ಯಾರು ಹಿತವರು ನಿನಗೆ…

ಇದೀಗ ಸೆಪ್ಟೆಂಬರ್ ಏಳರಂದು ಆಸ್ಟ್ರೇಲಿಯಾದಲ್ಲಿ ಫೆಡರಲ್ ಚುನಾವಣೆ. ಬರುವ ವರ್ಷ ಭಾರತದಲ್ಲಿ ನಡೆಯಲಿದೆ. ಈ ಹೊತ್ತಿನಲ್ಲಿ ರಾಜಕೀಯ ಪ್ರಕ್ರಿಯೆಯ ಬಗ್ಗೆ ಒಂದೆರಡು ಯೋಚನೆಗಳನ್ನು ಇಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೇನೆ.

ಚುನಾವಣೆ ಹತ್ತಿರವಾದ ಹಾಗೆ ರಾಜಕೀಯ ನಮ್ಮ ಮನಸ್ಸನ್ನು ಆವರಿಸಿಕೊಳ್ಳುವುದು ಸಾಮಾನ್ಯ. ಆದರೆ ಚುನಾವಣೆಯ ಹೊತ್ತಿನಲ್ಲಿ ಮಾತ್ರ ರಾಜಕೀಯ ವಿಚಾರಗಳು ಜಾಗೃತವಾಗುವುದು ಅಪಾಯಕಾರಿ. ಯಾಕೆಂದರೆ ಉಳಿದ ಹೊತ್ತಿನಲ್ಲಿ ಎಚ್ಚರಿಕೆಯಿಂದ ರಾಜಕೀಯ ಆಗುಹೋಗುಗಳನ್ನು ಗಮನಿಸದೇ ಇದ್ದರೆ, ಪ್ರತಿಕ್ರಯಿಸದೇ ಉಳಿದರೆ ಚುನಾವಣೆಯ ಹೊತ್ತಿನಲ್ಲಿ ಗೊಂದಲಕ್ಕೆ ಒಳಗಾಗಿ ಪಕ್ಷಗಳ ಸುಳ್ಳು ಮೋಸಗಳಿಗೆ ಬಲಿಯಾಗುವುದನ್ನು ತಪ್ಪಿಸಲಾಗದು.

ರಾಜಕೀಯದಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರ ಸದಾ ನಡೆಯುತ್ತಲೇ ಇರುತ್ತದೆ. ಇದರಿಂದ ಲಾಭವಾಗುವ ಸಮಾಜದ ಹಲವಾರು ಅಂಗಗಳನ್ನು ನಾವು ಗುರುತಿಸಬಹುದು. ಆದರೆ ಪ್ರಸ್ತುತ ಸಂಗತಿ ಅದಲ್ಲ.

ಪ್ರಜಾಪ್ರಭುತ್ವ ದೇಶಗಳ ಜನರಲ್ಲಿ ಈ ಗಮನಿಸುವಿಕೆಯ ಪ್ರವೃತ್ತಿ ಒಂದು ಮಟ್ಟದ ಅನಿವಾರ್ಯ. ಇದಕ್ಕಿಂತಲೂ ಮುಖ್ಯವಾದ ಮತ್ತೊಂದು ಅನಿವಾರ್ಯವೂ ಇದೆ. ನಾವು ಯಾವ ಪಕ್ಷವನ್ನು ಬೆಂಬಲಿಸುತ್ತೇವೆ, ವಿರೋಧಿಸುತ್ತೇವೆ ಎಂಬುದಕ್ಕಿಂತ ಮೂಲಭೂತವಾದ ಸಂಗತಿ. ಆ ಸಂಗತಿಯನ್ನು ವಿವರಿಸಲು ಪ್ರಯತ್ನಿಸುತ್ತೇನೆ.

ರಾಜಕೀಯದ ವಿದ್ಯಮಾನಗಳನ್ನು ವ್ಯಾವಹಾರಿಕವಾಗಿ ಮಾತ್ರ ನೋಡುತ್ತಾ ಹೋದರೆ, ಅದರ ಹಿಂದೆ ಕೆಲಸ ಮಾಡುತ್ತಿರುವ ನಿಲುವು ನಮಗೆ ಕಾಣಿಸುವುದಿಲ್ಲ. ಅದು ಕಾಣದೆ ನಾವು ರಾಜಕೀಯ ನಡಾವಳಿಗಳನ್ನು ತಾತ್ವಿಕವಾಗಿ ತೂಗಿ ಅಳೆಯಲು ಬಾರದು. ಆಗ ಮತ್ತೆ ಗೊಂದಲದ ಪರಿಸ್ಥಿತಿ.

ಸಾಮಾನ್ಯವಾಗಿ ರಾಜಕೀಯ ಪಕ್ಷಗಳಿಗೆ ಒಂದ ಸಿದ್ಧಾಂತವಿರುತ್ತದೆ (Ideology). ಅದರ ಆಧಾರದ ಮೇಲೆ ಅವುಗಳು ತಮ್ಮ ನೀತಿಕಟ್ಟುಗಳನ್ನು (policy) ರೂಪಿಸಿಕೊಳ್ಳುತ್ತವೆ. ಆ ನೀತಿಕಟ್ಟುಗಳಿಗೆ ಅನುಗುಣವಾಗಿ ಚುನಾವಣೆಯ ಸಮಯದಲ್ಲಿ ಪ್ರಣಾಳಿಕೆಯನ್ನು ಘೋಷಿಸುತ್ತವೆ.

ರಾಜಕೀಯ ಪಕ್ಷಗಳ ಮೂಲ ಸಿದ್ಧಾಂತ ಹಾಗು ಅವುಗಳ ನೀತಿ ಕಟ್ಟುಗಳ ನಡುವಿನ ನಂಟನ್ನು ನಾವು ಅವಲೋಕಿಸಬೇಕಾಗುತ್ತದೆ. ನಂತರ ಅವುಗಳ ಪ್ರಣಾಳಿಕೆಯ ಅರ್ಥ ನಮಗೆ ಗೋಚರಿಸುತ್ತದೆ. ಆಗ ಮಾತ್ರ ನಾವು ಅವುಗಳ ಮಾತು ನಡೆಗಳನ್ನು ಅರ್ಥಮಾಡಿಕೊಳ್ಳುವದಷ್ಟೇ ಅಲ್ಲ, ತುಲನೆ ಮಾಡಿ, ಅದರ ಪ್ರಭಾವದ ಆಳ ಹಾಗು ವಿಸ್ತಾರವನ್ನು ಅಳೆಯುಲು ಸಾಧ್ಯವಾಗುತ್ತದೆ.

ಇದಕ್ಕೊಂದು ಉದಾಹರಣೆಯನ್ನು ನೋಡುವುದಾದರೆ ನಮ್ಮ ತೆರಿಗೆಯನ್ನು ತೆಗೆದುಕೊಳ್ಳಿ. ಅದನ್ನು ಸರ್ಕಾರ ಹೇಗೆ ಖರ್ಚು ಮಾಡುತ್ತದೆ, ಯಾವುದರ ಮೇಲೆ ಖರ್ಚು ಮಾಡುತ್ತದೆ, ಎಷ್ಟು ಪರಿಣಾಮಕಾರಿಯಾಗಿ ಖರ್ಚು ಮಾಡುತ್ತದೆ ಎಂಬುದು ಬಹುಶಃ ಎಲ್ಲ ತೆರಿಗೆ ಕಟ್ಟುವ ಮತದಾರರ ಚಿಂತೆಯೇ.

ಸರ್ಕಾರ ಮಾಡುವ ಖರ್ಚನಿಂದ ನಮಗೆ ಮಾತ್ರ ಒಳ್ಳೆಯದಾದರೆ ಆಯಿತು ಎಂಬ ನಿಲುವು ಹೆಚ್ಚು ಸಹಾಯಕಾರಿ ಆಗುವುದಿಲ್ಲ. ಮೊದಲನೆಯದಾಗಿ, ಸರ್ಕಾರ ನಮ್ಮ ಮೂಗಿನ ನೇರಕ್ಕೆ ಹಾಗೆ ಖರ್ಚು ಮಾಡಲು ಬರುವುದಿಲ್ಲ. ನಮಗೆ ಇಷ್ಟವಿಲ್ಲದ್ದಕ್ಕೂ ಅದು ಖರ್ಚು ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ.

ಎರಡನೆಯದಾಗಿ ಹಾಗೆ ಯೋಚಿಸುವುದು ಸ್ವಾರ್ಥವಾಗುತ್ತದೆಯೇ ಹೊರತು, ನಾವು ಒಂದು ಸಮಾಜಕ್ಕೆ, ಒಂದು ದೇಶಕ್ಕೆ ಸೇರಿದವರು ಎಂಬ ತಿಳವಿನಿಂದ ಹೊರಟ ವಿಚಾರ ಆಗುವುದಿಲ್ಲ. ಆ ರೀತಿಯ ಸ್ವಾರ್ಥದ ಚಿಂತನೆಗೆ ಯಾವುದೇ ರಾಜಕೀಯ ಎಚ್ಚರದ ಅಗತ್ಯ ಇರುವುದಿಲ್ಲ.

ಅಂತ ಸ್ವಾರ್ಥದ ನಿಲುವು ತಪ್ಪು ಎಂದೋ, ಅನೈತಿಕ ಎಂದೋ ನಾನು ಹೇಳುತ್ತಿಲ್ಲ. ಆದರೆ ಅಂತಹ ಸ್ವಾರ್ಥದ ನಿಲುವಿಂದ ಹೆಚ್ಚು ಪ್ರಯೋಜನವಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪಾಲುಗೊಳ್ಳಲು ನಮ್ಮ ಸ್ವಾರ್ಥದ ಆಚೆಗಿನ ಸ್ತರದಲ್ಲಿ ನಾವು ಯೋಚಿಸಲೇ ಬೇಕಾಗುತ್ತದೆ. ಅದು ರಾಜಕೀಯ ಎಂಬ ಮೃಗದ ಸಹಜ ಸ್ವಭಾವ ಎಂಬುದನ್ನು ನಾವು ಅರಿಯಬೇಕು.

ಹಾಗಾದರೆ ಸರ್ಕಾರ ನಮ್ಮ ಹಣವನ್ನು ಏನಕ್ಕೆಲ್ಲಾ ಖರ್ಚು ಮಾಡಬೇಕು ಎಂದು ಯೋಚಿಸುವಾಗ, ಯಾವ ಪಕ್ಷ ಗದ್ದುಗೆ ಏರಿದರೆ ನಮ್ಮ ಇಷ್ಟಕ್ಕನುಗುಣವಾಗಿ ಹಣದ ಖರ್ಚಾಗುತ್ತದೆ ಎಂದು ನೋಡಬೇಕಾಗುತ್ತದೆ.

libcons“ಪ್ರಗತಿಪರ” (progressive) ಎಂದು ಹೇಳಿಕೊಳ್ಳುವ ಸರ್ಕಾರಗಳು ಸಾಧಾರಣವಾಗಿ ಆರೋಗ್ಯ, ಶಿಕ್ಷಣ, ಬಡತನ ಇತ್ಯಾದಿಗಳ ವಿಷಯದಲ್ಲಿ ಹೆಚ್ಚು ಖರ್ಚು ಮಾಡುತ್ತವೆ. ಅವು ಬಡ್ಜೆಟ್ಟಿನಲ್ಲಿ ಹೆಚ್ಚು ಹಣ ಉಳಿಸುವತ್ತ ಗಮನ ಹರಿಸುವುದಿಲ್ಲ.

ಅದೇ, “ಸಂಪ್ರದಾಯವಾದಿ” (conservative) ಎಂದು ಕರೆದುಕೊಳ್ಳುವ ಸರ್ಕಾರಗಳು ಹಣ ಉಳಿಸುವತ್ತ ಗಮನವಿಡುತ್ತವೆ. ತುಸು ಹೆಚ್ಚೇ ಎಚ್ಚರಿಕೆಯಿಂದ ಹೊಸ ಹೆಜ್ಜೆಗಳನ್ನು ಇಡುವ ಅವು ಮಿಲಟರಿ, ರಕ್ಷಣೆ ಇತ್ಯಾದಿಗಳತ್ತ ಖರ್ಚು ಮಾಡು ಸಂಭವ ಹೆಚ್ಚು.

ಇಲ್ಲಿ ಎರಡು ಸಂಗತಿ- ಒಂದು, ಹಣ ಹೇಗೆ ಖರ್ಚಾಗಬೇಕು ಎಂಬುದಕ್ಕೇ ನಮ್ಮದೇ ಆದ ನಿಲುವು ನಮಗಿರಬೇಕು. ಇನ್ನೊಂದು ಯಾವ ಪಕ್ಷ ನಮ್ಮ ನಿಲುವಿಗೆ ಹತ್ತಿರದಲ್ಲಿದೆ ಎಂದು ಅರಿಯಬೇಕು. ಇದನ್ನು ಅರಿತುಕೊಳ್ಳುವ ಸಲುವಾಗಿಯೇ, ಯಾವುದೇ ಪಕ್ಷದ ಮೂಲ ಸಿದ್ಧಾಂತಗಳ ಅರಿವು ಹಾಗು ಅದರ ನೀತಿಕಟ್ಟಿನ ಪರಿಚಯ ಇರಬೇಕಾಗುತ್ತದೆ.

ಪಕ್ಷಗಳು ತಮ್ಮ ಮೂಲ ಸಿದ್ಧಾಂತಗಳನ್ನು ಮರೆಮಾಚಿದರೆ, ತಿರುಚಿದರೆ ಅಥವಾ ಅದಕ್ಕೆ ಬದ್ಧರಾಗಿ ಇಲ್ಲದೆ ಇದ್ದರೆ ಅದನ್ನು ಬೆಳಕಿಗೆ ಒಡ್ಡಬೇಕಾದ ಕೆಲಸವನ್ನು ಮಾಧ್ಯಮಗಳು ಮಾಡಬೇಕಾಗುತ್ತದೆ. ಅವುಗಳು ಮಾಡದೇ ಇದ್ದರೆ, ಓದುಗರು, ಮತದಾರರು ಮಾಧ್ಯಮಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸಿ ಅದನ್ನು ಒತ್ತಾಯಿಸಬೇಕಾಗುತ್ತದೆ.

ಬಹುಶಃ ಈ ಬಗೆಯ ಸಮಗ್ರ ಅರಿವನ್ನೇ “ರಾಜಕೀಯ ಪ್ರಜ್ಞೆ” ಎಂದು ಗುರುತಿಸುತ್ತಾರೆ. ಚುನಾವಣೆಯಲ್ಲಿ ಪಕ್ಷದ ಸೋಲು, ಗೆಲುವುಗಳಿಗಿಂತ ಇದು ಹೆಚ್ಚು ಮುಖ್ಯವಾಗುತ್ತದೆ. ಸಮಾಜದ ಹಾಗು ದೇಶದ ನಿರಂತರ ಬೆಳವಣಿಗೆಯ ದೃಷ್ಟಿಯಿಂದ ಕೂಡ ಇದು ಅನಿವಾರ್ಯವಾಗುತ್ತದೆ.

“ಅಯ್ಯೋ, ಇದಕ್ಕೆಲ್ಲಾ ಯಾರಿಗೆ ಟೈಮಿದೆ! ರಾಜಕಾರಣಿಗಳು ಪ್ರಮಾಣಿಕರಾಗಿದ್ದರೆ ಸಾಕಲ್ಲವೆ?” ಎಂದು ಕೇಳಬಹುದು. ರಾಜಕಾರಣಿಗಳೂ ಮನುಷ್ಯರೇ. ಬಚಾವಾಗಬಹುದಾದರೆ ತಪ್ಪು ಮಾಡುವ, ಸುಳ್ಳು ಹೇಳುವ ಸಹಜ ಗುಣ ಅವರಲ್ಲೂ ಇದೆ. ಸದಾ ಎಲ್ಲರ ಕಣ್ಣ ಮುಂದೆ ಅವರ ನಡೆನುಡಿ ಇರುವುದರಿಂದ, ಅವರ ನಡೆನುಡಿ ಹಲವರ ಮೇಲೆ ಪ್ರಭಾವ ಬೀರುವುದರಿಂದ ಅವರ ಕೊರತೆಗಳು ನಮಗೆ ದೊಡ್ಡಕೆ ಕಾಣಬೇಕು, ಕಾಣುತ್ತದೆ.

“ನಮ್ಮದು ಪ್ರಜಾಪ್ರಭುತ್ವ” ಎಂದು ಎದೆ ತಟ್ಟಿ ಹೇಳುವಾಗ, ಆ ರಾಜಕಾರಣಿಗಳು ತಪ್ಪು ಸುಳ್ಳನ್ನು ಬಳಸಿಕೊಂಡು ಬಲಿಯದ ಹಾಗೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲೇ ಇದೆ. ಅದೂ ಅಲ್ಲದೆ, ಪ್ರಜಾಪ್ರಭುತ್ವ ಮಾಗ ಬೇಕಾದ ಪ್ರಕ್ರಿಯೆಯಲ್ಲಿ ಕೂಡ ಅತ್ಯಂತ ದೊಡ್ಡ ಪಾತ್ರ ಕೂಡ ನಮ್ಮದೇ ಆಗಿದೆ. ಅದಕ್ಕಾಗಿ ನಮ್ಮ ರಾಜಕೀಯ ಚಿಂತನೆ, ವಿಚಾರ, ಅವಲೋಕನವೂ ಮಾಗಬೇಕಾದ, ಸೂಕ್ಷ್ಮವಾಗಬೇಕಾದ, ಸಂಕೀರ್ಣವಾಗಬೇಕಾದ ಅನಿವಾರ್ಯವಿದೆ.

ಈ ಚುನಾವಣೆಯ ಹೊತ್ತಿನಲ್ಲಿ ಪಕ್ಷಗಳ ಮೂಲ ಸಿದ್ಧಾಂತ ಹಾಗು ನೀತಿಕಟ್ಟಿನ ಕಡೆ ವಿಶೇಷ ಗಮನವಿಟ್ಟು ಅವರ ಘೋಷಣೆ, ಪ್ರಣಾಳಿಕೆ ಹಾಗು ಪ್ರಲೋಭನೆಗಳನ್ನು ತುಲನೆಗೆ ಹಚ್ಚಬೇಕಾದುದು ಅಗತ್ಯವಷ್ಟೇ ಅಲ್ಲ, ಅನಿವಾರ್ಯ ಕೂಡ.

2 thoughts on “ಯಾರು ಹಿತವರು ನಿನಗೆ…

  1. ಸುದರ್ಶನ, ಸಮಯಕ್ಕೆ ತಕ್ಕ ಸು-ದರ್ಶನವನ್ನೇ ಮಾಡಿಸಿದ್ದೀರಿ,ದೊಡ್ಡ ದೊಡ್ಡ ವಿಚಾರಗಳಾದ “ರಾಜಕೀಯ ಪ್ರಜ್ಞೆ”, “ಪ್ರಜಾಪ್ರಭುತ್ವ ನಮ್ಮದು”, “ಪಕ್ಷದಸಿದ್ಧಾಂತ” , “ನೀತಿಕಟ್ಟು” ಮನದಟ್ಟುಆಗುವಹಾಗೆ ಬಿಡಿಸಿ ಬರೆದಿದ್ದೀರಿ,ಕನ್ನಡದಲ್ಲಿ ಓದಿದಾಗ ಅದೆಷ್ಟೋ ತಿಳಿಯಿತು ನನಗೆ ಅನ್ನಿ, ಅದಿರಲಿ ಕಳೆದ ಎರಡು ಬಜೆಟ್ನಲ್ಲಿ ವ್ಯವಸಾಯಕ್ಕೆ ಖರ್ಚಿನ ಗಮನವೇ ಹರಿಸುತ್ತಿಲ್ಲ. ಇದು ಮುಖ್ಯ ಅಲ್ಲವೇ?

  2. ನಾರಾಯಣ, ನಿಮ್ಮ ಸರಳ ಪ್ರಶ್ನೆ ಎಷ್ಟು ಗಹನವಾದುದು ಅನಿಸುತ್ತಿದೆ. ಮುಖ್ಯವೋ ಅಲ್ಲವೋ ಎಂದು ನೋಡುವ ಮೊದಲು ನಿಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. “ವ್ಯವಸಾಯಕ್ಕೆ ಖರ್ಚು” ಎಂದರೆ ಏನು? ಸರ್ಕಾರ ಏಕೆ ಖರ್ಚುಮಾಡಬೇಕು? ಸಬ್ಸಿಡಿ ಕೊಡಬೇಕು ಎಂದೆ? ಎರಡನೆಯದಾಗಿ, “ಗಮನ ಹರಿಸುತ್ತಿಲ್ಲ” ಎಂದರೆ ಏನು? ಎಷ್ಟು ಖರ್ಚು ಮಾಡಿದರೆ “ಗಮನ ಹರಿಸಿದಂತೆ” ಆಗುತ್ತದೆ? ಯಾವ ಮಾನದಂಡದ ಆಧಾರದ ಮೇಲೆ “ಗಮನ ಹರಿಸುತ್ತಿಲ್ಲ” ಎಂದು ಹೇಳಬಹುದು? ನಿಮ್ಮ ಆರೋಪಕ್ಕೆ ಯಾವ ಅಂಕಿ-ಅಂಶವನ್ನು ಆಧಾರವಾಗಿ ಇಟ್ಟು ಕೊಂಡಿದ್ದೀರ? ಈ ಪ್ರಶ್ನೆಗಳನ್ನು ಉತ್ತರಿಸಿಕೊಂಡರೆ ಸುಲಭವಾಗಬಹುದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s