ತಾಯಿಯ ನಾಕನೇ ಮುಖ

ಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು “ಮಾಯಿಯ ಮೂರು ಮುಖಗಳು” ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು ಸ್ವಾತಂತ್ಯ್ರದ ಬಗ್ಗೆಯೂ ಇದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಪದ್ಯ. ಆದರೆ ಅದರೊಳಗಿನ ಒಂದು ಅಂಶ ಮಾತ್ರ ನನ್ನ ನೆನಪಿನಲ್ಲಿ ಉಳಿದಿದ್ದೇ ಅದನ್ನು ಮತ್ತೆ ಓದಲು ಪ್ರೇರಣೆಯಾಯಿತು.

ಮಾಯಿ, ಮಹಾಮ್ಮಾಯಿ
ಮೂರು ವಿಧದಿಂದ ನೀನೆಮ್ಮ ತಾಯಿ.
(ಸಾಕು ತಾಯಿ; ದತ್ತ ತಾಯಿ; ಹೆತ್ತತಾಯಿ.)

ತಾಯಿಯನ್ನು ಭಾವನಾತ್ಮಕವಾಗಿ ನೋಡುವುದಷ್ಟೇ ಅಲ್ಲದೆ ಒಂದು ವಿಶ್ಲೇಷಣೆಯೂ ಅದರಲ್ಲಿದೆ. ಆ ಪದ್ಯದಲ್ಲಿ ಮೂರು “ತಾಯಿ”ಗಳನ್ನು ಪಟ್ಟಿ ಮಾಡುತ್ತಾರೆ. ೧. ಸಾಕು ತಾಯಿ ೨. ದತ್ತ ತಾಯಿ ಮತ್ತು ೩. ಹೆತ್ತ ತಾಯಿ. ಅದು ಕಾಲದ ಗೆರೆಯೆಳೆದು ಮಾಡಿದ ಸರದಿಯ ಪಟ್ಟಿಯಲ್ಲ ಎಂದು ತಕ್ಷಣ ಹೊಳೆಯುವಂತದೆ.

ಮೊಟ್ಟ ಮೊದಲಿಗೆ ಬರುವಿ ಸಾಕುತಾಯಾಗಿ
ಬಳೆಸುವೆಯೆ ಬಾಳ ಬೆಳೆಸುತ್ತ ಹಾಯಾಗಿ …

ಮೊದಲು ಬರುವುದು ಸಾಕುತಾಯಿಯಾಗಿ. ಮಗುವನ್ನು ಸಾಯದಂತೆ ಉಳಿಸಿ, ಊಡಿಸಿ ಸಾಕಿದಾಕೆ. ಹಾಗೆ ಸಾಕದೇ ಹೋದರೆ ಒಂದು ಜೀವ ದೊಡ್ಡದಾಗಿ ಸಾರ್ಥಕವಾಗುವುದು ಸಾಧ್ಯವಿಲ್ಲ. ಒಂದು ಮಗುವಿಗೆ ಉಣ್ಣಿಸಿ, ಉಡಿಸಿ, ಕಾಪಾಡುವ ತಾಯಿಯ ಪರಿಶ್ರಮ ಮತ್ತು ಕಟ್ಟೆಚ್ಚರ ಎಲ್ಲರಿಗೂ ಅರಿವಿರುವಂತಹುದೇ.  ಹುಟ್ಟಿಸದೇ ಇದೆಲ್ಲ ಹೇಗೆ ಸಾಧ್ಯ – ನೀವು ಕೇಳಬಹುದು – ಹೆತ್ತ ತಾಯಿಯೇ ಮೊದಲಲ್ಲವೇ ಅಂತ. ಇರಲಿ ಆ ಪ್ರಶ್ನೆಗೆ ಆಮೇಲೆ ಬರುವ.

ಆಮೇಲೆ ಬರುವಿ ನೀ ದತ್ತತಾಯಾಗಿ
ಕರ್ತವ್ಯಗಳ ತೂಗು ಹಲಗೆಯನೆ ತೂಗಿ.
ಆಕಾಂಕ್ಷೆ, ಅಭಿಮಾನ, ಕರ್ತವ್ಯ, ಕಾಯಾಸ
ಆದರ್ಶ, ಆವೇಶ, ಮೂದಲಿಕೆ, ಹವ್ಯಾಸ- …

ಉಳಿದು ದೊಡ್ಡದಾದ ಮಗುವಿಗೆ “ಬೆಳೆಯಲು” ಬೇಕಾದ ಗುಣಗಳನ್ನು ಕೊಡುವ ತಾಯಿ. ಬರೇ ನೈತಿಕ ಗುಣಗಳಷ್ಟೇ ಅಲ್ಲ. ಬೆಳೆಯಲು ಬೇಕಾದ ಹತ್ತು ಹಲವು ಬಗೆಬಗೆ ಗುಣಗಳನ್ನು ಪ್ರಚೋದಿಸುವ ತಾಯಿಯಾಗಿ ಬರುತ್ತಾಳೆ. ಈ ತಾಯಿಯ ಒಡನಾಟ ಮತ್ತು ಊಡುವಿಕೆಯಿಂದ ನಾವು ಪಡೆದುದು ಅಪಾರ ಮತ್ತು ಅದು ನಮ್ಮ ಗುಣಸ್ವಭಾವವನ್ನು ರೂಪಿಸುವ ಬಗೆ ಅನನ್ಯ.

ಕೊನೆಗಾಲ ಬರುವಿ ನೀ ಹೆತ್ತ ತಾಯಾಗಿ,
ಕನಸ ಹಿಂದಿನ ಕನಸ ಬೊಗಳು ನಾಯಾಗಿ. …

ಮಗು ಬೇಕೆಂದು ಅದನ್ನು ಹೊತ್ತು, ಅದನ್ನು ನೋವಿನಲ್ಲಿ ಹೆರುವುದು ಒಂದು ಜೈವಿಕ ಕ್ರಿಯೆ. ಮಗುವಿನ ಕೋನದಿಂದ ಅದೊಂದು ಆಕಸ್ಮಿಕ. ಮತ್ತು ಹೆತ್ತಮ್ಮ ಜೀವ ಕೊಡುವುದಲ್ಲದೆ ಬೇರೇನು ತಾನೇ ಮಾಡುತ್ತಾಳೆ? ಸಾಕು ತಾಯಿ ಮತ್ತು ದತ್ತ ತಾಯಿಯರ ಹಂಬಲ ಮತ್ತು ಪರಿಶ್ರಮದ ಮುಂದೆ ಹೆತ್ತ ತಾಯಿಯದು ಬಹು ಚಿಕ್ಕ ಕೊಡುಗೆ ಅನಿಸಬಹುದು. ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯಕ್ಕೆ ಕಿವಿಗೊಡುವ ಕೆಲಸವನ್ನು ಆಕೆ ಮಾಡುತ್ತಾಳಾದರೂ, ಇನ್ನಿಬ್ಬರು ತಾಯಂದಿರ ಪ್ರಭಾವ ಮಗುವಿನ ಮೇಲಾದಷ್ಟು ಹೆತ್ತ ತಾಯಿಯಿಂದ ಆಗುತ್ತದೆಯೆ? ಅದರ ಹುಡುಕಾಟದಲ್ಲಿ ಪದ್ಯ ಹೀಗೆ ಕೊನೆಗೊಳ್ಳುತ್ತದೆ.

ಒಡಲು ಒಡ್ಡುವ ಬಲೆಯ ಕಣ್ಣು ನೋಡೀತೆ?
ಬಸಿರು ಬರೆದಿರುವ ಗೆರೆ ಬಾಳು ದಾಟೀತೆ?

ಈ ಹಾಡ ತಿರುಳನ್ನು ಕುರಿಯುತರಿತವನು,
ತಾಯ ಇನ್ನೊಂದು ಮೊಗವನ್ನು ಅರಸುವನು.

ನಾಲ್ಕನೆಯ ಮುಖವನ್ನು ಕಂಡಿಲ್ಲ ಎಂದು ತಲೆಬರಹದಡಿಯಲ್ಲೇ ಹೇಳಿರುವ ಕವಿ ಹೀಗೊಂದು ಸೂಚನೆಯೊಂದಿಗೆ ಪದ್ಯ ಮುಗಿಸುತ್ತಾರೆ.

ತಾಯಿಗೆ ನಾಲ್ಕನೆಯ ಮುಖ ಎಂಬುದಿದೆಯೆ? ದೊಡ್ಡವರಾಗಿ ನಮ್ಮದೇ ಮಕ್ಕಳನ್ನು ಬೆಳೆಸುವಾಗ ನೆನಪಾಗುವ, ಹಿಂದಿರುಗಿ ನೋಡಿದಾಗ ಕಾಣುವ ಆ ವಿಶಿಷ್ಟ ಮುಖವೆ ಅದು? ಹೌದಾದರೆ, ಆ ಮುಖ ನಮಗೆ ಏನು ಕೊಡುತ್ತದೆ? ನಮ್ಮನ್ನು ಹೇಗೆ ಬೆಳೆಸುತ್ತದೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: