ತಲುಪಿದೆನೆ?

ಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ.

ನಾನು, ಹರಿ ಒಬ್ಬರನ್ನೊಬ್ಬರು ನೋಡಿರಲಿಲ್ಲ. ಫೋನಿನಲ್ಲಿ ಜಯನಗರದಲ್ಲಿ ಸಿಗುವುದು ಎಂದಾಗಿತ್ತು. ಚಿತ್ರನಟ ದತ್ತಣ್ಣನೊಡನೆ ಊಟ ಮುಗಿಸಿ ಅಲ್ಲೇ ಇರುವುದಾಗಿ ಹರಿಗೆ ಹೇಳಿದೆ. ದತ್ತಣ್ಣನ ಮೂಲಕ ನನ್ನ ಗುರುತು ಹಿಡಿದು ಭೇಟಿಯಾಗಿದ್ದು, ನಂತರ ಹಲವಾರು ಸಲ ಭೇಟಿಯಾಗಿ ಆತ್ಮೀಯವಾಗಿ ಮಾತಾಡಿದ್ದು ನನ್ನ ಮನಸ್ಸಲ್ಲಿ ಇನ್ನೂ ಕೊನೆಗೊಂಡಿಲ್ಲ. ಅವರೊಡನೆ ಎಸ್.ಎಲ್.ವಿ ತಿಂಡಿ ಕಾಫಿಗಳು, ಅಂಕಿತ ಪುಸ್ತಕಕ್ಕೆ ಭೇಟಿ, ಕಾರ್ಪೋರೇಷನ್ ಸರ್ಕಲ್‌ನಿಂದ ಮ್ಯೂಸಿಯಂವರೆಗೆ ಟ್ರಾಫಿಕ್‌ ನಡುವೆ ದಾರಿ ಮಾಡಿಕೊಂಡು, ನಮ್ಮ ಚರ್ಚೆಯ ನಡುವೆ ಉಸಿರೆಳೆದುಕೊಂಡು ನಡೆದಿದ್ದು. ಹರಿಯವರ ಆಳದ ಕಾಳಜಿಗಳು, ತಮ್ಮ ಕೆಲಸದ ಜಂಜಾಟದ ನಡುವೆಯೂ ಸಂಪದಕ್ಕೆ ಅವರು ಕೊಡುತ್ತಿರುವ ಮನಸ್ಸು-ವೇಳೆ ನನ್ನನ್ನು ಈಗಲೂ ಬೆಚ್ಚಗಾಗಿಸುತ್ತದೆ.

ಕೋರಮಂಗಲದ ಫೋರಮ್ಮಿನಲ್ಲಿ ಸುನೀಲರನ್ನು ಭೇಟಿಯಾಗಿದ್ದು. ದೂರದಿಂದಲೆ ಹರಿಯಿಂದ ತಿಳಿದುಕೊಂಡು ಹತ್ತಿರ ಬಂದು ಅವರು ಆತ್ಮೀಯವಾಗಿ ಮಾತಾಡಿಸಿದ್ದು ಗೆಳೆಯರ ಬಳಗದೊಳಗೆ ನೇರ ಹೊಕ್ಕ ಅನುಭವ. ನಂತರ, ವೈಭವ ಮತ್ತು ಮಹೇಶರಿಗೆ ಕೀಟಲೆ ಮಾಡಿದ್ದು. ಅವರ ಹಿಂದೆಯೇ ಅವರನ್ನು ಬಯ್ದುಕೊಂಡು ರಸ್ತೆ ದಾಟಿದ್ದು. ಅವರು ನನ್ನನ್ನು ‘ಯಾವನೋ ಇವ’ ಎಂಬಂತೆ ನೋಡಿದ್ದು ನಂತರ ಎಲ್ಲ ತಿಳಿಯಾಗಿ ಮನಸಾರ ನಕ್ಕಿದ್ದು ಇನ್ನೂ ಹಸಿಯಾಗಿಯೇ ಇದೆ.

ಅಲ್ಲಿ ಪಿಟ್ಸಾ ತಿಂದು, ನಿಂಬೆ ಪಾನಕ (ಮೆಣಸು ಹಾಕಿದ್ದು!) ಕುಡಿದು ಸಂಪದದ ಯಾವುಯಾವುದೋ ಎಳೆಯ ಬಗ್ಗೆ, ಕಾಮೆಂಟಿನ ಬಗ್ಗೆ ಮಾತಾಡಿದ್ದು ಇನ್ನೂ ನಗಿಸುತ್ತಿದೆ. ಅಂಕಿತ ಪುಸ್ಕಕಕ್ಕೆ ಸುನೀಲರ ಸ್ಕೂಟರಿನಲ್ಲಿ ಹಿಂದೆ ಕೂತು ಹೊರಟಿದ್ದು; ಬೆಂಗಳೂರಿನ ಟ್ರಾಫಿಕ್ಕಿನಲ್ಲಿ, ಹಾರ್ನ್, ಹೊಗೆ, ಧೂಳಿನ ನಡುವೆ ಶಂಕರಾಚಾರ್ಯ ಮತ್ತು ಬೌದ್ಧರ ಬಗ್ಗೆ ಚರ್ಚಿಸಿದ್ದು, ಯಾರದೋ ಫೋನ್‌ ಬಂದು ಪ್ರೇಮಾ ಕಾರಂತರು ಆಸ್ಪತ್ರೆಯಲ್ಲೇ ಸೀರಿಯಸ್ಸಾಗಿರುವುದರ ಬಗ್ಗೆ ಗೊತ್ತಾಗಿದ್ದು, ರಂಗಶಂಕರ-ವೋಡಾಫೋನ್‌ನ ದೊಡ್ಡ ದೊಡ್ಡ ಇಂಗ್ಲೀಷ್ ಫಲಕಗಳು ಹೀಗೇ ಆಗಬೇಕೇ ಎಂದು ಕಾಡುತ್ತಿದ್ದುದು ಇನ್ನೂ ನಡೆದೇ ಇದೆ.

ನಂತರ ಮಹೇಶರ ಜತೆ, ಕನ್ನಡದ ಜನಾಂಗದ ಬಗ್ಗೆ, ವ್ಯಕ್ತಿತ್ವದ ಬಗ್ಗೆ, ಭಾವಾವೇಶದ ಬಗ್ಗೆ ರಾತ್ರಿ ತುಂಬಾ ಹೊತ್ತಿನ ವರೆಗೆ ನಡೆದ ಚರ್ಚೆಯ ನೆರಳು ಇನ್ನೂ ನನ್ನ ಪಕ್ಕವೇ ಸುಳಿಯುತ್ತಿದೆ. ಇಸ್ಮಾಯಿಲ್‌ರನ್ನು ಭೇಟಿಯಾದಾಗ, ನಂತರ ರಶೀದರು ಸಿಕ್ಕಾಗ ಧೋ ಎಂದು ಸುರಿದ ಮಳೆ; ತೊಪ್ಪೆಯಾಗಿ ಕಾಫಿ-ಡೇಯಲ್ಲಿ ಕೂತು ಹರಟಿದ್ದು; ಆ ಮಳೆ ಇನ್ನೂ ಸುರಿಯುತ್ತಿದೆ.

ಮತ್ತೊಂದು ದಿನ ವೈಭವರ ಜತೆ ಕೂತು ಹತ್ತು ಹಲವಾರು ವಿಚಾರಗಳನ್ನು ಸಮಾಧಾನದಿಂದ ಮಾತಾಡಿದ್ದು ಕೂಡ ಇನ್ನೂ ಮುಗಿದಿಲ್ಲ. ಮುರಳಿಯವರ ಕಾಳಜಿ, ಚಟುವಟಿಕೆ, ಕನಸು, ಇವೆಲ್ಲವನ್ನು ಅವರು ನನ್ನ ಜತೆ ತುಂಬಾ ಆತ್ಮೀಯರಾಗಿ ಹಂಚಿಕೊಂಡದ್ದು, ಚರ್ಚಿಸಿದ್ದು, ಖುಷಿಸಿದ್ದು ಮುಗಿಯುವಂಥದ್ದಲ್ಲ. ಅವರು ಪುಸ್ತಕ ಕೊಟ್ಟಿದ್ದು ನನ್ನನ್ನು ಇನ್ನೂ ಕಲಕುತ್ತಿದೆ.

‘ಮುಖಾಮುಖಿ’ ನೋಡಿ, ಇಸ್ಮಾಯಿಲ್, ಅಭಯ ಸಿಂಹ, ಪ್ರಕಾಶ್ ಪಂಡಿತ್, ಕಾರ್ತಿಕ್ ಮತ್ತು ಇನ್ನುಳಿದವರೊಡನೆ ನಡೆಸಿದ ಮಾತುಕತೆ. ಅಂದು ಸಿಡ್ನಿಗೆ ಹೊರಡುವ ದಿನ ಮನೆಗೆ ಊಟಕ್ಕೆ ಬರುತ್ತೇನೆಂದು ಹೇಳಿದ್ದರೂ, ಎಲ್ಲರೊಡನೆ ಕೂತು ಗಂಟೆಗಟ್ಟಲೆ ಸಿನೆಮಾದ ಆಶೆ-ಹತಾಶೆ, ಕನಸು-ವಾಸ್ತವ, ಹೊರಗಿನ-ಒಳಗಿನ ವಿಚಾರಗಳ ಮಾತು ಆಡೇ ಆಡಿದೆವು. ಅವರೆಲ್ಲಾ ತೋರಿದ ಗೆಳೆತನ ನನ್ನಲ್ಲಿ ಆರ್ದ್ರವಾಗಿ ಉಳಿದು ಇನ್ನೂ ತೋಯಿಸಿದೆ.

ಬಂದು ಒಂದು ವಾರ ಕಳೆದರೂ ಏನೋ ಮುಗಿತಾಯಗೊಂಡಿಲ್ಲ ಅನಿಸುತ್ತಿತ್ತು.

ಇದ್ದಕ್ಕಿದ್ದಂತೆ, ಸಿಡ್ನಿಯ ಲಿವರ್‌ಪೂಲ್‌ ಪೇಟೆಯಲ್ಲಿ ಈಸ್ಟ್-ಯೂರೋಪಿಯನ್ ಜಿಪ್ಸಿ ಸಂಗೀತ ಕೇಳಿತು. ಒಂದು ಡೋಲು ಮತ್ತು ಅಕಾರ್ಡಿಯನ್. ತಮ್ಮ ಗಂಡ-ಮಕ್ಕಳಿಗೆ ಬೇಳೆ ಕಾಳು ಕೊಳ್ಳಲು ಬಂದು ನಾಕು ಜನ ಹೆಂಗಸರು ಅದನ್ನು ಕೇಳಿದ್ದೇ ಕುಣಿಯತೊಡಗಿದರು. ಯಾವುದನ್ನೋ ಕಳಕೊಂಡಂಥ ಸಂಗೀತ. ನಗುನಗುತ್ತಾ ಹೆಜ್ಜೆ ಹಾಕುತ್ತಿರುವ ಹೆಂಗಸರ ಗುಂಪು.

ನನಗ್ಯಾಕೋ ಗಂಟಲು ಕಟ್ಟಿದಂತಾಯಿತು. ಮಾತು ತುಂಬಾ ಹೊತ್ತು ಹೊರಡಲಿಲ್ಲ. ಉಮ್ಮಳಿಸಿದಂತಾಯಿತು.

ಸಿಡ್ನಿ ಈಗ ತಲುಪಿದೆನೆ ಅಂತ ತುಂಬಾ ಹೊತ್ತು ಸುಮ್ಮನೆ ನಿಂತುಬಿಟ್ಟೆ.

Advertisements

2 thoughts on “ತಲುಪಿದೆನೆ?

Add yours

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: