ಹಂಚಿಕೊಳ್ಳದ ಲೋಕ

ನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ್ಲ ಅನ್ನುವುದು ಬರೇ ಕುತೂಹಲವಷ್ಟೇ ಅಲ್ಲ. ತುಂಬಾ ಮುಖ್ಯ ಕೂಡ.

ಕನ್ನಡ ನೆಲದಿಂದ ದೂರದಲ್ಲಿ ವಾಸವಾಗಿರುವ ನನ್ನಂತವರು ಯಾವುದೇ ಲೋಕವನ್ನು ನೋಡಿದರೂ, ಅದನ್ನಿಲ್ಲಿ ಹೇಳಿದರೂ ಅದರ ಹಿಂದೆ ಒಂದು ಕನ್ನಡ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಕೆಲವೊಮ್ಮೆ ಅದೊಂದು ಮಿತಿ ಅನಿಸಿದ್ದೂ ಇದೆ. ಆದರೆ ತಪ್ಪಿಸಿಕೊಳ್ಳಲಾಗದ ವಾಸ್ತವವೆನ್ನುವುದು ಮಾತ್ರ ದಿಟ.

ನಾನು ನೋಡಿದ ಲೋಕವನ್ನು, ಅನುಭವಿಸಿದ ಲೋಕವನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಆಗದಿರುವುದು ನನ್ನಂತವರ ದೊಡ್ಡ ಕುಂದು. ಅದನ್ನು ಸದಾ ಎಚ್ಚರದಿಂದ ನೋಡಿಕೊಂಡು ಸರಿ ಪಡಿಸಿಕೊಳ್ಳಬೇಕು, ತಿದ್ದಿಕೊಳ್ಳುತ್ತಿರಬೇಕು. ಇದು ಎಲ್ಲ ಬರಹಗಾರರ ಪಾಡಾದ್ದರಿಂದ ಅದರಲ್ಲಿ ಏನೂ ವಿಶೇಷವಿಲ್ಲ.

ಬ್ಲಾಗಿನಲ್ಲಿ ಮಾತ್ರ ಸಾಧ್ಯವಾಗುವ, ತಟ್ಟನೆ ಹಂಚಿಕೊಂಡು, ಅದಕ್ಕೊಂದಿಷ್ಟು ಪ್ರತಿಕ್ರಿಯೆ ತಟ್ಟನೆ ಬರುವ ಪ್ರಕ್ರಿಯೆ ನಾನು ಕಂಡಂತೆ ಕನ್ನಡ ಲೋಕಕ್ಕೆ ಹೊಸತು ಮತ್ತು ವಿಶಿಷ್ಟ. ಆದರೆ ಇನ್ನೊಂದು ಬಗೆಯಲ್ಲಿ ಹೊಸದೇನೂ ಅಲ್ಲ. ಇದೂ ನೋಟುಗರ ಎದುರಿಗೆ ಆಡುವ ನಾಟಕ, ಹಾಡು ಕುಣಿತದಂತೆ. ಏನಿದ್ದರೂ ಕೂಡಲೇ ಅದರ ಸೋಲು ನಿರ್ಧಾರವಾಗಿಬಿಡುವಂತದು. ಗೆಲುವು ಅಲ್ಲದಿರಬಹುದು. ಬ್ಲಾಗುಗಳು ಒಂದು ಬಗೆಯ ಜೀವಂತ ಪ್ರಕ್ರಿಯೆ ನಾಟಕದ ಹಾಗೆ ಅನಿಸಿದೆ. ಇದರ ವಿರೋಧಾಭಾಸ ನೋಡಿ – ಇಂದಿನ ವರ್ಚುವಲ್ ಲೋಕದಲ್ಲಿ ಬ್ಲಾಗುಗಳು ಜೀವಂತ ಪ್ರಕ್ರಿಯೆ ಅನಿಸುವುದು!

ಇಷ್ಟೆಲ್ಲಾ ಹೇಳಿಯೂ ಒಂದು ಮಾತು ಉಳಿಯುತ್ತದೆ. ಎಲ್ಲೆಲ್ಲೋ ಕೂತು ಬರೆಯುವ ಕನ್ನಡದವರ ಬರಹಗಳಲ್ಲಿ ನನಗೆ ಇಷ್ಟವಾಗುವುದು – ಕನ್ನಡವಲ್ಲದ ಅವರ ಸುತ್ತಲಿನ ಲೋಕವನ್ನು ಅವರು ಸ್ವೀಕರಿಸುವ, ಧಿಕ್ಕರಿಸುವ ಬಗೆ. ಯಾಕೆಂದರೆ, ಆ ಬಗೆಯ ಬರಹದ ಮೂಲಕ ಹಿಂದೆಂದೂ ಕನ್ನಡ ಲೋಕದೊಳಕ್ಕೆ ಬಂದಿರದ ಸಂಗತಿಗಳು ನುಗ್ಗಿಬರುವುದು. ಆ ನುಗ್ಗಾಟದಲ್ಲಿರುವ ಒಂದು ಬಗೆಯ ಚಂದ. ಮತ್ತು ಮುಖ್ಯವಾಗಿ ಈ ನುಗ್ಗಾಟ ಆಗುಹೋಗಿನ ಮೂಲಕ ಕನ್ನಡ ಲೋಕ ವಿಸ್ತರಿಸುತ್ತಾ ಹೋಗುವುದು.

ಇಂತ ಪ್ರಕ್ರಿಯೆಯನ್ನು ಪ್ರೇರೇಪಿಸಲು, ಪ್ರಚೋದಿಸಲು ಬ್ಲಾಗುಗಳು ಇವೆ, ಆದರೆ ವಿಶಾಲ ಕನ್ನಡ ಮನಸ್ಸು ಅದಕ್ಕೆ ಸಿದ್ಧವಾಗಿದೆಯೆ ಎಂದು ಹಲವು ಸಲ ಕೇಳಿಕೊಂಡಿದ್ದೇನೆ.

Advertisements

2 thoughts on “ಹಂಚಿಕೊಳ್ಳದ ಲೋಕ

Add yours

  1. ಒಳ್ಳೆಯ ವಿಚಾರಗಳು. ಒಪ್ಪತಕ್ಕಂಥವು. ನೀವು ಕೊನೆಗೆ ಕೇಳಿದ ಪ್ರಶ್ನೆಯೂ valid ಪ್ರಶ್ನೆಯೇ. ಈಗಾಗಲೇ ಸಿದ್ಧವಾಗಿವೆಯೇ ಮನಸ್ಸುಗಳು? ಇಲ್ಲ. ಆದರೆ ಸಿದ್ಧಗೊಳ್ಳುತ್ತಿವೆ ಅನ್ನಿಸುತ್ತೆ. ಅದರಿಂದ ಖುಷಿಯಾಗುತ್ತೆ. ಮತ್ತು ಹೀಗೆ ಇಂಥ ಮುಕ್ತ ಮನಸ್ಸನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಬ್ಲಾಗುಗಳ ಪಾತ್ರ ಮುಖ್ಯವಾಗುತ್ತಿದೆ. ಕನ್ನಡದ ಎಲ್ಲ ಜನರೂ ಅಂತರ್ಜಾಲದ ವರ್ಚುವಲ್ ಪ್ರಪಂಚದಲ್ಲಿ ಸಂವಹಿಸುವರೇ? ಇಲ್ಲ, ಅದಂತೂ ಎಂದಿಗೂ ಆಗುವುದಿಲ್ಲ. ಆದರೆ ಹೆಚ್ಚು ಹೆಚ್ಚು ಜನರು ಈ ಲೋಕದಲ್ಲಿ ತಮ್ಮ ಅಸ್ತಿತ್ವವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಮತ್ತೆ ಅವರು ನಾನಾ ನಮೂನೆಯ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ. ಅವರಲ್ಲಿ ಅನೇಕರು ಬೌದ್ಧಿಕವಾಗಿ “ಎತ್ತರ”ದಲ್ಲಿರುವವರು. ಅವರಲ್ಲಾಗುವ ಮನಸ್ಥಿತಿಯ ಬದಲಾವಣೆ, ನಿಧಾನಕ್ಕಾದರೂ ಉಳಿದವರಲ್ಲೂ, ಸಾಮಾನ್ಯ ಜನರಲ್ಲೂ ಪಸರಿಸುವುದೆಂದು ನನ್ನ ನಂಬಿಕೆ. ಅದು ಹೊಸ ಅನುಭವಗಳ ಬಗ್ಗೆ ಇರಬಹುದು, ಹೊಸ ರೀತಿಯ ಯೋಚನೆಗಲ ಬಗ್ಗೆ ಇರಬಹುದು.

    ಇನ್ನೊಂದು ವಿಷಯವೆಂದರೆ, ಇದು ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳಿಗಿಂತ ಹೆಚ್ಚಾಗಿ ಬ್ಲಾಗುಗಳಿಂದ ಆಗುತ್ತಿದೆ/ಆಗುತ್ತದೆ ಎನ್ನುವುದು ನನ್ನ ನಂಬಿಕೆ.

  2. ಮೊದಲಿಗೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
    “ಸಿದ್ಧಗೊಳ್ಳುತ್ತಿವೆ” ಎಂಬ ನಿಮ್ಮ ನಿಲುವು ತುಂಬಾ ಆಶಾದಾಯಕವಾದುದು ಅನಿಸುತ್ತದೆ. ಹಾಗಂತ ನಾನು ಇಲ್ಲ ಎನ್ನುತ್ತಿಲ್ಲ. ಆದರೆ ಆಗಬೇಕಾದಷ್ಟು ಆಗುತ್ತಿಲ್ಲ ಅಂತ ಅನಿಸುತ್ತಿದೆ. ಈ ಬರಹದಲ್ಲಿ ನಾನು ಎತ್ತಿಕೊಳ್ಳದ ಇನ್ನೊಂದು ವಿಚಾರ – ಬ್ಲಾಗಿನ ಲೋಕದಲ್ಲಿ ಆಗಬೇಕಾದರೆ ನಿಜಜೀವನದಲ್ಲಿ ಬೇರೆ ಬೇರೆ ಸ್ತರದಲ್ಲೂ ಆಗಬೇಕಾದ ಅಗತ್ಯವಿರುತ್ತದೆ. ಬಹುಶಃ ಪ್ರಶ್ನೆ ಅಲ್ಲಿ ಎಷ್ಟಾಗುತ್ತಿದೆ ಎಂದಿರಬೇಕಿತ್ತೇನೋ.
    ಮುಕ್ತತೆಗೆ ತುಂಬಾ ಸಿದ್ಧತೆ ಬೇಕು ಅನಿಸುತ್ತದೆ. ಅದು ಥಟ್ಟನೆ ಒದಗಿ ಬರುವಂತದಲ್ಲ ಅಲ್ಲವೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: