆ ರೋಲ್-ಕಾಲ್ ಕರೆದು ಬಿಟ್ಟಾರು ಎಂದು ಹೆದರುತ್ತಾ ದೇಹ ನಿದ್ದೆಗಿಳಿಯುವುದು. ಆ ನಿದ್ದೆಯೊಂದೆ ಹಿಂದಿನ ದಿನದಿಂದ ಮುಂದಿನ ದಿನವನ್ನು ಬೇರ್ಪಡಿಸುವುದು. ಓದುತ್ತಿರುವ ವಸಂತದಲ್ಲಿ ನನ್ನನ್ನು ಇವೆಲ್ಲಾ ನಡುಗಿಸುತ್ತದೆ. ಅವನಿಗೆ ನಿದ್ದೆ ಅಗತ್ಯ. ಆದರೆ ಇವಾನ್ ಮಾಡುವ ನಿದ್ದೆ ಎಚ್ಚರ ತುಂಬಿದ ನಿದ್ದೆ. ನಿದ್ದೆಯಲ್ಲೂ ತಪ್ಪು ಮಾಡಿಬಿಟ್ಟರೆ?

ಏಪೆಕ್ ಪ್ರೊಟೆಸ್ಟಿಗೆ ಹೋಗಲು ಏನು ಕಾರಣ ಎಂದು ಕೇಳುವುದೇ ಒಂದು ರಾಜಕೀಯ ಪ್ರಶ್ನೆ ಅನ್ನಿಸಿತು. ಹಲವಾರು ಕಾರಣ ಕೊಟ್ಟು ಸಮರ್ಥಿಸಿಕೊಳ್ಳಬಹುದು. ನಾನು ಅನ್ನುವ ಇದು, ನಾನೊಬ್ಬನೇ ಅಲ್ಲ. ನಾನು ನನ್ನ ಸಮುದಾಯ, ನಾನು ನನ್ನ ಸಮಾಜ ಕೂಡ. ಅದಕ್ಕೆ ಹಿಡಿದ ಹುಳುಕು ನನಗೂ ಹಿಡಿದ ಹಾಗೆ. ನಾನು ನಿದ್ದೆ ಮಾಡುತ್ತಿಲ್ಲ. ಎಚ್ಚರವಾಗಿದ್ದೀನಿ. ಹಾಗೆಂದು ನನಗೆ ನಾನೇ ಹೇಳಿಕೊಳ್ಳುವ ಒಂದು ವಿಧಾನ ಇದು. ಚೆನ್ನಾಗಿ ನಿದ್ದೆ ಮಾಡವಂಥ ಸ್ವಸ್ಧ ಪರಿಸರದಲ್ಲಿ ಏಕೆ ನಿದ್ದೆಗೆಡಬೇಕು? ಎಚ್ಚರ ಸವಲತ್ತಲ್ಲ. ಎಚ್ಚರ ಹೊಟ್ಟೆ ತುಂಬಿದವರ ಸೌಖ್ಯವಲ್ಲ. ಅದೊಂದು ಅಗತ್ಯ. ಅಸಹನೆಯನ್ನು ಹಂಚಿಕೊಳ್ಳುವುದೂ ಅಷ್ಟೆ.

ಸೋಲ್ಸನಿತ್ಸಿನ್ ಕತೆಯನ್ನು ೧೯೬೨ರಲ್ಲಿ ಸೋವಿಯತ್ ಪ್ರಧಾನಿ ಕೃಷೇವ್‌ನ ಪರವಾನಗಿ ಪಡೆದು ಪ್ರಕಟಿಸಿದರಂತೆ. ಅದು ಕಾಲಮಾನದಲ್ಲಿ ತುಂಬಾ ದೂರದ ಸಂಗತಿ. ರಾಜಕೀಯ ಪರಿಸ್ಥಿತಿಯಲ್ಲೂ ಕೂಡ. ಹಾಗಾಗಿಯೇ ಇವಾನ್ ಕತೆ ಚರಿತ್ರೆಯಂತೆ ಕಾಣುತ್ತದೆ. ಆದರೆ ಒಂದು ವಿಪರ್ಯಾಸ ನೋಡಿ. ಮರಣ ಪದ್ಯ ಕೂಡ, ಲೋಕದಲ್ಲೇ ಅತಿ ಹೆಚ್ಚು ಸ್ವಾತಂತ್ಯ್ರವಿರುವ ಅಮೇರಿಕದಂಥ ದೇಶದ ಆಡಳಿತದ ಪರವಾನಗಿ ಪಡೆದು ಪ್ರಕಟವಾಗಬೇಕಾಯಿತು.painting.jpg

ನೋಡಿ - ನಿದ್ದೆ ವಿಪರ್ಯಾಸಗಳನ್ನು ಒಂದಕ್ಕೊಂದು ಹೊಂದಿಸಿಬಿಡುತ್ತದೆ. ಅದನ್ನು ಕನಸಾಗಿ ಹೆಣೆದು ನಾವು ಅದರಲ್ಲಿ ಕಳೆದುಹೋಗುವಂತೆ ಮಾಡಿಬಿಡುತ್ತದೆ. ಎಚ್ಚರ ಮಾತ್ರ ಅದರೊಡನೆ ಗುದ್ದಾಡ ಬೇಕಾಗುತ್ತದೆ.

ವಸಂತದ ಅನುಮಾನ ಈಗ ವಿಷಾದವಾಗಿ ಕಾಡುತ್ತದೆ. ವಿಷಾದದಿಂದ ಕೈಚೆಲ್ಲದೆ, ವಿಷಾದವನ್ನು ಇಟ್ಟುಕೊಂಡೂ ಎಚ್ಚರವಾಗಿರುವುದು ಪಡಬೇಕಾದ ಪಾಡಷ್ಟೇ ಅಲ್ಲ. ಅದು ಜವಾಬ್ದಾರಿ ಕೂಡ. ಅದನ್ನು ನನಗೆ ನಾನೇ ಆಗಾಗ ಹೇಳಿಕೊಳ್ಳುವುದೂ ಮುಖ್ಯ. ಅದು ಯಾವ ರೀತಿಯಲ್ಲಾದರೂ ಆಗಬಹುದು.

ಇವಾನ್ ಹಿಮದ ಆಳದಲ್ಲಿ,
ವಸಂತಕ್ಕೆ ಎದುರು ನೋಡುತ್ತಾ,
ಸಣ್ಣಪುಟ್ಟ ಪ್ರತಿರೋಧವನ್ನು ತೋರಿಸುತ್ತಾ ಬದುಕುಳಿದ ಹಾಗೆ,
ತೋರಿಸಿದ್ದರಿಂದಲೇ ಬದುಕುಳಿದ ಹಾಗೆ…

ಯಾಕೆ
ಪದ್ಯ ಹುಟ್ಟುವ ಮೊದಲೇ
ಪದಗಳ ಕುಲಾವಿಯ ಸಡಗರ?
ಹುಟ್ಟಿದ ಮೇಲೋ-
ತೊದಲು, ಜೊಲ್ಲು,
ಅಕಸ್ಮಾತ್
ನಿದ್ದೆಯಲ್ಲೇ ನಗುವ ಚಮತ್ಕಾರ!

ವಕ್ರೋಕ್ತಿ ಪಂಡಿತನಿಗೆ
ಒಳಗೊಳಗೇ
ಬಾಣದಂತೆ ನುಡಿವ ಹಂಬಲವಂತೆ;
ಅದಕ್ಕಾಗಿ ಮನಸ್ಸನ್ನು ಬಿಲ್ಲಂತೆ
ಬಗ್ಗಿಸುವುದು ತನ್ನಿಂದಾಗದು
ಎಂದು ಕೊಂಕಾಡಿ ನಕ್ಕನಂತೆ.

ಪದ್ಯದ ಬೇಟೆ ಆಡಿ
ಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆ
ಕುಲುಕುಲು ನಗುತ್ತಾ
ಚಿಗರೆಯಂತೆ ಕುಣಿವ
ಪದ್ಯದ
ಕ್ರೌರ್ಯ ಮತ್ತು ಉಪಟಳ
ಹಾಸ್ಯ ಮೀರಿದ ವಾಸ್ತವ.

ತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.

ಪೋಯಮ್ಸ್ ಫ್ರಂ ಗ್ವಂಟಾನಮೋ: ದ ಡಿಟೈನೀಸ್ ಸ್ಪೀಕ್
ಸಂಪಾದಕ : ಮಾರ್ಕ್ ಫಾಲ್ಕಾಫ್

ಇದು ಗ್ವಂಟಾನಮೋದಲ್ಲಿನ ಹದಿನೇಳು ಸೆರೆಯಾಳುಗಳ ಇಪ್ಪತ್ತೆರಡು ಪದ್ಯಗಳ ಪುಟ್ಟ ಪುಸ್ತಕ. ಈಗಷ್ಟೇ ಪ್ರಕಟಗೊಂಡಿದೆ. ಇದರ ಸಂಪಾದಕ ಬಂಧಿತರ ಲಾಯರ್‍ನಾಗಿ ಕೆಲಸ ಮಾಡಿದಾತ. ಅವರು ಬರೆದ ಪದ್ಯಗಳನ್ನು ಕದ್ದು ಹೊರಗೆ ಜಗತ್ತಿಗೆ ತಂದಾತ. ಈಗ ಪೆಂಟಗಾನ್‌ ಒಪ್ಪಿಗೆ ಕೊಟ್ಟ ಪದ್ಯಗಳನ್ನು ಮಾತ್ರ
ಈ ಪುಸ್ತಕದಲ್ಲಿ ಪ್ರಕಟಿಸಿದ್ದಾನೆ.

ಇಷ್ಟು ವರ್ಷಗಳಲ್ಲಿ ಗ್ವಂಟಾನಮೋದ ನೀರವ ಮೌನದಿಂದ ಹೊರಬಂದಿರುವ ಒಂದೇ ದನಿ ಇದು.

ಪುಸ್ತಕದಲ್ಲಿರುವ ಈ ಒಂದು ಪದ್ಯದ ಕವಿ ಬಹರೇನಿನ 33 ವರ್ಷದ ಜಮ್ಹಾ ಅಲ್ ದೊಸರಿ. ೨೦೦೧ರಿಂದ ಗ್ವಂಟಾನಮೋದಲ್ಲಿ ಯಾವುದೇ ಕೇಸಿಲ್ಲದೆ ಸೆರೆಯಲ್ಲಿದ್ದಾನೆ. ಈತ ಹತ್ತಾರು ಬಾರಿ ಜೀವ ತೆಗೆದುಕೊಳ್ಳಲು ಪ್ರಯತ್ನಪಟ್ಟಿದ್ದಾನೆ.

ಈತನಿಗೆ ಮನೆಯಲ್ಲಿ ಪುಟ್ಟ ಹೆಣ್ಣು ಮಗಳಿದ್ದಾಳೆ. ತಂದೆ ಮಾರಣಾಂತಿಕ ಬೇನೆಯಿಂದ ಬಳಲುತ್ತಿದ್ದಾನೆ. ಸಾಯುವ ಮುಂಚೆ ಮಗನನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾನೆ.

ಅನುವಾದವನ್ನು ಬರೆದು ಹಾಕುವ ಬದಲು ಹೇಳಬೇಕು, ನೀವು ಕೇಳಬೇಕು ಅನಿಸಿದೆ.

ಈ ಕೆಳಗೆ ಕೇಳಿ ಅವನ death poem ಎಂಬ ಪುಟ್ಟ ಪದ್ಯದ ಕನ್ನಡ ರೂಪ:
http://home.exetel.com.au/anivaasi/maranapadya.mp3

ಕೊಲೆಯ ಕತೆ ಹೇಳಿ ಮೈ ನಡುಗಿಸಿ
ನಡುರಾತ್ರಿ ಮಾಯವಾಗುವ ನಲ್ಲ
ಮುಂಜಾವದ ಕನಸಲ್ಲಿ ಕಾಣಿಸಿಕೊಂಡು
ನಾಚಿಕೆ ಬಿಟ್ಟು ತಬ್ಬುವುದು
ಆಕಸ್ಮಿಕವಲ್ಲ
ಅವನ ಇನ್ನೊಂದು ಮಗ್ಗುಲು ಅಷ್ಟೆ.

ಸಂದಣಿಯಲ್ಲೆಲ್ಲೋ
ಅಕಸ್ಮಾತ್ ಕಿವಿಗೆ ಬಿದ್ದ
ಯಾರದೋ ತುಂಡು ಮಾತು
ಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿ
ದಿನವಹಿ ಮಾತುಗಳನ್ನು
ಕರುಣೆಯಲ್ಲಿ ತೊಳೆಯುತ್ತದೆ.

“ಕಾಲಚಕ್ರ ಉರುಳಿದಂತೆ
ಬದುಕಲ್ಲಿ ಬಂದದ್ದು ಹೋಗುತ್ತದೆ,
ಹೋದದ್ದು ಬರುತ್ತದೆ”
ಎಂಬ ಅವನ ಉಪದೇಶ ಕೇಳಿ
-”ಆ ಚಕ್ರದ ನಡು ಎಲ್ಲಿದೆ?”
-”ಯೌವ್ವನ ಯಾವಾಗ ಮರಳತ್ತೆ?”
ಎಂದೆಲ್ಲಾ ಅವನನ್ನು ಮುದ್ದಿಸಿ
ಚರ್ಚೆಯನ್ನೇ ನಾಚಿಸಿಬಿಟ್ಟಳು ತುಂಟಿ.

ಕಿವಿಯಲ್ಲಿ ಐಪಾಡ್
ಬೆಳೆದವನ ಪಕ್ಕದಲ್ಲೇ
ಗಳಗಳ ಅತ್ತರೂ ಅವನು
ನಿಶ್ಚಿಂತ…

ಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿ
ನನ್ನ ಮುಷ್ಟಿಯಲ್ಲಿ ಕೊಸರುವಾಗ
“ಮಹಾಭಾರತದಲ್ಲೇ ಹಾದರವಿದೆ…” ಎಂಬ ಅವನ
ಒಡಕು ದನಿಯ ಸಣ್ಣ ಮಾತು
ನನ್ನ ಮುಟ್ಟದೆ
ಅಷ್ಟು ದೂರ ನಡುಗಾಳಿಯಲ್ಲಿ
ತತ್ತರಿಸಿತು.

ಮರ ಕಡಿದು
ನೆಟ್ಟ ಲೈಟ್‌ ಕಂಬದ ತುದಿಯಲ್ಲಿ
ಎರಡು ಮರಿ ಹಕ್ಕಿಗಳು
ಕೊಕ್ಕಿಗೆ ಕೊಕ್ಕು ತಿಕ್ಕುತ್ತಿದ್ದವು
ನಿರಂತರ ಪ್ರೇಮದ ಮುಗ್ಧತೆಯಲ್ಲಿ.

ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
“ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆ
ನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆ
ನಿನ್ನ ಬೆಳದಿಂಗಳಲ್ಲಿ ಕಗ್ಗತ್ತಲಲ್ಲಿ ಪ್ರೀತಿಸಿದ್ದೆ”

ಈಗ ಇಲ್ಲಿ ಕೂತು ಮತ್ತೆ ನನ್ನ ಹರಕು ನೆನಪಲ್ಲಿ
ಪ್ರೀತಿಸುತ್ತೇನೆ
ನಿನ್ನ
ಪ್ರೀತಿಯ ದಿನಗಳನ್ನು
ರಾತ್ರಿಗಳನ್ನು
ರಸ್ತೆ ಕಾಲುದಾರಿ ತಿಪ್ಪೆಗಳನ್ನು
ಬೆಟ್ಟ ಕೊಳ ಕೊಳಚೆಯನ್ನು
ಹಸಿರು ಹುಲ್ಲು ಮತ್ತು ಕೆಸರನ್ನು
ನನ್ನ ಹರಕು ನೆನಪಲ್ಲಿ
ಈಗಲೂ ಪ್ರೀತಿಸುತ್ತೇನೆ ಎಲ್ಲವನ್ನು.

ರೈಲು ಹೊರಟಾಗ
ಚಿಲಿಪಿಲಿ ನಗುವಿನ ಗೆಳತಿಯರು-
ತಮ್ಮ ಊರು ಬಂದಾಗ
ಮೌನ ತೊಟ್ಟು ಇಳಿದರೆ
ಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರ
ರೈಲಿನ ಶಿಳ್ಳೆಯ ಜತೆ
ಜಗಳಕ್ಕಿಳಿಯಿತು.

ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯ
ಮೋಹ ಹಾಗು ಕಾಮದ ಕುರುಡಿಂದ
ಹುಚ್ಚಾಗದೆ ಹೋದರೆ

ಯವ್ವನದ ಸೊಕ್ಕು
ದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯ
ಕಾಟಕ್ಕೆ ಕಂಗೆಡದೇ ಹೋದರೆ

ನಡುವಯಸ್ಸಿನ ಬಿರುಸಲ್ಲೇ
ಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನು
ತಪ್ಪಿಸಲಾದೀತೆ?

ಪಯಣಗಳಿಂದು ತಲುಪುವುದಕ್ಕಲ್ಲ.
ತಲುಪಿದರೂ ಮತ್ತೆ ಹೊರಡುವುದಕ್ಕೆ
ತಂಗುದಾಣಗಳೇ ಎಲ್ಲ ಚಣ ನಿಂತು
ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.
ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿ
ಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ.

ಇಲ್ಲಿರುವರಿಗೆ ಅಲ್ಲಿರುವ ಕನಸು, ಅಲ್ಲಿರುವರಿಗೆ ಇನ್ನೆಲ್ಲಿಯೋ ಕಣ್ಣು
ತಲುಪಿದರೂ ಗೊತ್ತಿರದೆ ಇರಬೇಕಾದ್ದು ಇನ್ನೆಲ್ಲೋ
ಅನ್ನಿಸುವ ಗಗನಚಿತ್ರದ ಹಾಗೆ;
ಜತೆಯಲ್ಲೇ ನಡೆದೂ ಬೇರೆಲ್ಲೋ ಮುಟ್ಟುವ ಬಗೆಗೆ
ಆತಂಕ ಯಾಕೆ?
ಅವರವರ ಭಾವಕ್ಕೆ ಎಂಬುದೇ ಸರಿಯಲ್ಲವೇ ಸನ್ನಿವೇಶಕ್ಕೆ?

ಅಲ್ಲಿ ಮುಟ್ಟುವ ಬಯಕೆ ಇದ್ದರೂ
ಮುಟ್ಟಿಸುವುದೆ ನೆಚ್ಚಿರುವ ದಾರಿ?
ಚಪ್ಪಲಿ ಸವೆದರೂ ಸವೆದೀತೆ
ದಿಕ್ಕುದೆಶೆ ಆಶೆಗಳ ಅವಶೇಷಗಳ ದಾರಿ?
ಮುರಿದು ಬಿದ್ದಿದೆ ಬೆಳಕು
ಕಂಡು ಕಾಣದ ಹೊಳಪು
ತಬ್ಬಲಿ ಪಯಣಿಗನ ಸಂಗಾತಿಯೆಲ್ಲಿ?

ಕೈಗಂಬ ಎದೆ ಸೆಟೆಸಿ ನಿಂತಿದ್ದ
ಕವಲು ದಾರಿಯ ಮೂಲೆ ಖಾಲಿ;
ನಿನ್ನ ಅಂಗೈಗೇ ಬಂದು ಹುಗಿದು ನಿಂತಿದೆ ಕಂಬ
ಬೇಕಾದತ್ತ ತಿರುಗಿಸಿಕೊ; ಹುಮ್ಮಸ್ಸು
ಕಡಿಮೆಯಾಗದ ಹಾಗೆ ನೋಡಿಕೋ
ಅಲ್ಲಿ ತಲುಪುವ ಆಸೆ ಬಿಟ್ಟು.
ನೀನು ಅಗ್ರೇಸರನಲ್ಲ, ವಿದೂಷಕನೂ ಅಲ್ಲ,
ಎದುರಾಳಿಯ ಎದೆಗಾರಿಕೆ ಮೊದಲೇ ಇಲ್ಲ
ಹಾಗೆಂದು ಅಳಬೇಡ, ತಲುಪದಿದ್ದರೂ ನೆನಪಿಡು
ಪಯಣ ಬಿಡಬೇಡ.
ಬೇರೆಲ್ಲ ಮರೆತರೂ
ಇದು ಮರೆಯತಕ್ಕದ್ದಲ್ಲ-
ಪಯಣಗಳಿಂದು ತಲುಪುವುದಕ್ಕಲ್ಲ.

ಸಂತ ಕವಿಯ
ಪೋಲಿ ಪದ್ಯದ ಸೊಲ್ಲುಗಳೆಲ್ಲಾ
ಭಜನೆಯಂತಿದೆ ಎಂಬ ಪೋಲಿಗಳ,
ಪೋಲಿಯಾಗಿದೆ ಎಂಬ ಭಕ್ತಾದಿಗಳ
ಚೀತ್ಕಾರ-
ಸಂತ ಕವಿಯ ಗಂಟು ಮುಖದಲ್ಲಿ
ನಗುವಿನ ಸಣ್ಣ ಗೆರೆ ಎಬ್ಬಿಸಿದ್ದು ನೋಡಿದಿರ?

ಜಾಣ ಜಾಣೆಯರ “ಲಂಕೇಶ್ ಪತ್ರಿಕೆ”ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! Read the rest of this entry »

ನನ್ನ ಬಳುಕದ ಮನಸ್ಸಿನ ಮೇಲೆ ನಿನ್ನ ನೆರಳು
ನೆರಳಲ್ಲೂ ಕೆಂಪು ಹೂ
ಗಿಡದ ಚಿಗುರು.
ನಿನ್ನ ತೊನೆಯುವ ಮೈ ಮೇಲೆ ನನ್ನ ನೆರಳು
ತೇವದಲ್ಲಿ
ಮಣ್ಣುಳ
ಜಿಗಣೆ
ಇರುವೆಗೂಡು.

ನನ್ನ ಚಂದದ ತುಟಿಗಳನ್ನು
ನೋಡಲು ನಿನಗೆ
ಡೌಲಿಗಿಂತ ನಾಚಿಕೆಯಾಗುವುದೇ
ನನಗೆ ಇಷ್ಟ.
ಆದರೆ ನಾಚಿಕೆ ಮುಚ್ಚಲು ಹೋಗಿ ನೀನು
ತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!

“ನನ್ನ ಕನಸಿನ ಪಕಳೆಯಲಿ ನೀ ನಿದ್ದೆ ಮಾಡುವ ಹುಡುಗನಂತೆ
ನಿನ್ನ ಕನಸಿನ ನೆರಿಗೆಯಲಿ ನಾ ಸುತ್ತಿ ಅಲೆಯುವ ಹುಚ್ಚಿಯಂತೆ”

ಎಷ್ಟು ತಾಳಬದ್ಧವಾದರೇನು ಬಂತು-
ನನ್ನ ಕನಸಲ್ಲಿ ನಿನ್ನ ಉಡಾಫೆ
ನಿನ್ನ ಕನಸಲ್ಲಿ ನನ್ನ ಮಗ್ನತೆ
ಗೊತ್ತಾಗದ ಮೇಲೆ!

ನಿನ್ನ ಕುರುಡಿಗೆ
ನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳು
ಇವುಗಳದೇ ಸಂಭ್ರಮ

ನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನ
ಮತ್ತು ಗಟ್ಟಿ ದನಿಯಾಳದ ನಡುಕ
ನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆ
ಮೌನವಾಗಿ.

ಮಳೆಗೆ ಹಿಡಿದ ಕೊಡೆಯ ನೆರಳು
ಶಲ್ಯವಿಳಿದ ನರಿಯ ಹೆಗಲು
ಗೆಜ್ಜೆತೊಟ್ಟ ಕಾಗೆ ಕಾಲು
ಹೊಳೆವ ಹನಿಯ ತೋರಣ
ದುಗುಡ ಕೇಕೆ ದಿಬ್ಬಣ

ಹೇಳೊ ಹುಡುಗಾ-
ಒಣಗನಸಿನ ಬಣವೆಯಲ್ಲಿ
ಹುಡುಕುವೆಯಾ ಕಳೆದ ಹಸಿರು?

ಇಲ್ಲಿ ಉತ್ತರಕ್ಕೆ ತಿರುಗಿ
ಕಾದ ಸೂಜಿ
ಗಲ್ಲು ಮನಸು!

ಪ್ರೇಮದಮಲಿಳಿದ ಮೇಲೆ
ನನ್ನ
ಬೆಚ್ಚನೆಯ ಸೆರಗಂಚು
ಬರಿ 
ಜರತಾರಿ ಮತ್ತು
ಮೆಲ್ಲುವ ಎಲೆಯಡಿಕೆ ಗಂಟು
ತುದಿಯಲ್ಲಿ

ಭೂಮಿಗಿಂತ ಹಳೆಯದಾದ ಕಡಲು ತೊಳೆವ ಮರಳಿನಲ್ಲಿ-
ಹಕ್ಕಿ-ಕೂಗು ತುಂಬಿಹೋದ ತೋಪಿನಲ್ಲಿ-
ಗೊಂಚಲಹೂ ಹೊನ್ನೆ ಮರದ ನೆರಳಿನಡಿಯ ದಂಡೆಯಲ್ಲಿ-
ನಾವು ಪ್ರೀತಿ ಮಾಡಿದಾಗ-
ಅವನೇ ನನ್ನ ಕಣ್ಣ ತುಂಬ
ಅವನೇ ನನ್ನ ಕಿವಿಯ ತುಂಬ
ಅಪ್ಪಿದಾಗ ಸುಂದರವದು ನನ್ನ ತೋಳು
ಬಿಡಿಸಿಕೊಳ್ಳುವಾಗ ಮಾತ್ರ ಸಣ್ಣಗಾಯಿತು.

ಹೇಗೆ ಇದನು ಬಗೆಯಲೆ?

-Venmanipputi, Kuruntokai 299

(ಎ.ಕೆ.ರಾಮಾನುಜಂರ ಇಂಗ್ಲೀಷ್ ಭಾಷಾಂತರದಿಂದ ಅನುವಾದಿಸಿಕೊಂಡದ್ದು)

Flickr Photos

purandara aradhaneyalli magu

purandara haadu mancha

AfterChristmas

ChristmasLights

More Photos

ಹಳೆಪಟ್ಟಿಗೆ