ಮಾನಾವಮಾನ, ಹರಕೆ-ಹರಾಜು

ಪ್ರಜಾವಾಣಿಯಲ್ಲಿ ಪ್ರಕಟಗೊಂಡ  ಅಕ್ಷರ ಕೆ.ವಿ ಯವರ  ’ಹರಕೆ ಹರಾಜು’ ಲೇಖನಕ್ಕೆ ನನ್ನ ಪ್ರತಿಕ್ರಿಯೆ.

ಮೂಲ ಲೇಖನವನ್ನು ಇಲ್ಲಿ ಓದಬಹುದು: http://www.prajavani.net/news/article/2011/01/18/110692.html

ಅಕ್ಷರ ಕೆ.ವಿ ಮಾನಾವಮಾನದ ಹಂದರದಲ್ಲಿ ಮಡೆಸ್ನಾನ ಹಾಗು ಐಪಿಲ್ ಆಟಗಾರರ ಹರಾಜನ್ನು ನೋಡಿರುವುದು ಭಿನ್ನವಾಗಿದೆ. ಆ ಭಿನ್ನತೆಯನ್ನು ಮೀರಿ ನೋಡಿದರೆ ಕೆಲವು ಎಡವಟ್ಟುಗಳು ಕಾಣುತ್ತವೆ.

೧. ಮಡೆಸ್ನಾನವಾಗಲೀ, ಐಪಿಲ್ ಹರಾಜಾಗಲಿ “ಅವಮಾನ”ದ ಚೌಕಟ್ಟಿನಲ್ಲಿಟ್ಟು ನೋಡುವುದಕ್ಕಿಂತ ಬೇರೆಯಾಗಿ ನೋಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ ಅನಿಸುತ್ತದೆ. ಇದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇನೆ. ಅದಕ್ಕಿಂತ ಮೊದಲು ಸ್ಪಷ್ಟಪಡಿಸಬೇಕಾದುದು: ಅವೆರಡನ್ನೂ “ಅವಮಾನ”ದ ತಕ್ಕಡಿಯಲ್ಲಿಟ್ಟು ನೋಡಿದರೆ ಅವಕ್ಕಿರುವ ಇನ್ನುಳಿದ ಮುಖ್ಯವಾದ ಆಯಾಮಗಳು ತಪ್ಪಿಹೋಗಬಾರದೆನ್ನುವ ಇಚ್ಛೆ ಅಷ್ಟೆ.

೨. ಮಡೆಸ್ನಾನವನ್ನು “ಅವಮಾನ”ವಾಗಿ ನೋಡುವ ವಿಚಾರವಂತರು, ಐಪಿಎಲ್ ಹರಾಜನ್ನು ನೋಡುವುದಿಲ್ಲ ಎಂಬುದು ಅಕ್ಷರರವರ ಅಂಬೋಣವಷ್ಟೆ. ಅವರು ಅವೆರಡನ್ನೂ ಒಟ್ಟಿಗೆ ನೋಡಿದ ಮಾತ್ರಕ್ಕೆ ಎಲ್ಲ ವಿಚಾರವಂತರೂ ಹಾಗೆಯೇ ನೋಡಿ, ಐಪಿಎಲ್ ಹರಾಜನ್ನು “ಅವಮಾನ”ವೋ ಅಲ್ಲವೋ ಎಂದು ಪರಿಗಣಿಸಬೇಕಿಲ್ಲ ಅಲ್ಲವೆ? ಅಲ್ಲದೆ, ಎಲ್ಲ ವಿಚಾರವಂತರೂ ಹಾಗೆ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಎರಡನ್ನೂ “ಅವಮಾನ”ಕರವಾಗಿ ನೋಡುವ ಹಲವು ಮಂದಿ ಇದ್ದಾರೆ (ಹಾಗೆ ನೋಡುವುದು ಸರಿಯೋ ತಪ್ಪೋ). ನನಗೆ ಕೆಲವರು ವಯ್ಯಕ್ತಿಕವಾಗಿ ಗೊತ್ತಿದ್ದಾರೆ. ಅವರು ಪತ್ರಿಕೆ/ಟಿವಿಯಲ್ಲಿ ಬರೆದಿಲ್ಲ/ಬಂದಿಲ್ಲ ಎಂದ ಮಾತ್ರಕ್ಕೆ ಅಂತಹವರು ಇಲ್ಲ ಎಂದು ಪರಿಗಣಿಸುವುದು ಸರಿಯೆ? ಟಿವಿ/ಪತ್ರಿಕೆಯಲ್ಲಿ ಬರೆಯುವವರು ಮಾತ್ರ ವಿಚಾರವಂತರೆನಿಸಿಕೊಳ್ಳುತ್ತಾರೆಯೆ? (ಅಥವಾ ಅಕ್ಷರರು ಬರೇ ಟಿವಿ ವಿಚಾರವಂತರನ್ನು ಗುರಿಯಾಗಿಟ್ಟುಕೊಂಡಿದ್ದಾರೆಯೆ? ಅದು ಸಾಧುವೆ?)

೩. ಮಡೆಸ್ನಾನವನ್ನು “ಅವಮಾನ”ಕರ ಅನಿಸಲು ಅದು ‘ಮಧ್ಯಯುಗದ ಭಾರತದ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆಯುತ್ತಿರುವ ಸಂಕೇತ’ ಎಂಬುದೇ ಕಾರಣವಾಗಬೇಕಾಗಿಲ್ಲ. ಬದಲಾಗಿ ಮಧ್ಯಯುಗದ ಹಲವು ಮನಃಸ್ಥಿತಿಗಳನ್ನು ಮನುಷ್ಯ ತನಗೆ ಉಪಯೋಗವಾಗುತ್ತದೆ ಎನ್ನುವ ಕಾರಣಕ್ಕೆ ಉಳಿಸಿಕೊಂಡೂ ಇದ್ದಾನೆ. ಅದನ್ನು ನೀವು ಕಾನೂನು, ವ್ಯವಾಹರ ಹಾಗು ಕಲೆಗಳಲ್ಲಿ ಇಂದಿಗೂ ನೋಡಬಹುದು. ನಮ್ಮ ಆಧ್ಯಾತ್ಮದ ಹಲವು ಸಂಗತಿಗಳು ಅಂತಹ ಒಂದು ಪಳೆಯುಳಿಕೆಯೇ. ಅದನ್ನು ಪಕ್ಕಕ್ಕಿಟ್ಟು Rationality ಹಾಗು ಸಮಾನತೆಯ ಹಂದರದಲ್ಲಿ ಮಡೆಸ್ನಾನವನ್ನು ಖಂಡಿತವಾಗಿಯೂ ಅವಲೋಕಿಸಬಹುದು. (ಬಹುಶಃ ಅಕ್ಷರರಿಗೆ ಅದು ಗೌಣ ಅನಿಸಿರಬಹುದು) Rationality – ಮಡೆಸ್ನಾನ ಚರ್ಮರೋಗ ನಿವಾರಕ ಎಂಬ ತಿಳುವಳಿಕೆಯನ್ನು ಪ್ರಶ್ನಿಸುತ್ತದೆ. ನಮಗೆ ತಿಳಿದಿರುವ ಎಲ್ಲ ಮಡೆಸ್ನಾನಗಳಲ್ಲೂ “ಬ್ರಾಹ್ಮಣರ ಎಂಜಲೆಲೆಯ ಮೇಲೇ ಉರುಳಾಡುತ್ತಾರೆಂಬ” ಅಸಮಾನತೆ ಅಕ್ಷರರನ್ನು ಕಾಡಿಯೇ ಇಲ್ಲ ಎನ್ನುವುದು ಆಶ್ಚರ್ಯ. ಹಾಗಾಗಿಯೇ ಮಡೆಸ್ನಾನವನ್ನು ಮೂರನೆಯವರ “ಅವಮಾನ”ದ ಮೂಲಕ ಪರೀಕ್ಷಿಸುತ್ತಿದ್ದಾರೇನೋ ಅಥವಾ ‘ಅವಮಾನ’ವನ್ನು ಈ ಎರಡು ಬಿಂದುವಿನ ನಡುವೆ ಚಿತ್ರಿಸಲು ಹವಣಿಸುತ್ತಿದ್ದಾರೇನೋ. “ಅವಮಾನ” ಎಂಬುದನ್ನು ಸುಲಭದಲ್ಲಿ define ಮಾಡಲಾಗದ್ದು ಎಂಬುದು ಅವರ ಮಾತಿನಲ್ಲೇ ತಿಳಿಯುತ್ತದೆ ಕೂಡ. ಹಾಗಾಗಿಯೇ ಅದೊಂದು ಪಲಾಯನವಾದೀಯ ನಿಲುವಿರಬಹುದೆ ಎನಿಸುತ್ತದೆ?

೪.ಅಕ್ಷರರು ಹೇಳಿರುವಂತೆ ಐಪಿಎಲ್ ಹರಾಜು ಕೂಡ ನಮ್ಮನ್ನು ಚಿಂತೆಗೆ ಹಚ್ಚಿಸಲೇ ಬೇಕು – ಆದರೆ “ಅವಮಾನ” ಎಂಬ ಕಾರಣಕ್ಕೆ ಅಲ್ಲ. ಮೊದಲನೆಯದಾಗಿ, ಅಕ್ಷರರು ರೋಮನರ “ಹೋರಿಕಾಳಗದ ಆಟಗಾರರನ್ನು ಮತ್ತು ಗುಲಾಮರನ್ನೂ ಸ್ತ್ರೀಯರನ್ನೂ ಇದೇ ಬಗೆಯಲ್ಲಿ ಹರಾಜು ಹಾಕುತ್ತಿದ್ದರೆಂದು ಪ್ರಾಥಮಿಕ ಇತಿಹಾಸದ ಪುಸ್ತಕಗಳೂ ಹೇಳುತ್ತವೆ.” ಎನ್ನುವ ಆ ತಿಳವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿಲ್ಲ ಎನಿಸುತ್ತದೆ. “ಹರಾಜು” ಎಂಬ ಪದ ಮಾತ್ರವೇ ಅವರನ್ನು ದಿಕ್ಕು ತಪ್ಪಿಸಿದಂತಿದೆ. ರೋಮನರ ಕಾಲದ ಹೋರಾಟಗಾರ/ಗುಲಾಮ/ಸ್ತ್ರೀಯರ (ಒಟ್ಟಲ್ಲಿ ಗುಲಾಮರ) ಹರಾಜಿನಲ್ಲೂ ಹಾಗು ವಸಾಹತಿನ ಗುಲಾಮರ ಹರಾಜಿನಲ್ಲೂ ಗುಲಾಮರಿಗೆ ಆ ಹರಾಜಿನಿಂದ ಯಾವುದೇ ಲಾಭವಿರಲಿಲ್ಲ. ಹರಾಜಿನಲ್ಲಿ ಗೊತ್ತಾದ ಮೊತ್ತ ಅವರಿಗೆ ಸಂಬಂಧವಿರುತ್ತಿರಲಿಲ್ಲ. ಹಣ ಒಬ್ಬ ಒಡೆಯನ ಕೈಯಿಂದ ಇನ್ನೊಬ್ಬ ಒಡೆಯನ ಕೈಗೆ ಹೋಗುತ್ತಿತ್ತೇ ವಿನಹ ಗುಲಾಮರ ಕೈಗೆ ಬರುತ್ತಿರಲಿಲ್ಲ. ಕುರಿ ದನಗಳ ಹರಾಜಿನಲ್ಲಿಯೂ ಕೂಡ ಅಷ್ಟೆ. ಆದರೆ ಐಪಿಎಲ್ ಹರಾಜಿನಲ್ಲಿ ದುಡ್ಡು ದಕ್ಕುವುದು ಆಟಗಾರನಿಗೆ (ಅಕ್ಷರರು ಸಮಾನಾಂತರಗೊಳಿಸಿರುವ ಎಮ್ಮೆದನ/ಗುಲಾಮರಿಗೆ!). ಇದೊಂದು ಮುಖ್ಯ ವ್ಯತ್ಯಾಸವಲ್ಲವೆ? ರೋಮನರ “ಹರಾಜನ್ನು” ಹಾಗು ವಸಾಹತಿನ “ಹರಾಜನ್ನು” ಐಪಿಎಲ್ಲಿನ ಹರಾಜಿಗೆ ಹೋಲಿಸುವುದು ತೀರ ತಪ್ಪಾಗಿ ತೋರುತ್ತದೆ. ಇದನ್ನು ಅಕ್ಷರರು ಗಮನಿಸಿಲ್ಲವೆ? ಐಪಿಎಲ್ಲಿನ ಹರಾಜು ನಮ್ಮ ಸಮಾಜದ ಮೇಲೆ ಮಾಡುತ್ತಿರುವ ಹಲವು ಬೇರೆ ತೊಂದರೆಗಳು ಇವೆ. ಟಿವಿ/ಪತ್ರಿಕೆಗಳಲ್ಲಿ ಅದರದೇ ಸುದ್ದಿ ತುಂಬಿ ಹೋಗಿ ಬೇರೆಲ್ಲ ಗೌಣವಾಗುವತ್ತದೆ. ಟಿವಿ ಜಾಹಿರಾತಿಗೆ ಸುರಿಯುವ ಹಣದಿಂದಾಗಿ ನಮಗೆ ದಕ್ಕುವ ಸುದ್ದಿ ಸಾರಾಂಶಗಳಲ್ಲಾಗುವ ಕಡಿತ ಹಾಗು ವ್ಯತ್ಯಯಗಳು ಚಿಂತಾಜನಕ. ಹೀಗೆ ಪಟ್ಟಿ ಬೆಳೆಸಬಹುದು. ಆದರೆ “ಅವಮಾನ” ಎಂದು ನೋಡುವ ಸರಳೀಕರಣದಿಂದ ಈ ಎಲ್ಲ ಸಂಗತಿಗಳು ಹಿಂದಕ್ಕೆ ಸರಿಯುವ ಅಪಾಯವೇ ಹೆಚ್ಚು.

೫. ಚಿತ್ರಕೃತಿಗಳ ಹರಾಜು ನಮಗೆ ಸರಿ ಅನಿಸುತ್ತಿದೆಯಲ್ಲಾ ಎಂಬ ಅಕ್ಷರರ ಯೋಚನೆ ಸರಿಯಾದುದೇ. ಆದರೆ ಬಗ್ಗೆ ಕೂಡ ಈಗೀಗ ಚರ್ಚೆ ಶುರುವಾಗಿರುವುದು ಅಕ್ಷರರಿಗೆ ಗೊತ್ತಿರಬಹುದು. ಆಸ್ಟ್ರೇಲಿಯಾದಲ್ಲಿ ಚಿತ್ರಕೃತಿಗಳ ಹರಾಜಿನ ಫಲ ಕೃತಿಗಾರನಿಗೆ ತಲುಪುತ್ತಿಲ್ಲವೆಂಬ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಆಸ್ಟ್ರೇಲಿಯಾದ ಮೂಲನಿವಾಸಿಗಳ ಕೃತಿಗಳನ್ನು ಕಡಿಮೆ ಬೆಲೆಗೆ ಕೊಂಡು ಯೂರೋಪು ಅಮೇರಿಕಾಗಳಲ್ಲಿ ಕೋಟ್ಯಂತರ ಡಾಲರುಗಳಿಗೆ ಮಾರಾಟವಾಗುವುದು ಗೊತ್ತಿರುವ ಸಂಗತಿಯಷ್ಟೆ. ಹಾಗಾಗಿ ಆಸ್ಟ್ರೇಲಿಯಾದಲ್ಲಿ ಒಂದು ಕಾನೂನು ತರಲು ಹವಣಿಸುತ್ತಿದ್ದಾರೆ. ಚಿತ್ರಕೃತಿಯ ಪ್ರತಿ ಹರಾಜು/ಮಾರಾಟದಲ್ಲಿ ಶೇಕಡಾವಾರು ಕೃತಿಗಾರನಿಗೆ ನಿರ್ದಿಷ್ಟ ವರ್ಷಗಳವರೆಗೆ ತಲುಪವುದು ಖಡ್ಡಾಯ ಮಾಡಬೇಕೆಂದು ಯೋಚಿಸುತ್ತಿದ್ದಾರೆ. ಎಲ್ಲ ಕಡೆಯೂ ಈ ಕಾನೂನು ಬರುವುದು ಹೆಚ್ಚುಕಡಿಮೆ ಅನಿವಾರ್ಯವೇನೋ ಅನಿಸುತ್ತಿದೆ. ಹಾಗಾಗಿ ಹರಾಜಿನ ರೂಪವೂ ಬದಲಾಗುತ್ತಿದೆ. ಒಂದು ಪದಕ್ಕೆ ರೋಮನ್ನರ ಕಾಲದ ಯಾ ವಸಾಹತುವಿನ ಕಾಲದ ಅರ್ಥವನ್ನು ಇಟ್ಟುಕೊಂಡೇ ನೋಡುವುದು ಸರಿಯಲ್ಲ ಹಾಗು ಅದರಿಂದ ತೀರ ಎಡವಟ್ಟಾಗುವ ಸಾಧ್ಯತೆಯೇ ಹೆಚ್ಚು.

೬. ಕೊನೆಯದಾಗಿ, ಹರಾಜನ್ನು ಅರ್ಥೈಸುವುದರಲ್ಲೇ ಎಡವಿರುವುದರಿಂದ, ಹರಕೆ ಹಾಗು ಹರಾಜನ್ನು ಒಟ್ಟಿಗೆ ನೋಡುವ, ಅವೆರಡನ್ನೂ ‘ಅವಮಾನ’ದ ಚೌಕಟ್ಟಿನಲ್ಲಿಟ್ಟು ನೋಡುವ ಕೆಲಸವೇ ಅರ್ಥ ಕಳೆದುಕೊಳ್ಳುತ್ತದೆ. ಅವೆರಡನ್ನೂ ಬೇರೆ ಹಂದರದಲ್ಲಿಟ್ಟು ನೋಡುವುದು ಮುಖ್ಯ ಹಾಗು ಅಗತ್ಯ. ಹಾಗು ಮಾನಾವಮಾನವನ್ನು ಪ್ರತ್ಯೇಕವಾಗಿ ಅಥವಾ ಬೇರೆ ಯಾವುದಾದರೂ ಚೌಕಟ್ಟಿನಲ್ಲಿ ನೋಡಿದರೆ ಹೆಚ್ಚು ಅರ್ಥಪೂರ್ಣವಾಗಬಹುದು

Advertisements

2 thoughts on “ಮಾನಾವಮಾನ, ಹರಕೆ-ಹರಾಜು

Add yours

  1. gupta
    Feb 18, 2011 @ 17:30:01
    This happens to be the only straight and proper (nEra & samanjasa) reply to Mr.Akshara’s corresponding article that I have ever seen. And yet the things written are pretty simple, not subtle. All other replies unnecessarily showed an exaggerated anger and tried to see a subtlety which was totally not yet all present in the issue.

    Such a clarification was utterly required. Thanks for it.
    [wrongly commented to another post – moved here – anivaasi]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: