ಮುರಿಯುವ ಮಳೆ ಹಾಗು ಮೀರುವ ಮನಸ್ಸು

ಎರಡು ವಾರದಿಂದ ಎಡೆಬಿಡದ ಮಳೆ. ಆಸ್ಟ್ರೇಲಿಯಾದ ಮೂಡಲ ಕಡಲತಡಿಯುದ್ದಕ್ಕೂ ಹೊಡೆದಿದ್ದೇ ಹೊಡೆದಿದ್ದು. ಬರಗಾಲ ಕೊನೆಗೊಳಿಸಲು ಹಟತೊಟ್ಟಂತೆ. ಇದು ಯಾವ ನಕ್ಷತ್ರದ ಮಳೆಯೋ ಎಂದುಕೊಳ್ಳುತ್ತೇನೆ. ಹೊಳೆ, ನದಿ, ಕೆರೆ, ಕೊಳ್ಳ ಎಲ್ಲ ತುಂಬಿ ಉಕ್ಕಿ ಹರಿದ ಸಂತಸ.  ಸಿಡ್ನಿಯಲ್ಲಿ ಪುರಂದರ ಆರಾಧನೆ – ಮೊನ್ನೆ ಭಾನುವಾರ. ನನ್ನ ತಲೆಯಲ್ಲಿ ಮರುಕಳಿಸಿದ ಒಂದೆರಡು ಪ್ರಶ್ನೆಗಳು. ಹಿಂದಿನ ದಿನವಷ್ಟೇ ಮಳೆ ನಿಂತು ಎಲ್ಲ ತಿಳಿಯಾಗಿ ಸೂರ್ಯ ಹಚ್ಚಗೆ ನಗುತ್ತಿದ್ದ.

ಎಂಟು ಹತ್ತು ವರ್ಷಗಳಿಂದ ಈ ಆರಾಧನೆ ಸಿಡ್ನಿಯಲ್ಲಿ ನಡೆಯುತ್ತಿದೆ. ನನಗೆ ತುಂಬಾ ಮುದ ಕೊಡುವುದು ಇಲ್ಲಿ ಬರೀ ಪುರಂದರ ದಾಸರ ಕನ್ನಡ ಹಾಡುಗಳು ಅನ್ನುವುದು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರೆಲ್ಲರೂ ಪಾಲ್ಗೊಳ್ಳುತ್ತಾರೆ, ಹಾಡುತ್ತಾರೆ. ಅದಕ್ಕಿಂತ ಸಂತಸ- ತಮಿಳರು, ತೆಲುಗರು ಮರಾಟಿಗರು ಎಲ್ಲರೂ ಇಲ್ಲಿ ಬಂದು ಕನ್ನಡ ಹಾಡುಗಳನ್ನು ಹಾಡುತ್ತಾರೆ. ಅದಕ್ಕಿಂತ ಹೆಚ್ಚಿನ ಸಂತಸ ಏನಿರುಲು ಸಾಧ್ಯ? ಈ ಒಂದು ವಿಷಯಕ್ಕಾಗಿ ನನ್ನನ್ನು ಈ ಆರಾಧನೆ ಮತ್ತೆ ಮತ್ತೆ ಸೆಳೆಯುತ್ತದೆ. ಒಮ್ಮೊಮ್ಮೆ ಹೋಗಲು ಮನಸಿಲ್ಲದಿದ್ದರೂ ಈ ಒಂದು ವಿಷಯ ನೆನಪಾಗಿ ಹೋಗಲು ಮನಸ್ಸು ಕಾತರಿಸುತ್ತದೆ.

ನವರತ್ನ ಮಾಲಿಕೆಯಿಂದ ಶುರುವಾಗಿ ಈ ಆರಾಧನೆ ಸುಮಾರು ಮೂರು, ನಾಕು ಗಂಟೆ ನಡೆಯುತ್ತದೆ. ತುಂಬಾ ಚೆನ್ನಾದ ಹಾಡುಗಳನ್ನು ಕೇಳಲು ಸಿಗುತ್ತದೆ. ಅನುಭವೀ ಗಾಯಕರಿಂದ ಹಿಡಿದು, ಸಂಗೀತ ಕಲಿಯುತ್ತಿರುವ ಮಂದಿ, ಮಕ್ಕಳು ಮತ್ತು ಹವ್ಯಾಸಿಗಳೆಲ್ಲಾ ಇಲ್ಲಿ ಹಾಡುತ್ತಾರೆ. ಮರಾಟಿಗರು ತಯಾರು ಮಾಡಿದ ಗುಂಪಿನ ಉತ್ತರಾದಿ ಶೈಲಿಯ ಹಾಡು ಒಂದು ತುದಿಯಲ್ಲಿ. ಉಗಾಭೋಗ ಹಾಡಿ ನಂತರ ಕೀರ್ತನೆ ಹಾಡಿದ ಮೂರು ಜನ ತಮಿಳು ಹೆಂಗಸರ ಹಾಡಿನ ಸೊಗಸು ಮತ್ತೊಂದು ತುದಿಯಲ್ಲಿ ಧ್ಯಾನಸ್ತವಾಗಿಸುತ್ತದೆ. ನಡು ನಡುವೆ ‘ಶೃತಿಗೆ ಸಿಲುಕದವರು’ ಹಾಡಿ ಧ್ಯಾನದಿಂದ ಬಿಡುಗಡೆ ಮಾಡುತ್ತಾರೆ! ನನ್ನ ನೆಚ್ಚಿನ ಹಾಡುಗಳನ್ನು ಕೆಡಸಿ, ನಿರ್ಬಲಗೊಳಿಸಿ ಸಿಟ್ಟಾಗಿಸುತ್ತಾರೆ. ಇರಲಿ, ಅದೂ ಒಂದು ಉತ್ಸಾಹ ಅಂದುಕೊಳ್ಳುತ್ತೇನೆ.

ಪವರ್‍ ಪಾಯಿಂಟ್ ಪ್ರಸೆಂಟೇಶನ್ನಿನಲ್ಲಿ ಪುರಂದರದಾಸರ ಬಗ್ಗೆ ವಿಷಯಗಳು ಇದ್ದವು. ಅಲ್ಲಿ ಅವರು ೪೭೫೦೦೦ ಹಾಡುಗಳನ್ನು ರಚಿಸಿದ್ದು ಈಗ ೧೦೦೦ವಷ್ಟೇ ಸಿಕ್ಕಿದೆ ಎಂಬ ವಿಷಯ ಬಂತು. ಅದು ಹೇಗಪ್ಪ, ೮೦ವರ್ಷ ಅವಿರತವಾಗಿ ಪ್ರತಿದಿನ ಬರೆದರೆ ದಿನಕ್ಕೆ ೧೫ಕ್ಕೂ ಮಿಕ್ಕಿ ಹಾಡುಗಳು ರಚಿಸಬೇಕಲ್ಲ ಅಂದುಕೊಂಡೆ. ನನ್ನ ಈ ತಕರಾರನ್ನು ಯಾರೂ ತಲೆಗೆ ಹಚ್ಚಿಕೊಳ್ಳಲಿಲ್ಲ. ಹೌದು. ಪುರಾಣಕ್ಕೆ ಈ ರೀತಿಯ ಲೆಕ್ಕಾಚಾರ ಸಲ್ಲುವುದಿಲ್ಲ. ಈ ರೀತಿಯ ಲೆಕ್ಕಾಚಾರ ಮಾಡಲೂ ಬಾರದು. ಆದರೂ ನೋಡಿ, ಪುರಂದರ ದಾಸರ ಹಾಡಿನ ಚಂದವನ್ನು ಅನುಭವಿಸಲು ಪುರಾಣದ ಅಗತ್ಯವಿದೆಯೆ? ಪುರಂದರ ಎಂಬ ವ್ಯಕ್ತಿಯ ಸಾಧನೆಯನ್ನು ಪುರಾಣಕ್ಕೆ ತಿರುಗಿಸಿದರೆ (ಕೆಲವರು ಅದನ್ನು ಏರಿಸುವುದು ಅನ್ನುತ್ತಾರೆ) ಏನು ಲಾಭ? ಪುರಂದರರ “ದೈವಿಕತೆ”ಯನ್ನು ಕಣ್ಣು ಮುಚ್ಚಿದ ವಯ್ಯಕ್ತಿಕ ಧ್ಯಾನದಲ್ಲಿ “ಗಳಿಸಿ”, ಚಾರಿತ್ರಿಕವಾಗಿ, ಸಾಮುದಾಯಿಕವಾಗಿ ಎಷ್ಟೆಲ್ಲಾ ಕಳಕೊಳ್ಳುತ್ತೇವಲ್ಲ?

ಹಾಡುಮಂಚದ ಮೇಲೆ ಪುರಂದರರ ಒಂದು ಆಕೃತಿಯೂ ಇತ್ತು. ಸಿನೆಮಾ ನಟನಂತೆ. ತಂಬೂರಿ, ಪೇಟ, ಕಚ್ಚೆ ಪಂಚೆ, ಜನಿವಾರ, ಮಾಲೆ, ಕೈಯಲ್ಲಿ ಚಿಟಕಿ. ನಗುತ್ತಾ ಕುಣಿಯುತ್ತಿರುವ ಅವರ ಲೌಕಿಕ ರೂಪ. ಒಂದು ಕಡೆ ಅವರನ್ನು ಪುರಾಣ ಮಾಡುವ ಮನಸ್ಸು ಇನ್ನೊಂದೆಡೆ ಅವರಿಗೊಂದು ಲೌಕಿಕ ರೂಪಕೊಡಲೂ ಪ್ರಯತ್ನಿಸುತ್ತದೆ. ಜೀಸಸ್‌, ಶಂಕರಾಚಾರ್ಯ ಎಲ್ಲರ ವಿಷಯದಲ್ಲೂ ಆಗುವಂತೆ. ಆ ಆಕೃತಿಯ ಕಾಲಡಿಯಲ್ಲಿ ಹಚ್ಚಿಟ್ಟ ಕಾಲುದೀಪ ನಮ್ಮ ಭಕ್ತಿ, ಆರಾಧನೆಯನ್ನು ಮೂರ್ತಗೊಳಿಸುವ ಪ್ರಯತ್ನದ ಕತೆಯನ್ನು ಹೇಳುತ್ತದೆ. ಇದೊಂದು ಆಚರಣೆ ಎಂಬುದನ್ನು ನೆನಪಿಸುತ್ತದೆ. ಸ್ವಾತಂತ್ಯ್ರ ದಿನಾಚರಣೆ, ಹಬ್ಬಗಳಂತೆ. ಯಾವುದನ್ನೋ ಮೀರಲು, ಹೊಸದನ್ನು ಹುಟ್ಟುಹಾಕಲು ಹಾತೊರೆದ ಪುರಂದರರಂಥ ಮನಸ್ಸನ್ನು ನೆನಪಿಸುವುದು ಆಗಬೇಕು. ಆದರೆ ಅದಕ್ಕೆ ಮನಸ್ಸು ಗುರುತಿಸಬಲ್ಲ ಪುನರಾವರ್ತನೆ ಬೇಕು. ದೈವಿಕತೆ ಬೇಕು. ಪುರಾಣ ಬೇಕು. ಹಾಗಾಗಿ ಆ ಪ್ರಯತ್ನದಲ್ಲಿ ಪುರಂದರರಂಥವರು ಸಿಲುಕಿಕೊಳ್ಳುತ್ತಾರೆ. ನಕ್ಷತ್ರಗಳಲ್ಲಿ ಬರಗಾಲ ಮುರಿಯುವ ಮಳೆ ಸಿಲುಕಿಕೊಳ್ಳುತ್ತದೆ.

Advertisements

5 thoughts on “ಮುರಿಯುವ ಮಳೆ ಹಾಗು ಮೀರುವ ಮನಸ್ಸು

Add yours

 1. ಅನಿವಾಸಿಗಳೆ,

  ಬರಹ ಬಹಳ ಚೆನ್ನಾಗಿದೆ

  ನೀವು ಹೀಗಂದ್ರಿ.

  >>ಪವರ್‍ ಪಾಯಿಂಟ್ ಪ್ರಸೆಂಟೇಶನ್ನಿನಲ್ಲಿ ಪುರಂದರದಾಸರ ಬಗ್ಗೆ ವಿಷಯಗಳು ಇದ್ದವು. ಅಲ್ಲಿ ಅವರು ೪೭೫೦೦೦
  >>ಹಾಡುಗಳನ್ನು ರಚಿಸಿದ್ದು ಈಗ ೧೦೦೦ವಷ್ಟೇ ಸಿಕ್ಕಿದೆ ಎಂಬ ವಿಷಯ ಬಂತು. ಅದು ಹೇಗಪ್ಪ, ೮೦ವರ್ಷ
  >>ಅವಿರತವಾಗಿ ಪ್ರತಿದಿನ ಬರೆದರೆ ದಿನಕ್ಕೆ ೧೫ಕ್ಕೂ ಮಿಕ್ಕಿ ಹಾಡುಗಳು ರಚಿಸಬೇಕಲ್ಲ ಅಂದುಕೊಂಡೆ. ನನ್ನ ಈ
  >>ತಕರಾರನ್ನು ಯಾರೂ ತಲೆಗೆ ಹಚ್ಚಿಕೊಳ್ಳಲಿಲ್ಲ.

  ಈ ವಿಷಯವಾಗಿಯೇ ಕೆಲವು ತಿಂಗಳ ಹಿಂದೆ ದಟ್ಸ್ಕ್ ಕನ್ನಡದಲ್ಲಿ ಅಂಕಣ ಬರಹವೊಂದು ಬಂದಿತ್ತು.

  ಎಲ್ಲ ಮಹಾನುಭಾವರ ಬಗ್ಗೆ ಅತಿಶಯೋಕ್ತಿ ಇರುವುದು ಸುಳ್ಳಲ್ಲ.

  ಬೇರೆ ವಾಗ್ಗೇಯಕಾರರನ್ನು ನೋಡಿದರೆ, ೪೭೫೦೦೦ ಬಹಳ ಹೆಚ್ಚು ಸಂಖ್ಯೆ ಅನ್ನಿಸೋದು ಸಹಜ. ತ್ಯಾಗರಾಜರ ೮೦೦, ದೀಕ್ಷಿತರ ೪೦೦, ಮತ್ತೆ ಅನ್ನಮಾಚಾರ್ಯರ ೧೩೦೦೦ ರಚನೆಗಳಿಗಿಂತ ಈ ಸಂಖ್ಯೆ ಬಹಳ ಹೆಚ್ಚು. ನೀವು ಹೇಳಿದ ಹಾಗೇ ಪ್ರತಿದಿನ ಆ ಪಾಟಿ ರಚನೆಗಳನ್ನ ಮಾಡ್ಬೇಕಾಗತ್ತೆ ಅನ್ನೋದೂ ನಿಜ.

  ಕಳೆದ ವರ್ಷ ಪಿ.ಬಿ.ಶ್ರೀನಿವಾಸ್ ಅವರನ್ನು ಭೇಟಿಯಾಗೋ ಸಂದರ್ಭ ಬಂದಿತ್ತು. ಅವರು, ತಾವು ಸುಮಾರು ಎರಡು ಲಕ್ಷ ಕವಿತೆಗಳನ್ನ ಬರೆದಿದ್ದೇನೆ ಎಂದು ಹೇಳಿದ್ರು. ನಮ್ಮ ಕಣ್ಣೆದುರಿಗೇ, ಅರ್ಧ ಗಂಟೆಯಲ್ಲಿ ಒಂದು ಚಮತ್ಕಾರಿ ಪದ್ಯವನ್ನು (ಪದಗಳ ನಡುವೆ ಮೇಲಿಂದ ಕೆಳಗೆ ಓದಿದರೆ, ಒಂದು ವಿಶಿಷ್ಟ ಪದಪುಂಜ ಬರುವಂತೆ) ಬರೆದುಕೊಟ್ಟರು.

  ಅದನ್ನ ನೋಡಿದ್ಮೇಲೆ, ಪುರಂದರ ದಾಸರಂತಹ ದಾಸರಿಗೆ ನಾಕೂಮುಕ್ಕಾಲು ಲಕ್ಷ ಕವಿತೆ ಬರೆಯೋದೇನು ಆಗದ ಮಾತಲ್ಲ, ಅದರಲ್ಲಿ ಆಶ್ಚರ್ಯವೇನು ಅಂತ ಅನ್ನಿಸ್ಬಿಟ್ಟಿದ್ದು ನಿಜ.

  (ಆದರೆ ನನ್ನೊಳಗಿನ rational ಮನುಷ್ಯ ಒಂದು ಹತ್ತು-ಹದಿನೈದು ಸಾವಿರ ಅನ್ನೋದು ಒಳ್ಳೇ ಊಹೆ ಅಂತ ಅಂತಿದಾನೆ 🙂 ಅಲ್ಲದೆ, ದಾಸರ ಸಿಕ್ಕ ಸಾವಿರ+ ರಚನೆಯಲ್ಲೇ ಸಕಲ ಜೀವನಾನುಭವವೇ ಅಡಕವಾಗಿರುವಾಗ, ಉಳಿದುವುಗಳ ಬಗ್ಗೆ ಹೆಚ್ಚಿಗೆ ಚಿಂತೆ ಬೇಡವೇನೋ ಅನ್ನಿಸುತ್ತೆ )

  -ನೀಲಾಂಜನ

 2. ಆಮೇಲೆ, ಇನ್ನೊಂದು ವಿಷಯ ಸೇರಿಸಬೇಕೆನ್ನಿಸಿತು.

  ಚಿತ್ರದಲ್ಲಿರೋ ದಾಸರ ವೇಷ ಸಿನಿಮಾ ನಟನಂತೆ ಅಂತ ಅನ್ನಿಸ್ಲಿಲ್ಲ ನನಗೆ! ದಾಸರ ವಿಗ್ರಹವೊಂದರ ಚಿತ್ರ ನೋಡಿದ್ದೇನೆ – ಎಲ್ಲಿಯದು ಎಂದು ಗೊತ್ತಿಲ್ಲ – ಅಲ್ಲಿರುವುದೂ ಸುಮಾರು ಇದೇ ತೆರವೇ.

  ಪೇಟ-ಚಿಟಿಕೆ-ತಂಬೂರಿ-ಜೋಳಿಗೆ ಹಿಡಿಯದೇ ದಾಸರಾದವರುಂಟೇ?

 3. ನಾವಡರೆ- ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್.
  ನೀಲಾಂಜನರೆ,
  ದಟ್ಸ್ ಕನ್ನಡದ ಲೇಖನ, ಪ್ರತಿಕ್ರಿಯೆ, ಪ್ರತ್ಯುತ್ತರ ಎಲ್ಲವನ್ನೂ ಸಂಪದದ ಎನ್ನಾರೆಸ್ ರವರು ಕಳಿಸಿದರು. ಓದಿರಲಿಲ್ಲ. ಕುತೂಹಲದಿಂದ ಓದಿದೆ.
  ನೀವೂ ಗಮನಿಸಿರಬಹುದು. ಬರಹದಲ್ಲಿ ಬಹುಬೇಗ ನಾನು ದಾಸರ ಹಾಡಿನ ಲೆಕ್ಕವನ್ನು ಬಿಟ್ಟು ಬಿಟ್ಟುದ್ದೇನೆ. ಹೌದು/ಅಲ್ಲ, ಸರಿ/ಸಲ್ಲ, ಇಷ್ಟ/ಕಷ್ಟಗಳ ಆಚೆಗೆ ನನ್ನ ಕುತೂಹಲವಿರುವುದು. ದಟ್ಸ್‌ಕನ್ನಡದ ಬರಹದಲ್ಲೂ ಪ್ರತಿಕ್ರಿಯೆಯಲ್ಲೂ ಅದೇ ತುಂಬಿಕೊಂಡಿದೆ. ಆದರೆ ನನ್ನನ್ನು ಸೆಳೆದಿದ್ದು ಪುರಾಣ ಕಟ್ಟುವ ಮನಸ್ಸು. ಲೌಕಿಕ ರೂಪಕೊಡುವ ಮನಸ್ಸು. ಅದೊಂದು ಕಾಂಟ್ರಡಿಕ್ಷನ್ ಅಲ್ಲವೇನೋ ಅನ್ನುವಂತೆ ಇರುವ ಮನಸ್ಸು. 🙂
  ಇನ್ನು ದಾಸರ ಕಟ್‌-ಔಟ್ ಸಿನೆಮಾ ನಟರ (ತಾರೆ ಅನ್ನಬೇಕಿತ್ತು) ಕಟ್-ಔಟ್ ನೆನಪಿಸಿತು. ದಾಸರು ತಾರೆಯಂತಿದ್ದಾರೆ ಅಂತಲ್ಲ. ದಾಸರು ಯಾವ ತಾರೆಯಂತೆಯೂ ಇಲ್ಲ 🙂 . ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

 4. ನಿಮ್ಮ ವಿಚಾರಧಾರೆ ಸರಿಯಾದ ದಿಕ್ಕಿನಲ್ಲಿದೆ. ದಾಸರನ್ನು ನಾವು ಯಾವುದಕ್ಕೆ ಗೌರವಿಸಬೇಕು, ಯಾವ ರೀತಿಯಲ್ಲಿ ಚರಿತ್ರೆಗೆ, ಸತ್ಯಕ್ಕೆ ನಿಷ್ಠರಾಗಿರಬೇಕು ಎನ್ನುವ ಮಾತುಗಳು ಸರಿಯೇ. ಆದರೆ “ಭಕ್ತರ(!)” ವಿಚಾರಗಳೇ ಬೇರೆ! ಹೀಗಾಗಿ ಭಾರತದಲ್ಲಿ ಸತ್ಯನಿಷ್ಠ ಸಂಶೋಧನೆ ಮಾಡಿದ ಕೆಲವು ವಿಮರ್ಶಕರು ’ಭಕ್ತ’ರಿಂದ ಏಟು ತಿಂದದ್ದಿದೆ. ಆದರೆ ಪಶ್ಚಿಮ ದೇಶಗಳಲ್ಲಿ ಸತ್ಯನಿಷ್ಠ ಸಂಶೋಧನೆಗೆ ಮನ್ನಣೆ ಇದೆಯಲ್ಲ ಎನ್ನಿಸುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: