ಹರಟೆಯೆಂಬ ಪಾಠಶಾಲೆ


ಮೊನ್ನೆ ನಾವು ಕೆಲವರು ಹರಟೆ ಹೊಡೆದ್ದದ್ದರ ಬಗ್ಗೆ ಹೇಳ್ತಾ ಇದ್ದೀನಿ.

ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು. ತಮಗೆ ಗೊತ್ತಿರುವವರೊಬ್ಬರಿಗೆ ಕಷ್ಟಕಾಲದಲ್ಲಾದ ಪವಾಡ-ಸಮಾನವಾದ ನೆರವನ್ನು ರಸವತ್ತಾಗಿ ಹರಕು ನೆನಪಿನಿಂದಲೇ ಹೆಕ್ಕಿ ಹೆಕ್ಕಿ ಹೇಳಿದರು. ಅದಕ್ಕಿಂತ ಒಳ್ಳೆಯ ಕತೆ ಯಾರಿಗೂ ನೆನಪಾಗದೆ ಸುಮ್ಮನಾದರು. ತಾವೆಲ್ಲಾ ಪವಾಡ ನಂಬುವವರ ಹಾಗೆ ಕಂಡುಬಿಡಬಹುದೆಂಬ ಭಯದಿಂದಲೋ ಎಂಬಂತೆ ಮಾತು ಬೇರೆ ಕಡೆಗೆ ತಿರುಗಿತು.

ಇಂಟರ್‌ನೆಟ್‌ನಲ್ಲಿ ಎಲ್ಲೋ ಓದಿದ ಒಂದು ವೈದ್ಯಕೀಯ ವಿದ್ಯಮಾನವನ್ನು ತಮ್ಮ ಕೂದಲು ತೀಡಿಕೊಳ್ಳುತ್ತಾ ಮತ್ತೊಬ್ಬರು ಹೇಳಿದರು. ಎಲ್ಲರೂ ಹೌದೇ ಎಂದು ಕಣ್ಣು ಬಿಟ್ಟುಕೊಂಡು ಕೂತರು. ಆಗ ಮಾತಿನ ಬಿಸಿಯೇರಿಸಲು ಇನ್ನೊಬ್ಬರು ಅಲೋಪತಿ ಹೇಗೆ ಬರೀ ಮೋಸ ಎಂದು ತಾವು ಓದಿದ ವೆಬ್‌ಸೈಟ್‌ ಬಗ್ಗೆ ಹೇಳಿದರು. ಎಲ್ಲರಿಗೂ ಸಣ್ಣಗೆ ಎದೆ ನಡುಗಿದಂತೆ ಕಂಡಿತು. ತುಂಬಾ ನಂಬಿಕಸ್ತರ ಮಾತಿನ ಬಗ್ಗೆ ಹೇಗೆ ಅಡ್ಡಬಾಯಿ ಹಾಕುವುದೆಂದು ಯಾರಿಗೂ ಗೊತ್ತಾಗಲಿಲ್ಲ. ಜೀನ್ಸ್ ಪ್ಯಾಂಟು ಉಜ್ಜಿಕೊಳ್ಳುತ್ತಾ ಸಣ್ಣವರೊಬ್ಬರು ಯಾವ ಸೈಟದು ಎಂದು ಕೇಳಿಯೇ ಬಿಟ್ಟರು. ಪ್ರಶ್ನೆಗೆ ತಯಾರಿಲ್ಲದೆ ವೆಬ್‌ಸೈಟ್ ವಿಷಯ ಹೇಳಿದವರು ಒಂದು ಕ್ಷಣ ಆ ಸಣ್ಣವರನ್ನೇ ದಿಟ್ಟಿಸಿದರು. ಅವರ ತಲೆ ಸಾವಿರ ಮೈಲು ವೇಗದಲ್ಲಿ ಓಡುತ್ತಿದ್ದಂತಿತ್ತು. ಕಡೆಗೂ ನೆನಪಾಗದೆ ಬರೇ “ಏನೋ ಡಾಟ್.ಕಾಂ” ಅಂದರು. ಮತ್ತೆ ಏನೋ ಹೊಳೆದವರಂತೆ ತಲೆ ಕೆಳಗೆ ಹಾಕಿ ಬೆರಳೆತ್ತಿದರು. “ಅಲ್ಲ, ಅಲ್ಲ, ಯಾವುದೋ ಡಾಟ್‌.ನೆಟ್” ಅಂದರು. ಉಸಿರು ಬಿಗಿಹಿಡಿದು ಕೂತಿದ್ದ ಉಳಿದವರು “ಸರಿ, ಸರಿ!” ಎಂದು ನಿಟ್ಟುಸಿರು ಬಿಟ್ಟು ನಕ್ಕರು. ಅಷ್ಟು ಹೊತ್ತು ಕಲ್ಲಂತೆ ಸುಮ್ಮನಿದ್ದ ಕನ್ನಡಕ ಹಾಕಿಕೊಂಡವರೊಬ್ಬರು ಮಿಸುಕಾಡಿದರು. ಅವರ ಗೆಳೆಯರೊಬ್ಬರ ಮನೆಯ ಪಕ್ಕದಲ್ಲಿ ವಾಸವಾಗಿರುವವರ ಬಗ್ಗೆ ಹೇಳಿದರು. ವರ್ಷಾನುಗಟ್ಟಲೆ ಅಲೋಪತಿ ಮದ್ದು, ಆಪರೇಷನ್ ಎಲ್ಲಾ ಮಾಡಿದರೂ ಸರಿ ಹೋಗದ ಖಾಯಿಲೆ ಒಂದೇ ವಾರದಲ್ಲಿ ಸರಿ ಹೋಯಿತಂತೆ. ಆದರೆ ಸಮಯಕ್ಕೆ ಸರಿಯಾಗಿ ಅವರಿಗೆ ಆಯುರ್ವೇದವೋ, ಹೋಮಿಯೋಪತಿಯೋ ಮರೆತು ಹೋಯಿತು. ತಲೆ ತಗ್ಗಿಸಿ ತುಂಬಾ ಹೊತ್ತು ಧ್ಯಾನಿಸಿದರು. ಇನ್ನು ಕಾಯಲಾರದೆ ಕೂತವರ ಮಾತು ಸಿನೆಮಾದ ಕಡೆ ಹೊರಳಿತು.

ಇತ್ತೀಚಿನ ಚಿತ್ರಗಳಲ್ಲಿ ಹಿಂಸೆಯೋ ಲೈಂಗಿಕತೆಯೋ ಜಾಸ್ತಿಯಾಗಿದೆ ಎಂದು ಲೊಚಗೊಟ್ಟಾಟ ಶುರುವಾಯಿತು, ಅದು ನೋಡಿದಿರ-ಇದು ನೋಡಿದರ ಎಂದು ಮಾತು ಎರಡು ಮೂರು ಗುಂಪುಗಳಾಗಿ ಒಡೆಯಿತು. ಚಿತ್ರಗಳನ್ನು ಬಯ್ಯುತ್ತಲೇ ಹೊಸ ಸಿನೆಮಾದ ಡಿವಿಡಿ ಇದೆಯಾ ಎಂದು ಒಬ್ಬರನ್ನೊಬ್ಬರು ವಿಚಾರಿಸಿಕೊಂಡರು. ಇದ್ದಕಿದ್ದಂತೆ ಯಾವುದೋ ಸಿನೆಮಾದ ಹಾಡುಗಾರರು ಹತ್ತು ಸಾವಿರ ಹಾಡು ಹಾಡಿದ್ದಾರೆ ಎಂದು ಒಬ್ಬರು ಘೋಷಿಸಿದರು. ಅವರ ಮಾತಿನ ಧಾಟಿ ಮತ್ತು ಜೋರಿಗೆ ಎಲ್ಲ ಸುಮ್ಮನಾದರು. ಇದನ್ನೇ ಕಾಯುತ್ತಿದ್ದವರಂತೆ ಇನ್ನೊಬ್ಬರು ಜಗಳಕ್ಕೆ ಎಂಬಂತೆ ನೆಟ್ಟಗೆ ಕೂತರು. ಹತ್ತು ಸಾವಿರ ಅವರ ಮನಸ್ಸಿಗೆ ಒಪ್ಪಿದಂತೆ ಕಾಣಲಿಲ್ಲ. “ಇಪ್ಪತ್ತು ಸಾವಿರಕ್ಕೆ ಕಡಿಮೆಯಿಲ್ಲ, ಗೊತ್ತ!?” ಎಂದು ಖಡಾಖಂಡಿತವಾಗಿ ಗಾಳಿಯಲ್ಲಿ ಬೆರಳಾಡಿಸಿದರು. ಎಷ್ಟೋ ವರ್ಷದಿಂದ ಸಿನೆಮಾಗಳ ಬಗ್ಗೆ ಚಿಂತಿಸಿರುವ ಮತ್ತೊಬ್ಬರು ತಮಗೆ ತುಂಬಾ ನೋವಾದವರಂತೆ ಕಣ್ಣಿನಲ್ಲಿ ನೀರು ತಂದುಕೊಂಡರು. ಮೂವತ್ತು ಸಾವಿರಕ್ಕಿಂತ ಕಡಿಮೆ ಲೆಕ್ಕವೇ ಆ ಹಾಡುಗಾರರಿಗೆ ಅಪಚಾರ ಮಾಡಿದಂತೆ ಎಂದು ಕರ್ಚಿಪು ತೆಗೆದು ಮೂಗಿನ ಗೊಣ್ಣೆ ಒರೆಸಿಕೊಂಡರು. ಎಲ್ಲ ಕಡೆಯೂ ಅವರ ನೋವು ಪಸರಿಸಿತು. ಜತೆಗೆ ಮರು ಮಾತಾಡಲು ಇಷ್ಟವಿಲ್ಲದ ಮೌನ ಆವರಿಸಿತು.

ಹರಟೆ ಕ್ರಿಕೆಟ್‌ಗೋ, ಇನ್ನೆಲ್ಲಿಗೋ ತಿರುಗುವ ಮೊದಲು ಕಾಫಿ ಪಕೋಡ ಬಂತು. ಮಾತಿಗೆ ಒಂದಿಷ್ಟು ಬಿಡುವು ಸಿಕ್ಕಿತು. ನನಗಂತೂ ಎಷ್ಟು ವಿಚಾರಗಳು ಗೊತ್ತಾಯಿತಲ್ಲ ಅಂತ ಮನಸ್ಸು ತಕತಕ ಕುಣಿತಿತ್ತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s