ಇರುಳು ಹಗಲು

ಮಾಡಿನ ಕಿಂಡಿ ಮತ್ತು ತೆರೆದ ಕಿಟಕಿಯಿಂದ ತೂರಿ ಬಂದು ದಿನವಿಡೀ ನನ್ನ ಮೈಗೆಲ್ಲಾ ಕಚಗುಳಿಯಿಟ್ಟು, ಬಿಡುಬೀಸಾಗಿ ಮನೆಯೆಲ್ಲಾ ಮೈ ಹರಡಿ ನನ್ನ ಜತೆ ಚಕ್ಕಂದವಾಡಿ ಸಂಜೆ ಹೋಗುವಾಗ “ಮುಳುಗುವ ಸಮಯ ಬಂತು, ನಾನು ಇಲ್ಲಿಂದ ಹೋಗುತ್ತಲೂ ಕತ್ತಲಾಗೋಕೆ ಬಿಡದ ಹಾಗೆ ಬಿಳಿಯ ಬೆಳಕಿನ ಮೋಡಿ ಹಾಕಿ, ರಾತ್ರಿ ಇಡೀ ಚುಂಬಿಸ್ತೀನಂತ ಆ ಮಾಯಗಾತಿ ಬರುತ್ತಾಳೆ. ಹುಷಾರಾಗಿರು. ಸುಮ್ಮನೆ ನಿದ್ದೆ ಮಾಡು” ಎಂದು ಹಿಂದೆ ತಿರುಗಿ ನೋಡದೆ ಮಾಯವಾದಳು. ಅವಳ ಚೆಲುವಿಗೆ ಸೋತು ಅವಳ ಕನಸೇ ಕಾಣಬೇಕೆಂದು ಗಟ್ಟಿಮಾಡಿಕೊಂಡೆ.
ಮಾಡಿನ ಕಿಂಡಿಗೆಲ್ಲಾ ಹಲಗೆ ಅಡ್ಡಮಾಡಿ, ಕಿಟಕಿಯೆಲ್ಲಾ ಮುಚ್ಚಿ ಮೇಣದಬತ್ತಿ ಹತ್ತಿಸಿ ಮೂಲೆಯಲ್ಲಿ ಕೂತೆ. ಮೈಬಿಸಿ ಮಾಡುವ ಅವಳ ಕನಸು ತರಲಿ ಅನ್ನೋ ಆಸೆಯಿಂದ ಗೋಡೆಯ ಮೇಲೆ ತೆವಳಾಡುವ ನೆರಳನ್ನು ನೋಡಿದೆ. ಕನಸೇನೋ ಬಿತ್ತು. ಆದರೆ ಬಿಳಿಯ ಬೆಳಕು ಮೈಯೆಲ್ಲಾ ಮೆತ್ತಿಕೊಂಡು ಇರುಳಿಡೀ ಕುಣಿದ ಹಾಗೆ. ದಣಿವಾದ ಹಾಗೆ. ಮೈಗೆ ಮೈಕೊಟ್ಟು ನಿಜವೇ ಅನ್ನಿಸೋ ಮತ್ತೇರಿದ ಹಾಗೆ. ಎಷ್ಟು ಬೇಕೆಂದು ತಹತಹಿಸಿದರೂ ಇರುಳು ಮೆಲ್ಲನೆ ಜಾರಿ ಹೋದ ಹಾಗೆ. ದಿನದ ಬೆಳಕು ತುಂಬಿಕೊಂಡ ಹಾಗೆ. ಕನಸ್ಸಲ್ಲೇ ಕನಸ್ಸಿಂದ ಎಚ್ಚರವಾದ ಹಾಗೆ. ಎಷ್ಟು ಕಷ್ಟಪಟ್ಟರೂ ಮೈಗೆ ಹತ್ತಿದ ಬಿಳಿಯನ್ನು ಒರೆಸಿ ತೆಗೆಯಲಾಗದ ಹಾಗೆ. ಉಜ್ಜಿ ಉಜ್ಜಿ ರಕ್ತ ಒಸರಿದ ಹಾಗೆ.
ಮತ್ತು-ಆತಂಕ-ಕಳವಳ.
ಕಿಟಕಿ ಬಡಿತಕ್ಕೆ ಎಚ್ಚತ್ತಾಗ ಬೆಳಗಾಗಿ ಬಿಟ್ಟಿತ್ತು. ಕಿಟಕಿ ಮೆಲ್ಲನೆ ತೆಗೆದರೆ ಸರಕ್ಕನೆ ಒಳಗೆಲ್ಲಾ ತುಂಬಿಕೊಂಡುಬಿಟ್ಟಳು. ವೈಯ್ಯಾರದಿಂದ ಅನುಮಾನ ತೋರದ ಹಾಗೆ ನಗುತ್ತಾ ಸುತ್ತೆಲ್ಲಾ ನೋಡಿದಳು. “ಕಿಂಡಿಗಳನ್ನು ಯಾಕೆ ಮುಚ್ಚಿ ಬಿಟ್ಟೆಯೋ?” ಕೊಂಕಾಡಿದಳು.
“ನೀನು ನನ್ನ ಮುದ್ದು ಮೊಲ ಗೊತ್ತ?” ಅಂತ ರಮಿಸಿದಳು.
“ನೀನು ಮೋಸಮಾಡೋನಲ್ಲ ಅಂತ ಗೊತ್ತಿತ್ತು” ಅಂತ ಅಪ್ಪಿದಳು.
“ಆ ಸೋಗಲಾಡಿ ತಾನೇ ಸುರಸುಂದರಿ ಅನ್ಕೊಂಡು ಅಗ್ಗವಾಗಿ ಆಡಿದಳು ಅಲ್ವ?” ಎಂದು ಮುಖ ಮುರಿದಳು.
“ತನ್ನದೇ ಬೆಳಕು ಅನ್ನೋ ಹಾಗೆ ಆಡುತ್ತಾಳೆ ಕೊಂಕಿನ ರಾಣಿ! ಅವಳು ಬಿಂಬಿಸಿದ ಬಿಳಿ ಬೆಳಕು ಸ್ವಂತದ್ದು ಅಂತ ನಂಬಿಸೋಕೆ ಬಂದಳ?” ಎಂದು ಪ್ರಶ್ನಿಸಿದಳು.
“ನನ್ನ ಬೆಳಕನ್ನೇ ರಾತ್ರಿ ಎಲ್ಲ ಬಿಂಬಿಸಿ, ನಾನು ಬರೋ ಹೊತ್ತಿಗೆ ಜಾರಿಕೋತಾಳೆ. ನಾನಿದ್ದರೆ ಅವಳೆಲ್ಲಿ ಕಾಣತಾಳೆ?” ಎಂದು ಗರ್ವಿಸಿದಳು.
“ನೀನು ಅವಳನ್ನು ಒಳಗೆ ಬಿಡಲಿಲ್ಲವಲ್ಲ. ಮುಚ್ಚಿದ ಕಿಟಕಿ ನೋಡಿ ನಿನ್ನ ಪ್ರಾಮಾಣಿಕತೆಗೆ ಕರಗಿ ಹೋದೆ” ಎಂದು ಗೆದ್ದವಳಂತೆ ಬಿಂಕ ತೋರಿದಳು.

ಬಿಳಿ ಒರೆಸಲು ಉಜ್ಜಿಕೊಂಡಾಗ ಆದ ಗಾಯದಿಂದ ಇನ್ನೂ ಒಸರುತ್ತಿದ್ದ ರಕ್ತವನ್ನು ಏನು ಮಾಡಿಕೊಂಡೆಯೋ ಎನ್ನುತ್ತಾ ಆದರಿಸಿದಳು. ಅದರ ಮೇಲೆ ಕೈಯಾಡಿಸಿ ಒಂದು ಕ್ಷಣದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಒಣಗಿಸಿಬಿಟ್ಟಳು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: