
Archive for the ‘ಯೋಚನೆ’ Category
ಗೋಮೂತ್ರಮಹಿಮೆ [Banned on ಸಂಪದ]
In ಅಂದಂದು, ಪದ್ಯ, ಯೋಚನೆ on March 27, 2009 at 12:59 pmಭಕ್ತಿ ತುಳುಕಾಡಿ
ಭಗವದ್ಗೀತೆಯ ನ್ಯೂ
ಎಡಿಷನ್-ಹಾರ್ಡ್ ಬೌಂಡ್ ಕಾಪಿಯನ್ನು
Read the rest of this entry »
ದೇವರೆಂಬ ಭ್ರಾಂತು
In ಅಂದಂದು, ನಾಸ್ತಿಕತೆ, ಪುಸ್ತಕ, ಯೋಚನೆ, ವಿಜ್ಞಾನ on February 28, 2009 at 8:56 pm[ಇಂದು, ಫೆಬ್ರವರಿ ೨೮ ಇಂಡಿಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ - ಅದಕ್ಕೆ ನನ್ನ ಪುಟ್ಟ ಕಾಣಿಕೆ]
ಈಗಷ್ಟೆ ಡಾ. ರಿಚರ್ಡ್ ಡಾಕಿನ್ಸನ ‘The God Delusion’ ಪುಸ್ತಕ ಓದಿ ಮುಗಿಸಿದೆ. ಅವನ ಇತರ ವೈಜ್ಞಾನಿಕ ಪುಸ್ತಕದ ಹಾಗೆ ಇದು ಡಾರ್ವಿನನ ವಿಕಾಸವಾದದ ಬಗ್ಗೆಗಿನ
ಪುಸ್ತಕವಲ್ಲ. ಆದರೂ, ದೇವರಂಬ ಭ್ರಾಂತಿನ ಬಗ್ಗೆ ವೈಜ್ಞಾನಿಕ ಕಾಣ್ಕೆಗಳ ಆಧಾರದ ಮೇಲೆ ಹಾಗು ಆ ಕಾಣ್ಕೆಗಳ ಬಗ್ಗೆಗಿನ ಸಂಶೋಧನೆಗಳ ಬಗ್ಗೆಗಿನ ಪುಸ್ತಕ. Read the rest of this entry »
ಆಸ್ಕರ್ ಗೆಲುವಿನ ನೆರಳಲ್ಲಿ…
In ಅಂದಂದು, ಚಲನಚಿತ್ರ, ಯೋಚನೆ on February 23, 2009 at 9:12 pmರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್ ಬಂದಿದ್ದು ಖುಷಿಯಾಯಿತು
ಎ.ಆರ್.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್ ಬಂದಿದ್ದೂ ಖುಷಿಯಾಯಿತು.
ಆದರೆ, ಇದು ಐತಿಹಾಸಿಕ ಘಟನೆ, ಚರಿತ್ರಾರ್ಹ ಸುದ್ದಿ. ಭಾರತಕ್ಕೆ ಸಂದ ಗಣನೀಯ ಆಸ್ಕರ್ ಎಂಬುದೆಲ್ಲಾ ಕೇಳಿ ಇದನ್ನು ಬರೆಯೋಣ ಅನಿಸಿತು.
ಕೊಲೆಗಾರ ಡಾರ್ವಿನ್!
In ಅಂದಂದು, ಯೋಚನೆ on February 13, 2009 at 11:58 amನೆನ್ನೆ ಡಾರ್ವಿನನ ಇನ್ನೂರನೇ ಹುಟ್ಟು ಹಬ್ಬ!

Young Darwin by G.Richmond
ಸೃಷ್ಠಿಕರ್ತನ ಕಲ್ಪನೆಯನ್ನು ಕೊಂದ ಅಪಾದನೆ ಅವನ ಮೇಲೆ ಈವತ್ತಿಗೂ ಇದೆ. ಆದರೆ ಡಾರ್ವಿನ್ ಕೊಲೆಗಾರನಲ್ಲ ಎಂದು ಹೇಳುತ್ತಿರುವವರು ಧರ್ಮಿಷ್ಠರು ಹಾಗು ಸೃಷ್ಠಿ ಕಲ್ಪನೆಯನ್ನು ನಂಬುವ, ಸೃಷ್ಠಿಕರ್ತನಲ್ಲಿ ನಂಬಿಕೆಯಿರುವ “ಧರ್ಮಾತ್ಮರು” ಎಂದರೆ ಆಶ್ಚರ್ಯವಲ್ಲವೆ? ಸೃಷ್ಠಿಕರ್ತನನ್ನು ರಕ್ಷಿಸಲು creationism ಹಾಗು intelligent design ಎಂಬಂತ ಕ್ಷುಲ್ಲಕ ವಾದಗಳನ್ನು ಮುಂದಿಟ್ಟು, ವಿಕಾಸವಾದವೆಂದರೆ “ಬರೇ ಆಕಸ್ಮಿಕ” ಎಂಬ ಅಪಪ್ರಚಾರ ಮಾಡುವವರು ಇಂದಿಗೂ ಇದ್ದಾರೆ. ಅಲ್ಲಿ, ಇಲ್ಲಿಯೂ,ಎಲ್ಲಿಯೂ.
ಆದರೆ ನಮ್ಮಂತವರಿಗೆ ಜಗತ್ತಿನ ಜೀವರಾಶಿಗಳ ಬಗೆಗಿನ ಅವನ ವಿವರಣೆಗಳು ಎಷ್ಟು ಚೆಂದ ಮತ್ತು ಗಟ್ಟಿ ಎಂದು ಹೇಳಬೇಕಿಲ್ಲ. ಈ ನೂರಾರು ವರ್ಷದಲ್ಲಿ ಬಂದ ಹಲವಾರು ಸವಾಲುಗಳ ಎದುರು ಅವನ ವಿಕಾಸವಾದ ಸಮರ್ಥವಾಗಿ ನಿಂತಿದೆ. ಅಷ್ಟೇ ಅಲ್ಲ ಇಂದಿಗೂ ಹಲವು ಹೊಸ ಹೊಸ ಆವಿಷ್ಕಾರಗಳು ಅದನ್ನು ಗಟ್ಟಿಗೊಳಿಸುತ್ತಲೇ ಇವೆ.
ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ
In ಅನುವಾದ, ಪದ್ಯ, ಯೋಚನೆ on February 8, 2009 at 2:31 pmನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದು ಬಗೆಯುತ್ತೇನೆ. ಕೆಲವೊಮ್ಮೆ ಪದ್ಯ ಸೊರಗುವಷ್ಟು ಅದನ್ನು ತಿದ್ದುತ್ತೇನೆ ಕೂಡ.
ಅಧರ್ಮೀಯರಾಗುವುದೇ ದಾರಿ
In ಅಂದಂದು, ಯೋಚನೆ on February 1, 2009 at 12:29 pm
-೧-
ಧರ್ಮ ಅಂದರೆ ಏನು? ಧರ್ಮ ನಮ್ಮ ಬದುಕಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ಸಾಮೂಹಿಕವನ್ನು ಮತ್ತು ವಯ್ಯಕ್ತಿಕವನ್ನು ಅದು ಹೇಗೆ ರೂಪಿಸುತ್ತದೆ? ಈ ಕೆಲವು ಪ್ರಶ್ನೆಗಳು ನಮ್ಮ ಸುತ್ತ ಆಗಾಗ ಏಳುತ್ತವೆ.
ಧರ್ಮ ಅಂದರೆ ದೇವರ ಅಥವಾ ಒಂದು ಅತಿಭೌತಿಕ ಶಕ್ತಿಯಲ್ಲಿ ನಂಬಿಕೆಯನ್ನು ಅನುಮೋದಿಸುವ ವಿಚಾರಧಾರೆ. ಆ ವಿಚಾರಧಾರೆಯನ್ನು ಉಳಿಸಿಕೊಳ್ಳಲು ಅದರ ಸುತ್ತ ಆಚರಣೆ. ಧರ್ಮದ ಆ ದೇವರು ಒಂದೇ ಹೆಸರಲ್ಲಿರಬಹುದು, ಕೋಟ್ಯಾಂತರ ಹೆಸರಲ್ಲಿರಬಹುದು. ಧರ್ಮದ ಈ ನಂಬಿಕೆಯೇ “ಮೂಲ ಬೌದ್ಧ” ಹಾಗು ನಾಸ್ತಿಕತೆಗಳನ್ನು ಧರ್ಮದಿಂದ ಹೊರಗೆ ಉಳಿಸುತ್ತವೆ. ಧರ್ಮಶಾಸ್ತ್ರದವರ ಈ ವಿವರಣೆ ಧರ್ಮದ ಬಗ್ಗೆ ಒಂದು ಮೌಲಿಕ ಆಧಾರದ ವಿವರಣೆ ಅಷ್ಟೆ.
ಹೊಸ ಧರ್ಮಿಷ್ಠರು ಮತ್ತೊಂದು ಅರ್ಥವನ್ನು ಹೇಳುತ್ತಾರೆ : Read the rest of this entry »
ಭೈರಪ್ಪನವರ “ಸಂಶೋಧನೆ”
In ಅಂದಂದು, ಯೋಚನೆ on October 30, 2008 at 6:16 amಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು http://www.christianaggression.org/features_statistics.php ಕೊಟ್ಟರು. ಆ ಬರಹ ಬರೆಯುವಾಗ ಭೈರಪ್ಪನವರ ಅಂಕಿ-ಅಂಶದ ಮೂಲ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಆ ಅಂಕಿ-ಅಂಶ ಬರೇ ತಪ್ಪು ಅನ್ನುವುದಕ್ಕಿಂತ ಹೆಚ್ಚು ಆತಂಕಕಾರಿ ಅನಿಸುತ್ತಿದೆ.
ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!
In ಅಂದಂದು, ಯೋಚನೆ on October 26, 2008 at 8:18 amಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.
ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ. ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು. Read the rest of this entry »
ಈ ಬ್ಲಾಗ್ ಪೋಸ್ಟಿಗೆ ಹೆಸರಿಲ್ಲ.
In ಅಂದಂದು, ಯೋಚನೆ on October 5, 2008 at 10:27 pmಆಗಲೇ ನಿನ್ನ ಹುಟ್ಟುಹಬ್ಬವಾಗಿ ಮೂರ್ನಾಕು ದಿನ ಕಳೆದಿದೆ. ನಿನ್ನ ನೆನಪೇ ಆಗಲಿಲ್ಲ. ಒಂದು ಗ್ರೀಟಿಂಗ್ ಆದರೂ ಕಳಿಸಬಹುದಿತ್ತು. ಈಗ ಒಳ್ಳೊಳ್ಳೆ ಗ್ರೀಟಿಂಗ್ ಕಾರ್ಡುಗಳು ಸಿಗುತ್ತವೆ. ಬಣ್ಣಬಣ್ಣದ್ದು, ಫಳಫಳ ಹೊಳೆಯುವದು. Read the rest of this entry »
ಒಂದು ವಾಚ್ಯ ಹಂಬಲ
In ಅಂದಂದು, ಯೋಚನೆ on September 24, 2008 at 9:44 am
ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.
ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ, ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು
ಬಿಗುಮಾನದ ಚಿತ್ರಗಳು
In ಅಂದಂದು, ಯೋಚನೆ on September 6, 2008 at 8:21 amಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ.
ಕ್ರೌರ್ಯ ಮತ್ತು ಬಲಿ
In ಅಂದಂದು, ಯೋಚನೆ on August 4, 2008 at 8:25 pmಸಾಹಿತ್ಯಕ್ಕೆ ಕೊಡುವ ನೊಬೆಲ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದ ೮೯ ವರ್ಷದ ಅಲೆಕ್ಸಾಂಡರ್ ಸೋಲ್ಸನಿತ್ಸಿನ್ ಅಸುನೀಗಿದ್ದಾನೆ.
ಇನ್ನೊಂದು ಕಾಲದವನೋ ಎನಿಸುವಂತವನು. ಆದರೆ ಎಲ್ಲ ಕಾಲಕ್ಕೂ ಸಲ್ಲುವಂತಹದನ್ನು ಉಳಿಸಿ ಹೋದವನು. ಸ್ಟಾಲಿನ್ನನ ಕ್ರೌರ್ಯವನ್ನು ಬಯಲಿಗೆಳೆದು ಲೋಕಕ್ಕೆ ತಿಳಿಸಿದವನು. ಕಡೆಯವರೆಗೂ ಪ್ರಭುತ್ವದ ಜತೆ ಮುಜುಗರದ ಸಂಬಂಧವನ್ನ ಉಳಿಸಿಕೊಂಡವನು. ಬೋರಿಸ್ ಎಲ್ಸಿನ್ ನೀಡಲು ಬಂದ ರಷ್ಯಾದ ಅತಿ ಉನ್ನತ ಪದವಿ “ಆರ್ಡರ್ ಆಪ್ ಸೇಂಟ್ ಆಂಡ್ರೂ”ವನ್ನು ತಿರಸ್ಕರಿಸಿದವನು. ಅವನ “ಒನ್ ಡೇ ಇನ್ ದ ಲೈಫ್ ಆಫ್ ಇವಾನ್ ಡೆನಿಸೋವಿಚ್” ಒಮ್ಮೆ ಓದಿದರೆ ಸಾಕು, ಮತ್ತೆ ಮತ್ತೆ ಕಾಡುವಂತಹದು. ಸದಾ ಜತೆಗೆ ಉಳಿಯುವಂತಹದು. ಅಮೇರಿಕಾದ ರಾಜಕೀಯ ಹಂದರವನ್ನೂ ಒಪ್ಪಲಾರದೆ – ರಷ್ಯಾ ತನ್ನ ಜಾಡನ್ನು ತಾನೇ ಕಂಡುಕೊಳ್ಳಬೇಕೆಂದು ಒತ್ತಿ ಒತ್ತಿ ಹೇಳಿದವನು. ಎಲ್ಸಿನ್ ಮಹಾ ಗಡಿಬಿಡಿಯಲ್ಲಿ ರಷ್ಯಾದ ಆರ್ಥಿಕ ಸ್ಥಿತಿಯನ್ನು ಹಾಳುಗೆಡವಿದ್ದನ್ನು ಹೀಗಳೆದವನು. ತನ್ನ ಅದಮ್ಯ ಚೇತನದಿಂದ ಈ ಜಗತ್ತಿನ ಅತ್ಯಂತ ಕ್ರೂರ ಪ್ರಭುತ್ವಕ್ಕೆ ಸೆಡ್ಡು ಹೊಡೆದು-ಕೊಲ್ಲುತ್ತಾರೆ ಎಂದುಕೊಳ್ಳುತ್ತಲೇ ಬದುಕಿದವನು. ಬರೆದದ್ದು ನಾಶಮಾಡುತ್ತಾರೆ ಎನ್ನುತ್ತಲೇ ಉಳಿಸಿಕೊಂಡವನು.
ಇನ್ನೆರಡು ದಿನಕ್ಕೆ ಮತ್ತೆ “ಹಿರೋಶೀಮಾ ದಿನ”. ಎರಡನೇ ಮಹಾಯುದ್ಧ ಕೊನೆಗೊಳಿಸಿದ ಅತ್ಯಂತ ಭೀಕರವಾದ ಅನಗತ್ಯ ಹತ್ಯಾಕಾಂಡ. ಅಮೇರಿಕಾದ ಜನರಿಗೆ ಏನೂ ಹೇಳದೆ ಮಹಾಗುಟ್ಟಿನಲ್ಲಿ ಓಪನ್‌ಹೈಮರ್ ನಿರ್ದೇಶನದಲ್ಲಿ ಒಟ್ಟುಗೂಡಿಸಿದ ಅಟಾಮಿಕ್ ಬಾಂಬದು. ನಾಜೀಗಳನ್ನು ಮಟ್ಟ ಹಾಕಲು ಹಲ್ಲು ಮಸೆಯುತ್ತಾ ಕಟ್ಟಿಕೊಂಡಿದ್ದು. ಕೊಂದದ್ದು ಮಾತ್ರ ಜಪಾನಿನ ಸಾವಿರಾರು ಜನರನ್ನು. ಅಂದಿನ ಅಣುಭೌತಿಕ ವಿಜ್ಞಾನಿಗಳೂ ಆ ಕ್ರೌರ್ಯದಲ್ಲಿ ಶಾಮೀಲಗಾಗಿದ್ದನ್ನು ಈಗ ಯಾರೂ ಅಲ್ಲಗಳೆಯಲಾರರು.
ಯೋಚಿಸಿದಂತೆಲ್ಲಾ ಇವೆಲ್ಲಕ್ಕೆ ಇಂಡಿಯಾದ ನಾಯಕರ ಮಾತುಗಳು ಮರುದನಿಗೊಡುತ್ತದೆ. ಪಾಕಿಸ್ತಾನದ ಮೇಲೆ ಹಲ್ಲುಮಸೆಯುತ್ತಾ ಕಟ್ಟಿಕೊಳ್ಳುತ್ತಿರುವ ನಮ್ಮ ಬಾಂಬು ಯಾರನ್ನು ಬಲಿ ಪಡೆಯಬಹುದು ಎಂದು ಎಣಿಸದರೆ ಎದೆ ನಡುಗುತ್ತದೆ. ನಾವೂ ಗುಟ್ಟಾಗಿ ಅಣುಬಾಂಬು ಕಟ್ಟಿದ್ದೇವೆ, ಸಿಡಿಸಿದ್ದೇವೆ. ಅದಕ್ಕೆ ಕಾರಣರಾದ ಇಂಜಿನಿಯರನ್ನು “ವಿಜ್ಞಾನಿ” ಎಂದು ತುಂಬಿ ತುಳುಕುವಂತೆ ಹೊಗಳಿ “ಭಾರತ ರತ್ನ” ಮಾಡಿದ್ದೇವೆ, ಪ್ರೆಸಿಡೆಂಟ್ ಮಾಡಿದ್ದೇವೆ. ಗುಟ್ಟನ್ನೇ ರಾಜಕೀಯ ಹಾಗು ವೈಜ್ಞಾನಿಕ ಮಹಾಮಂತ್ರವನ್ನಾಗಿ ಮಾಡಿಕೊಂಡಿದ್ದೇವೆ. ಬಹುಶಃ ನಮಗೂ ಒಬ್ಬ ಸೋಲ್ಸನಿತ್ಸನ್ ಬೇಕೇನೋ…
ಈವೆಲ್ಲಾ ತಲೆ ಕೆಡಿಸುತ್ತಿರುವಾಗ ಮತ್ತೆ ನಮ್ಮ ದೇವಾಸ್ಥಾನದ ಕ್ರೌರ್ಯಕ್ಕೆ ನೂರಾರು ಪುಟ್ಟ ಮಕ್ಕಳು, ತಾಯಂದಿರು ಹಾಗು ವಯಸ್ಸಾದವರು ಬಲಿಯಾಗಿದ್ದಾರೆ. ಈ ಕ್ರೌರ್ಯಕ್ಕೆ ಸೆಡ್ಡು ಹೊಡೆಯಬೇಕಾದವರೇ ಮತ್ತೆ ಮತ್ತೆ ಬಲಿಯಾಗುತ್ತಿದ್ದಾರೆ.
ಈ ಬಗೆಯಲ್ಲಿ ನಮ್ಮ ಜನರನ್ನೇ ನಾವು ವಿಧಿವತ್ತಾಗಿ ನಿಯತಕಾಲಿಕವಾಗಿ ಬಲಿ ತೆಗೆದುಕೊಳ್ಳಲು ಬಾಂಬುಗಳೂ ಬೇಡ, ಆತಂಕವಾದವೂ ಬೇಡ.
ಧರ್ಮಿಷ್ಟರ ದಂಧೆ
In ಅಂದಂದು, ಯೋಚನೆ on July 15, 2008 at 10:07 pm“ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!” ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು. ಒಪ್ಪಿಗೆಯಾಗದವರು ಒಂದೆರಡು ಕ್ಷಣ ದುರುದುರು ಎಂದು ನೋಡಿ “ಹಾಳಾಗಿ ಹೋಗಲಿ” ಎಂಬಂತೆ ಇನ್ನೊಂದತ್ತ ತಿರುಗಿದರು.
ಜಗನ್ನಾಥನ ತಬ್ಬಲಿ ಮಕ್ಕಳು
In ಅಂದಂದು, ಪದ್ಯ, ಯೋಚನೆ on July 5, 2008 at 11:19 amಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?
ಆ ರಥದಲ್ಲಿ ಕೂತ ಗೊಂಬೆಯ
ಒಳಗೇನೋ ಕಂಡಿತೆನ್ನುವ
ಕೋಟಿ ಕೋಟಿ ಜನ ಕುರುಡುರೇ?
ಅನುಮಾನ ಸಹಜ
ಇರಬಹುದು ಎಂದೇಕೆ ಅನಿಸಲಿಲ್ಲ ನಿನಗೆ?
ನಿನ್ನ ಯಾವುದೋ ತಬ್ಬಲಿತನ
ಕಳಕೊಳ್ಳುವ ತವಕದಲ್ಲಿ
ನಿನ್ನ ಮಕ್ಕಳೀಗ ತಬ್ಬಲಿ
ರಥಚಕ್ರಕ್ಕೆ ಸಿಕ್ಕಿ ಸಾಯುವ ಪುಣ್ಯವಿಲ್ಲದಿದ್ದರೆ
ರಥವೆಳೆಯುವ ಕಾಲಿಗೆ ಸಿಕ್ಕಾದರೂ ಸಾಯಬೇಕು
ಮಕ್ಕಳನ್ನು ತಬ್ಬಲಿ ಮಾಡಬೇಕು.
ಅವರು
ತಬ್ಬಲಿಯಾಗಿ ರಥವೆಳೆಯುವ ಕೈಗಳಾಗಬೇಕು
ತುಳಿದು ಕೊಲ್ಲುವ ಕಾಲುಗಳಾಗಬೇಕು
ಅಯ್ಯೋ,
ರಥಚಕ್ರ ಮಾತ್ರ ತಿರುಗುತ್ತಲೇ ಇರಬೇಕು.
ತಾಯಿಯ ನಾಕನೇ ಮುಖ
In ಪದ್ಯ, ಯೋಚನೆ on June 25, 2008 at 11:43 amಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು “ಮಾಯಿಯ ಮೂರು ಮುಖಗಳು” ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು ಸ್ವಾತಂತ್ಯ್ರದ ಬಗ್ಗೆಯೂ ಇದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಪದ್ಯ. ಆದರೆ ಅದರೊಳಗಿನ ಒಂದು ಅಂಶ ಮಾತ್ರ ನನ್ನ ನೆನಪಿನಲ್ಲಿ ಉಳಿದಿದ್ದೇ ಅದನ್ನು ಮತ್ತೆ ಓದಲು ಪ್ರೇರಣೆಯಾಯಿತು.
Read the rest of this entry »
ಒಂದು ಕೆಟ್ಟ ದಾಸರ ಪದ
In ಪದ್ಯ, ಯೋಚನೆ on June 16, 2008 at 10:01 pmಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ
ಕನ್ನಡದವರಿಗಾದ ಅವಮಾನ
In ಅಂದಂದು, ಯೋಚನೆ on May 1, 2008 at 7:30 pmಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ.
ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ “ಟ್ರೇನ್ಡ್” ದನಿಯಾಗಲಿ, ತೀಡಿತೀಡಿ ನುಣುಪಾದ “ಕಲ್ಚರ್ಡ್” ದನಿಯಾಗಲಿ ನನ್ನಲ್ಲಿ ಉತ್ಸಾಹ ಕೆರಳಿಸುತ್ತಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇಂಡಿಯಾದ ಹಲವಾರು ಜನಪ್ರಿಯ ಹಾಡುಗಾರರ ತೊಂದರೆ ಇದು ಅನಿಸುತ್ತದೆ. ಇರಲಿ ಅದು ಮತ್ತಾವಾಗಲಾದರೂ ಬೇರೆಯಾಗಿಯೇ ಯೋಚಸಲು ಇಟ್ಟುಕೊಳ್ಳುತ್ತೇನೆ.
ಹಂಚಿಕೊಳ್ಳದ ಲೋಕ
In ಅಂದಂದು, ಯೋಚನೆ on April 22, 2008 at 10:12 pmನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ್ಲ ಅನ್ನುವುದು ಬರೇ ಕುತೂಹಲವಷ್ಟೇ ಅಲ್ಲ. ತುಂಬಾ ಮುಖ್ಯ ಕೂಡ.
ಜಿಂಬಾಬ್ವೆ ಯುಗಾದಿ
In ಅಂದಂದು, ಯೋಚನೆ on April 8, 2008 at 5:08 pmಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.
Read the rest of this entry »
ಮುರಿಯುವ ಮಳೆ ಹಾಗು ಮೀರುವ ಮನಸ್ಸು
In ಅಂದಂದು, ಯೋಚನೆ on February 13, 2008 at 8:35 pmಸತ್ಯಕ್ಕೆ ಲಿಂಕ್
In ಕಲ್ಪನೆ, ಯೋಚನೆ on February 10, 2008 at 8:36 pmಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ.
ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
In ಯೋಚನೆ on February 4, 2008 at 8:59 pmಬೆನ್ನ ಮೇಲಿನ ಕೂದಲು
In ಅಂದಂದು, ಕಲ್ಪನೆ, ಯೋಚನೆ on January 28, 2008 at 7:17 amನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? Read the rest of this entry »
ನೀರು ತಬ್ಬುವ ಬಂಡೆ
In ಅಂದಂದು, ಯೋಚನೆ on January 22, 2008 at 9:48 pmಈ ಆಕ್ರಮಣದ ಯುಗದಲ್ಲಿ
ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ
ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ
Read the rest of this entry »
ದೂರ ಕಾಲ
In ಅಂದಂದು, ಯೋಚನೆ on January 16, 2008 at 5:54 amಕೆಲಸದಲ್ಲಿ ಮೊನ್ನೆ ಹೊಸ ಸಾಫ್ಟ್‌ವೇರ್ ಬಗ್ಗೆ ಒಂದಿಬ್ಬರು ಗೊಣಗಿಕೊಳ್ಳುತ್ತಿದ್ದರು. ನಾನು ತಲೆ ತಗ್ಗಿಸಿ ನನ್ನ ಪಾಡಿಗೆ ಕಾಫಿ ಮಾಡಿಕೊಳ್ತಾ ಇದ್ದೆ. ಗೊಣಗಾಟದ ನಡುವಲ್ಲಿ ಒಬ್ಬಳು ಹೇಳಿದ್ದು Read the rest of this entry »
ಮುಗಿದರೂ ಮುಗಿಯದ್ದು
In ಅಂದಂದು, ಯೋಚನೆ on December 31, 2007 at 6:22 pmಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ…
ಸ್ವಾರ್ಥದ ಒಳ್ಳೆತನ ಮತ್ತು ಅಗತ್ಯ. Read the rest of this entry »
ಹರಟೆಯೆಂಬ ಪಾಠಶಾಲೆ
In ಅಂದಂದು, ಕಲ್ಪನೆ, ಯೋಚನೆ on December 26, 2007 at 5:41 pm
ಮೊನ್ನೆ ನಾವು ಕೆಲವರು ಹರಟೆ ಹೊಡೆದ್ದದ್ದರ ಬಗ್ಗೆ ಹೇಳ್ತಾ ಇದ್ದೀನಿ.
ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು. Read the rest of this entry »
ನಾಯಕರ ಸೃಜನತೆ
In ಯೋಚನೆ on December 9, 2007 at 7:13 amಹಿಂದುಳಿದ ದೇಶಗಳ ಅವಸ್ಥೆಗೆ ಜಾಗತಿಕ ಬಲಿಷ್ಟ ದೇಶಗಳನ್ನು ದೂರುವುದು ಆಂಶಿಕ ಸತ್ಯ ಅಷ್ಟೆ ಎಂದು ಇತ್ತೀಚಿನ ನನ್ನ ಬರಹಕ್ಕೆ ಶ್ರೀಕಾಂತರು ಪ್ರತಿಕ್ರಯಿಸಿದ್ದರು. ಅದು ನಿಜವೂ ಹೌದು. ಆದರೆ, ಅದು ಎಷ್ಟಂಶ ಅನ್ನೋದು ಅವರವರ ನಿಲುವಿಗೆ ತಳುಕು ಹಾಕಿಕೊಂಡಿರತ್ತದೆ ಅಲ್ಲವೆ ಎಂದು ಕೇಳಿದ್ದೆ. ಅವರ ಪ್ರತಿಕ್ರಿಯೆ ಬಗ್ಗೆ, ಮತ್ತು ನನ್ನ ಉತ್ತರದ ಬಗ್ಗೆ ಯೋಚಿಸಿದಾಗ ನಾನು ಹಾಗೆ ಯಾಕೆ ಹೇಳಿದೆ ಎಂದು ವಿವರಿಸಬೇಕು, ನನಗೆ ಯಾವ ನಾಯಕರು ನೆನಪಾದರು ಎಂದು ಹೇಳಬೇಕು ಅನಿಸಿತು. Read the rest of this entry »
ಮೋರನ ನಿಜ ಮೋರೆ
In ಚಲನಚಿತ್ರ, ಯೋಚನೆ on December 5, 2007 at 9:21 pmಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. “ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ” ಎಂದು ಆತನ ಸಹಾಯಕರಿಂದ ಹೇಳಿಸಿಕೊಂಡು ಹೋಗುತ್ತಾಳೆ. ಅಲ್ಲಿ ಈಕೆಯನ್ನು ಗೋಡೆಗಳ ಮೇಲಿನ ಕೆಲವು ಸೆಕ್ಯುರಿಟಿ ಕ್ಯಾಮೆರಾಗಳಷ್ಟೆ ಎದುರುಗೊಳ್ಳುತ್ತವೆ. ಉಳಿದಂತೆ ಖಾಲಿ. ಆಗಷ್ಟೆ ಮೋರನ “ಬೌಲಿಂಗ್ ಫಾರ್ ಕಾಲಂಬೈನ್” ಬಿಡುಗಡೆಯಾಗಿ ಜನಪ್ರಿಯವಾಗಿದ್ದ ದಿನಗಳು. Read the rest of this entry »
ಅದಲು ಬದಲು
In ಅಂದಂದು, ಯೋಚನೆ on December 3, 2007 at 6:23 pmಹೋದ ವಾರ ಆಸ್ಟ್ರೇಲಿಯಾದಲ್ಲಿ ಚುನಾವಣೆ ಮುಗಿಯಿತು. ಸರ್ಕಾರ ಬದಲಾಯಿತು.ಅದರ ಬಗ್ಗೆ ಬರೀ ಬೇಕು ಅಂತ ಅನ್ಕೊಂಡರೂ ಆಗಲಿಲ್ಲ. ಈವತ್ತು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತಂತೆ.
ಹೋದ ಸರ್ಕಾರ ಬಿದ್ದಿದ್ದು, ಹೀನಾಮಾನವಾಗಿ ಸೋತಿದ್ದು ಯಾಕಿದ್ದೀತು? ಇದಕ್ಕೆಲ್ಲಾ ಏನು ಅರ್ಥ ಅಂತ ಯೋಚಿಸುತ್ತಿದ್ದೀನಿ. Read the rest of this entry »
ಕನಸಿನ ಹಗಲು ಕಾಟ
In ಅಂದಂದು, ಯೋಚನೆ on November 24, 2007 at 4:56 pmಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ. Read the rest of this entry »
ಬಾಣಲೆ ಬೆಂಕಿ
In ಅಂದಂದು, ಯೋಚನೆ on November 17, 2007 at 10:28 amಕರ್ನಾಟಕದ “ವಚನಭ್ರಷ್ಟತೆ”, “ಮಾನ-ಅವಮಾನ”, “ಗೌರವ-ಅಗೌರವ” ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.
Read the rest of this entry »
ತಲುಪಿದೆನೆ?
In ಅಂದಂದು, ಯೋಚನೆ on November 14, 2007 at 12:28 pmಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ.
ಬೆಂಗಳೂರಿಗೆ ವಿದಾಯ
In ಅಂದಂದು, ಯೋಚನೆ on November 4, 2007 at 9:06 am೩/೧೧/೦೭ ರಾತ್ರಿ ೧೦ ಗಂಟೆ.
ಬೆಂಗಳೂರು ಏರ್‌ಪೋರ್ಟಿನ ವಿಧಿ ವಿಧಾನಗಳನ್ನೆಲ್ಲಾ ಮುಗಿಸಿ ಕೂತು ನಿಟ್ಟುಸಿರುಬಿಡುತ್ತೇನೆ. ಬರುತ್ತಿದ್ದಂತೆಯೇ ಹೊರಟೂ ಬಿಡುತ್ತಿದ್ದೇನೆ. ಬೆಂಗಳೂರನ್ನು ಬಿಡುತ್ತೇನೆ.
ಕಡೆಯ ಸಲ
In ಅಂದಂದು, ನಾಟಕ, ಯೋಚನೆ on October 30, 2007 at 2:30 amಸಣ್ಣವನಿದ್ದಾಗಲೇ ಅಲೀಬಾಬಾ ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ಆಡಿಸಿದ ಪ್ರೇಮಾ ಕಾರಂತ್ ಈವತ್ತು ಕೊನೆ ಉಸಿರೆಳೆದರು… ಒಂದೆರಡು ವಾರದಿಂದ ಬಳಲುತ್ತಿದ್ದರು… ಆಸ್ಪತ್ರೆಯಲ್ಲಿದ್ದರು…
ಮೈಸೂರಿನಲ್ಲಿ ಮಳೆ
In ಅಂದಂದು, ನಾಟಕ, ಯೋಚನೆ on October 29, 2007 at 12:11 pmಮೈಸೂರಿನಲ್ಲಿ ಮೊನ್ನೆ ಎಂಬತ್ತರ ಬೆಂಗಳೂರು ಧುತ್ತನೆ ಎದುರಾಯಿತು.
ಮೈಸೂರಿನ ಹೊರವಲಯದ ಬಡಾವಣೆಯಲ್ಲಿ ಇರುವ “ನಟನ” ಎಂಬ ಪುಟ್ಟ ರಂಗಮಂದಿರ. ಸ್ವಲ್ಪ ಉದ್ದವೇ ಅನಿಸಿದ ಈ ವರ್ಷದ ತಿರುಗಾಟದ ನಾಟಕ – ‘ಈ ನರಕ… ಆ ಪುಳಕ…’. ತೆರೆಗಳು, ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳ್ಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ – ಈ ಏಳು ಲಂಕೇಶರ ನಾಟಕಗಳನ್ನು ಕೂಡಿಸಿ ರಘುನಂದನ್ ಈ ನಾಟಕವನ್ನು ರೂಪಿಸಿದ್ದಾರೆ. ಲಂಕೇಶರ ಹರಿತವಾದ ಮಾತುಗಳು, ಸಾಮಾನ್ಯ ನುಡಿಗಳಲ್ಲೇ ಕಾವ್ಯವನ್ನು ಮಿಂಚಿಸುತ್ತಾ ಗಾಢವಾಗುವುದು ತುಂಬಾ ಕುಶಿ ಕೊಟ್ಟಿತು. ನೀನಾಸಂರಿಗರ ನುಡಿರೀತಿ ಯಾಕೋ ಈ ಬಾರಿ, ಈ ನಾಟಕಕ್ಕೆ ಅತಿ ಭಾರವಾದಂತೆ ಅನಿಸಿತು. ಸುಲಭ ವಾಚನದಿಂದ ಪ್ರಭಾವ ಬೀರಬಹುದಾದ ಮಾತುಗಳು ಇಲ್ಲಿ ಹೇಳುವ ರೀತಿಯ ಒತ್ತಿನಿಂದ ಕುಂದಿದಂತೆ ಅನಿಸಿತು. ಏನೋ ಕಳಕೊಂಡಂತೆ ಅನಿಸಿತು. ಇದು ಉದ್ದೇಶಪೂರ್ಣವಿರಬಹುದೆ. ಹೌದಾದರೆ ಏತಕ್ಕಾಗಿರಬಹುದು ಎಂದು ಯೋಚಿಸಿದೆ. ಆದರೆ ಎರಡೂ ಮುಕ್ಕಾಲು ಗಂಟೆಗೂ ಮೀರಿದ ಅವಧಿಯ ಬಗ್ಗೆ ನೀನಾಸಂ ಯೋಚಿಸಿದರೆ ಒಳ್ಳೆಯದಿತ್ತು ಅನಿಸಿತು.
ಹತ್ತು ಗಂಟೆಯ ಸುಮಾರಿಗೆ ಮುಗಿದ ನಾಟಕದಿಂದ ಹೊರಬಂದೆವು. ಸಣ್ಣಕೆ ಮಳೆ ಹನಿಯ ತೊಡಗಿತು. ಜನರೆಲ್ಲಾ ಸ್ಕೂಟರ್ ಕಾರುಗಳನ್ನು ಹತ್ತಿ ಕತ್ತಲಲ್ಲಿ ಕರಗಿಹೋಗುತ್ತಿದ್ದರು. ಆಟೋ ಹಿಡಿಯಲು ದೂರದಲ್ಲಿದ್ದ ಮುಖ್ಯ ಬೀದಿಗೆ ಬಂದೆವು. ಯಾರೂ ಓಡಾಡದ ದೊಡ್ಡ ಬೀದಿ. ಇರುಳಲ್ಲಿ ಅಲ್ಲಲ್ಲಿ ಉರಿಯುತ್ತಿದ್ದ ದೀಪಗಳು. ಆಗೊಂದು ಈಗೊಂದು ಓಡಾಡುತ್ತಿದ್ದ ವಾಹನಗಳು. ಆದರೆ ಆಟೋಗಳು ಮಾತ್ರ ಒಂದೂ ಇಲ್ಲ. ದಿಕ್ಕು ತಪ್ಪಿದವರಂತೆ ಅತ್ತಿತ್ತ ಓಡಾಡುತ್ತಿದ್ದಾಗ ಇದ್ದಕಿದ್ದ ಹಾಗೆ ಧೋ ಎಂದು ಸುರಿದ ಮಳೆ. ದೂರದಲ್ಲಿ ಕಾಣುತ್ತಿದ್ದ ಮುಚ್ಚಿದ ಅಂಗಡಿಗೆ ಓಟ. ಅದರ ಮುಂದಿನ ಛಾವಣಿಯಡಿ ಸ್ವಲ್ಪ ಸುಧಾರಿಸಿಕೊಂಡೆವು. ಮುಂದೇನು ಎಂದು ಹೊಳೆಯಲಿಲ್ಲ. ರಂಗಮಂದಿರದ ಕಡೆಯಿಂದಲೇ ತೆವಳುತ್ತಾ ಬರುತ್ತಿದ್ದ ಕಾರಿಗೆ ಅಡ್ಡಹಾಕಿದೆ. ಬೆಳಿಗ್ಗೆ ಸಿಕ್ಕಿದ್ದ ಗೆಳೆಯ ಅದರಲ್ಲಿದ್ದರು. ತುಂಬಿಕೊಂಡಿದ್ದ ಕಾರಿನಲ್ಲಿ ನಾವೂ ತೂರಿಕೊಂಡೆವು. ಮನೆಯ ಹತ್ತಿರ ಬಿಟ್ಟರು.
ಹತ್ತು ನಿಮಿಷದ ಹಿಂದೆ ಮಳೆಯಲ್ಲಿ ಸಿಕ್ಕಿಕೊಂಡು ಚಡಪಡಿಸಿ ದಿಕ್ಕು ತಪ್ಪಿದ್ದು. ನಿರ್ಜನ ಬೀದಿ. ಸಿಗದ ಆಟೋ. ಈಗ ಮನೆಯ ಎದುರು ಕಾರಿನಿಂದ ಇಳಿದದ್ದು. ಎಂಬತ್ತರ ಬೆಂಗಳೂರಿನ ನೆನಪು.
ಮಂಪರಿನಲ್ಲಿ ಘಾಟಿ
In ಅಂದಂದು, ಯೋಚನೆ on October 23, 2007 at 2:08 am

ಬೆಂಗಳೂರಿನಿಂದ ಮೂಡುಬಿದ್ರೆಯ ದಾರಿಯಲ್ಲಿ ತೆವಳುತ್ತಿರುವ ಬಸ್ಸು. ನಡುರಾತ್ರಿ. ಬಸ್ಸಿನ ಅಲ್ಪ ಬೆಳಕಿನಲ್ಲಿ ಸರಿದು ಹೋಗುತ್ತಿದ್ದ ಮನೆ, ಅಂಗಳ, ಹಿತ್ತಲು, ಹಾಡಿ, ಕಾಡು… ಬಸ್ಸಿನ ಕ್ಷಣಿಕ ಬೆಳಕಿನಲ್ಲಿ ತೋರಿ ಕಾಣೆಯಾಗುತ್ತಿದ್ದ ದೇವಸ್ಥಾನ, ಮಸೀದಿ, ಇಗರ್ಜಿ ಗೋಪುರಗಳು… ಮತ್ತೆ ಕತ್ತಲೆಯಲ್ಲಿ ಕಾಡು ಬೇಲಿ ಇತ್ಯಾದಿ.
ಸಣ್ಣವನಿದ್ದಾಗ ಘಾಟಿ ಇಳಿದು ಹತ್ತುವುದನ್ನು ನೋಡುವ ಕುತೂಹಲದಲ್ಲಿ ಇವೆಲ್ಲವನ್ನು ಅರ್ಧ ಮಂಪರಿನಲ್ಲಿ ನೋಡುತ್ತಾ ನಿದ್ದೆ ಹತ್ತಿಬಿಡುತ್ತಿತ್ತು. ಘಾಟಿ ಹತ್ತಿ ಇಳಿಯುವುದು ಹಲವು ಸಲ ಸಿಕ್ಕುತ್ತಿರಲಿಲ್ಲ. ಆದರೆ, ಈ ಸಲ ಹಾಗಾಗಲಿಲ್ಲ. ಜೆಟ್‌ಲಾಗಿನ ಅವಾಂತರದಲ್ಲಿ ಎಚ್ಚರವಿತ್ತು. ಮನಸ್ಸಿನಲ್ಲಿ ನೆನಪುಗಳು ಬೆಚ್ಚಗೆ ಅರಳುತ್ತಿದ್ದವು. ಸಣ್ಣ ಮಗುವಿನ ಹಾಗೇ ಇವನ್ನೆಲ್ಲಾ ನೋಡುತ್ತಿದ್ದೇನೆ, ಅದೇ ಮಂಪರಿನಲ್ಲಿ, ಘಾಟಿಯ ಬರುವಿಕೆಯ ಕುತೂಹಲದಲ್ಲಿ ಅನಿಸುತ್ತಿತ್ತು!
ಬಸ್ಸು ಯಾಕೋ ತುಂಬಾ ತಡವಾಗಿ ಚಾರ್ಮಾಡಿ ಘಾಟಿ ತಲುಪಿತ್ತು. ಮುಂಜಾವದ ಬೆಳಕಲ್ಲಿ ಕಾತರದ ಮನಸ್ಸನ್ನು ಚೇಡಿಸುವಂತೆ ಮೆಲ್ಲನೆ ದೂರದ ಗುಡ್ಡ ಬೆಟ್ಟ ಮೋಡ ಎಲ್ಲ ಕಾಣತೊಡಗಿತು.
ಸರಕ್ಕನೆ ಇಳಿಯಬೇಕಾದ ಘಾಟಿಯ ಇಳಿಜಾರಿನಲ್ಲಿ ಏಕಾಏಕಿ ನಿಂತುಬಿಟ್ಟ ಬಸ್ಸು. ಮುಂದೆ ಹತ್ತಾರು ಬಸ್ಸು ಲಾರಿ ವಾಹನಗಳ ಸಾಲು. ತುಂಬಾ ಇಕ್ಕಟ್ಟಾದ ದಾರಿಯಲ್ಲಿ ಮುಂದಿಂದ ಬರುವ ವಾಹನಗಳನ್ನು ಸಂಬಾಳಿಸಿಕೊಂಡು ಹೋಗಬೇಕು. ಕೆಲವು ತಿರುವುಗಳಲ್ಲಿ ಅರ್ಧ ಮುಕ್ಕಾಲು ಗಂಟೆ ನಿಂತುಬಿಡುತಿತ್ತು.
ಶಿರಾಡಿ ಘಾಟಿ ಮುಚ್ಚಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಎರಡರಷ್ಷು ಗಾಡಿಗಳು. ನಿಂತ ಬಸ್ಸಿಂದ ಇಳಿದು ಅಡ್ಡಾಡುತ್ತಾ, ಸರ್ಕಾರವನ್ನು ಬಯ್ಯುತ್ತಾ ಕಾಲದೂಡುತ್ತಿದ್ದ ಮಂದಿ. ಹೀಗೆ ಮೆಲ್ಲನೆ ತೆವಳಿ ಇಳಿಯುವಾಗ ನಾಕೈದು ಗಂಟೆ ಕಳೆದು ಬಿಟ್ಟಿತ್ತು. ಬೆಳಕು ಚೆನ್ನಾಗಿಯೇ ಹರಿದಿತ್ತು.
ಅರೆ ಮಂಪರಿನಲ್ಲಿ ಘಾಟಿ ಇಳಿಯುವ ಕಾರ್ಯಕ್ರಮವನ್ನು ಇಷ್ಟವಿಲ್ಲದಿದ್ದರೂ ಮತ್ತೊಂದು ದಿನಕ್ಕೆ ಮುಂದೂಡಬೇಕಾಯಿತು.
ರಂಜಾನ್ ಅರ್ಥ ಕುರಿತು
In ಅಂದಂದು, ಯೋಚನೆ on September 28, 2007 at 11:45 amರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ.
ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್‌ದಾ ಪದದ ಅರ್ಥ-ಬಿಸಿಲಿಗೆ ಸುಟ್ಟ ಮರಳು ಎಂದು. ಕೆಲವರು ಹಸಿವಿನಿಂದ ಹೊಟ್ಟೆಯಲ್ಲಿ ಸುಡುವ ಅನುಭವವನ್ನು ಅದು ಸೂಚಿಸುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಬಿಸಿಲು ನೆಲವನ್ನು ಸುಡುವಂತೆ ಸದ್ಭಾವ ದುಷ್ಟತನವನ್ನು ಸುಟ್ಟುಹಾಕುವುದರ ಸಂಕೇತ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ, ಮರಳು ಹಾಗು ಕಲ್ಲುಗಳು ಬಿಸಿಲನ್ನು ಅವಾಹಿಸಿ ತಾವೇ ಸುಡುವಂತೆ, ಹಸಿವಿನಲ್ಲಿ ಅಲ್ಲಾಹುವಿನ ನೆನಪು ಹಾಗು ಪಶ್ಚಾತ್ತಾಪದ ಆವಾಹನೆ ಸುಲಭ ಎನ್ನುತ್ತಾರೆ.
ಅರ್-ರಮದ್- ಮೂಲಪದದಿಂದಲೇ ಹುಟಿದ ಗಾದೆ- ಕಲ್ ಮುಸ್ತಜೀರ್ ಮಿನರ್, ರಮದಾ ಬಿನ್ನರ್. ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದದ್ದು. ಈ ಗಾದೆಯನ್ನು ಓದುತ್ತಿದ್ದಂತೆ, ಜಾಗತಿಕ ಮಹಾಶಕ್ತಿಗಳ ಬೇಗೆಯಡಿ ಸುಡುತ್ತಲೇ ಇರುವ ಪ್ಯಾಲಸ್ಟೇನಿನ ಮಕ್ಕಳ ಮುಖಗಳು ಮನಕ್ಕೆ ಎದುರಾದವು. ಇನ್ನು ಸುಡಲು ಏನೂ ಉಳಿದಿಲ್ಲದಿದ್ದರೂ ಪರಿತಾಪ ಮುಗಿಯದ ಆಫ್ಗಾನಿಸ್ತಾನ್‌ದ ದಿಟ್ಟ ಮಹಿಳೆಯರು ನಕ್ಕರು. ಬಾಣಲೆಯಿಂದ ಬೆಂಕಿಗೆ ಬಿದ್ದು ಕರಟುತ್ತಿರುವ ಇರಾಖಿನಲ್ಲಿ ತಲೆಗೆ ಕೈಹೊತ್ತು ಕೂತವರು ಮನದ ಚಿತ್ರಗಳಾದರು. ಎರಡು ಹೊಟ್ಟೆ ಉರಿಗಳ ನಡುವೆ ಒಣಗಿ ನಲಗುತ್ತಿರುವ ಪ್ರೀತಿಯ ಕಾಶ್ಮೀರದ ತಂಪೆಲ್ಲಿ ಹಾರಿದೆ ಎಂದು ಹುಡುಕುವಂತಾಯಿತು.
ಪರಿಸರದ ಮೇಲೆ ಮನ ಬಂದಂತೆ “ಆಕ್ರಮಣ” ಮಾಡುತ್ತಿದ್ದೇವೆ. ಅಂಥ ಜೀವನ ರೀತಿಯನ್ನೇ ಮೆರೆಯುತ್ತಿದ್ದೇವೆ. ಈ ಬುವಿಯನ್ನು ಕಾದ ಬಾಣಲೆ ಮಾಡುತ್ತಿದ್ದೇವೆ. ಹಾಗೆಂದು ಗೊತ್ತಿದ್ದೂ, ಅದರ ಬಗ್ಗೆ ತಣ್ಣಗೆ ಸಣ್ಣ ಪುಟ್ಟ ಮಾತುಗಳನ್ನಾಡಿಕೊಂಡು ಕೂತಿದ್ದೇವೆ.
ಕಣ್ಣೆದುರಿನಲ್ಲೇ ನಡೆಯುತ್ತಿರುವ ಲೋಕದ ಅನಾಚಾರಗಳನ್ನು, ಹತ್ಯಾಕಾಂಡಗಳನ್ನು ನೋಡುತ್ತಾ ಮೂಕರಾಗಿ ಕೂರವ ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ ಎಂದು ಮನಸ್ಸು ಒಣಗಿ ಮುರುಟುತ್ತದೆ.
ಅಲ್ಲಾಹುವಿನ ದೂತ ಒಂದು ಹಾದಿತ್ತಿನಲ್ಲಿ ಹೇಳುವಂತೆ- `ಬೆಳಗಿನ ಎಳೆಬಿಸಿಲು ಮರಿ ಒಂಟೆಗೆ ಉರಿಯಾಗಿ ತಟ್ಟಿದಾಗ ಬಾಕಿವುಳಿದ ತಪ್ಪಿತಸ್ಥರ ಪ್ರಾರ್ಥನೆಯ ಕಾಲ ಬಂದಿದೆ`.
ವಸಂತದ ವಿಷಾದ, ಏಪೆಕ್ ಮತ್ತು ಸೋಲ್ಸನಿತ್ಸಿನ್
In ಅಂದಂದು, ಪದ್ಯ, ಯೋಚನೆ on September 18, 2007 at 7:13 am
ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ “ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್” ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.
ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ “ನೀನು ಏನನ್ನು ವಿರೋಧಿಸುತ್ತಿದ್ದೀಯ?” ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.
ಸಿಡ್ನಿಯಲ್ಲಿ ವಸಂತ ಛಳಿಗಾಲದ ಬಟ್ಟೆ ಕಳಚಿ ಹೊಸ ಉನ್ಮಾದದಿಂದ ಕುಣಿಯುತ್ತಿದೆ. ಹಚ್ಚವಾಗಿ ನಗುವ ಬಿಸಿಲು. ಮಳೆ ಬಂದು ತೊಳೆದಿಟ್ಟ ನೆಲದಲ್ಲಿ ಹಸಿರು ಚಿಗುರು. ಎಲ್ಲ ಹೋದ ವರ್ಷದಂತೆಯೇ. ಆದರೆ ಈ ವರ್ಷ ಆಸ್ಟ್ರೇಲಿಯಾದ ಬರಗಾಲ ಕೊನೆಗಾಣುತ್ತಿರಬಹುದು ಎಂಬ ಉಲ್ಲಾಸವೂ ಇದೆ. ಅದು ಮನಸ್ಸನ್ನು ಹಗುರಾಗಿಸಿದೆ.
ಸೋಲ್ಸನಿತ್ಸಿನ್ ಸೈಬೀರಿಯಾದಲ್ಲಿ ಅಮಾನುಷವಾಗಿ ತಾನೇ ಬಂಧಿಸಲ್ಪಟ್ಟಿದ್ದ. ಹತ್ತಾರು ವರ್ಷ ಮಾರಣಾಂತಿಕ ಹಿಮದಲ್ಲಿ ಹಿಂಸೆ ಅನುಭವಿಸಿದ್ದ. ಸಾಯದೆ ಉಳಿದು ಪಾರಾಗಿ ತನ್ನ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ. ಇವಾನ್ ಪಾತ್ರದ ಮೂಲಕ ತನ್ನ ಇಡೀ ಅನುಭವವನ್ನು ಒಂದು ದಿನದ ಆಗು ಹೋಗಿನಲ್ಲಿ ಪ್ರತಿಫಲಿಸುತ್ತಾನೆ. ಅವನು ಅಲ್ಲಿ ಯಾಕೆ ಬಂಧನದಲ್ಲಿದ್ದಾನೆ? ಕತೆಯ ಮೂರನೇ ಒಂದು ಭಾಗದವರೆಗೂ ಕತೆಗಾರ ಹೇಳುವುದಿಲ್ಲ. ನಂತರ ಅದನ್ನು ಸಹಜವಾಗಿ ಹೇಳುತ್ತಾನೆ. ಆದರೆ, ಅಷ್ಟರಲ್ಲಿ ಅದು ಗೌಣ ಎಂದು ಅನಿಸುವಲ್ಲಿಗೆ ಓದುಗ ಬಂದು ನಿಂತಿರುತ್ತಾನೆ. ಅದೊಂದು ಅಚ್ಚರಿ, ಆದರೆ ಸಹಜವೂ ಕೂಡ.
ನಮ್ಮ ವಯ್ಯಕ್ತಿಕದ ಆಚೆಗೆ ನಡೆಯುವ ಅನ್ಯಾಯ ನಮಗೂ ಸಂಬಂಧಪಟ್ಟಿದ್ದು. ಏಪೆಕ್ ಪ್ರೊಟೆಸ್ಟ್ ಬಗ್ಗೆ ನನ್ನನ್ನು ಪ್ರಶ್ನಿಸಿದವರಿಗೆ ಅದನ್ನು ಹೇಗೆ ಹೇಳಲಿ? ಮಾನವೀಯತೆ ಇಲ್ಲದ ಪರಿಸರ ನನ್ನ ಮಾನವೀಯತೆಯನ್ನೂ ಕಸಿದುಕೊಳ್ಳುತ್ತದೆ. ಹೇಗೆ ಅದನ್ನು ಅರ್ಥಮಾಡಿಸಲಿ? ಆರ್ಥಿಕ ಏಳಿಗೆಗೆ ಬಲಿಯಾಗುವವರು ಯಾರು? ಅವರು ಯಾಕೆ ಬಲಿಯಾಗಬೇಕು? ಈ ಪ್ರಶ್ನೆಗಳನ್ನೆಲ್ಲಾ ಹೇಗೆ ಉತ್ತರವನ್ನಾಗಿ ಮಾರ್ಪಡಿಸಿ ಪ್ರಶ್ನಿಸದವರ ಮುಂದೆ ಹಿಡಿಯಲಿ? ಒಳಗೊಳಗೇ ಇದೆಲ್ಲದರ ಜತೆ ಗುದ್ದಾಡುತ್ತಿದ್ದೇನೆ. ಆದರೆ ಹೊರಗೆ ನಗುತ್ತೇನೆ.
ವಸಂತದ ಬಿಸಿಲಿಗೆ ಮುಖವೊಡ್ಡಿ ಅಸಾಧಾರಣ ಸ್ವಾಸ್ಥ್ಯ ಅನುಭವಿಸುತ್ತೇನೆ. ವಸಂತಕ್ಕೆ ತಾನು ಕೊಂಚ ಬೇಗ ಬಂದುಬಿಟ್ಟೆನೆ ಎಂಬ ಅನುಮಾನ. ಮತ್ತೊಂದು ವಾರ ಮಳೆ, ಛಳಿ. ಜನರಿಗೂ ಕೊಂಚ ಗಲಿಬಿಲಿ. ನಿಜವಾಗಿಯೂ ಇದು ವಸಂತವೇ? ವಸಂತ ಬಂದು ಬಿಟ್ಟಿತೆ? ಮರೆತು ಬಿಟ್ಟೆನೆ? ವಸಂತವೆಂದರೆ ಇದೇನೆ? ಇದು ನೋಡಿ ಯಾವಾಗಲೂ ಹೀಗೆ. ಕಾಲ ಬದಲಾಗುವುದು ಸ್ವಿಚ್ ಹಾಕಿದ ಹಾಗಲ್ಲ. ವಿದ್ಯುತ ದೀಪ ಹಾಕಿ ಆರಿಸಿದಂತಲ್ಲ. ಅದು ನಿಧಾನಕ್ಕೆ ಅನುಮಾನದಿಂದ ಜರುಗುತ್ತದೆ. ಅದಕ್ಕೆ ಹಲವಾರು ಸಣ್ಣ ಸಣ್ಣ ಒತ್ತಡಗಳಿರಬೇಕಾಗುತ್ತದೆ. ಅದನ್ನು ನಾನು ನೀವು ತರಬೇಕಷ್ಟೆ. ಸಣ್ಣ ಸಣ್ಣ ಪ್ರಮಾಣದಲ್ಲಾದರೂ ಸರಿಯೆ.
ಸೋಲ್ಸನಿತ್ಸಿನ್ ವಿವರಿಸುವ ದಿನವೂ ಅದರ ಹಿಂದಿನ ದಿನದಿಂದ ಬೇರೆಯಾಗಿ ಕೊಯ್ದಿಟ್ಟದ್ದಲ್ಲ. ಹಿಮದಲ್ಲಿ ಇಡೀ ದಿನ ಒದ್ದಾಡಿ ರಾತ್ರಿ ತನ್ನ ಹಾಸಿಗೆಯ ಹರಕು ಬಟ್ಟೆ, ತೂತು ಕಾಲುಚೀಲಗಳಲ್ಲೇ ಶಾಖ ಹುಟ್ಟಿಸಿಕೊಳ್ಳುವುದು. ಮತ್ತೆ ರೋಲ್-ಕಾಲ್ ಕರೆದು ಬಿಟ್ಟಾರು ಎಂದು ಹೆದರುತ್ತಾ ದೇಹ ನಿದ್ದೆಗಿಳಿಯುವುದು. ಆ ನಿದ್ದೆಯೊಂದೆ ಹಿಂದಿನ ದಿನದಿಂದ ಮುಂದಿನ ದಿನವನ್ನು ಬೇರ್ಪಡಿಸುವುದು. ಓದುತ್ತಿರುವ ವಸಂತದಲ್ಲಿ ನನ್ನನ್ನು ಇವೆಲ್ಲಾ ನಡುಗಿಸುತ್ತದೆ. ಅವನಿಗೆ ನಿದ್ದೆ ಅಗತ್ಯ. ಆದರೆ ಇವಾನ್ ಮಾಡುವ ನಿದ್ದೆ ಎಚ್ಚರ ತುಂಬಿದ ನಿದ್ದೆ. ನಿದ್ದೆಯಲ್ಲೂ ತಪ್ಪು ಮಾಡಿಬಿಟ್ಟರೆ?
ಏಪೆಕ್ ಪ್ರೊಟೆಸ್ಟಿಗೆ ಹೋಗಲು ಏನು ಕಾರಣ ಎಂದು ಕೇಳುವುದೇ ಒಂದು ರಾಜಕೀಯ ಪ್ರಶ್ನೆ ಅನ್ನಿಸಿತು. ಹಲವಾರು ಕಾರಣ ಕೊಟ್ಟು ಸಮರ್ಥಿಸಿಕೊಳ್ಳಬಹುದು. ನಾನು ಅನ್ನುವ ಇದು, ನಾನೊಬ್ಬನೇ ಅಲ್ಲ. ನಾನು ನನ್ನ ಸಮುದಾಯ, ನಾನು ನನ್ನ ಸಮಾಜ ಕೂಡ. ಅದಕ್ಕೆ ಹಿಡಿದ ಹುಳುಕು ನನಗೂ ಹಿಡಿದ ಹಾಗೆ. ನಾನು ನಿದ್ದೆ ಮಾಡುತ್ತಿಲ್ಲ. ಎಚ್ಚರವಾಗಿದ್ದೀನಿ. ಹಾಗೆಂದು ನನಗೆ ನಾನೇ ಹೇಳಿಕೊಳ್ಳುವ ಒಂದು ವಿಧಾನ ಇದು. ಚೆನ್ನಾಗಿ ನಿದ್ದೆ ಮಾಡವಂಥ ಸ್ವಸ್ಧ ಪರಿಸರದಲ್ಲಿ ಏಕೆ ನಿದ್ದೆಗೆಡಬೇಕು? ಎಚ್ಚರ ಸವಲತ್ತಲ್ಲ. ಎಚ್ಚರ ಹೊಟ್ಟೆ ತುಂಬಿದವರ ಸೌಖ್ಯವಲ್ಲ. ಅದೊಂದು ಅಗತ್ಯ. ಅಸಹನೆಯನ್ನು ಹಂಚಿಕೊಳ್ಳುವುದೂ ಅಷ್ಟೆ.
ಸೋಲ್ಸನಿತ್ಸಿನ್ ಕತೆಯನ್ನು ೧೯೬೨ರಲ್ಲಿ ಸೋವಿಯತ್ ಪ್ರಧಾನಿ ಕೃಷೇವ್‌ನ ಪರವಾನಗಿ ಪಡೆದು ಪ್ರಕಟಿಸಿದರಂತೆ. ಅದು ಕಾಲಮಾನದಲ್ಲಿ ತುಂಬಾ ದೂರದ ಸಂಗತಿ. ರಾಜಕೀಯ ಪರಿಸ್ಥಿತಿಯಲ್ಲೂ ಕೂಡ. ಹಾಗಾಗಿಯೇ ಇವಾನ್ ಕತೆ ಚರಿತ್ರೆಯಂತೆ ಕಾಣುತ್ತದೆ. ಆದರೆ ಒಂದು ವಿಪರ್ಯಾಸ ನೋಡಿ. ಮರಣ ಪದ್ಯ ಕೂಡ, ಲೋಕದಲ್ಲೇ ಅತಿ ಹೆಚ್ಚು ಸ್ವಾತಂತ್ಯ್ರವಿರುವ ಅಮೇರಿಕದಂಥ ದೇಶದ ಆಡಳಿತದ ಪರವಾನಗಿ ಪಡೆದು ಪ್ರಕಟವಾಗಬೇಕಾಯಿತು.
ನೋಡಿ – ನಿದ್ದೆ ವಿಪರ್ಯಾಸಗಳನ್ನು ಒಂದಕ್ಕೊಂದು ಹೊಂದಿಸಿಬಿಡುತ್ತದೆ. ಅದನ್ನು ಕನಸಾಗಿ ಹೆಣೆದು ನಾವು ಅದರಲ್ಲಿ ಕಳೆದುಹೋಗುವಂತೆ ಮಾಡಿಬಿಡುತ್ತದೆ. ಎಚ್ಚರ ಮಾತ್ರ ಅದರೊಡನೆ ಗುದ್ದಾಡ ಬೇಕಾಗುತ್ತದೆ.
ವಸಂತದ ಅನುಮಾನ ಈಗ ವಿಷಾದವಾಗಿ ಕಾಡುತ್ತದೆ. ವಿಷಾದದಿಂದ ಕೈಚೆಲ್ಲದೆ, ವಿಷಾದವನ್ನು ಇಟ್ಟುಕೊಂಡೂ ಎಚ್ಚರವಾಗಿರುವುದು ಪಡಬೇಕಾದ ಪಾಡಷ್ಟೇ ಅಲ್ಲ. ಅದು ಜವಾಬ್ದಾರಿ ಕೂಡ. ಅದನ್ನು ನನಗೆ ನಾನೇ ಆಗಾಗ ಹೇಳಿಕೊಳ್ಳುವುದೂ ಮುಖ್ಯ. ಅದು ಯಾವ ರೀತಿಯಲ್ಲಾದರೂ ಆಗಬಹುದು.
ಇವಾನ್ ಹಿಮದ ಆಳದಲ್ಲಿ,
ವಸಂತಕ್ಕೆ ಎದುರು ನೋಡುತ್ತಾ,
ಸಣ್ಣಪುಟ್ಟ ಪ್ರತಿರೋಧವನ್ನು ತೋರಿಸುತ್ತಾ ಬದುಕುಳಿದ ಹಾಗೆ,
ತೋರಿಸಿದ್ದರಿಂದಲೇ ಬದುಕುಳಿದ ಹಾಗೆ…
ಸೂರ್ಯ ಕಾಲು
In ಯೋಚನೆ on September 11, 2007 at 9:59 pmನಡೀವಾಗ ಯಾರಾದರೂ ಜತೆಗೆ ಬೇಕು.
ಬೇರೇ ಬೇರೇ ಸೂರ್ಯನ ಬೆಳಕಿಗೆ ಮೈಕಾಯಿಸಿಕೊಂಡಿದ್ದರೂ ಪರವಾಗಿಲ್ಲ. ಜತೆಗಿರಬೇಕು. ಜತೆಗಿರೋ ಮನಸ್ಸಿದ್ದರೂ ಸುಲಭ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ನಮೂನೆ ಕಾಲು. ಆನೆ ಕಾಲು, ಕುದುರೆ ಕಾಲು, ಇಲಿ ಕಾಲು. ಕೆಲವರಿಗೆ ಹಕ್ಕಿ ಕಾಲು. ಇನ್ನು ಕೆಲವರಿಗೆ ಕಾಲಿಲ್ಲದೇನೂ ಹೋಗತೀನಿ ಅನ್ನೋ ಹಾವಿನ ಛಲವೇ ಕಾಲು.
ತುಂಬಾ ದೂರದ ದಾರಿ;
ಏರು ಪೇರು;
ಹಳ್ಳ ಕೊಳ್ಳ;
ಬೆಟ್ಟ ಕಣಿವೆ;
ಟ್ರಾಫಿಕ್ಕು ಹೊಗೆ;
ತುಂಬಾ ಗೋಜಲಿನ ದಾರಿ;
ಸುಸ್ತಾದರೆ ಏನು ಮಾಡೋದು? ಕೇಳೋದು ಏನು ಬಂತು? ಜೇಬಿಂದ ಒಂದು ಮರ ತೆಗೆದು ನೆಟ್ಟುಕೊಂಡು, ಅದರ ನೆರಳಲ್ಲಿ ಕೂರೋದು. ಸೂರ್ಯನ ಝಳ ಜಾಸ್ತಿ ಆಯ್ತ? ಅವನನ್ನ ಸಮುದ್ರದಲ್ಲಿ ಮುಳುಗಿಸೋದು. ಜೋಳಿಗೆಯಿಂದ ಒಂದು ತುಂಡು ಚಂದ್ರನ್ನ ತೆಗೆದು ಮೋಡದ ಹಿಂದೆ ನೇತು ಹಾಕೋದು.
ರಸಿಕತೆ ಉಕ್ಕಿದರೆ ಇದ್ದೇ ಇದೆ;
ಹಾಡು ಪಾಡು;
ಜಗಳ ಪ್ರೀತಿ;
ಫೋಟೋ ಫಿಲ್ಮು;
ಕತೆ ಕಾವ್ಯ;
ರಸಿಕತೆ ಉಕ್ಕಿದರೆ ತಪ್ಪದೆ.
ಸೂರ್ಯ ಯಾವುದಾದರೇನು? ಕಾಲು ಯಾವುದಾದರೇನು?
ಜೇಬಲ್ಲಿ ಮರ ಇರಬೇಕು.
ಜೋಳಿಗೇಲಿ ಚಂದ್ರ ಇರಬೇಕು.
ನಡೀವಾಗ ಯಾರಾದರೂ ಜತೆ ಇರಬೇಕು.
ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
In ಯೋಚನೆ on September 7, 2007 at 8:03 amನಮ್ಮ ನಾಡಿನ ರಾಜಕೀಯ ಹದಗೆಟ್ಟಿದೆ. ರಾಜಕಾರಣಿಗಳಿಂದಾಗಿ ಎಲ್ಲ ಕೊಳೆತು ನಾರುತ್ತಿದೆ. ನಮ್ಮ ನಾಡಿನ ಜನರ ಕಷ್ಟ ಕಾರ್ಪಣ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಇವೆಲ್ಲಾ ನಿಜವೇ. ಆದರೆ, ಇದನ್ನೇ ಎಷ್ಟು ದಿನಾಂತ ಹೇಳ್ಕೊಂಡಿರೋಕೆ ಆಗತ್ತೆ ಹೇಳಿ. ಸಿಟ್ಟು ವಿಷಾದ ಇರಲಿ, ಕನಿಷ್ಟ ಬೋರಾದರೂ ಆಗಬೇಕಲ್ಲವ? ಬೋರು ಆಗತ್ತೆ ಅಂತೀರ? ಮುಂದೆ ಓದಿ »
ನನ್ನ ಮುಖಚಿತ್ರ
In ಅಂದಂದು, ಯೋಚನೆ on August 31, 2007 at 9:55 pmನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು.
ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ – ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ ಮೇಲೆ ವಕ್ರವಾಗಿ ಮದ. ಮೋಹದ ಮೂಲೆನಲ್ಲಿ ಮತ್ಸರ. ಹೀಗೆ ಸ್ವಲ್ಪ ಓರೆ ಕೋರೆ ಮಾಡಿ ಜೋಡಿಸಿ. ಎರಡು ಕಣ್ಣಗಳೂ ಸಮವಾಗಿ ಗುಂಡಗೆ ಇಡಬೇಡಿ. ಒಂದು ಸ್ವಲ್ಪ ಆಚೆಗಿಡಿ. ಒಂದು ಕಣ್ಣು ದೂರದಲ್ಲಿರೋದನ್ನ ಎವೆಯಿಕ್ಕದೆ ನೋಡೋ ಹಾಗೆ ಇದ್ದರೆ, ಮತ್ತೊಂದು ಕುರಿ ಕಣ್ಣು ಇಟ್ಟ ಹಾಗೆ ಇರಬೇಕು. ಯಾವ ಕಣ್ಣು ಹ್ಯಾಗೆ ಅಂತ ನಿಮಗೆ ನನ್ನನ್ನ ನೋಡಿದ ತಕ್ಷಣ ಗೊತ್ತಾಗತ್ತೆ. ಹಾಗೆ ಒಳ್ಳೆ ಉದ್ದನೆ ಮೂಗು ಬರೀಬೇಡಿ. ನಂದು ಮೊಂಡು. ಅಲ್ಲಲ್ಲಿ ಕೀರಿದ ಗಾಯ ಇದೆ ಮೂಗಿನ ಮೇಲೆ. ಅದನ್ನು ಮುಜುಗರ ಪಟ್ಕೊಂಡು ನೋಡದೇ ಇರಬೇಡಿ. ಬಾಯೂ ಅಷ್ಟೆ ಒಳ್ಳೇ ಗೆರೆಗಳೇನೂ ಬೇಡ. ತುಟ್ಟಿ ಹರಿದಿದೆ. ಒಂದೊಂದು ಸಲ ಅದಕ್ಕೆ ಪಿನ್ನು ಹಾಕಿಕೊಳ್ಳಬೇಕಾಗತ್ತೆ.
ಈಗ ಕರುಣೆ ಅಸಹ್ಯ ಭಯ ಎಲ್ಲಾ ದೂರಕ್ಕಿಡಿ. ಅಷ್ಟೇ ಅಲ್ಲ ತಮಾಷೆ, ದುಃಖ, ಸಿಟ್ಟು ಎಲ್ಲಾ ಮರೆತು ನನ್ನ ಅವತಾರ ನೋಡಿ. ಬರೆಯೋಕೆ ಮನಸ್ಸು ಆದರೆ, ಬರೀಯೋಕೆ ಆಗತ್ತೆ ಅನ್ನಿಸಿದರೆ ಬಣ್ಣ ಬ್ರಶ್ಶು ತಗೊಳ್ಳಿ ನಾನು ಬಂದು ನಿಮ್ಮ ಮುಂದೆ ಮಗು ಥರ ಕೂತ್ಕೋತೀನಿ.
ದೊಡ್ಡಕ್ಕೆ ಮುಖ ಬರೆದು ಅದಕ್ಕೆ ಚೆನ್ನಾಗಿ ಬಣ್ಣ ಬಳಿರಿ.
ಓರೆ-ಕೋರೆ, ಹರಿದ ತುಟಿ, ಮೂಗಿನ ಗಾಯ, ಕುರಿ ಕಣ್ಣು ಇದೆಲ್ಲಾ ಯಾರಿಗೂ ಕಾಣದ ಹಾಗೆ ಮಾಡಿಬಿಡಿ.
ಹಾಗೇ ಮುಖಕ್ಕೆ ಅಡಿಪಾಯದಂತಿದೆಯಲ್ಲ ಈ ಮದ ಮತ್ಸರ ಲೋಭ ಮೋಹ ಅದನ್ನೂ ಮುಚ್ಚಿಬಿಡಬೇಕು.
ಆವಾಗ ಎಲ್ಲಾರಿಗೂ ಇಷ್ಟ ಆಗೋ ಅಂತ ನನ್ನ ಚಿತ್ರ ತಯಾರಾಗತ್ತೆ.
ಗೂಗಲ್ ಮತ್ತು ಅಲ್ಲದ್ದು
In ಯೋಚನೆ on August 26, 2007 at 11:50 amಹುಡುಕಾಟಕ್ಕೆ ಇನ್ನೊಂದು ಪದವೆನ್ನುವಂತಿರುವ ಗೂಗಲ್ ಏಕತಾನಕ್ಕೆ ತಿರುಗುತ್ತಿದೆ ಎಂಬ ತಲ್ಲಣ. ಆಗೊಮ್ಮೆ ಈಗೊಮ್ಮೆ ವಿಚಿತ್ರಗಳನ್ನೂ ಏಕತಾನದಲ್ಲಿ ಹೊರಗೆಡವುತ್ತಿದೆ. ಎಷ್ಟೋ ಸಲ ನಾನು ಬೇಕೆಂದು ಹುಡುಕಿದ್ದೇ ಸಿಗುತ್ತದೆ. ಅಷ್ಟೇ ಅಲ್ಲ ನನಗೆ ಇಷ್ಟವಾಗುವುದೇ ಸಿಗುವುದು ಕೂಡ ಸೋಜಿಗ ಅನಿಸುತ್ತಿಲ್ಲ.
ಗೂಗಲ್ ಹುಡುಕಾಟದ ಮೊದಲ ಪುಟದಲ್ಲಿ ಸಿಕ್ಕದೇ ಹೋಗುವ ಸಂಗತಿಗಳು, ಸಿಗಬೇಕಾದ ಎಷ್ಟೋ ಸಂಗತಿಗಳು ಈಗೀಗ ಕಾಡುತ್ತಿದೆ. ಸರ್ಚ್ ಇಂಜನ್ನಿನ ಶಕ್ತಿ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಹೆಚ್ಚು ಹೆಚ್ಚು ದಾಖಲೆಗಳನ್ನು ಅದು ಹುಡುಕುವ ಸಾಮರ್ಥ್ಯ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಸರ್ಚ್ ಇಂಜನ್ನು ಸೂಕ್ಷ್ಮವಾದಷ್ಟೂ, ನಾನು ಬರೆದ ಪದ ಸರಿಯಾಗಿದ್ದರೂ “ಹೀಗೆ” ತಿದ್ದಲೇ ಎಂದು ಸೂಚಿಸುವ ಜಾಣ್ಮೆ ಅದರಲ್ಲಿ ಕಂಡಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ನನಗೆ ಬೇಕಾದ್ದನ್ನು ಸೂಚಿಸುವ ಪದ ಟೈಪ್ ಮಾಡದೇ ಬೇರೇನೋ ಟೈಪ್ ಮಾಡಿದರೂ ನನ್ನ ಮನಸ್ಸನ್ನು ಅರಿತುಕೊಂಡು ಬೇಕಾದ್ದನ್ನೇ ನೀಡುವಷ್ಟು ನಿಖರವಾಗಿದ್ದರೂ ಯಾಕೆ ಈ ಆತಂಕ ಹೆಚ್ಚುತ್ತಿದ್ದೆ?
ಒಮ್ಮೊಮ್ಮೆ ಗೂಗಲ್ ಕಕ್ಕದೇ ಇದ್ದದ್ದು ಇಲ್ಲವೇ ಇಲ್ಲ ಎಂಬ ವಾದ ಕೇಳಿ ಮೈನಡುಗುತ್ತದೆ. ಅದು ಕಕ್ಕಿದ್ದೇ ವೇದ ವಾಕ್ಯ ಎಂಬ ವಾದವೂ ಸಹ. ಯಾವ ವಾದಕ್ಕೆ ಬೇಕಾದರೂ ಪುರಾವೆ ಸಿಕ್ಕುವ ಈ ಹುಡುಕಾಟದ ಯುಗದಲ್ಲಿ ಸಮುದ್ರ ಮಥನ ನೆನಪಾಗುತ್ತದೆ.
ಚಿಲಿಯ 9/11 ಬಗ್ಗೆ ಹುಡುಕುವುದು ಯಾಕೆ ಕಷ್ಟ? ‘other 9/11′ ಎಂದಾಗ ಅದು ಸಿಕ್ಕಿ ನೆನಪಿಸಿತು – ಈ other, ಈ ಬೇರೆ, ಈ ಅಲ್ಲದ್ದು ಎಷ್ಟು ಮುಖ್ಯ! other ಇಲ್ಲದೆ, ಬೇರೆ ಇಲ್ಲದೆ, ಅಲ್ಲದ್ದು ಇಲ್ಲದೆ this, ಇದು, ಹೌದೆನಿಸುವುದಕ್ಕೆ ಅರ್ಥವಿಲ್ಲ!
ಕಡೆಗೂ “ಸಿಕ್ಕಿಬಿಡುವುದನ್ನು” ಮೀರಬೇಕು. ಬೇಕಾದ್ದನ್ನು ಹುಡುಕುವ ತವಕ ಬಿಟ್ಟುಕೊಡಕೂಡದು. ಒಂದು ರೀತಿಯ ಮಂಜುಗಡ್ಡೆಯಂಥ ಛಲ ಹತ್ತಿಕೊಳ್ಳುತ್ತದೆ. ಮೈಯೆಲ್ಲಾ ಥರಥರ ನಡುಗಿಸುವಂಥದ್ದು ಅದು.
ನಾನು ಹೂ?
In ಅಂದಂದು, ಯೋಚನೆ on August 21, 2007 at 11:14 pmನಾನು ಯಾರಾಗಿದ್ದೀನಿ?
ಇದಕ್ಕೆ ಆನ್ಸರಿಸುವ ಕೆಲಸವನ್ನು ಆಧ್ಯಾತ್ಮಿಗಳು ಹೈಜಾಕ್ ಮಾಡೋಕೆ ಬಿಡಬಾರದು. ಅವರನ್ನು ಸ್ಟಾಪ್ ಮಾಡೋಕೆ ಆಗದೇ ಇರೋದರಿಂದ ಅವರು ಗಿಣಿಪಾಟ ಒಪ್ಪಿಸೋ ಡಲ್ಲಾದ ಆನ್ಸರ್‍ಗಿಂತ ಸಕತ್ತಾದ ಆನ್ಸರ್‍ಗಳನ್ನು ನಾವೇ ಹುಡುಕೊಂಡು ಬಿಡಬೇಕು.
ಫಸ್ಟ್, ಪರ್ಸನಲ್ ಆಗಿ ನೋಡಿದರೆ; ನೆನ್ನೆನೋ, ಟೆನ್ ವರ್ಷದ ಮುಂಚೆನೋ ಹೇಗಿದ್ದೆ, ಹೇಗೆ ತಿಂಕ್ ಮಾಡ್ತಿದ್ದೆ, ಈಗ ಹೇಗೆ ತಿಂಕ್ ಮಾಡ್ತೀನಿ ಅಂತ ಫೈಂಡೌಟ್ ಮಾಡಿಕೊಂಡರೆ ಸೆವೆರಲ್ ವಿಷಯಗಳು ಗೊತ್ತಾಗಿ ಬಿಡಬಹುದು.
ಇನ್ನು ನಮ್ಮ ಕಮ್ಯುನಿಟಿನಲ್ಲಿ ನಾನು ಯಾರಾಗಿದ್ದೆ. ನನ್ನ ಜನರ ಜತೆ ಯಾವ ಥರ ರಿಲೇಟ್ ಮಾಡ್ಕೋತಾ ಇದ್ದೆ. ಅವರ ಹ್ಯಾಪಿನೆಸ್ಸು ವರೀಸು ಹೇಗೆ ತಿಳಿಕೋತಾ ಇದ್ದೆ, ಈಗ ಹೇಗೆ ತಿಳ್ಕೋತಾ ಇದ್ದೀನಿ ಇದು ಇಂಪಾರ್ಟೆಂಟು.
ನೆಕ್ಸ್‌ಟು-ನಮ್ಮ ಸಮಾಜದಲ್ಲಿ ನಾನು ಯಾರಾಗಿದ್ದೆ. ನಮ್ಮ ಸಮಾಜದ ಪೀಪಲ್ಸ್‌ನಲ್ಲಿ ಯಾರು ನನಗೆ ಕರೆಕ್ಟ್ ಅನ್ಸತ್ತೆ. ಯಾರು ಹೋಪ್‌ಲೆಸ್ ಅನ್ಸತ್ತೆ. ಹೀಗೇ ಬಿಫೋರೂ ಅನ್ನಿಸ್ತಾ ಇತ್ತ? ಆರ್, ಈಗ ಡಿಫರೆಂಟ್ ಆಗಿ ಅನ್ಸತ್ತ? ಅಂತ ನೋಡಿಕೋಬೌದು.
ಫಿನಿಷ್ ಅನ್ಕೊಂಡರ?
ಇನ್ನೊಂದೆರಡು ಸ್ಟೆಪ್ಸ್ ಇದೆ.
ನಮ್ಮ ಕಂಟ್ರಿನಲ್ಲಿ ನಾನು ಯಾರಾಗಿದ್ದೆ, ಈವಾಗ ಯಾರಾಗಿದ್ದೀನಿ? ನಮ್ಮ ನೇಷನ್‌ನ ಯಾವ ಲೇಯರ್‌ಗೆ ನಾನು ಸೇರ್‍ತಿದ್ದೆ, ಈವಾಗ ಯಾವ ಲೇಯರ್‌ಗೆ ಅಡ್ಚಸ್ಟ್ ಆಗ್ತೀನಿ? ಇದನ್ನ ನೋಡಿಕೊಂಡರೂ ಪ್ರಾಫಿಟ್ ಇದೆ.
ಫೈನಲ್ಲಾಗಿ, ವರ್ಲ್‌ಡ್‌ನ ಎಲ್ಲ ಜನರನ್ನು ಕೌಂಟಿಗೆ ತಗೊಂಡರೆ ನಾನು ಎಲ್ಲಿ ಏನು ಯಾರಾಗಿದ್ದೀನಿ? ಇದೂ ವೆರಿ ವೆರಿ ಇಂಪಾರ್ಟೆಂಟ್.
ಹೀಗೆಲ್ಲಾ ಫೈಂಡೌಟ್ ಮಾಡಿಕೊಳ್ಳೊಕೆ ಹೋದರೆ ಕನ್ಫ್ಯೂಸ್ ಆಗತ್ತೆ ಅಂತ ವರಿ ಮಾಡಿಕೊಬೇಡಿ. ಏನೂ ಆಗಲ್ಲ. ಸ್ಟೆಪ್-ಬೈ-ಸ್ಟೆಪ್ ಹೋಗಬೇಕು ಅಷ್ಟೆ.
ನಾನು ಹೂ ಆಗಿದ್ದೀನಿ? ಒಳ್ಳೆ ಕ್ವೆಸ್ಚೆನ್ ಅಲ್ವ?
ಹಬ್ಬಿರುವ ಮಬ್ಬಿನೊಳಗೊಬ್ಬನೇ
In ಅಂದಂದು, ಯೋಚನೆ on August 17, 2007 at 9:44 pmಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣಿಸಕೊಂಡರು ತಬ್ಬುವ ಮೋಡಿಗೆ ಮಡಕೇರಿಯಲ್ಲಿ ಮುಗ್ಧರಾಗುತ್ತಾ. ಎಲ್ಲಿ ಹೋದರೂ ಬಿಡದ ಇವರೆಲ್ಲರ ಸಾಂಗತ್ಯದ ಅದೃಷ್ಟ.
ದಟ್ಟವಾಗಿ ಮುಚ್ಚಿದ ಮಂಜಿನ ನಡುವೆ ನೆರಳುಗಳಂತೆ ಸರಿದಾಡುವ ಜನ. ನೀರವ. ಎಲ್ಲರೂ ಪಿಸುಗುಡುತ್ತಿರುವಂತೆ ಅನಿಸುತ್ತಿದೆ. ಜೋರಾಗಿ ಮಾತಾಡಿದರೆ ಎಲ್ಲಿ ಮಂಜು ಚದುರಿಬಿಡುತ್ತದೋ, ಚಳಿಗಾಲ ಓಡಿಬಿಡುತ್ತದೋ ಎಂಬ ಅಂಜಿಕೆಯೆ? ಚಳಿಗಾಲದಲ್ಲಿ ನಲಿಯುವ, ಚಳಿಯನ್ನು ಪ್ರೀತಿಸುವ ಜನರಿವರು. ಈಗೀಗ ನಾನೂ…?
ಹತ್ತಾರು ಅಡಿಗಳಾಚೆ ಏನೂ ಕಾಣದ ಮಂಜು. ರೈಲು ಬಂತೇ ಎಂದು ಬಿಳಿಯ ಗೋಡೆಯಲ್ಲಿ ಹುಡುಕುವ ಕಣ್ಣುಗಳು. ಕಣ್ಣಿಗೆ ಬೀಳುವ ಎಷ್ಟೋ ಮುಂಚೆ ರೈಲಿನ ಸದ್ದು ಎಲ್ಲರಿಗೂ ಕಚಗುಳಿಯಿಟ್ಟಾಗ ನನಗೆ ಕಾಣಿಸಿದ್ದು-
‘ಹಬ್ಬಿರುವ ಮಬ್ಬಿನೊಳಗೊಬ್ಬನೇ ಮುದುಕ
ಕೋಲೂರಿ ನಡೆದಿದ್ದಾನೆ’
ಗಾಂಧಿ ಶತಮಾನೋತ್ಸವದಲ್ಲಿ ಶಿವರುದ್ರಪ್ಪ ಬಂದಾಡುತ್ತಾರೆ. ಗಾಂಧಿ ಕತ್ತಲೆಯಲ್ಲಿ ಧಡಗುಟ್ಟಿ ಬರುವ ರೈಲಿನ ಹಾಗೆ, ಬಂದು ಹಾಗೇ ಕತ್ತಲಲ್ಲಿ ಲೀನವಾಗುವ ಹಾಗೆ ಎಂದಿದ್ದಾರಲ್ಲವೆ? ಸಾಲುಗಳು ನೆನಪಿಲ್ಲ. ಆದರೆ ಪ್ರತಿಮೆ ತಲೆಯಲ್ಲಿ ಸುಳಿದಾಡುತ್ತದೆ.
ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಆಸ್ಟ್ರೇಲಿಯಾದ ಆದಿನಿವಾಸಿಗಳು ಗಾಂಧಿಯ ಬಗ್ಗೆ ಚಿಂತಿಸಿದ್ದರಂತೆ. ಬ್ರಿಟೀಷರ ಎದುರು ಗಾಂಧಿಯ ಪ್ರತಿರೋಧ, ಚಳವಳಿಗಳು ತಮಗೂ ಮಾದರಿಯಾಗಬಲ್ಲವೆ ಎಂದು ಚರ್ಚಿಸಿದ್ದರಂತೆ. ಅದರ ಬಗ್ಗೆ ಇನ್ನಷ್ಟು ಓದಬೇಕು ಎಂದು ಮನಸ್ಸಿನ ಮೂಲೆಯಲ್ಲಿ ಒಂದು ಪುಟ್ಟ ಗುರುತು ಹಾಕಿಕೊಳ್ಳುತ್ತೇನೆ. ಅಂದಿಗೂ-ಇಂದಿಗೂ, ಅಲ್ಲಿಗೂ-ಇಲ್ಲಿಗೂ ಕೊಂಡಿ ಹುಡುಕುವುದು, ಅಂದಿಗೂ-ಇಂದಿಗೂ-ಅಲ್ಲಿಗೂ-ಇಲ್ಲಿಗೂ ಸಲ್ಲುವ ಒಂದು ದಾರಿ ಅನಿಸುತ್ತದೆ. ಅರವತ್ತರ ದಶಕದ ಅಬಾರಿಜಿನಗಳ “freedom ride”, ನಂತರ ಅವರಿಗೆ ಸಿಕ್ಕ ಓಟಿನ ಹಕ್ಕು, ಅಬಾರಿಜಿನಿ ಸಮುದಾಯದ ಬದುಕನ್ನು ಚೆನ್ನಾಯಿಸಿತೆ? ಗಾಂಧಿ ನಮಗಿಂದು ಎಷ್ಟು ದಕ್ಕುತ್ತಾರೆ? ದಕ್ಕಲೇಬೇಕೆ?
ಇನ್ನೂ ಮಂಜು ಚದುರಿಲ್ಲ. ಆದರೂ ಹಕ್ಕಿಗಳಿಗೆ “ಋತುಗಳ ರಾಜ ವಸಂತ” ಬರುತ್ತಿದ್ದಾನೆ ಎಂದು ಗೊತ್ತಾಗಿಬಿಟ್ಟಿದೆ. (ಯಾರದು-ಬಿಎಂಶ್ರಿ-ಅನುವಾದ?).
ಮರಿಹಕ್ಕಿಗಳು ಎಡೆಬಿಡದೆ ಚಿಲಿಪಿಲಿ ಅನ್ನುತ್ತಲೇ ಇವೆ.
ಎಲ್ಲಿಯ ಯಾವ ವಾಸನೆ ತಟ್ಟಿ ಎಬ್ಬಿಸಿದೆ ಅವನ್ನು?
ವಲಸೆ
In ಅಂದಂದು, ಯೋಚನೆ on August 13, 2007 at 7:04 amಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.
ಮೊದಲನೇ ಪ್ರಶ್ನೆ – ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ ಇಷ್ಟ ಇಲ್ಲದೇ ಇರೋ ಪ್ರಶ್ನೆನೂ ಆಗಬಹುದು. ಅದೇನೇ ಆದರೂ ಈ ಪ್ರಶ್ನೆ, ಮತ್ತು ಉತ್ತರದ ಅಪೇಕ್ಷೆಯ ಸಂವಾದದಲ್ಲಿ ಒಂದು ಬಗೆಯ ಖುಷಿಯಿದೆ, ಮಜಾಯಿದೆ.
ಎರಡನೇದು – ನೀನು ಈ ದೇಶಕ್ಕೆ ಬಂದು ಎಷ್ಟು ದಿನ ಆಯಿತು? ಇದು “ನೀನು ಈ ದೇಶದಲ್ಲೇ ಹುಟ್ಟಿದ್ದ?” ಅನ್ನೋದಕ್ಕಿಂತ ಸಕ್ಕತ್ ಖುಷಿ ಕೊಡೋ ಪ್ರಶ್ನೆ. ಬೇಜಾನ್ ಒಳತಿರುವುಗಳಿರೋ ಪ್ರಶ್ನೆ. ಏಕ್‌ದಂ ಉತ್ತರಕೊಡೋ ಬದಲು ಪ್ರಶ್ನೆಗೊಂದು ಪ್ರಶ್ನೆ ಎಸೀಲಾ ಅಂತ ಇರಾದೆ ಹುಟ್ಟಿಕೊಳ್ಳತ್ತೆ. ಆ ಇರಾದೆ ತೋರಿಸಿಕೊಳ್ಳೋದು ಕುಚೋದ್ಯವಾಗಿ. “ದಿನಗಳಲ್ಲಿ ಬೇಕಾ ಗಂಟೆಗಳಲ್ಲಿ ಬೇಕಾ” ಅಂತ ಕೇಳೋದಕ್ಕೆ ಒಂದರೆ ಕ್ಷಣ ಯೋಚನೆ ಮಾಡ್ತೀನಿ. ಇದ್ದಕ್ಕಿದ್ದ ಹಾಗೆ ಅಷ್ಟೊಂದು ರಾಜಕೀಯ ಯಾಕೆ ಅಂತ ಮುಚ್ಕೋತೀನಿ. ಆದರೂ ನಾನು ಕಟ್ಟಿಕೊಂಡು ಬಂದಿದ್ದು ಇನ್ನೂ ಕಾಣತಲ್ಲ ಅಂತ ತಕತಕ ಕುಣೀತೀನಿ.
ಉತ್ತರ ಮಾತ್ರ ವಿಪರೀತ ಬೋರಿಂಗ್ ಅಂದೆ ಆಲ್ಲವ? ಏನಾದರೂ ಮಾಡಿ ಆಸಕ್ತಿ ಹುಟ್ಟಿಸಬೇಕು ಅಂತ ಶುರು ಮಾಡ್ತೀನಿ:
“ನಾನು ಎಲ್ಲಿ ಹುಟ್ಟಿದ್ದೋ ಗೊತ್ತಿಲ್ಲ. ಹಸುಳೆ ಆಗಿದ್ದಾಗ ಯಾರೋ ಧೂರ್ತ ರಾಜನ ಕಾಟ ತಡೆಯೋಕೆ ಆಗದೆ ನನ್ನ ಅಪ್ಪ-ಅಮ್ಮ ರಾತ್ರೋ ರಾತ್ರಿ ಪುಟ್ಟ ದೋಣೀಲಿ ತಪ್ಪಿಸಿಕೊಂಡರಂತೆ. ಅದು ಬಿರುಗಾಳಿಗೆ ಸಿಕ್ಕಿ ಮುಳುಗೋ ಹಾಗೆ ಆಗಿತ್ತಂತೆ. ಆವಾಗ ದೂರದಲ್ಲಿ ಒಂದು ಸುಭಿಕ್ಷ ದೇಶ ಕಾಣಿಸ್ತಂತೆ. ಆದರೆ ಹತ್ತಿರ ಹೋಗುತ್ತಲೂ, ಆ ದೇಶದ ದೊಡ್ಡ ಹಡಗು ನಮ್ಮ ದೋಣೀನ ಕಾಪಾಡೋದು ಬಿಟ್ಟು, ಅವರ ರಾಜನ ಅಪ್ಪಣೆ ಮೇರೆಗೆ, ದೊಡ್ಡ ಕೋಲಿಂದ ‘ಬರಬೇಡಿ ಹೋಗಿ’ ಅಂತ ದೂರಕ್ಕೆ ತಳ್ಳಿದರಂತೆ. ಆ ದೇಶದ ಹಡಗು ಅತ್ತಲಾಗಿ ಹೋಗುತ್ತಲೂ ನಮ್ಮ ದೋಣಿ ಮುಳುಗಿ ಹೋಯ್ತಂತೆ. ಅದಕ್ಕೆ ನನ್ನ ಅಪ್ಪ-ಅಮ್ಮನ ಮುಖ ನಾನು ನೋಡೇ ಇಲ್ಲ. ನಾನು ಸೊಳ್ಳೆ ಪರದೆ ಗಂಟಿನ ಮೇಲೆ ತೇಲಿಕೊಂಡು ಆ ಸುಭಿಕ್ಷ ನಾಡಿನ ಚಿನ್ನದಂಥ ಕಡಲತಡೀಲಿ ಯಾರದೋ ಕೈಗೆ ಸಿಕ್ಕನಂತೆ. ಅವರು ಮೊದಲು ಯಾವುದೋ ಪ್ರಾಣಿ ಅಂತ ನನ್ನನ್ನ ಮುಟ್ಟೋಕೂ ಹೆದರಿಕೊಂಡು ಆಮೇಲೆ ಮನಸ್ಸು ಬದಲಾಯಿಸಿ ಮನೆ ಒಳಗೆ ಇಟ್ಟಕೊಂಡು ಪ್ರೀತಿಯಿಂದ ಸಾಕಿದರಂತೆ. ಒಂದು ಚೂರು ದೊಡ್ಡೋನಾಗತಲೂ ಕಟ್ಟಿಹಾಕೋ ಅವರ ಪ್ರೀತಿಯಿಂದ ತಪ್ಪಿಸಿಕೊಂಡು ಮತ್ತೆ ನನ್ನ ನಾಡಿಗೆ ಓಡಿ ಹೋಗಿ ದೊಡ್ಡೋನಾದ ಮೇಲೆ ಈಗಷ್ಟೆ ಬಂದು ಇಲ್ಲಿ ಇಳಿದೆ.”
ನನ್ನ ತಲೆ ಸಾವಿರ ಹೋಳಾಗದೆ ಇರೋದು ಆಶ್ಚರ್ಯ ಅಲ್ಲ ಅಲ್ಲವೆ?
ತೊಡಕು
In ಅಂದಂದು, ಯೋಚನೆ on August 10, 2007 at 12:26 pmಇದ್ದಕಿದ್ದ ಹಾಗೆ ಬಣ್ಣದ ಪಲ್ಯ ಮಾಡೋಣ ಅಂತ ಮನಸಾಯಿತು. ಬಾಣಲಿಯಲ್ಲಿ ಒಂದಷ್ಟು ಬಣ್ಣ ಉದುರಿಸಿ, ತಟಕ್ಕು ಎಣೆ ಹಾಕಿ ಹುರಿಯೋಕೆ ಶುರು ಮಾಡಿದೆ. ಹುರಿದಾಗ ಬಣ್ಣಗಳೆಲ್ಲಾ ಒಂದೇ ರೀತಿ ಆಗಲ್ಲ. ಒಂದೊಂದು ಬಣ್ಣ ಒಂದೊಂದು ರೂಪ ರಾದ್ಧಾಂತ ಮಾಡ್ಕೋತಾವೆ. ಕೆಲವು ಮುರುಟಿಕೊಂಡರೆ ಕೆಲವು ಅರಳಕೋತಾವೆ. ಕೆಲವು ಹರಡಿಕೊಂಡರೆ ಇನ್ನು ಕೆಲವು ಸುರಟಿಕೋತಾವೆ. ಒಟ್ಟಿನಲ್ಲಿ ಏನೋ ಒಂದು ಹದ ಅಂತೂ ಇರತ್ತೆ. ಮುರುಟಿಕೊಂಡಿದ್ದು ಅರಳಿಕೊಂಡಿದ್ದು ಪಕ್ಕಪಕ್ಕದಲ್ಲಿ ಬಿದ್ದುಕೊಂಡು ಕಷ್ಟಸುಖ ಮಾತಾಡಿಕೋತಾ ಇರೋದು ನೋಡೋಕೆ ತುಂಬಾ ಚೆನ್ನಾಗಿರತ್ತೆ. ಕೆಲವು ಬಣ್ಣಗಳು ಬದಲಾಗ್ತಾ ಬಿಳಿಯಾಗ್ತಾವೆ, ಇನ್ನು ಕೆಲವು ಕಪ್ಪಾಗ್ತಾವೆ. ಆದರೆ ಮಜಕೊಡೋದು ಯಾವುದು ಗೊತ್ತಾ? ಹುರೀತಾ ಹುರೀತಾ ದಟ್ಟವಾಗ್ತಾ ಹೋಗವು.
ಆದರೂ ಬಾಣಲಿಯ ಬಣ್ಣದ ಪಲ್ಯದಲ್ಲಿ ಯಾಕೋ ಏನೋ ಸರಿಯಿಲ್ಲ ಅನ್ನಿಸಿ ಏನಿರಬಹುದು ಅಂತ ಯೋಚಿಸ್ತಾ ಬಾಣಲೀನ ದಿಟ್ಟಿಸ್ತಾ ಹುರೀತಿದ್ದೆ. ಇನ್ನು ಹೆಚ್ಚು ಹುರಿದರೆ ಕೆಟ್ಟು ಹೋಗತ್ತೆ ಅಂತ ಬೇರೆ ಚಿಂತೆ ಹತ್ತಿಕೋತು. ಹುರಿಯೋದು ಸಾಕು ಅನ್ನಿಸಿದರೂ ಇನ್ನೇನೋ ಒಂದು ಬಣ್ಣ ಕಡಿಮೆ ಆಗಿದೆ ಅಂತ ಒಳಗೊಳಗೇ ಒದ್ದಾಡ್ತಿದ್ದೆ. ನೀಲಿ ಇರಬಹುದ ಅಂತ ಹೊರಗಿನ ಆಕಾಶ ನೋಡಿದೆ. ಹಸಿರು ಇರಬಹುದ ಅಂತ ದೂರದ ಹುಲ್ಲುಗಾವಲು ನೋಡಿದೆ. ಕೆಂಪು ಇರಬಹುದಾ ಅಂತ ಉರೀತಿದ್ದ ಸೂರ್ಯನ್ನ ನೋಡಿದೆ. ಹಳದಿ ಇರಬಹುದ ಅಂತ ಉದುರಿ ಕೊಳೀತಿದ್ದ ಎಲೆಗಳ ರಾಶೀನ ನೋಡಿದೆ. ಇಷ್ಟೆಲ್ಲಾ ಮೇಲೆ ಕೆಳಗೆ, ಒಳಗೆ ಹೊರಗೆ ನೋಡ್ತಾ ನೋಡ್ತಾ ಆನಂದವಾಗಿರೋವಾಗ ಬಾಣಲಿ ಒಳಗಿದ್ದ ಬಣ್ಣಗಳು ತಮ್ಮನ್ನು ತಾವೇ ಮರೆತು ಒಂದೇ ಬಿಳಿ ಇಲ್ಲ ಕಪ್ಪು ಆಗಿ ನನ್ನನ್ನೇ ಮಿಕಮಿಕ ನೋಡ್ತಿದ್ವು. ಅದಕ್ಕೇ ಒಗ್ಗರಣೆ ಹಾಕಿ ಹೊಡದು ಬಿಡೋಣ ಅಂತ ಆಸೆ ಆದರೂ, ಮಾಡೋಕೆ ಹೊರಟಿದ್ದು ಇದು ಅಲ್ವಲ್ಲ ಅಂತ ತಬ್ಬಿಬ್ಬಾಗಿ ನಿಂತೆ.
ಇದು ನಡೆದು ಎಷ್ಟೋ ವರ್ಷ ಆಗಿದ್ದರೂ ಈವತ್ತಿಗೂ ಸರಿಯಾದ ಬಣ್ಣ ಬಳಸದೇ ಮಾಡಿದ ಪಲ್ಯ ಗಂಟಲಲ್ಲಿ ಇಳಿಯೋಲ್ಲ. ಹಾಗೇನೆ ಕಪ್ಪೋ ಬಿಳಿಯೋ ಆಗಿಬಿಟ್ಟ ಪಲ್ಯ ಕಂಡರೆ ಮೈ ಝುಮ್ಮನ್ನತೆ.
ಎಷ್ಟೋ ಜನ ಕಿವಿನಲ್ಲಿ ಪಿಸುಗುಟ್ಟಿದ್ದಾರೆ- ಯಾಕೆ ಸುಮ್ಮನೆ ಬಣ್ಣದ ಬಗ್ಗೆ ತಲೆ ಕೆಡಿಸ್ಕೋತೀಯ, ಕಪ್ಪೋ ಬಿಳೀನೋ ಮೂಡಿಗೆ ಸರಿಯಾಗಿ ಯಾವುದು ಹೊಂದತ್ತೋ ತಿಂದು ಬಿಡು, ಬಂದವರಿಗೆ ಬಡಿಸಿಬಿಡು ಅಂತ.
ನಾನೂ ಅವರ ಕಿವಿನಲ್ಲಿ ಪಿಸುಗುಡಿತೀನಿ- ಬಣ್ಣ ಒತ್ತು ಕಳಕೊಂಡು ಬಣ ಕಟ್ಟಿಕೊಂಡರೆ ಎಲ್ಲ ಬಣಬಣ ಅಂತ.
ಅವರು ಉಂಡಿದ್ದು ಉಗುಳೋದೋ ಬೇಡವೋ ಅಂತ ಮುಖಮುಖ ನೋಡತಾರೆ.
ಅತ್ತು ಉಳಿದದ್ದು
In ಅಂದಂದು, ಯೋಚನೆ on August 3, 2007 at 11:00 pmಅಳು ಬರುತ್ತದೆ: ಅಳುವಂಥದ್ದನ್ನು ನೋಡಿ ಜನ ನಕ್ಕಾಗ ಅಥವಾ ನಗದೇ ತುಟಿ ಬಿಗಿದು ಹಿಡಿದಾಗ ಅಥವಾ ಏನು ಮಾಡಬೇಕೆಂದು ಗೊತ್ತಾಗದೇ ಮುಖಮುಖ ನೋಡಿದಾಗ.
ಅಳು ಬರುತ್ತದೆ: ನೆನಪಿಟ್ಟುಕೊಳ್ಳಬೇಕಾದ್ದನ್ನು ಜನ ಮರೆತಾಗ ಅಥವಾ ನೆನಪು ಮಾಡಿಕೊಳ್ಳಲು ಹೆಣಗಿದಾಗ ಅಥವಾ ನೆನಪಾಗದೇ ಮಿಕಮಿಕ ನೋಡಿದಾಗ.
ಅಳು ಬರುತ್ತದೆ: ನೋಡಬೇಕಾದ್ದನ್ನು ಜನ ನೋಡದೇ ಹೋದಾಗ ಅಥವಾ ನೋಡಿ ಮುಖ ತಿರುಗಿಸಿದಾಗ ಅಥವಾ ನೋಡಿಯೂ ಬಿಂಕದಲ್ಲಿ ಕಣ್ಣು ಮುಚ್ಚಿ ಧ್ಯಾನಕ್ಕಿಳಿದಾಗ.
ಚಳಿಗಾಲದಲ್ಲಿ ಬಿಸಿಗಾಳಿಯ ಆಸೆಗೆ ಮೈಯೊಡ್ಡಿದಾಗ ಚರ್ಮ ನಗುತ್ತದೆ. ಚರ್ಮ ನಕ್ಕಿತೆಂದು ಮೂಳೆ ಸಿಟ್ಟುಮಾಡಿಕೊಂಡು ಸೆಟೆದುಕೊಳ್ಳುತ್ತದೆ. ಉಗುರುಗಳೆಲ್ಲಾ ಬೆಳೆಯುವ ಬದಲು ಕರಗಿ ಹೋಗುತ್ತದೆ.
ಇಪ್ಪತ್ತು ಮೂವತ್ತಿಗೆ ಜಾರಿ, ನಲವತ್ತಕ್ಕೆ ಮುಟ್ಟಿ ಐವತ್ತನ್ನೋ ಅರವತ್ತನ್ನೋ ತಬ್ಬುತ್ತದೆ ನಾಳೆ. ಹತ್ತರ ಮನಸ್ಸು ಮಾತ್ರ ಕಿರುಬೆರಳನ್ನು ಹಿಡಿದು ಪುಟ್ಟಪುಟ್ಟ ಹೆಜ್ಜೆ ಇಟ್ಟು ಹಿಂಬಾಲಿಸುತ್ತದೆ.
ಎಲ್ಲ ದಾಟಿ ಹೋದರೂ ಏನೋ ಉಳಿದುಬಿಡುತ್ತದೆ.
ಒಂದು ಅರ್ಜಿ
In ಅಂದಂದು, ಯೋಚನೆ on July 31, 2007 at 11:14 pmಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಒಪ್ಪಲೇ ಬೇಕೆಂದು ಒತ್ತಾಯ ಮಾಡಲಾರೆ. ಆದರೂ, ಪ್ರತೀಕವಾದರೆ ಎಲ್ಲಕ್ಕೂ ಹೆಚ್ಚು ಅರ್ಥಬರುತ್ತದೆ ಎಂದು ನನ್ನ ಮನಸ್ಸಿನಾಳದ ಆಸೆ.
ಪಕ್ಕದಲ್ಲೇ ಡೊಂಕು ಬಾಲ ಆಡಿಸುತ್ತಿದ್ದ ನಾಯಿ ನನ್ನ ಆಸೆ ಗೊತ್ತಾಗಿ ಹಂಗಿಸುವಂತೆ ಅಂಡು ತಿರುಗಿಸಿ ಹೊರಟು ಹೋಯಿತು. ಅದು ಎಚ್ಚರಿಕೆಯಿಂದ ತುಳಿಯದೇ ಇಟ್ಟ ಕಾಲ ನಡುವೆ ಹೊರಟ ಇರುವೆ ಸಾಲು. ಅದರ ಅಡಿಯ ಗಾರೆಯ ಮೇಲೆ ಇನ್ನೂ ಹಸಿಯಿದ್ದಾಗ ತುಂಟಾಟದಲ್ಲಿ ಮಾಡಿದ ಯಾರದೋ ಅಂಗೈ ಗುರುತು. ಎಲ್ಲಕ್ಕೂ ನನ್ನ ಆಸೆ ಗೊತ್ತಾಗಿ ಪಕಪಕ ನಗುತ್ತಿರುವುದು ನನಗೆ ಖಾತ್ರಿಯಾಯಿತು.
ಸರಿ, ಹಾಳಾಗಿ ಹೋಗಲಿ ಅಂದು ಕೊಂಡು ನನ್ನ ಕೈಯಲ್ಲಿ ವಕ್ರವಾಗಿ ಬೆಳೆದಿದ್ದ ಉಗುರನ್ನು ನೋಡಿಕೊಂಡೆ. ಅದರ ನೆರಳು ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಬಿದ್ದ ಕಡೆ ಹಳ್ಳವಾಯಿತು ಎಂಬ ಅನುಮಾನ ಬಂತು. ಬಗ್ಗಿ ನೋಡಿದೆ. ನೆರಳು ಬಿದ್ದದ್ದು ಎಲ್ಲಿ ಎಂದು ಗೊಂದಲವಾಗಿ ಸಣ್ಣಗೆ ಸಿಟ್ಟೂ ಬಂತು. ಯಾಕೆ ಯಾವುದರ ಮೇಲೆ ಅನ್ನುವುದಕ್ಕಿಂತ, ಎಷ್ಟು ಹೊತ್ತು ಎಷ್ಟು ಜೋರಾಗಿ ಎಂದು ಕೇಳುವುದು ಸೂಕ್ತ ಎಂದು ಹಲ್ಲು ಕಡಿದೆ.
ಹೆಚ್ಚು ಅರ್ಥ ಬರುವುದಿರಲಿ ಈ ಪ್ರತೀಕದ ಗಲಾಟೆಯಲ್ಲಿ ಇರುವ ಅರ್ಥವೂ ಕಳೆದುಕೊಳ್ಳುವ ಅಪಾಯ ನಿಜವಾಗ ತೊಡಗಿತು. ಕಣ್ಣು ಮುಚ್ಚಿದಾಗ ಆಗುವ ಅನುಭವ ಕತ್ತಲೆಯೇ? ಇದಕ್ಕೆ ಉತ್ತರ ಕಂಡು ಕೊಂಡರೆ ಸಾಕು, ಪ್ರತೀಕಗಳ ಗೋಜಿಗೇ ಹೋಗಬಾರದು. ಬೇಕಾದರೆ ಅವೇ ಬರಲಿ ಎಂದು ಮೊಂಡು ಹಿಡಿದು ಕೂತೆ.
“ಕುವೆಂಪು ಕವಿಯೇ ಅಲ್ಲ”
In ಅಂದಂದು, ಯೋಚನೆ on July 23, 2007 at 10:17 pmಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಪುಸ್ತಕದಲ್ಲಿ ಕುವೆಂಪುರವರ “ರಾಮಾಯಣ ದರ್ಶನಂ” ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. “ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ. ಕುವೆಂಪು ಕವಿ ಎನ್ನುವುದಾದರೆ ನಾನು ಕವಿಯೇ ಅಲ್ಲ, ನಾನು ಕವಿ ಎನ್ನುವುದಾದರೆ ಅವರು ಕವಿಯೇ ಅಲ್ಲ ಎಂದೆಲ್ಲ ಅಡಿಗರು ಕಿಡಿಕಾರಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ.
ಕನ್ನಡ ಕಾವ್ಯಲೋಕಕ್ಕೆ ಹೊಸ ತಿರುವನ್ನು ಕೊಟ್ಟ ಅತ್ಯಂತ ಪ್ರಭಾವಶಾಲಿ ಕವಿಯಾದ ಅಡಿಗರ ಎಷ್ಟೋ ಪದ್ಯಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ, ಪ್ರತಿಸಲವೂ ಮತ್ತೇನೋ ಹೊಸದು ಕಾಣುತ್ತದೆ. ಮುಂದೆ “ನಾನು ಹಿಂದು, ನಾನು ಬ್ರಾಹ್ಮಣ” ಎಂದು ಪದ್ಯ ಬರೆದು, ಜನಸಂಘಕ್ಕಾಗಿ ಚುನಾವಣೆಗೆ ಕೂಡ ಅಡಿಗರು ನಿಂತಿದ್ದರು. ಯಾಕೋ ತೇಜಸ್ವಿಯವರ ನೆನಪು ಓದುವಾಗ ಅಡಿಗರ ಈ ಎಲ್ಲ ಮಗ್ಗಲು ನೆನಪಾಯಿತು.
ಅಷ್ಟು ತೀಕ್ಷ್ಣವಾಗಿ ಕುವೆಂಪು ಕಾವ್ಯದ ಬಗ್ಗೆ ಪ್ರತಿಕ್ರಯಿಸುವುದಕ್ಕೆ ಅಡಿಗರಿಗಿದ್ದ ಒತ್ತಡದ ಬಗ್ಗೆ ಯೋಚಿಸಿದೆ. ತನ್ನ ಕಾವ್ಯದ ಬಗ್ಗೆ, ಕಾವ್ಯದ ಶೈಲಿಯ ಬಗ್ಗೆ ಆಳವಾದ ವಿಶ್ವಾಸವನ್ನು ಇಂಥ ಪ್ರತಿಕ್ರಿಯೆಗಳು ತೋರುತ್ತವೆಯೆ? ಒಬ್ಬ ಬರಹಗಾರನಿಗೆ, ಅದರಲ್ಲೂ ಅಡಿಗರಂಥ ಪ್ರತಿಭಾವಂತರಿಗೆ ಅಂಥ ಆತ್ಮವಿಶ್ವಾಸ ಸಹಜವೇನೋ? ಅಂಥ ಆತ್ಮವಿಶ್ವಾಸದ ಬಲದ ಮೇಲೇ ಸೂಕ್ಷ್ಮವಾದ, ಗಟ್ಟಿಯಾದ ಕೃತಿಗಳು ಹುಟ್ಟಲು ಸಾಧ್ಯವೇನೋ? ಈಗ ಅನಂತಮೂರ್ತಿಯವರು ಭೈರಪ್ಪನವರ ಬಗ್ಗೆ ಆಡಿದ ಮಾತುಗಳನ್ನು ಈ ವಿಚಾರಗಳ ಬೆಳಕಿನಲ್ಲಿ ನೋಡುವುದು ವಿವಾದದ ಬಿಸಿ ತಗ್ಗಿರುವಾಗ ಸಾಧ್ಯ ಎಂದು ಬಗೆಯುತ್ತೇನೆ. ಅದರಿಂದ ಪ್ರಯೋಜನವೂ ಇದೆ ಎಂದು ನನ್ನ ಎಣಿಕೆ.
ತೇಜಸ್ವಿಯವರು ಅಡಿಗ-ಕುವೆಂಪು ವಿವಾದದ ಬಗ್ಗೆ ಮಾತು ಮುಂದುವರಿಸಿ ಮತ್ತೂ ಮಹತ್ವದ ಮಾತುಗಳನ್ನು ಹೇಳಿದ್ದಾರೆ. ಆಗಿನ ಕಾಲದ ಹೊಸ ಪೀಳಿಗೆಯ ಬರಹಗಾರರು ಆ ವಿವಾದದ ಬಗ್ಗೆ ತಲೆ ಕೆಡಿಸಿಕೊಳಲಿಲ್ಲ ಎಂದು ಹೇಳುತ್ತಾ ಅದಕ್ಕೆ ಮೂರು ಕಾರಣಗಳನ್ನು ಕೊಡುತ್ತಾರೆ.
ಮೊದಲನೆಯದಾಗಿ – “ಸಮಾಜವಾದೀ ಆಂದೋಳನದಲ್ಲಿ ಭಾಗಿಗಳಾಗಿ ಸಾಹಿತ್ಯ ಕ್ಷೇತ್ರದಿಂದಲೇ ದೂರಾಗುತ್ತಿದ್ದುದು. ಸಾಹಿತ್ಯವನ್ನು ವಿಪರೀತ ಗಂಭೀರವಾಗಿ ಪರಿಗಣಿಸಿ ಶ್ರೇಷ್ಠತೆ ನಮ್ಮ ಜೀವನ್ಮರಣದ ಪ್ರಶ್ನೆ ಎಂದು ಪರಿಭಾವಿಸುವುದು ನಮಗೆ ಆಗ ಭ್ರಾಂತಿಯ ಪರಮಾವಧಿಯಂತೆ ಕಾಣುತ್ತಿತ್ತು.”
ಎರಡನೆಯದಾಗಿ – “ಬೇರೆ ಬೇರೆ ಕ್ಷೇತ್ರಗಳ ಚಟುವಟಿಕೆಗಳಿಂದಾಗಿ ದೊರತ ಹೊಸ ಹೊಸ ಮೌಲ್ಯ, ಅಳತೆಗೋಲುಗಳಿಂದ ಇಡೀ ಸಾಹಿತ್ಯ ಕ್ಷೇತ್ರದಲ್ಲೇ ಅರ್ಥವಂತಿಕೆಗಾಗಿ ಹುಡುಕಾಟ ನಡೆಯುತ್ತಿತ್ತು”
ಮೂರನೆಯದಾಗಿ- “ಬಹುಮುಖ್ಯವಾಗಿ … ಪ್ರತಿಕ್ರಯಿಸಲು ಅಗತ್ಯವಾದ ಧಾರ್ಮಿಕತೆ, ಮತ್ತು ಶ್ರದ್ಧೆಗಳು ಹೊಸ ಪೀಳಿಗೆಯ ಬರಹಗಾರರಲ್ಲಿ ಯಾರಲ್ಲೂ ಇರಲೇ ಇಲ್ಲ … ಕುವೆಂಪು ಕವಿಯೇ ಅಲ್ಲದೆ ಅಡಿಗರು ಮಾತ್ರವೇ ಕವಿಯೆಂದಾದರೂ ನಮಗೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಅನ್ನಿಸಿತು”
ಇಷ್ಟು ಹೇಳಿ ನಂತರ ಒಂದು ರೀತಿಯಲ್ಲಿ ಕುವೆಂಪುರವರು ಅಪ್ರಸ್ತುತ ಮತ್ತು ಅರ್ಥಹೀನ ಆಗಿದ್ದರು ಎನ್ನುತ್ತಾರೆ. ಹಾಗೆಯೇ – “ಆಗಿನ ನವ್ಯಕಾವ್ಯದ ಮುಂಚೂಣಿಯಲ್ಲಿದ್ದ ವಿಪ್ರೋತ್ತಮರಿಗೆ ಕುವೆಂಪು ಅವರನ್ನು ಅಮಾನ್ಯಗೊಳಿಸುವ ಭರದಲ್ಲಿ ಅದಕ್ಕಿಂತಲೂ ಆಳವಾಗಿ ತಮ್ಮನ್ನೇ ತಾವು ಅಮಾನ್ಯಗೊಳಿಸಿಕೊಳ್ಳುತ್ತಿರುವುದರ ಪರಿವೆಯೇ ಇರಲಿಲ್ಲ” ಎನ್ನುತ್ತಾರೆ.
ತೇಜಸ್ವಿಯವರ ಈ ಮೇಲಿನ ಮಾತುಗಳ ಬೆಳಕಲ್ಲಿ ನನಗೆ ಒಂದು ಅನುಮಾನ. ಅಂದಿನ ಕುವೆಂಪುವಿನ ಹಾಗೆ, ಭೈರಪ್ಪನವರು ಸಾಹಿತ್ಯಿಕವಾಗಿ ಇಂದು ಅಪ್ರಸ್ತುತರೇ ಮತ್ತು ಅರ್ಥಹೀನರೆ? ಅನಂತಮೂರ್ತಿಯವರ ಮಾತು ಯಾವುದೇ ನಿಜವಾದ ಸಾಹಿತ್ಯಕ ವಿವಾದಕ್ಕೂ ಇಲ್ಲಿ ಎಡೆಮಾಡಿ ಕೊಟ್ಟೇ ಇಲ್ಲ, ಅಲ್ಲವೆ? ಪತ್ರಿಕೆಗಳು ಮತ್ತೊಂದು ಬಿಸಿ ಸುದ್ದಿ ಸಿಕ್ಕುವವರೆಗೂ ಎಡೆಬಿಡದೆ ವಿವಾದವನ್ನು ವರದಿ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ ಅದರಲ್ಲಿ ತಾವೂ ತೊಡಗಿಕೊಂಡಿದ್ದಾರೆ. ಆದರೂ ಇಂದಿನ ಹೊಸ ಪೀಳಿಗೆಯ ಸಾಹಿತಿಗಳು ಈ ವಿವಾದದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಬಣಗಳಾಗಿ ಒಡೆಯದೆ ಉಳಿದಿದ್ದಾರೆ ಅಲ್ಲವೆ? ಹೊಸ ಪೀಳಿಗೆಯ ಬರಹಗಾರರು ಯಾವ ಹೊಸ ಮಗ್ಗುಲಿನ ಶೋಧದಲ್ಲಿ ನಿರತರಾಗಿ ಈ ವಿವಾದವನ್ನು ಕಡೆಗಣಿಸಿದ್ದಾರೆ? ಅವರ ಮೌನ ತಾವು ತಳೆದ ಯಾವ ಆಳದ ತಾತ್ವಿಕ ನಿಲುವನ್ನು ತೋರಿಸುತ್ತದೆ? ಅಥವಾ ಬರೇ ಅವಕಾಶವಂಚಿತರಾಗುವುದಕ್ಕೆ ಹೆದರಿದ ಸಮಯಸಾಧಕತನವೋ ಎಂಬ ಪ್ರಶ್ನೆಯೂ ಕಾಡುತ್ತದೆ. ಉತ್ತರಕ್ಕಾಗಿ ಕಾದು ನೋಡಬೇಕು.
ಹನೀಫ್ ಎಂಬ ಮೂಡಿಗೆರೆ ಹುಡುಗ
In ಅಂದಂದು, ಯೋಚನೆ on July 20, 2007 at 10:14 pmಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್‌ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ ‘ದ ಆಸ್ಟ್ರೇಲಿಯನ್’ ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ ‘ಲೀಕ್, ಲೀಕ್’ ಎಂದು ಬೊಬ್ಬೆ ಹೊಡೆಯಿತು. ಹನೀಫ್ ಬಗ್ಗೆ ಜಡ್ಚಮೆಂಟಲ್ಲಾಗಿ ಮೊದಲಿಂದಲೂ ಮಾಧ್ಯಮದ ಜತೆ ಮಾತಾಡುತ್ತಲೇ ಬಂದಿದ್ದ ಪ್ರಧಾನಿಯಾದಿಯಾಗಿ ಎಲ್ಲರೂ ಈಗ ಕೂಗಲು ತೊಡಿದ್ದು ವಿಪರ್ಯಾಸವೆಂದು ಎಲ್ಲರಿಗೂ ತೋರಿತು. ಆಗ ಹನೀಫ್ ಲಾಯೆರ್ ಮುಂದೆಬಂದು “ನಾನೇ ಮಾಧ್ಯಮಕ್ಕೆ ಕೊಟ್ಟಿದ್ದು. ಆ ಸಂದರ್ಶನ ಪೋಲೀಸರಿಗೆ ಆಸ್ತಿಯಾಗಿರುವಷ್ಟೇ ತನ್ನ ಕ್ಲೈಂಟಿಗೂ ಸೇರಿದ್ದು. ನಾನು ತಪ್ಪು ಮಾಡಿದ್ದರೆ, ಬಂದು ಹಿಡಿದುಕೊಂಡು ಹೋಗಿ” ಎಂದು ಪ್ರಧಾನಿ, ಅಟರ್ನಿ-ಜನರಲ್ ಆದಿಯಾಗಿ ಎಲ್ಲರನ್ನೂ ಹೆಸರಿಸಿ ಸವಾಲೆಸದ. ಗಪ್‌ಚಿಪ್.
12 ದಿನಗಳ ಕಾಲ ಚಾರ್ಜ್ ಮಾಡದೆ ಬಂಧಿಸಿಟ್ಟುಕೊಂಡು, ಕಡೆಗೆ ಕೋರ್ಟಿನಲ್ಲಿ ನಿಲ್ಲಿಸಿದಾಗ, ಕೇವಲ ಹತ್ತು ಸಾವಿರದ ಶೂರಿಟಿ ಮೇಲೆ ಹನೀಫ ಬಿಡುಗಡೆಯಾದಾಗ, ಆಸ್ಟ್ರೇಲಿಯಾದ ಸರ್ಕಾರ ತಲೆಯಿಂದ ಕಾಲವರೆಗೆ ಕಂಪಿಸಿತು. ಸಿಟ್ಟಿನಿಂದ, ಹನೀಫ್‌ನ ವರ್ಕ್-ವೀಸಾ ರದ್ದು ಮಾಡಿತು. ಆಧಾರವಿಲ್ಲದ ಬಂಧನ, ಆರೋಪ ಸಾಬೀತಾದಾಗ ಹನೀಫ ಆಸ್ಟ್ರೇಲಿಯಾದಲ್ಲಿದ್ದರೆ ತಮ್ಮನ್ನು ಸೂ ಮಾಡಬಹುದು ಎಂದು ಹೆದರಿದರು ಅಂದುಕೊಂಡೆ. ಆದರೆ, ಅದಕ್ಕಿಂತ ನೀಚತನವಿದು ಎಂದು ಗೊತ್ತಾಗಿದ್ದು ಆನಂತರ. ಕೋರ್ಟ್ ಬಿಡುಗಡೆ ಮಾಡಿದರೂ, ಹನೀಫ್ ವೀಸ ರದ್ದಾದ ಕಾರಣ ಸಿಡ್ನಿಯಲ್ಲಿ ಡಿಟೆಂಶನ್‌ಗೆ ಹೋಗಬೇಕಾಗುತ್ತದೆ. ಬ್ರಿಸ್ಬೆನಿನಿಂದ ಲಾಯರ್ ಪದೇ ಪದೇ ಸಿಡ್ನಿಗೆ ಬಂದು ಹೋಗುವುದು ಹೆಚ್ಚು ಖರ್ಚು ತಗುಲುವಂಥ ವಿಚಾರ. ಮೇಲಾಗಿ, ಹನೀಫ್ಸಜ್ಜನ ಎಂದು ಜನತೆ ಅಂದುಕೊಂಡಾರು ಎಂಬ ಆತಂಕ ಕೂಡ. ಜನರಿಗೆ ಗೊತ್ತಾಗಲಿ ಎಂದೇ ಹನೀಫ್‌ನ ಲಾಯರ್ ಅವನ ಸಂದರ್ಶವನ್ನು ಹೊರಹಾಕಿದ್ದು ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ.
ಹನೀಫ್ ಶೂರಿಟಿ ಹಣ ಕೊಡದೆ ಪೋಲೀಸರ ಸುಪರ್ದಿಯಲ್ಲೇ ಇರಲು ನಿರ್ಧರಿಸಿದಾಗ ಅವನನ್ನು ದಿನಕ್ಕೆ 23 ಗಂಟೆಗಳ ಕಾಲ ಸಾಲಿಟೆರಿ ಕನ್‌ಫೈನ್‌ಮೆಂಟಿನಲ್ಲಿ ಇಟ್ಟಿದ್ದಾರೆ. ಕೋರ್ಟು ಹನೀಫ್‌ನನ್ನು ಬಿಡುಗಡೆ ಮಾಡಿ ಸಮಾಜದಲ್ಲಿ ಅವನು ವಾಸವಾಗಿರುವುದುಅಪಾಯವಲ್ಲ ಎಂದಿದ್ದರೂ ಜೈಲಿನ ಈ ಕಠೋರತೆಗೆ ಕಾರಣ ಮತ್ತು ಹಿನ್ನೆಲೆ ರಾಜಕೀಯವಲ್ಲದೆ ಬೇರೇನೂ ಇಲ್ಲ ಎಂಬುದು ಈಗ ಜನಜನಿತವಾಗಿದೆ.
ಹೊರಬಿದ್ದಿರುವ 142 ಪುಟಗಳ ಸಂದರ್ಶನವನ್ನು ಓದುತ್ತಾ ಹೋದಂತೆ ಬೋರಾಗುವಷ್ಟು ಅವರಿವರ ಹೆಸರು, ಹೆಸರಿನ ಸ್ಪೆಲಿಂಗ್, ಕಾಲೇಜಿನ ಹೆಸರು, ಅದರ ಸ್ಪೆಲ್ಲಿಂಗ್, ಅಡ್ರೆಸ್‌ಗಳು ಅವುಗಳ ಸ್ಪೆಲಿಂಗ್‌ಗಳು ತುಂಬಿದ್ದು, ಅದೆಲ್ಲದರ ನಡುವೆ ಮುಖ್ಯವಾದ ವಿಷಯಗಳಿಗೆ ಹನೀಫ್ ನೀಡಿದ ಉತ್ತರಗಳು ಹುಡುಕಿ ತೆಗೆಯುವುದು ಪ್ರಾಯಾಸದ ಕೆಲಸವೇ. ಆದರೂ ಪೂರ್ತಿ ಓದಿದಾಗ ಏನು ಹುಚ್ಚು ಅನಿಸಿತು.
ಕಾಲೇಜು ಮುಗಿಸಿ ಲಂಡನ್‌ಗೆ ಹೋದಾಗಿನಿಂದ ಶುರುವಾಗಿ ಪೋಲೀಸರ ಪ್ರಶ್ನೆಗಳಿಗೆ ಸರಳವಾಗಿ, ನಾವು ನೀವು ಕೊಡುವಂತೆ ಉತ್ತರ ಕೊಟ್ಟಿರುವುದು ಕಾಣುತ್ತದೆ. ಮೊದಲಿಂದ ಕಡೆಯವರೆಗೂ “ಈ ಸಂದರ್ಶನಕ್ಕೆ ಲಾಯರ್ ಸಹಾಯ ಬೇಡ, ನೀವು ಕೇಳುತ್ತಿರುವುದಕ್ಕೆ ಸಮಂಜಸ ಉತ್ತರ ಕೊಟ್ಟುಬಿಡುತ್ತೇನೆ” ಎಂಬ ಮುಗ್ಧತೆ ಕಾಣುತ್ತದೆ. ಪ್ರತಿ ಪ್ರಶ್ನೆಗೂ ಉತ್ತರಗಳು ಸಮಂಜಸವಾಗಿರುವುದನ್ನು ಪೋಲೀಸರೇ ಒಪ್ಪಿಕೊಳ್ಳುತ್ತಾ ಹೋಗಿದ್ದಾರೆ. ಹಾಗೆ ನೋಡಿದರೆ, ಪೋಲೀಸರು ತುಂಬಾ ಸಜ್ಜನರಾಗಿಯೇನಡೆದು ಕೊಂಡಿದ್ದಾರೆ ಅನಿಸಿತು.
ಒಂದು ಕಡೆ, ಹನೀಫನ ಡೈರಿಯಿಂದ ಒಂದು ಕಾಗದದ ಹಾಳೆ ತೆಗೆದು “ಇದನ್ನು ನೀನು ಬರೆದಿದ್ದ?” ಎಂದು ಕೇಳುತ್ತಾರೆ. ಹನೀಫ “ಇದು ನನ್ನ ಕೈಬರಹ ಅಲ್ಲ” ಎಂದು ಮತ್ತೆ ಮತ್ತೆ ಹೇಳುತ್ತಾನೆ. ಪೋಲೀಸರು “ಇದು ನಿನ್ನ ಡೈರಿಯಲ್ಲಿ ಇದ್ದದ್ದು. ಬೇರೆಯವರದುಆಗಿರಲು ಹೇಗೆ ಸಾಧ್ಯ” ಎಂದು ಜಬರದಸ್ತು ಮಾಡುತ್ತಾರೆ. ಕ್ಷಣ ತಡೆದು, ಪೋಲೀಸ್ ಒಬ್ಬ ಹೊರಗೆ ಹೋಗಿ ಬಂದು “ಕ್ಷಮಿಸು, ಆ ಹಾಳೆಯ ಬರವಣಿಗೆ ನಿನ್ನ ಕೈಬರಹ ಅಲ್ಲ ಎಂದುದು ಸರಿಯೇ. ಅದನ್ನು ಒಬ್ಬ ಪೇದೆ ಬರೆದುದು ಎಂದು ಈಗ ಹೇಳಿದರು” ಎಂದು ಹೇಳುತ್ತಾನೆ. ಎಂಥ ಕ್ಷುಲ್ಲಕ ತಪ್ಪು ಮಾಡುತ್ತಾರೆ ಎಂದು ನಗು ಬಂದರೂ, ಕೂಡಲೇ ತಮ್ಮ ತಪ್ಪೊಪ್ಪಿಕೊಂಡು ಅದನ್ನು ದಾಖಲಿಸಿದ್ದರ ಬಗ್ಗೆ ಕಿಂಚಿತ್ತು ಒಳ್ಳೆಯದೆನಿಸಿತು. (ಇದು ನೋಡಿ: ಜನರ ಜತೆ ದಿನವಹಿ ವ್ಯವಹರಿಸುವ ಪೋಲೀಸರು, ಪತ್ರಕರ್ತರು ಸಜ್ಜನರಾಗಿಯೇ ಇರುತ್ತಾರೆ, ಅವರ ಮೇಲೆ ಪ್ರಭಾವ ತರುವ ಮೇಲೆ ಕೂತ ಮಂದಿ ದೌರ್ಜನ್ಯದ ಪ್ರತಿರೂಪಗಳಾಗಿರುತ್ತಾರೆ ಎಂಬ ಕಹಿ ಸತ್ಯ)
ಈ ವರ್ಷ ಆಸ್ಟ್ರೇಲಿಯಾದಲ್ಲಿ ಫೆಡರಲ್ ಚುನಾವಣೆ. ಸೋಲಬೇಕಾಗಿದ್ದ ಹಿಂದಿನ ಎರಡು ಚುನಾವಣೆ ಸಮಯದಲ್ಲಿ ಇದೇ ಧೂರ್ತ ಪ್ರಧಾನಿ ನಾಚಿಕೆಬಿಟ್ಟು ಸುಳ್ಳು ಮೋಸ ತಟವಟಗಳ ಮೂಲಕ ಅಧಿಕಾರಕ್ಕೆ ಬಂದ. ಇರಾಖ್ ಮತ್ತು ಆಫ್ಘಾನಿಸ್ತಾನದ ರೆಫ್ಯೂಜೀಸ್ ಬಗ್ಗೆ ನೀಚವಾಗಿ ಮಾತಾಡಿ ಅವರನ್ನು ಪ್ರಾಣಿಗಳಂತೆ ಚಿತ್ರಿಸಿ ಜನರ ಕಣ್ಣಿಗೆ ಮಣ್ಣೆರಚಿದ. ಮುಂದಿನ ಚುನಾವಣೆಯಲ್ಲಿ ಇಂಟೆರೆಸ್ಟ್ ರೇಟ್ ಬಗ್ಗೆ ಗಾಬರಿ ಹುಟ್ಟಿಸಿ, ಜನರನ್ನು ಆತಂಕಗೊಳಿಸಿ ಅಧಿಕಾರಕ್ಕೆ ಬಂದ. ಈಗಲೂ ಸೋಲುವ ಹಾಗೆ ಕಾಣುತ್ತಿದ್ದಾನೆ. ಹನೀಫನನ್ನು ತನ್ನ ರಾಜಕೀಯ ಉಳಿವಿನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಹಾಗೇನಾದರೂ ಆದರೆ, ಆಸ್ಟ್ರೇಲಿಯಾದ ಜನತೆ ತಾವು ಇಂಥ ನೀಚ ದರಿದ್ರ ಜನಗಳಿಂದ ಆಳಿಸಿಕೊಳ್ಳಲು ತಕ್ಕವರು ಎಂದು ಲೋಕಕ್ಕೇ ಸಾರುತ್ತಿದ್ದಾರೆ ಎಂದು ಮನಸ್ಸು ಕಹಿಯಾಗುತ್ತದೆ.
ಆಸ್ಟ್ರೇಲಿಯಾದ ರಾಜಕೀಯವಷ್ಟೇ ಅಲ್ಲದೆ, ಜಾಗತಿಕವಾಗಿ ಯೋಚಿಸಿದಾಗ: ಗುಹೆಯಲ್ಲೋ, ಅರಮನೆಯಲ್ಲೋ ಕೂತ ಬಿನ್-ಲಾದಿನ್‌ನಂಥ ನೀಚರು ಗೆದ್ದನಗೆ ನಗುತ್ತಿರುತ್ತಾರೆ. ಬಿಳಿಯರ ಸೇವೆ ಮಾಡಲು ಹೋಗಿರುವ ಹನೀಫನಂತವರಿಗೆ ಹೀಗಾಗುವುದು ಅವರಿಗೆ ಖುಷಿಯ ಸಂಗತಿಯೇ. ಇವನಿಗಾದುದನ್ನು ನೋಡಿಯಾದರೂ ಉಳಿದವರು ಬಿಳಿಯರ ಕ್ರೂರತೆಯ ಬಗ್ಗೆ ಅರಿತುಕೊಳ್ಳಲಿ, ಬಂದೂಕು ಬಾಂಬು ಎತ್ತಿ ಹುಚ್ಚರಂತೆ ಹೊಡೆದಾಡಲಿ ಎಂದು ಸಾರುತ್ತಾರೆ. ಅಲ್ಲದೆ, ಇಷ್ಟು ದಿನ ದತ್ತವಾಗಿದ್ದ- ಪಾಶ್ಚಿಮಾತ್ಯ ಪ್ರಭುತ್ವಗಳಿಗೆ ಕಂಟಕವಾಗಿದ್ದ ಅಭಿವ್ಯಕ್ತಿ ಸ್ವಾತಂತ್ಯ್ರದಂಥ ಹಲವಾರು ಸ್ವಾತಂತ್ಯ್ರಗಳು ಈಗ ಗಂಟುಮೂಟೆ ಕಟ್ಟಿ ಮೋರಿಗೆಸೆಯುವ ಮಟ್ಟಕ್ಕೆ ಬಂದು ನಿಂತಿರುವುದು ಯಾರಿಂದಾದ ತಪ್ಪು ಎಂದು ಯೋಚನೆಗೀಡಾಗುತ್ತೇನೆ. ಹನೀಫನ ಸಂದರ್ಶನದ ಈ ಕಡೆಯ ಮಾತುಗಳು ಕಿವಿಯಲ್ಲಿ ಹಾಗೇ ಉಳಿಯುತ್ತದೆ-
Just want to let you know. And I, I don’t want to spoil my name and my profession. That’s the main thing. And I’ve been a professionalist until now and I haven’t been involved in any kind of extra activities,.. And I want, just want to live in life as a professinalist in the medical profession. That’s what I want
ಹವಾಮಾನೋವಾಚ
In ಅಂದಂದು, ಯೋಚನೆ on June 8, 2007 at 9:28 am[ಸಾವಿರಾರು ಜನರ ಮುಂದೆ ಕೂಗುವ ಹಾಗೆ ಕೊಂಚ ಎತ್ತರದ ದನಿಯಲ್ಲಿ ಓದಿಕೊಳ್ಳಬೇಕು]
ಛಳಿಯ ಹಿನ್ನೆಡೆ! ಪಶ್ಚಿಮದಿಂದ ಮೋಡಗಳ ಮುನ್ನಡೆ! ಎರಡು ದಿನದಿಂದ ಸಿಡ್ನಿ ಸುತ್ತಮುತ್ತ ರಾಚುತ್ತಿರುವ ಜಡಿಮಳೆ ಇನ್ನೂ ಮೂರು ನಾಕು ದಿನ ನಿಲ್ಲುವ ಸೂಚನೆಯಿಲ್ಲ! ವಾರವಿಡೀ “ಮೋಡ ಮುಸುಕಿದ ವಾತಾವರಣ”! ಜನಗಳ ಗೊಣಗಾಟ! ಸಿಡ್ನಿಗೆ ನೀರೂಡಿಸುವ ವಾರಗಂಬ ಜಲಾಶಯದ ಮಟ್ಟವೂ ಏರುತ್ತಿರುವು ಸೂಚನೆ! ಉತ್ತರದ ಕ್ವೀನ್ಸ್‌ಲಾಂಡಿನ ದಕ್ಷಿಣದಲ್ಲೂ ಭಾರಿ ಮಳೆ! ಒಳನಾಡಿನಲ್ಲಿ ಈ ವರ್ಷ ಹೀಗೆ ಮಳೆಯಾದರೆ ಬರಗಾಲ ಕೊನೆಗೊಳ್ಳಬಹುದೆಂಬ ಆಶಾಕಿರಣ!
[ಈಗ ಕೊಂಚ ದನಿ ತಗ್ಗಿಸಿಕೊಳ್ಳಬಹುದು]
ನಮ್ಮ ಮನೆಯ ಹತ್ತಿರದ ತೊರೆಯಲ್ಲೂ ಈವತ್ತು ಬೆಳಿಗ್ಗೆ ನೀರಿನ ಓಟ ಹೆಚ್ಚಿದೆ! ಅದಕ್ಕೆ ಕಟ್ಟಿರುವ ಕಾಲ್ಸೇತುವಿನವರೆಗೂ ನೀರು ತುಂಬಿ ಹರಿದ ದಿನಗಳು ನೆನಪಿದೆ! ಮತ್ತೆ ಅಂಥ ದಿನಗಳು ಈ ವರ್ಷ ಬರಬಹುದು ಎಂಬುದು ಎಲ್ಲರ ಅಂಬೋಣ! ಇವಿಷ್ಟೂ ನಾನಿರುವ ಊರಿನ ಹವಾಮಾನದ ವಿಶೇಷ ಸಮಾಚಾರ!
[ಇನ್ನು ಮನದಲ್ಲೇ ಓದಿಕೊಳ್ಳಬಹುದು]
ನಮ್ಮಲ್ಲಿನ ಬರಗಾಲದಷ್ಟು ಹರಿತ ಇಲ್ಲಿಯ ಬರಗಾಲಕ್ಕಿಲ್ಲ. ಕೆಲವು ರೈತರು ಇಲ್ಲಿಯೂ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೂಡ. ನೂರಾರು ವರ್ಷ ಕಂಡಿರದಂಥ ಮಳೆಬಾರದ ಈ ಬರಗಾಲ ಜನರಲ್ಲಿ ನೀರಿನ ಬಗ್ಗೆ, ಭೂಶಾಖದ ಬಗ್ಗೆ ಎಚ್ಚರಿಕೆಯಂತೂ ಮೂಡಿಸಿದೆ ಎನ್ನುವದು ಸುಳ್ಳಲ್ಲ.
ನೀತಿ ಕತೆ
In ಕಲ್ಪನೆ, ಯೋಚನೆ on June 5, 2007 at 12:07 pmಗಡದ್ದಾಗಿ ಊಟ ಮುಗಿಸಿ, ಕೈ ತೊಳೆದು ದೀಪದ ಮುಂದೆ ಕೂತೆ. ನಿದ್ದೆ ಬರುಷ್ಟರಲ್ಲಿ ಒಂದು ನೀತಿ ಕತೆ ಬರೀಬೇಕು ಅಂತ ಮನಸ್ಸು ಬಂತು.
ಹೇಗಿರಬೇಕಪ್ಪಾಂದರೆ, ಎಂಥವರಿಗೂ ನೀತಿ ಹೇಳೋ ಕತೆ ಆಗಿರಬೇಕು. ಧರ್ಮಿಷ್ಠ ಪಿಕ್‌ಪಾಕಟ್‌ರಿಗೂ, ಕಳ್ಳ ನೀತಿವಂತರಿಗೂ. ಮತ್ತು ಇವೆರಡು ಆಗಿದ್ದೂ ಎರಡಕ್ಕೂ ಸೇರದವರಿಗೂ ಅದು ಸಲ್ಲಬೇಕು.
ಹೇಗಿರಬೇಕಪ್ಪಾಂದರೆ, ಚುಚ್ಚಬೇಕು, ಹೊಳೆಸಬೇಕು, ಮಿಡಿಬೇಕು. ಕತೆಯ ಕೊನೆ ಸಾಲು ಮುಗಿಯೋ ಅಷ್ಟರಲ್ಲಿ ಓದಿದವರು ಬದಲಾಗಿ ಬಿಟ್ಟಿರಬೇಕು. ನೀತಿವಂತರು ಕಳ್ಳರಾಗಬೇಕು. ಕಳ್ಳರು ನೀತಿವಂತರಾಗಬೇಕು.
ಹೇಗಿರಬೇಕಪ್ಪಾಂದರೆ, ಬರೀ ಈವತ್ತಿನವರಿಗೆ ಮಾತ್ರ ಆದರೆ ಸಾಲದು. ಸಾವಿರಾರು ವರ್ಷದ ಹಿಂದಿನವರಿಗೂ, ಮುಂದೆ ಬರೋ ಸಾವಿರಾರು ವರ್ಷದವರೆಗೂ ಸಲ್ಲಬೇಕು. ಈವತ್ತಿನ ಬೆಳಕು ಯಾವತ್ತಿಗೂ ಬಿದ್ದು ಕತ್ತಲೆಯ ಒಳಗನ್ನ ಬೆಳಗಬೇಕು.
ಹೇಗಿರಬೇಕಪ್ಪಾಂದರೆ, ಮತ್ತೆ ಮತ್ತೆ ಓದಿದವರಿಗೆ ಬೇರೆ ಬೇರೆ ನೀತಿ ಹೇಳೋ ಅಂಥ ಕತೆ ಆಗಬೇಕು. ಮೊದಲ ಸಲ ಓದಿದಾಗ ಒಳ್ಳೇವ್ರಾದೋರು, ಎರಡನೇ ಸಲ ಓದಿದಾಗ ಕೆಟ್ಟವರಾಗಬೇಕು. ಮೂರನೇ ಸಲ ಓದಿದಾಗ ಕೆಟ್ಟವ್ರು ಒಳ್ಳೇವ್ರು ಒಟ್ಟೊಟ್ಟಿಗೆ ಆಗಬೇಕು. ಒಂದೇ ಸಲ ಕೆಟ್ಟವರೂ ಒಳ್ಳೆವರೂ ಆಗೋದು ಹ್ಯಾಗೆ ಅನ್ನೋ ಪ್ರಶ್ನೇನೆ ನಾಶ ಆಗಿಬಿಡಬೇಕು. ಅಂಥ ಕತೆ ಆಗಿರಬೇಕು.
ಅಂಥ ಕತೆ ಬರೆದು ಮುಗಿಸೋ ಅಷ್ಟರಲ್ಲಿ ನಾನು ಏನೇನು ಆಗಿರಬೇಕಾಗತ್ತಲ್ಲ ಅಂತ ವರಿ ಮಾಡಿಕೊಂಡು ಕೂತೆ. ಎದುರಿಗಿದ್ದ ದೀಪ ವಾಲಾಡ್ತಾ ಇತ್ತು.
ಪಳೆಯುಳಿಕೆಗಳ ಪಿಸುನುಡಿ
In ಅಂದಂದು, ಕಲ್ಪನೆ, ಯೋಚನೆ on June 1, 2007 at 11:14 amಒಂದೊಂದು ಸಲ ನೂರಾರು ವರ್ಷ ಸುಮ್ಮನೆ ಕೂತಿರೋ ಪಳೆಯುಳಿಕೆಗಳು ಮಾತಾಡ್ತಾವಂತೆ. ಜಗಳ ಆಡ್ತಾವಂತೆ. ನಾನು ನಿನಗಿಂತ ಹಳೆಯ ಪಳೆಯುಳಿಕೆ. ಆದರೆ ನಿನಗಿಂತ ನಾನು ಹೆಚ್ಚು ಆಳದಲ್ಲಿದ್ದೀನಿ. ನೀನು ಬರೀ ನೂರಾರು ವರ್ಷದ ಹಿಂದಿನ ಮಾತಾಡಿದರೆ ನಾನು ಸಾವಿರಾರು ವರ್ಷದ ಹಿಂದಿನ ಮಾತಾಡ್ತೀನಿ. ನಿನ್ನ ಸಾವಿರಾರು ವರ್ಷದ ಮಾತು ಯಾರಿಗೆ ಬೇಕು, ನೂರಾರು ವರ್ಷದ ಮಾತೇ ಮುಖ್ಯ ರೆಲವೆಂಟು. ಹೀಗೆ ಏನೇನೋ ಮಾತಡ್ಕಂಡು ಅವುಗಳು ಪಿಸುದನೀಲಿ ಕೊಸರಾಡೋದು.
ಆ ಒಂದೊಂದು ಸಲದ ಮಾತು ಒಂದೊಂದು ಸಲ, ವಾಂತಿ ಮಾಡೋಕೆ ಅಂತ ಒಂದೊಂದು ಸಲ ರಾತ್ರಿ ಎದ್ದೋನಗೆ ಕೇಳಿಬಿಟ್ಟರೆ ಮುಗೀತು.
ಇದ್ದಕಿದ್ದಂಗೆ ಬೋರಾದ ಊರಲ್ಲಿ ದೊಂಬರಾಟ ಶುರು ಆಗತ್ತೆ. ಊರಿಗೆ ಸರ್ಕಸ್ ಬಂದು ಟೆಂಟು ಹಾಕಿ ಬಿಡತ್ತೆ. ಸರ್ಕಸಿಂದ ತಪ್ಪಿಸಿಕೊಂಡ ಪ್ರಾಣಿಗಳು ಊರೆಲ್ಲಾ ಓಡಾಡ್ತವೆ. ಒಂದರ ಮೇಲೊಂದು ಬಿದ್ದು ಹರಿದು ಮುಕ್ಕೋಕೆ ಹೊರಡ್ತಾವೆ. ಸರ್ಕಸ್ ಮಾಲೀಕ ಎಲ್ಲೋ ಕೂತ್ಕೊಂಡು ನಗ್ತಾನೆ. ಪ್ರಾಣಿ ಹಿಡಿಯೋರು ಕರೆಸಿ ಎಲ್ಲ ಪ್ರಾಣೀನೂ ಒಂದೊಂದಾಗಿ ಹಿಡಿಸ್ತಾನೆ. ಅವಕ್ಕೇ ಅಂತಲೇ ಕಟ್ಟಿಸಿರೋ ಬೋನ್ನಲ್ಲಿ ಹಾಕೋ ತನಕ ಅಪ್ಪ ಅಮ್ಮಂದಿರು ಮಕ್ಕಳನ್ನ ಮನೆಯಿಂದ ಆಚೆ ಕಳಿಸದೆ ಹಿಡ್ಕೊಂಡು ಕೂತಿರ್ತಾರೆ.
ಈ ಪಳೆಯುಳಿಕೆಗಳು ಯಾವುದೋ ಭೂಮಿಯ ಪದರದಿಂದ ಮಾತಾಡಿದರೆ ಯಾರಿಗೆ ಕೇಳತ್ತೆ ಅಂತ ಗುಮಾನಿ ಪಡಬೇಡಿ. ಅದಕ್ಕೂ ಒಂದು ಸಮಯ ಸಂದರ್ಭ ಪರಿಸ್ಥಿತಿ ಬೇಕು. ಅವುಗಳ ಕೊನರಾಟ ಕೇಳಿಸಬೇಕು ಅಂದರೆ ಅಕ್ಕಪಕ್ಕದಲ್ಲಿರೋರೆಲ್ಲ ಗಪ್‌ಚಿಪ್ಪಾಗಿ ಇರಬೇಕು. ಅದಕ್ಕೆ ಉಪ್ಪು ಮಾರೋರು, ತರಕಾರಿ ಮಾರೋರು ಸುಮ್ಮನಿರಬೇಕು. ಸಾಣೆ ಹಿಡಿಯೋರು, ಬೀಗ ರಿಪೇರಿ ಮಾಡೋರು ಸುಮ್ಮನೆ ಇರಬೇಕು. ಕಸ ಗುಡಿಸೋರು, ಬೀದಿ ತೊಳೆಯೋರು ಸುಮ್ಮನಿರಬೇಕು. ಮಕ್ಕಳಿಗೆ ಕತೆ ಹೇಳೋರು, ಜೋಗುಳ ಹಾಡೋರು ಸುಮ್ಮನಿರಬೇಕು. ಹಾಡೋ ಪ್ರೇಮಿಗಳು, ನಲ್ಲನ ಕಿವೀಲಿ ಪಿಸುನುಡಿಯೋ ನಲ್ಲೇರು ಸುಮ್ಮನಿರಬೇಕು. ಅಂಥ ಮೌನದಲ್ಲಿ ಮಾತ್ರ ಈ ಪಳೆಯುಳಿಕೆಗಳ ಮಾತು ಕೇಳತ್ತೆ, ಮುಖ್ಯ ಅನಿಸತ್ತೆ.
ಬೆಳಕು ಎರವಲು ಕೊಡ್ತೀರ?
In ಕಲ್ಪನೆ, ಯೋಚನೆ on May 31, 2007 at 9:55 pmನನ್ನೊಳಗೆ ಸಾಯಂಕಾಲ ಸೂರ್ಯ ಮುಳುಗಿತು. ಕ್ಷಣಕ್ಷಣಕ್ಕೂ ಕಪ್ಪು ಆವರಿಸುತ್ತಿದ್ದರೂ ಆಕಾಶದಂಚು ಇನ್ನೂ ಸೋತಿಲ್ಲ ಎಂಬಂತೆ ಕೆಂಪನ್ನು ಹಿಡಿದೇ ಇದೆ. ಸ್ವಲ್ಪ ಹೊತ್ತಿನ ಮುಂಚಷ್ಟೇ ನಿಚ್ಚಳವಾಗಿ ಕಾಣುತ್ತಿದ್ದದ್ದು ಕತ್ತಲಲ್ಲಿ ಸದ್ದು ಮಾಡದೆ ಕರಗುತ್ತಿದೆ. ಲೀನವಾಗುವುದು ಎಂದರೆ ಹೀಗೇ ಇರಬೇಕು, ಅದನ್ನು ಕಲಿಯಬೇಕು ಅಂತ ಸುತ್ತಮುತ್ತ ದಿಟ್ಟಿಸುತ್ತಾ ಉಳಿದೆ. ಕತ್ತಲು ಪೂರ್ತಿ ತುಂಬಿಕೊಳ್ಳೋವರೆಗೂ.
ಆದರೆ ಈಗ ಒಂದಷ್ಟು ಬೆಳಕು ಎರವಲು ಪಡೀಬೇಕು. ನಾನು ಬೆಳಕು ಎರವಲು ಕೇಳಿದವರೆಲ್ಲಾ ನಗತಾರೆ. ಯಾವಾಗ ವಾಪಸು ಕೊಡುತ್ತೀ ಅಂತ ಕುಹಕವಾಡತಾರೆ. ಬೆಳಿಗ್ಗೆ ಕೊಡತೀನಿ ಅಂತಂದು ನಾಲಗೆ ಕಚ್ಚಿಕೋತ್ತೀನಿ. ಹೌದಲ್ಲ, ಬೇಡ ಅಂದರೂ ಕಣ್ತುಂಬೊ ಬೆಳಕು ಇರೋ ಬೆಳಿಗ್ಗೆ ನಾನು ವಾಪಸು ಕೊಡೋ ಜುಜುಬಿ ಬೆಳಕು ಯಾರಿಗೆ ಬೇಕು? ಅವರಿಗೆ ನಗು ಬರೋದು ಸರೀನೆ. ಆದರೆ ಕುಹಕ ಬೇಕಾಗಿಲ್ಲ. ಅವರಿಗೂ ಒಂದಲ್ಲ ಒಂದು ದಿನ ಬೆಳಕು ಎರವಲು ಪಡೆಯೋ ಸಂದರ್ಭ ಬಂದೇ ಬರುತ್ತಲ್ವ? ಯಾಕೆಂದರೆ ಬೆಳಕು ಎರವಲು ಬೇಡ್ಕೊಂಡು ನಿಮ್ಮ ಮುಂದೇನೆ ಓಡಾಡ್ತಾ ಇರುತೀವಿ. ಒಂದು ಸಲ ನಮ್ಮ ಕಣ್ಣು ನೋಡಿ ಗೊತ್ತಾಗತ್ತೆ. ಎಂಥ ದಾಹದಲ್ಲಿ ಹುಡುಕ್ತಾ ಇರತ್ತೆ ಅಂತ. ಅಥವಾ ಇದು ನನಗೆ ಮಾತ್ರ ಆಗತಿರಬಹುದು. ಒಳಗಿನ ಕತ್ತಲೆಲ್ಲಾ ಅನುಮಾನ ತುಂಬಿಕೋತು. ಅಥವಾ ಅನುಮಾನಾನೆ ಕತ್ತಲ?
ಹೋಗಲಿ ನನ್ನದೇ ಒಂದು ದೀಪ ಹಚ್ಚಕೋಬೇಕು. ಹಣತೆಯೋ, ಮೋಂಬತ್ತಿಯೋ, ಕಂದೀಲೋ. ಸಿಡ್ನಿಯಲ್ಲಿ ಮನೆ ಮಠ ಇಲ್ಲದೇನೋ ಅಥವಾ ಮನೆ ಮಠದಲ್ಲಿ ಇರೋರು ಬೇಡದೇನೋ ಪಾರ್ಕ್‌ನಲ್ಲಿ, ಅಂಗಡಿ ಬಾಗಲಲ್ಲಿ ಪೇಪರ್ ಹೊದ್ದು ನಡಗತಾ ರಾತ್ರಿ ಕಳಿಯೋ ಮಂದೀನ ಕೇಳಬೇಕು. ಹೇಗೆ ಮಾಡ್ತೀರ ಅಂತ. ಎಲ್ಲಾರ ಹತ್ರಾನೂ ಕಲಿಯೋದು ಇರತ್ತೆ ನೋಡಿ. ಅವರು ನನ್ನನ್ನ ಉಗೀಬಹುದು ಅಥವಾ ನನ್ನ ಭುಜದ ಮೇಲೆ ತಲೆಯಿಟ್ಟು ಯಾರನ್ನೋ ನೆನಸ್ಕೊಂಡು ಅಳಬಹುದು. ಆಮೇಲೆ ಅವರ ಹತ್ತಿರ ಮಾತ್ರ ಉಳಿದರೋ ಗುಟ್ಟನ್ನ ಹಂಚ್ಕೋಬಹುದು.
ದೀಪ ಹಚ್ಚಿಕೊಂಡ ಮೇಲೆ ಇದ್ದೇ ಇದೆ. ಅದರ ಮುಂದೆ ಕೈ ಹಿಡಿದು ಗೋಡೆ ಮೇಲೆ ಅಕರಾಳ ವಿಕರಾಳ ಎಲ್ಲ ದೊಂಬಿ ಎಬ್ಬಿಸೋದು. ಅಕರಾಳ ವಿಕರಾಳ ಕಂಡಿದ್ದಕ್ಕೆ ಹೆದರೋದು. ಹೆದರಿಕೆ ಮರೆಯೋದಕ್ಕೆ ಕೋಡಂಗಿ ಥರ ಬೆರಳು ಕುಣಿಸಿ ನಗೋದು. ಗೋಡೆ ಮೇಲೆ ಮೂಡೋ ಒಂದೊಂದು ನೆರಳೂ ಜೀವ ಪಡ್ಕೊಂಡು ಆಡೋದು. ಆಟ ಅಂತ ಶುರು ಆಗಿದ್ದು ತಪ್ಪಿಸ್ಕೊಳ್ಳೋಕೆ ಆಗದಂಥ ಮತ್ತಾಗೋದು; ಆಮೇಲೆ ಅದೇ ಜೈಲಾಗೋದು.
ಮತ್ತೆ ಬೆಳಗಾಗತ್ತೆ. ಎಲ್ಲ ಸರಿಯಾಗಿದೆ ಅಂತ ಅನ್ಸೋದಕ್ಕೆ ಶುರು ಆಗತ್ತೆ.
ತುದಿಗಳೆರಡು – ಚೂಪು, ಬಡ್ಡು
In ಕಲ್ಪನೆ, ಯೋಚನೆ on May 28, 2007 at 9:18 amನನ್ನ ಹತ್ತಿರ ಎರಡು ತುದಿಗಳು ಇವೆ. ಯಾವಾಗಿಂದ ಇದೆ, ಎಲ್ಲಿ ಸಿಕ್ಕಿತು ಅನ್ನೋದೆಲ್ಲ ಮರೆತುಹೋಗಿದೆ. ನಾನು ಹೇಳಬೇಕಂತಿರೋದಕ್ಕೆ ಅದು ಮುಖ್ಯಾನೂ ಅಲ್ಲ ಬಿಡಿ. ಯಾಕೆಂದರೆ ಎಲ್ಲರಿಗೂ ಅಂಥವು ಎಲ್ಲೆಲ್ಲೋ ಯಾವಾವಾಗಲೋ ಸಿಕ್ತವೆ. ಆದರೆ ನನಗಂತೂ ಈ ತುದಿಗಳು ತುಂಬಾ ಕಷ್ಟಕೊಡ್ತಾವೆ. ಅವು ಇಲ್ಲದೆ ಇದ್ದರೆ ಆಗಲ್ಲ. ಇದ್ದಾಗ ಏನು ಮಾಡಬೇಕು ಅಂತ ಹೊಳೆಯೋದಿಲ್ಲ. ಯಾವ ತುದೀನ ಎಲ್ಲಿ ಕೈಗೆತ್ತಿಕೋಬೇಕು ಅನ್ನೋದೆ ಗೊತ್ತಾಗಲ್ಲ. ಮೊನ್ನೆ ನಡೆದಿದ್ದು ಕೇಳಿ ಏನು ಹೇಳ್ತಾ ಇದೀನಿ ಅನ್ನೋದು ಗೊತ್ತಾಗತ್ತೆ.
ಯಾರನ್ನೋ ಸ್ವಲ್ಪ ಘಾಸಿ ಮಾಡಬೇಕಾದಂತ ಪ್ರಸಂಗ ಬಂತು. ಘಾಸಿ ಅಂದರೆ ಸಾಯೋ ಹಾಗೆ ಅಲ್ಲ ಅಂತಿಟ್ಕೊಳ್ಳಿ. ಸುಮ್ಮನೆ ಬೆದರಸಿ ನನ್ನ ತಂಟೆಗೆ ಬರದೇ ಇರೋ ಹಾಗೆ ಮಾಡೋದು ಅಷ್ಟೆ. ಒಂದು ತಿಂಗಳಿಂದ ತುಂಬಾ ಯೋಚನೆ ಮಾಡಿ ಯಾವ ತುದಿ ತಗೊಂಡು ಹೋದರೆ ಒಳ್ಳೇದು, ಎದುರು ಬಂದಾಗ ಹೇಗೆ ತುದಿಯಿಂದ ತಿವಿಯೋದು, ಎದುರಾಳಿ ಹತ್ತಿರಾನೂ ತುದಿ ಇದ್ದರೆ ಅದನ್ನು ಹೊಡೆದು ಹೇಗೆ ನೆಲಕ್ಕೆ ಬೀಳ್ಸೋದು, ಎಲ್ಲ ಚೆನ್ನಾಗಿ ತಲೆಯೊಳಗೆ ಚಿತ್ರ ಕಟ್ಟಿಕೊಂಡು ಹೋದೆ.
ನನ್ನ ಮಿಕ ಸಿಕ್ಕಿತು. ಕೈಕುಲುಕಿ, ಕ್ಷೇಮ ಸಮಾಚಾರ ಎಲ್ಲ ವಿಚಾರಿಸಿ, ಹಲ್ಲು ಕಿರಿದು, ಮಳೆ ಬೆಳೆ ಬಗ್ಗೆ ಎಲ್ಲ ಲೋಕಾರೂಢಿ ಮಾತಾಡಿ ತುಂಬಾ ಹೊತ್ತು ಹಾಳಾಯ್ತು. ಹೊತ್ತು ಹಾಳಾಯ್ತು ಅಂತ ಯಾಕೆ ಹೇಳಿದೆ ಅಂದರೆ, ಉಭಯಕುಶಲೋಪರಿ ನಡೀತಿದ್ದಾಗ ನನ್ನ ತಲೆ ಒಳಗೆ ಕಟ್ಟಿಕೊಂಡಿದ್ದ ಚಿತ್ರದ ಕೈಕಾಲು ಕಳಚಿಕೊಳ್ಳೋಕೆ ಶುರು ಆಗ್ತಿತ್ತು. ಕಳವಳ ಅಲ್ಲದಿದ್ದರೂ ದಾರಿ ಕಾಣಿಸದೆ ಈ ಪ್ರಾಣಿನ ಹ್ಯಾಗೆ ತಿವಿಯೋದು ಅನ್ನೋದೇ ಮರೆತುಹೋದ ಹಾಗಾಯ್ತು. ಮಹಾಭಾರತದಲ್ಲಿ ಅದ್ಯಾವನಿಗೋ ಸರಿಯಾದ ಹೊತ್ತಿಗೆ ಎಲ್ಲ ಮರೆತು ಹೋಗೋ ಶಾಪ ಇತ್ತಂತಲ್ಲ, ಹಾಗೆ. ಒಳ್ಳೆ ಪಜೀತಿಗಿಟ್ಟುಕೊಂಡ್ತಲ್ಲ ಅಂತ ಪರದಾಡೋ ಹೊತ್ತಿಗೆ ನನ್ನ ಮಿಕ ತಟ್ಟಂತ ನನಗೇ ಪೆಟ್ಟು ಮಾಡಿಬಿಡ್ತು. ಇನ್ನು ಹೀಗಿದ್ದರೆ ಆಗಲ್ಲ ಅಂತ ಮೂಟೇಲಿದ್ದ ತುದಿ ತೆಗೆದು ನಾನೂ ಚುಚ್ಚಿದೆ. ಎದುರಾಳಿಗೆ ಏನೂ ಆದ ಹಾಗೇ ಕಾಣಲಿಲ್ಲ. ಅಷ್ಟೆ ಅಲ್ಲ, ನಾನು ಚುಚ್ಚಿದಾಗ ನೋವಾಗೋದಿರಲಿ ಜೋರಾಗಿ ನಗ್ತಾ ಇದೆ ಪ್ರಾಣಿ! ಇದೇನಾಯ್ತು ಅಂತ ಮೆಲ್ಲನೆ ತಿರುಗಿ ನಿಂತು ನೋಡ್ಕೊಂಡರೆ, ತುದಿ ನುಣ್ಣಗೆ ಬಡ್ಡಾಗಿ ಗುಂಡಾಗಿ ಹೋಗಿದೆ! ನಾನು ತಿವಿದಾಗ ನೋವಾಗೋ ಬದಲು ಕಚಕುಳಿ ಇಟ್ಟಂಗಾಗಿರಬೇಕು! ಏನು ಮಾಡೋದು ಅಂತ ಯೋಚಿಸೋ ಅಷ್ಟರಲ್ಲಿ, ಹಿಂದಿಂದ ಒಂದು ಪೆಟ್ಟು ನನ್ನ ಬೆನ್ನಿಗೆ ಸರಿಯಾಗೇ ಬಿತ್ತು. ಇದು ಯಾಕೆ ಹೀಗಾಯ್ತು ಅಂತ ಗೊತ್ತಾಗಲಿಲ್ಲ. ತಪ್ಪು ತುದಿ ತಂದನಾ ಅಂದರೆ, ಇಲ್ಲ ಸರಿಯಾದ ತುದೀನೆ. ಹಾಗಾದರೆ, ನನ್ನ ಲೆಕ್ಕಾಚಾರಾನೆ ತಪ್ಪಾಗಿ ಹೋಯ್ತ? ಇಷ್ಟೆಲ್ಲ ಮನಸ್ಸಲ್ಲೇ ಮಂಡಿಗೆ ತಿನ್ನೋಷ್ಟರಲ್ಲಿ ನಾನು ತಿವಿಯೋಕೆ ಹೋಗಿದ್ದ ಪ್ರಾಣಿ ನನ್ನ ಮೈಯೆಲ್ಲಾ ಚೆನ್ನಾಗಿ ತಿವಿದು ಕೈಕಾಲು ಆಡದ ಹಾಗಿ ಮಾಡಿ ಮಾಯ ಆಗಿತ್ತು. ಎದುರಾಳಿಯಿಂದಾನಾದರೂ ಕಲಿಯೋಣ ಅಂದರೆ ತನ್ನ ಕೆಲಸ ಮುಗಿಸಿದ ಪ್ರಾಣಿ ಅಲ್ಲಿದ್ದರೆ ತಾನೆ?
ಗೊತ್ತಾಯ್ತ ನನ್ನ ಈ ತುದಿಗಳ ಸಂಕಟ? ಚೂಪು ಮಾಡಿಕೊಂಡು ಹೋದ ತುದಿ ಸರಿಯಾದ ಹೊತ್ತಿಗೆ ಬಡ್ಡಾಗಿ ಬಿಟ್ಟಿರತ್ತೆ. ಆದರಾಗಲೀ ದೊಣ್ಣೇಲಿ ಬಡಿದ ಹಾಗೆ ಬಡಿಯೋಣ ಅಂದರೆ ಇದ್ದಕಿದ್ದ ಹಾಗೆ ತುದಿ ಚೂಪಾಗಿಬಿಟ್ಟು ಎದುರಾಳಿ ರಕ್ತ ಬಂದು ಸತ್ತೇ ಹೋದರೇನು ಗತಿ ಅಂತ ಹೆದರಿಕೆ ಆಗತ್ತೆ. ಅದಕ್ಕೆ ಹೇಳಿದ್ದು ಈ ತುದಿಗಳು ಬೇಕೇ ಬೇಕು. ಆದರೆ ಸರಿಯಾದ ಹೊತ್ತಿಗೆ ಸರಿಯಾದ ತುದೀನ ಸರಿಯಾಗಿ ಬಳಸದಿದ್ದರೆ ಒಂದೋ ತುದಿಗಳು ಇರೋದೇ ವ್ಯರ್ಥ, ಇಲ್ಲ ತುದಿಗಳು ಜಾಸ್ತಿ ಅಪಾಯ ಮಾಡಿಬಿಡ್ತಾವೆ. ಎರಡೇ ತುದಿಯಿರೋದು ಈ ಎಲ್ಲಾ ಕಷ್ಟಕ್ಕೂ ಕಾರಣ ಇರಬೇಕು ಅನ್ನೋ ನಿರ್ಧಾರಕ್ಕೆ ಬಂದು ಈಗ ಹಲವಾರು ತುದಿಗಳನ್ನ ಕಲೆ ಹಾಕೋದಕ್ಕೆ ಶುರು ಮಾಡಿದೀನಿ.
ಹಳ್ಳವಾಗದ ಹನಿ
In ಯೋಚನೆ on May 15, 2007 at 9:12 pmಹನಿ ಹನಿಗೂಡಿದರೆ ಹಳ್ಳವಾಗುತ್ತದೆ ಎಂದು ಯಾರು ಹೇಳಿದ್ದು? ಹೇಗೆ ಹಳ್ಳವಾಗುತ್ತದೆ ಎಂದು ಕೇಳದೆ ಒಪ್ಪಿಬಿಟ್ಟೆನಲ್ಲ! ಹಳ್ಳವಾದರೂ ಅದು ಎಂಥ ಹಳ್ಳ; ನನಗೆ ಬೇಕಾದ ರೂಪ ಇದೆಯ; ಬೇಕಾದಷ್ಟು ದೊಡ್ಡದಿದೆಯ; ಅಂದಕೊಂಡಷ್ಟೇ ಚಿಕ್ಕದಾಗಿ ಉಳಿದಿದೆಯ; ಹಳ್ಳವಾಗಲು ಹತ್ತು ಹಲವು ಬೇರೆ ಬೇರೆ ಅನುಕೂಲಗಳು ಬೇಕು ಅನ್ನೋದು ಹೇಗೆ ನನಗೆ ತಿಳಿಯದೇ ಹೋಯಿತು ಅಂತ ಬೇಸರವಾಗತ್ತೆ.
ಅದೆಲ್ಲಾ ಪಾಂಡಿತ್ಯ ಬದಿಗಿಡಿ. ಪಂಡಿತರನ್ನು ಬಯ್ಯೋ ಪಂಡಿತ ಆಗಬಾರದು. ಆದರೂ ನೋಡಿ- ಆಶ್ಚರ್ಯವಾಗತ್ತೆ. ಹನಿಗಳು ಕೂಡುತ್ತಲೇ ಇದ್ದರೂ ಹಳ್ಳವೇ ಆಗುತ್ತಿಲ್ಲವಲ್ಲ. ಅಂದರೆ ಹನಿಗಳೆಲ್ಲ ಎಲ್ಲೋ ಕಳೆದು ಹೋಗುತ್ತಿದೆ. ಯಾರ ಕೈಗೂ ಸಿಕ್ಕದ ಹನಿಗಳು ಕೂಡದಿದ್ದರೆ, ಹಳ್ಳವಾಗದಿದ್ದರೆ ಮುಂದೇನು ಗತಿಯೋ. ಹಳ್ಳವಾಗೊಡದ ಕೈಗಳು ಹನಿಗಳನ್ನು ಎಲ್ಲಿ ತಡೆಯುತ್ತಿದೆ, ಹೇಗೆ ತಡೆಯುತ್ತಿದೆ? ಕಾಣದ ಕೈ ಅನ್ನೋದೂ ಸೋಗಲಾಡಿತನ ಅನಿಸುತ್ತಾ ತವಕವಾಗುತ್ತದೆ, ದಿಕ್ಕುಗೆಡುತ್ತದೆ.
ಹಳ್ಳವಾಗುವುದಕ್ಕೆ ಹನಿ-ಹನಿಗೂಡಿದರೆ ಸಾಕೆ ಎಂದು ಯೋಚಿಸ್ತಾ ಎದುರಿಗೆ ಅಡ್ಡಾದಿಡ್ಡಿ ಗೀರು ಗೀರಾಗಿರುವ ನೆಲದ ಮೇಲೆ ಬೀಳುತ್ತಿರುವ ಮಳೆ ಹನಿಗಳನ್ನು ನೋಡುತ್ತಾ ಹೆದರುತೀನಿ.
ರಾಜಕುಮಾರನ ಕಿವಿಗಳು
In ಅಂದಂದು, ಕಲ್ಪನೆ, ಯೋಚನೆ on April 29, 2007 at 8:34 amತನ್ನ ಅಣ್ಣ ಹುಡುಗಿಯೊಬ್ಬಳ ಜತೆ ಪಕ್ಕದ ಕೋಣೆಯಲ್ಲಿ ರಾತ್ರಿಯೆಲ್ಲಾ ಆಡುತ್ತಿದ್ದ ಚೆಲ್ಲಾಟವನ್ನು ರಾಜಕುಮಾರ ನಿದ್ದೆ ಬಿಟ್ಟು ಕದ್ದು ನೋಡುತ್ತಿದ್ದನಂತೆ. ಇತ್ತೀಚೆಗೆ ಅವರ ಅತಿಯಾದ ಚೆಲ್ಲಾಟ ನೋಡಿ ಬೆವರುತ್ತಿದ್ದನಂತೆ. ಚೆಲ್ಲಾಟ ವಿಕೃತವಾದಾಗ ತಡೆದುಕೊಳ್ಳಲಾಗದೆ ಅಣ್ಣನ ಗೆಳತಿ ಅರಮನೆ ವಾಸವೂ ಬೇಡ, ರಾಜಕುಮಾರನ ಸಹವಾಸವೂ ಬೇಡ ಅಂತ ಅಣ್ಣನ ಮುಖಕ್ಕೆ ಉಗಿದು ಅರೆಬಟ್ಟೆಯಲ್ಲೇ ನಡುರಾತ್ರಿ ಕಿಟಕಿ ಹಾರಿ ಹೋಗಿದ್ದನ್ನೂ ನೋಡಿದನಂತೆ. ಅಂದಿನಿಂದ ನಮ್ಮ ರಾಜಕುಮಾರನಿಗೆ ಮಾಡಲು ಏನೂ ಇಲ್ಲದೆ, ಜೀವನವೇ ಬೇಸರವಾಗಿ ಯುದ್ಧಕ್ಕೆ ಹೋಗಿ ತಾನೂ ಏನಾದರೂ ಸಾಧಿಸಬೇಕು ಅಂತ ಅನಿಸಿತಂತೆ. ಏಳು ಸಾಗರದಾಚೆ ಯಾವುದೋ ದೇಶದ ಮೇಲೆ ಯುದ್ಧವೊಂದು ನಡೆಯುತ್ತಿರುವುದನ್ನು ಯಾರಿಂದಲೋ ಅರಿತುಕೊಂಡು ತನ್ನನ್ನೂ ಕಳಿಸಿ ಎಂದು ಜಾರುತ್ತಿದ್ದ ಚಡ್ಡಿ ಎಳೆದುಕೊಂಡು ಅಳತೊಡಗಿದನಂತೆ. ಸೇನಾನಿಗೆ ತಲೆನೋವಾಗಿ ಮುದಿರಾಣಿಗೆ ದೂರು ಹೊತ್ತೋಯ್ದನಂತೆ.
ಸುದ್ದಿ ಕೇಳಿ ರಾಜಕುಮಾರನ ಅಜ್ಜಿ ಮುದಿರಾಣಿ, ಕಟ್ಟಿಸಿದ ತನ್ನ ಹಲ್ಲನ್ನು ಕಟಕಟ ಕಡಿದ ಸದ್ದು ಅರಮನೆಯಲ್ಲಾ ಮಾರ್ದನಿಗೊಂಡು ಎಲ್ಲರ ಎದೆ ನಡುಗಿಸಿತಂತೆ. ಸಾಯಲು ಬೇಕಾದಷ್ಟು ಜನರಿದ್ದಾರೆ ಬೇಡ ಎಂದು ಸೇನಾನಿ ಎಷ್ಟು ಬುದ್ಧಿ ಹೇಳಿದರೂ ಕೇಳದ ರಾಜಕುಮಾರ ಹಟ ಹಿಡಿದು ಬಾಯಿಗಿಟ್ಟ ಹೆಬ್ಬೆಟ್ಟನ್ನು ಚೀಪುವ ಬದಲು ಕಚ್ಚಿಕೊಳ್ಳುತ್ತಿದ್ದಾನೆ ಎಂದು ಎಚ್ಚರಿಸಿದನಂತೆ. ಮಕ್ಕಳನ್ನು ಮುಟ್ಟಬಾರದ ಖಾಯಿಲೆಯಿರುವ ಮುದಿರಾಣಿ ರಾಜಕುಮಾರನನ್ನು ದೂರದಿಂದಲೇ ಮುದ್ದಿಸಿದ ದಿನಗಳನ್ನು ನೆನೆಸಿಕೊಂಡು ತಡೆಯಲಾರದ ನೋವಿನಿಂದ ಕಿವಿಗಳಿರುವ ಅರಮನೆ ಕಂಬ, ಗೋಡೆ, ಬಾಗಿಲುಗಳನ್ನು ಉಗುರಿಂದ ಪರಪರ ಕೆರೆದಳಂತೆ. ಅದನ್ನು ನೋಡಲಾರದೆ ಸೇನಾನಿ ಗಡಗಡ ನಡುಗುತ್ತಾ ಏನಾದರೂ ಉಪಾಯ ಮಾಡುತ್ತೇನೆಂದು ಅಲ್ಲಿಂದ ಕಾಲ್ಕಿತ್ತನಂತೆ.
ಏಳು ಸಮುದ್ರದಾಚೆಯ ದೇಶದವರು ರಾಜಕುಮಾರ ಬಂದರೆ ಅವನ ಕಿವಿಯನ್ನು ನೀಟಾಗಿ ಕೊಯ್ದು, ಹಳೆ ಪೇಪರಿನಲ್ಲಿ ಪೊಟ್ಟಣ ಕಟ್ಟಿ ಅವನೊಂದಿಗೆ ಕಳಿಸುತ್ತೇವೆ ಎಂದು ನಗುತ್ತಿದ್ದಾರೆಂಬ ಸುದ್ದಿಯನ್ನು ಸೇನಾನಿಯೇ ಹಬ್ಬಿಸಿದನಂತೆ. ಇದನ್ನು ಕೇಳಿ ರಾಜಕುಮಾರನ ಜತೆ ಇರಬೇಕಾದ ಸೈನಿಕರು, ಒಂದ ಮಾಡಬೇಕು ಎಂದು ಹೇಳಿ ಹೋದವರು ಪಾಯಿಖಾನೆ ಹಿಂದಿನ ದಿಡ್ಡಿ ಗೋಡೆ ಹಾರಿ ಪರಾರಿಯಾಗುತ್ತಿದ್ದಾರಂತೆ. ಸುದ್ದಿಯನ್ನು ನಂಬಿ ರಾಜಕುಮಾರನ ಕಿವಿ ಕೆಂಪಾದುದನ್ನು ನೋಡಿ ಅವನ ಅಣ್ಣ ಲೊಚಗೊಟ್ಟಿದನಂತೆ. ಎಳೆ ಹೂವಿನಂತಿರುವ ರಾಜಕುಮಾರನ ಕಿವಿಯಲ್ಲಿ ಯಾರಾದರೂ ಹುಡುಗಿಯ ಹತ್ತಿರ ಕಿವಿ ಕಚ್ಚಿಸಿಕೊಂಡರೆ ಎಷ್ಟು ಹಿತವಾಗಿರುತ್ತದೆ ಗೊತ್ತ ಎಂದು ಪಿಸುಗುಟ್ಟಿದನಂತೆ.
ರಾಜಕುಮಾರನ ಕಿವಿಗೂ ನಮಗೂ ಸಂಬಂಧವಿಲ್ಲ ಅಂತ ನೀವೇನಾದರೂ ನಿಶ್ಚಿಂತೆಯಿಂದ ಇದ್ದು ಬಿಟ್ಟರೆ ನಿಮ್ಮ ಜೀವನವೇ ವ್ಯರ್ಥ ಎಂದು ಡಂಗುರದವರು ಎಚ್ಚರಿಕೆ ನೀಡಿದ್ದಾರೆ.
ಭೂತಕ್ಕೆ ಆರು ಕಾಲು ಅರ್ಧ ಕೈ
In ಕಲ್ಪನೆ, ಯೋಚನೆ on April 25, 2007 at 9:30 amಮೊನ್ನೆ ನಡು ಹಗಲೇ ಮನೆಯ ಪಕ್ಕದ ಓಣಿಯಲ್ಲಿ ಒಂದು ಬೆಳ್ಳನೆಯ ಭೂತಾಕೃತಿ ಕಂಡಿತು. ಎಲೆಯಡಿಕೆ ಅಗಿಯುತ್ತಾ ಹಿಂದುಮುಂದು ನೋಡುತ್ತಾ ಹೆದರಿ, ಹೆದರಿ ಹೆಜ್ಜೆ ಹಾಕುತ್ತಿತ್ತು. ಸುಮ್ಮನೆ ಹತ್ತಿರ ಹೋಗಿ ಕಿಚಾಯಿಸುವ ಬದಲು ದೂರದಿಂದಲೇ ಏನು ಮಾಡುತ್ತದೆ ಎಂದು ನೋಡುತ್ತಾ ನಿಂತೆ.
ಭೂತದ ಕೈ ಸ್ವಲ್ಪ ಗಿಡ್ಡವಾಗಿತ್ತು. ಅದರ ಹಸ್ತಗಳು ಕೈತುದಿಯಲ್ಲಿರುವ ಬದಲು ಮೊಣಕೈಯಿಂದ ಹೊರಬಂದಿರುವುದು ಕಂಡಿತು. ಹಸ್ತ ಇರಬೇಕಾದಲ್ಲಿ ಕತ್ತರಿಸಿ ಹಾಕಿದ ಹಾಗೆ ಮೂಳೆ ಮಾಂಸ ಹಸಿಹಸಿಯಾಗಿ ನೇತಾಡುತ್ತಾ ರಕ್ತ ಒಸರುತ್ತಿತ್ತು. ಮೊಣಕೈ ಜಾಗದಿಂದ ಹೊರಚಾಚಿದ ಹಸ್ತದ ನಡುವೆ ಅಗಲವಾದ ತೂತಿದ್ದು, ಹಸ್ತದ ತುದಿಗೆ ಒಂದೇ ಗೆಣ್ಣಿರುವ ಒಂದಷ್ಟು ಬೆರಳುಗಳು ಸೆಟೆದುಕೊಂಡಿದ್ದವು. ಆದ್ದರಿಂದ ಅದಕ್ಕೆ ಮೂಗೊರೆಸಿಕೊಳ್ಳುವಂಥ ಸುಲಭದ ಕೆಲಸವೂ ಕಷ್ಟವಾಗುತ್ತಿತ್ತು. ನೆಗಡಿಯಿಂದ ಸೊರಸೊರ ಎನ್ನುತ್ತಿದ್ದ ಮೂಗನ್ನು ಒರೆಸಿಕೊಳ್ಳಲು ಹೆಣಗುತ್ತಿತ್ತು. ಅದರ ಹೆಣಗಾಟದ ನೋಡಿದಾಗಲೇ ಅದಕ್ಕೆ ಕತ್ತು ಕೊಂಕಿಸಲು ಆಗುವುದಿಲ್ಲ ಎಂಬುದೂ ಗೊತ್ತಾಯಿತು. ಕತ್ತನ್ನು ಕೋಲಿಗೆ ಸಿಕ್ಕಿಸಿದ ಮಡಕೆಯಂತೆ ಅತ್ತಿತ್ತ ತಿರುಗಿಸಲು ಮಾತ್ರ ಆಗುವಂತಿತ್ತು. ಮಡಕೆಗೆ ತೂತು ಮಾಡಿದಂತೆ ಎರಡು ಮೂಗಿನ ಹೊಳ್ಳೆಗಳು. ಮೂಗೇ ಇಲ್ಲ ಎಂಬಷ್ಟು ಅಪ್ಪಚ್ಚಿ. ಆದರೂ ನೆಗಡಿಯಾಗಿದ್ದರಿಂದ ಮೂಗಿನಿಂದ ಸಣ್ಣಗೆ ನೀರು ಸೋರುತ್ತಿತ್ತು. ಒರೆಸಿಕೊಳ್ಳಲು ಆಗದೆ ಹೆಣಗಾಡುತ್ತಿತ್ತು. ಮೂಗಿನಿಂದ ಸೋರಿದ್ದು ಮೈ ಮೇಲೆ ಬೀಳದೆ, ಅದರ ಮೂಲಕ ನೆಲಕ್ಕೆ ಬಿದ್ದು ಅರೆಕ್ಷಣ ಹೊಳೆದು ಮಾಯವಾಗುತಿತ್ತು.
ನಾನು ಹಿಂದೆ ನಿಂತಿದ್ದು ಭೂತಕ್ಕೆ ಭಾಸವಾಗಿರಬೇಕು. ಸರ ಸರ ಮುಂದೆ ಸರಿಯಿತು. ಆರು ಕಾಲಿಂದ ನಡೆಯಲು ಮಹಾ ಪಜೀತಿ ಪಡುತ್ತಾ, ತನ್ನ ಕಾಲಿಗೆ ತಾನೇ ಎಡವುತ್ತಾ ತೂಕವಿದ್ದಿದ್ದರೆ ಮುಗ್ಗರಿಸಿ ಬೀಳುತ್ತಿತ್ತು. ಆದರೆ ಯಾಕೋ ತೇಲುತ್ತಿರುವಂತೆ ಕಾಣುತ್ತಿತ್ತು. ಆರು ಕಾಲಿಂದ ಹೇಗೆ ನಡೆಯಬೇಕೆಂದು ಇನ್ನೂ ಕಲಿತಿಲ್ಲವೆಂದು ಸ್ಪಷ್ಟವಾಗುತ್ತಿತ್ತು. ವಾಲುತ್ತಾ ಸಾವರಿಸಿಕೊಂಡು ಬೀಳುವಂತಾದಾಗ ಹಗುರಾಗಿ ತೇಲುವಂತೆ ಮತ್ತೆ ನೇರವಾಗುತ್ತಿತ್ತು.
ಅದರ ಪಜೀತಿ ನೋಡಿ ಕನಿಕರವಾಯಿತು. ಹೇಗೆಂದು ಗೊತ್ತಿಲ್ಲದಿದ್ದರೂ ಹತ್ತಿರ ಹೋಗಿ ಸಹಾಯಮಾಡಬೇಕೆಂದು ಒಂದೆರಡು ಹೆಜ್ಜೆ ಇಟ್ಟದ್ದೆ ಅದು ಥಟ್ಟನೆ ಸೆಟೆದು ನಿಂತಿತು. ನನಗೂ ಯಾಕೋ ದಿಗಿಲಾಯಿತು. ಅಲ್ಲೇ ನಿಂತುಬಿಟ್ಟೆ. ಮೆಲ್ಲಗೆ ಅದರ ತಲೆ ತಿರುಗತ್ತಾ ಕರಕರ ಸದ್ದು ಮಾಡಿತು. ನನ್ನ ಎದೆಯ ಢವಢವ ಜೋರಾಗುತ್ತಲೇ ಹೋಯಿತು. ಏನಾಗುತ್ತಿದೆ, ಯಾಕಾಗುತ್ತಿದೆ ಎಂಬ ಅರಿವಾಗುವ ಮೊದಲೇ ನನ್ನತ್ತ ತಿರುಗಿದ ತಲೆಬುರುಡೆಯ ನಡುವೆ ಕಣ್ಣಿರಬೇಕಾದಲ್ಲಿ ಆಳವಾದ ಎರಡು ಕಪ್ಪು ತೂತುಗಳು. ಆ ತೂತುಗಳ ನಡುವ ಗುಡ್ಡೆ ಇಲ್ಲದಿದ್ದರೂ ಅದು ನನ್ನತ್ತಲೇ ನೋಡುತ್ತಿದೆ, ಅಳುತ್ತಿದೆ ಎಂದು ತಿಳಿದುಬಿಟ್ಟಿತು. ನನ್ನ ಹಿಂದಿಂದ ಅಳುವ ಸದ್ದು ಕೇಳಿತು. ಹಿಂದಿಂದ ಬರುತ್ತಿದ್ದರೂ ಅದು ನನ್ನ ಮುಂದಿರುವ ಭೂತ ಅಳುತ್ತಿರುವುದು ಎಂದು ನನಗೆ ಅನುಮಾನವೇ ಇರಲಿಲ್ಲ. ಆದ್ದರಿಂದಲೇ ಅದನ್ನೇ ನೋಡುತ್ತಾ ನಿಂತುಬಿಟ್ಟೆ. ಅದೂ ಒಂದು ಕ್ಷಣ ನನ್ನನ್ನೇ ನೋಡುತ್ತಿತ್ತು. ನನ್ನ ಹಿಂದಿಂದ ಅಳು ಕೇಳುತ್ತಲೇ ಇತ್ತು. ಥಟ್ಟನೆ ಯಾರೋ ಅಲುಗಾಡಿಸಿದವರಂತೆ ಅಲುಗಿ ನನ್ನತ್ತ ಬರತೊಡಗಿತು. ನಾನು ಬೇರು ಬಿಟ್ಟವನಂತೆ ನಿಂತೇ ಇದ್ದೆ. ಮೆಲ್ಲನೆ ಹತ್ತಿರ ಬಂದು ಇನ್ನೇನು ಡಿಕ್ಕಿ ಹೊಡೆಯುತ್ತದೆ ಅನ್ನುವಾಗ ನನ್ನ ಮೈಯೆಲ್ಲಾ ತಣ್ಣಗಾಯಿತು. ಅದು ನನ್ನ ಮೂಲಕ ಹಾದು ನನ್ನ ಹಿಂದೆ ಹೊರಟು ಹೋಯಿತು. ನಾನು ತಿರುಗಿ ನೋಡಲಿಲ್ಲ. ಯಾಕೆಂದರೆ ಅದರ ಅಳುವಿನ ಸದ್ದೇ ಅದು ದೂರ ದೂರ ಹೋಗುತ್ತಿದೆ ಎಂದು ಸಾರಿ ಸಾರಿ ಹೇಳುತ್ತಿತ್ತು.
ಭೂತಗಳು ಯಾವಾಗಲೂ ಹಾಗೆ ಹೆದರಿಸುತ್ತವೆ, ಆದರೆ ನಿಜವಾಗಿಯೂ ನೋಡಿದರೆ ಅಳುತ್ತಿರುತ್ತವೆ. ಸಿಟ್ಟಿನಿಂದಲೋ, ದುಃಖದಿಂದಲೋ ತಿಳಿಯುವುದಿಲ್ಲ. ಅಳು ಮಾತ್ರ ಕೇಳಿದ್ದೇನೆ.
ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
In ಯೋಚನೆ on April 12, 2007 at 4:18 amಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋಗಿಸಬಹುದು. ಮೊಳಕೆ ಬರಿಸಿದರೆ ಪೌಷ್ಟಿಕವಾಗಿದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಆದರೆ ಅದು ಹಾಗೇ ಆಗಬೇಕೆಂದೇನೂ ಇಲ್ಲ. ಮೊಳಕೆಯೊಡೆದ ಪದದ ರುಚಿ ನಿಮಗೆ ಹಿಡಿಸದಿದ್ದರೆ ಹಾಗೇ ಉಪಯೋಗಿಸಲೂ ಬಹುದು. ಪೌಷ್ಟಿಕದಷ್ಟೇ ರುಚಿಯೂ ಮುಖ್ಯವಲ್ಲವೆ?
ಇನ್ನು ಕೆಲವು ಪದಗಳು ಚೆನ್ನಾಗಿ ಬಲಿತಿದ್ದರೆ ಒಳ್ಳೆಯದು. ಜಗಿದಾಗ ಬಾಯಿಗೆ ಸಿಕ್ಕುವಂತಿರಬೇಕು. ಅಂಥ ಪದಗಳನ್ನು ಚೆನ್ನಾಗಿ ಬೇಯಿಸಬೇಕಾಗಬಹುದು. ಕೆಲವೊಮ್ಮೆ ಉಪ್ಪುಖಾರ ಚೆನ್ನಾಗಿ ಹಾಕಿ ಬಲಿತ ಪದಗಳನ್ನು ಬೇಯಿಸಿದರೆ ಗಮ್ಮತ್ತಾಗಿರುತ್ತದೆ. ಇನ್ನು ಕೆಲವು ಪದಗಳು ಎಳೆಯದಾಗಿದ್ದರೆ ತುಂಬಾ ರುಚಿ. ಅವುಗಳನ್ನು ಬೇಯಿಸಲೇಬೇಕಾಗಿಲ್ಲ. ಬಿಸಿನೀರಿನಲ್ಲಿ ಒಂದಷ್ಟು ಹೊತ್ತು ಮುಳಿಗಿಸಿಟ್ಟು ತೆಗೆದು ಬಿಡಬಹುದು. ಆಗ ಆ ಪದಗಳ ಒಳಗಿನ ಪರಿಮಳ ಇನ್ನೂ ಚೆನ್ನಾಗಿ ಮೂಗಿಗೆ ಅಡರುತ್ತದೆ. ಎಳೆಯ ಪದಗಳನ್ನು ಹಾಗೆ ಉಪಯೋಗಿಸುವಾಗ ಹೆಚ್ಚು ಉಪ್ಪುಖಾರಹುಳಿ ಬೇಡ, ಅದು ಪದದ ನಿಜ ಸೊಗಡನ್ನು ಮುಚ್ಚಿಬಿಡುತ್ತದೆ ಎಂಬ ಅಪವಾದನೆಯೂ ಇದೆ.
ಇನ್ನು ಪದಗಳನ್ನು ಹೆಚ್ಚುವಾಗ ಉದ್ದಕ್ಕೂ ಹೆಚ್ಚಬಹುದು, ಅಡ್ಡಕ್ಕೂ ಹೆಚ್ಚಬಹುದು. ಅದು ಅಲಂಕಾರಿಕ ಅಷ್ಟೆ ಅಂತ ಹೇಳುವವರು ಇದ್ದಾರೆ. ಆದರೆ, ಅದು ಪದದ ಮೂಲ ಸ್ವರೂಪದ ಮೇಲೆ ಅವಲಂಬಿತ ಅಂತ ನನಗನಿಸುವುದು. ಉದ್ದುದ್ದ ಪದವಾದರೆ, ಅಡ್ಡಕ್ಕೆ ಹೆಚ್ಚಿ, ದಪ್ಪ ದಪ್ಪ ಪದವಾದರೆ ಉದ್ದಕ್ಕೆ ಹೆಚ್ಚಬಹುದು. ಯಾರಿಗಾದರೂ ಸಿಟ್ಟು ಬರುವ ಮೊದಲೇ ಹೇಳಿಬಿಡುತ್ತೇನೆ, ದಪ್ಪ ಪದಗಳನ್ನು ಅಡ್ಡಕ್ಕೆ ಹೆಚ್ಚುವವರು ಇರುವಂತೆ, ಉದ್ದಕ್ಕಿರುವ ಪದಗಳನ್ನು ಉದ್ದಕ್ಕೆ ಹೆಚ್ಚುವವರೂ ಇದ್ದಾರೆ. ಒಟ್ಟಾರೆ ರುಚಿಯ ಮೇಲೆ ನಿಮ್ಮ ಗಮನವಿದ್ದು, ಯಾವುದು ಹೆಚ್ಚು ರುಚಿ ಕೊಡುತ್ತದೆ, ಯಾವುದರಿಂದ ಹೆಚ್ಚು ಜಗಿಯುವವರಿಗೆ ಸಂತೋಷಕೊಡುತ್ತದೆ ಎಂಬುದಷ್ಟೇ ಮುಖ್ಯ. ಹಾಗೇ ಪದಗಳನ್ನು ಜಜ್ಜಿ ಗುದ್ದಿ ಉಪಯೋಗಿಸುವುದೂ ಕೆಲವೊಮ್ಮೆ ತುಂಬ ಅನಿವಾರ್ಯ. ಅದನ್ನೂ ಗಮನದಲ್ಲಿಟ್ಟುಕೊಳ್ಳಬೇಕು.
ಪೇಟೆಯಿಂದ ತಂದು ತುಂಬಾ ದಿನವಾಗಿದ್ದರೆ ಪದಗಳು ಎಲ್ಲಾದರೂ ಒಳಗೆ ಕೊಳೆತಿದೆಯೋ ನೋಡಿ ಉಪಯೋಗಿಸುವುದು ಆರೋಗ್ಯಕ್ಕೆ ಕ್ಷೇಮಕರ. ಕೆಲವೊಮ್ಮೆ ಪದಗಳು ಮೇಲೆ ಚೆನ್ನಾಗಿಯೇ ಇರವಂತೆ ಗೋಚರಿಸಿದರೂ ಒಳಗೆ ಕೊಳೆತುಬಿಟ್ಟಿರುತ್ತದೆ. ಅಂಥ ಪದಗಳನ್ನು ಉಪಯೋಗಿಸಿಬಿಟ್ಟರೆ, ನಂತರ ಅಡ್ಡವಾಸನೆ ಬಂದು ಬಹಳ ಕಷ್ಟವೂ ಆಗುತ್ತದೆ.
ಇನ್ನು ಪದಗಳ ಬಣ್ಣಗಳ ಬಗ್ಗೆಯೂ ಸ್ವಲ್ಪ ಎಚ್ಚರಿಕೆ ಇರುವುದು ಒಳ್ಳೆಯದು. ಯಾಕೆಂದರೆ ಒಂದು ಪದಕ್ಕೆ ಇರುವ ಬಣ್ಣ ಎಷ್ಟೇ ಬೇಕೆಂದರೂ ಇನ್ನೊಂದು ಪದಕ್ಕೆ ಬರುವುದಿಲ್ಲ. ಅಥವಾ ಬರಲಿ ಎಂದು ಎಷ್ಟು ಕಷ್ಟಪಟ್ಟರೂ ಅದು ವ್ಯರ್ಥ. ಆಯಾ ಪದಗಳ ಬಣ್ಣಗಳು ಆಯಾ ಪದಗಳಿಗೇ ಹೆಚ್ಚು ಸೂಕ್ತ. ಆದರೆ ನೋಡಿ, ಕೆಲವರು ಒಂದು ಪದಕ್ಕೆ ಮತ್ತೊಂದು ಪದದ ಬಣ್ಣವನ್ನು ಬರುವಂತೆ ಕುದಿಸಿಯೋ, ಸುಟ್ಟೋ ಉಪಯೋಗಿಸುವುದೂ ಇದೆ. ಆದರೆ, ಅದಕ್ಕೆ ತುಂಬಾ ಧೈರ್ಯಬೇಕು. ಆಮೇಲೆ ಬರುವ ಆರೋಪಗಳನ್ನು ತಡೆದುಕೊಳ್ಳುವ ಎದೆಗಾರಿಕೆ ಬೇಕು. ಎದೆಗಾರಿಕೆಯಿದ್ದರೆ, ಹಾಗೆ ಬಣ್ಣಬದಲಾಯಿಸಿ ಪದಗಳನ್ನು ಉಪಯೋಗಿಸಬಹುದು.
ತುಂಬಾ ಹಸಿವಾದಾಗ ಪದಗಳು ಹೇಗಿದ್ದರೂ ಪರವಾಗಿಲ್ಲ ಎಂಬ ಒಂದು ವಾದವೂ ಇದೆ. ಅದರಲ್ಲಿ ತಿರುಳಿಲ್ಲ ಅನ್ನುವ ಹಾಗಿಲ್ಲ. ಆದರೆ ಪದಗಳು ಬರೇ ಹಸಿವಿಗೆ ಮಾತ್ರ ಎಂದು ತಿಳಿದುಬಿಟ್ಟರೆ ತಪ್ಪಾಗಿ ಬಿಡುತ್ತದೆ. ಪದಗಳು ಬೇರೆ ಬೇರೆ ರೀತಿಯಲ್ಲಿ ನಮಗೆ ಬೇಕಾಗುತ್ತದೆ. ಬರೇ ಹಸಿವೆ ಹಿಂಗಿಸುವುದಕ್ಕಷ್ಟೇ ಅಲ್ಲ.
ಪದಗಳ ಬಗ್ಗೆಗಿನ ಈ ಕಿರುಟಿಪ್ಪಣಿಯಿಂದ ಓದಿದವರಿಗೆ ಸ್ವಲ್ಪವಾದರೂ ಅನುಕೂಲವಾಗಬಹುದು ಎಂಬುದು ನನ್ನ ಎಣಿಕೆ.
ಕಲೆಹಾಕಿ ಪದ್ಯ ಬರೆಯುವುದು
In ಕಲ್ಪನೆ, ಯೋಚನೆ on March 31, 2007 at 4:48 amFebruary 9, 2007 – 11:36 — anivaasi
ಪದ್ಯ ಬರೆಯುವ ದಿನ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ಮುಖ ತೊಳೆಯುವಾಗ ಕನ್ನಡಿಯಲ್ಲಿ ನನ್ನ ಮುಖವನ್ನು ಒಂದು ಕ್ಷಣ ದಿಟ್ಟಿಸುತ್ತೀನಿ – ಯಾರಿದು ಅನ್ನೊ ಹಾಗೆ. ನಂತರ ಕಾಫಿ ಕುಡಿದು ಪೇಪರ್ ಓದದೇ ಸ್ನಾನ ಮಾಡಿ ಮೈ ಒರೆಸಿಕೊಂಡು ಒದ್ದೆ ಟವಲನ್ನು ಬೇಗ ಒಣಗುವಂತೆ ಬಿಡಿಸಿ ಹರವುತ್ತೇನೆ. ಕೆಲಸಕ್ಕೆ ಹೊರಡಲು ಹೊತ್ತಾಯಿತ್ತೆಂದು ಓಡುವಾಗ ಏಕತಾನದಲ್ಲಿ ಕೂಗುವ ಕೋಗಿಲೆಯೊ ಕಾಕಟೂನೊ ಮನೆಯ ಮುಂದಿನ ಮರದಲ್ಲಿ ಕೂತಿದ್ದರೆ ಕಿರಿಕಿರಿಗೊಂಡು, ಅದಕ್ಕೆ ಕಲ್ಲು ಹೊಡೆಯುವ ಹಂಬಲವನ್ನು ಹತ್ತಿಕ್ಕಿ ರೈಲ್ವೇ ಸ್ಟೇಷನ್ನಿಗೆ ಓಡುತ್ತೇನೆ. ರೈಲಿನಲ್ಲಿ ಪಕ್ಕದಲ್ಲಿ ಕೂತ ಹುಡುಗಿಯರಿಬ್ಬರು ತಮ್ಮ ಬಾಯ್-ಫ್ರೆಂಡುಗಳ ಬಗ್ಗೆ ಜೋರಾಗಿ ಚರ್ಚಿಸುವುದನ್ನು ಕೇಳದವನಂತೆ ನಟಿಸುತ್ತಾ ಅವರ ಹುಡುಗಾಟದ ಕತೆಯಲ್ಲಿ ಮೈಮರೆಯುತ್ತೇನೆ. ಕೆಲಸದಲ್ಲಿ “ಆ ಪದ್ಯ ಓದಿದ್ದೀಯ, ಈ ಪದ್ಯ ಓದಿದ್ದೀಯ” ಅಂತ ಪೀಡಿಸೊ ಸಹೋದ್ಯೋಗಿಯಿಂದ ತಲೆ ಮರೆಸಿಕೊಂಡು ಓಡಾಡುತ್ತೇನೆ. ಕೆಲಸ ಮುಗಿಸಿ ಕೆಲಸದವರ ಜತೆ ಪಬ್ಬಿನಲ್ಲಿ ಬೀರ್ ಕುಡಿಯುತ್ತಾ, ಎಲ್ಲರ ಹುಚ್ಚು ಮಾತುಗಳಲ್ಲಿ ಏನಾದರೂ ಸಿಕ್ಕತ್ತಾ ಎಂದು ಹುಡುಕುತ್ತೇನೆ. ನನ್ನ ತಲೆಯಲ್ಲಿ ಗುಂಯ್ ಗುಡುತ್ತಿರುವ ಸಾಲೊಂದನ್ನ ಇಂಗ್ಲಿಷಿಗೆ ತರ್ಜುಮೆ ಮಾಡಿ ಮಾತಿನ ಮಧ್ಯೆ ತೂರಿಸಿ ಅವರ ಮುಖದಲ್ಲಿ ಬರುವ ಅಥವಾ ಬರದೇ ಇರುವ ಪ್ರತಿಕ್ರಿಯೆಗೆ ಕಾಯುತ್ತೇನೆ. ಬೆಳಿಗ್ಗೆ ಒಣಗಿಸಿದ ಟವಲ್ಲು ಒಣಗಿಬಿಟ್ಟಿರಬಹುದೆ ಅಂತ ಮನಸ್ಸಿನಲ್ಲಿ ಹಾದು ಹೋಗತ್ತೆ. ಇನ್ನೂ ಕತ್ತಲಾಗದಿದ್ದರೂ, ತುಂಬ ಮುಖ್ಯವಾದ ಕೆಲಸ ಇದೆ ಎಂದು ಸುಳ್ಳು ಹೇಳಿ ಮನೆಯ ರೈಲು ಹತ್ತುತ್ತೇನೆ. ಆವತ್ತಿಡೀ ಪದ್ಯಕ್ಕಾಗಿ ಹೆಕ್ಕಿಟ್ಟುಕೊಂಡದ್ದನ್ನು ಸೀರೆ ಉಟ್ಟಿದ್ದರೆ ಸೆರಗಿನ ತುದಿಯಲ್ಲಿ ಗಂಟು ಹಾಕಿ ಬಿಗಿದುಕೊಂಡು, ಪ್ಯಾಂಟು ಹಾಕಿಕೊಂಡಿದ್ದರೆ ಎಡ ಹಿಪ್ ಪಾಕೆಟಲ್ಲಿ (ಬಲ ಪಾಕೆಟ್ಟಿನಲ್ಲಿ ದುಡ್ಡಿನ ವಾಲೆಟ್ಟಿರುತ್ತದೆ) ಮಳೆಗೆ ಒದ್ದೆಯಾಗದ ಹಾಗೆ ಕಾಪಾಡಿಕೊಂಡು ಮನೆಗೆ ತರುತ್ತೇನೆ. ಎಲ್ಲ ಮಲಗುವುದನ್ನೇ ಕಾದಿದ್ದು ರೂಮಿನ ಬಾಗಿಲು ಹಾಕಿ ಟೇಬಲ್ಲಿನ ಮೇಲೆ ಚೆಲ್ಲಿ ಏನಾದರೂ ವಿನ್ಯಾಸ ಕಾಣುತ್ತದಾ ಅಂತ ತುಂಬಾ ಹೊತ್ತು ಹುಡುಕುತ್ತೇನೆ. ಗೊತ್ತಾಯ್ತ? ನಾನು ಪದ್ಯ ಬರೆಯೋದರಲ್ಲಿ ಗೌರವದ ವಿಷಯ ಏನೂ ಇಲ್ಲ. ಯೋಗಿಯ ಹಾಗೇ ಕಾವ್ಯದ ಧ್ಯಾನ ಅಲ್ಲ. ರೈತನ ಹಾಗೆ ಉತ್ತು ಬಿತ್ತು, ಬೆವರು ಸುರಿಸಿ ಫಸಲು ತೆಗೆಯುವ ಹಾಗೂ ಅಲ್ಲ. ಹೆಚ್ಚೆಂದರೆ, ನಮ್ಮ ಹಕ್ಕಿಪಿಕ್ಕಿಗಳ ಹಾಗೆ ಅಥವಾ ಆಸ್ಟ್ರೆಲಿಯಾದ ಆದಿವಾಸಿಗಳ ಹಾಗೆ ನಾಚಿಕೆ ಬಿಟ್ಟು ಬೇಟೆ ಆಡೋದು, ಅಲೆದಾಡಿ ಹಣ್ಣು, ಬೇರು ನಾರು- ಹೆಕ್ಕಿ ಗುಡ್ಡೆ ಹಾಕಿಕೊಳ್ಳೋದು. ಅಷ್ಟೆ.
ಇಲ್ಲೇನು ಹಾಕಬಹುದು?
In ಅಂದಂದು, ಯೋಚನೆ on March 28, 2007 at 12:18 amಇಲ್ಲಿ ಏನು ಬ್ಲಾಗಿಸಬಹುದು, ಏನು ಬ್ಲಾಗಿಸಲಾರೆ ಎನ್ನುವುದನ್ನು ಈಗಲೇ ಠರಾವಿನ ಹಾಗೆ ನಿರ್ಧರಿಸುವ ಬದಲು, ದಾರಿ ಸವೆಸುತ್ತಾ ತೋಚಿದ್ದನ್ನು ಆ ಹೊತ್ತಿನಲ್ಲಿ ಬ್ಲಾಗಿಸಬಹುದು ಅನಿಸಿದಾಗ ಹಾಕುತ್ತೇನೆ.
ನನ್ನ ಅಭಿರುಚಿ, ನಾಟಕ, ಸಾಹಿತ್ಯ, ಚಲನಚಿತ್ರ ಇತ್ಯಾದಿ ಇರುವುದರಿಂದ ಅದರ ಬಗ್ಗೆ ಹೆಚ್ಚು ಹಾಕುತ್ತೇನೇನೋ. ಆದರೆ, ಅದರಡಿಯಲ್ಲಿ ಏನಾದರೂ ಒಂದು ರಾಜಕೀಯದ ಛಾಯೆ ಇರಬಹುದು. ಸಾಮಾಜಿಕ ಛಾಯೆ ಇರಬಹುದು. ಇಲ್ಲದಿದ್ದರೆ ಇಲ್ಲಿ ಹಾಕಿ ಏನು ಪ್ರಯೋಜನ ಅನಿಸುತ್ತದೆ ಈಗ.
ಇಲ್ಲಿಗೆ ನನ್ನ ಸಂಪದದ ಬ್ಲಾಗಿನ ತಂತು ಕೊಟ್ಟಿರುತ್ತೇನೆ. ಅಲ್ಲಿಗೂ ಹೋಗಿ ನೋಡಬಹುದು.
ಸದ್ಯಕ್ಕಿಷ್ಟೆ.

