ನಿರ್ದಾಕ್ಷಿಣ್ಯ ಹೃದಯವಂತ

mmk-blogವರ್ಷ ೨೦೦೪. ಕುವೆಂಪು ಜನ್ಮ ಶತಮಾನೋತ್ಸವ. ದಕ್ಷಿಣ ಭೂಗೋಲದ ವಸಂತದ ಕಡೆಯ ಮಾಸ. ಆಸ್ಟ್ರೇಲಿಯಾದ ಚುರುಗುಟ್ಟುವ ಬಿಸಿಲಿನ ನವೆಂಬರ್ ೬ರ ಮುಂಜಾನೆ. ನಾವೆಲ್ಲಾ ಶ್ರೀಯುತ ಪರಮೇಶರ ಮನೆಯಲ್ಲಿ ಸೇರಿದ್ದೆವು. ಆಸ್ಟ್ರೇಲಿಯಾ ಪ್ರವಾಸದಲ್ಲಿ ತೊಡಗಿದ್ದ ಪ್ರೊ.ಎಂ.ಎಂ.ಕಲ್ಬುರ್ಗಿಯವರ ಜತೆಗಿನ ಒಡನಾಟ ಆ ಸಂಜೆಯ ಕನ್ನಡ ಸಂಘದ ಕಾರ್ಯಕ್ರಮಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ನಮಗೆ ಕಂಡಿತ್ತು.

ಕನ್ನಡದ ಇತಿಹಾಸದ ಬಗ್ಗೆ, ಲಿಂಗಾಯತ ಧರ್ಮದ ಬಗ್ಗೆ, ವಚನ ಹಾಗು ವಚನಕಾರರ ಬಗ್ಗೆ, ಕಲ್ಯಾಣದ ಕ್ರಾಂತಿಯ ಬಗ್ಗೆ ನಮ್ಮ ಪ್ರಶ್ನೆ, ಅನುಮಾನಗಳನ್ನು ಅವರ ಮುಂದಿಟ್ಟು ಚರ್ಚಿಸಬಹುದಾದ ಅವಕಾಶ ಮಹತ್ತರವಾದದ್ದು ಎಂದು ಅಲ್ಲಿದ್ದ ನಮಗೆ ಚೆನ್ನಾಗಿ ಗೊತ್ತಿತ್ತು. ಅವರ ಜತೆಗಿನ ಚರ್ಚೆ-ಮಾತುಕತೆ ಹೊಸ ಸಂಗತಿಗಳತ್ತ ನಮ್ಮ ಗಮನ ಸೆಳೆಯುತ್ತದೆ ಹಾಗು ಹೊಸ ದಿಕ್ಕಿನಲ್ಲಿ ನಮ್ಮನ್ನು ಯೋಚಿಸುವಂತೆ ಮಾಡಬಲ್ಲುದು ಎಂಬುದು ನಮ್ಮ ಸಂಭ್ರಮಕ್ಕೆ ಕಾರಣ.

ಹಲವಾರು ಪ್ರಶ್ನೆಗಳನ್ನು, ಆಸಕ್ತ ವಿಷಯಗಳನ್ನು ಗುರುತು ಹಾಕಿಕೊಂಡು ಭೇಟಿಗೆ ಮೊದಲೇ ಅವರಿಗೆ ಕೊಟ್ಟಿದ್ದೆವು. ಅವುಗಳನ್ನು ಕಲ್ಬುರ್ಗಿಯವರು ಅತ್ಯಂತ ಉತ್ಸಾಹದಿಂದ ಗಂಭೀರವಾಗಿ ಪರಾಮರ್ಶಿಸಿ ನಮ್ಮೊಡನೆ ಸುದೀರ್ಘ ವಿಚಾರ ವಿನಿಮಯದಲ್ಲಿ ತೊಡಗಿಕೊಂಡರು. ನಾವು ಕೇಳಿದ ಸಹಜ ಸಾಮಾನ್ಯ ಪ್ರಶ್ನೆಗಳಿಗೂ ಗಹನವಾದ ಉತ್ತರಗಳನ್ನು ಮನದಟ್ಟಾಗುವಂತೆ ವಿವರಿಸಿದರು.

ಬಸವಣ್ಣ-ಬಿಜ್ಜಳ, ಕಲ್ಯಾಣದ ಕ್ರಾಂತಿ, ಲಿಂಗಾಯತ ಧರ್ಮದ ಇತಿಹಾಸ, ವಿಜಯನಗರದ ಕೃಷ್ಣದೇವರಾಯನ ಚರಿತ್ರೆ, ಕವಿರಾಜಮಾರ್ಗದ ವೈಶಿಷ್ಟ್ಯ, ಕನ್ನಡ ಕವಿಗಳ ಕಾಣ್ಕೆ ಹೀಗೆ ಹಲವಾರು ಸಂಗತಿಗಳನ್ನು ಸರಳ ಸಹೃದಯದಿಂದ ನಮ್ಮ ಮುಂದೆ ಬಿಚ್ಚಿ ಬಿಡಿಸಿಟ್ಟರು. ಸುಮಾರು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಅವರು ನಿಜಕ್ಕೂ ಹಲವು ವಿಷಯಗಳ ಬಗ್ಗೆ ನಮ್ಮ ಕಣ್ಣು ತೆರೆಸಿದರು ಎಂದೇ ಹೇಳಬೇಕು. ನಮ್ಮೆಲ್ಲರನ್ನೂ ಉನ್ಮತ್ತ ಸ್ಥಿತಿಯಲ್ಲಿರುವಂತೆ ಮಾಡಿದ ಸಂದರ್ಶನ, ಮಾತುಕತೆ ಅದಾಗಿತ್ತು.

ಮಾತನಾಡುವಾಗ ಕಲ್ಬುರ್ಗಿಯವರ ಹೊಳೆಯುವ ಕಣ್ಣುಗಳು ಅವರೊಳಗಿನ ವಿಚಾರವಂತಿಕೆ, ಉಮೇದು ಹಾಗು ಕರ್ತೃತ್ವಶಕ್ತಿಯನ್ನು ಜಾಹೀರು ಮಾಡುತ್ತಿತ್ತು. ಬದುಕಿನ ದಿನದಿನದ ಸಂಗತಿಗೂ ಮಹತ್ವದ ಹೊಳಹುಗಳನ್ನು ಕೊಡುತ್ತಿದ್ದರು. ಕವಿರಾಜಮಾರ್ಗವನ್ನು ಉಲ್ಲೇಖಿಸುವಾಗ ಕನ್ನಡ ಜನಪದರ ಕವಿತ್ವನ್ನು ಎತ್ತಿತೋರಿಸುತ್ತಾ ಸ್ವತಃ ಹಾಡೊಂದನ್ನು ಗುನುಗಿಸಿದ್ದು-ಅವರ ನಿರ್ದಾಕ್ಷಿಣ್ಯ ವೈಚಾರಿಕತೆಯ ನಡುವೆಯೂ ನಲಿಯುವ ಸಜ್ಜನಿಕೆ ಹಾಗು ಮೃದು ಹೃದಯ ನಮ್ಮನ್ನು ಆರ್ದ್ರಗೊಳಿಸಿತು.

ಆಗ ನನಗೆ ಅನ್ನಿಸಿದ ಒಂದು ಸಂಗತಿ ಇಂದಿಗೂ ಮರೆಯುವಂತಿಲ್ಲ. ಆ ಸಂಜೆ ಸಿಡ್ನಿ ಕನ್ನಡ ಸಂಘದಲ್ಲಿ ಅವರು ಕೊಟ್ಟ ಮಹತ್ವಪೂರ್ಣ ಭಾಷಣವಲ್ಲದೆ ಅವರೊಡನೆ ಎದುರು ಬದುರು ಕೂತು ಮಾತನಾಡುವ ಅವಕಾಶ ಕನ್ನಡದ ಸಮುದಾಯಕ್ಕೆ ಸಿಕ್ಕಲೇ ಇಲ್ಲ ಎಂಬ ವಿಷಾದ. ಕನ್ನಡ ಸಂಘವೂ ಅಂತಹದೊಂದು ಅವಕಾಶವನ್ನು ಕಲ್ಪಿಸಲಿಲ್ಲ. ಇಡೀ ಜೀವನವನ್ನು ವಿದ್ವತ್‌ಪೂರ್ಣ ಸಂಶೋಧನೆ, ಚರ್ಚೆ ಹಾಗು ವಿಚಾರ ಮಂಥನದಲ್ಲೇ ಕಳೆದ ಕಲ್ಬುರ್ಗಿಯಂತವರು ಅದರಿಂದಾಗಿಯೇ ಘೋರ ಹತ್ಯೆಗೆ ಈಡಾಗಿ ಇಂದು ನಮ್ಮೊಡನಿಲ್ಲ. ಅವರ ಅಮಾನುಷ ಸಾವಿನ ಸಂದರ್ಭದಲ್ಲೂ ಕೂಡ ಸಿಡ್ನಿಯ ಕನ್ನಡ ಸಮುದಾಯ ಒಟ್ಟಿಗೆ ಬಂದುದು ಕಾಣಲಿಲ್ಲ. ಬಸವ ಸಮಿತಿ ಹಮ್ಮಿಕೊಂಡ ಸಂತಾಪ ಸಭೆಯನ್ನು ಹೊರತು ಪಡಿಸಿದರೆ ಮತ್ತಾರೂ ಏನೂ ಆಸಕ್ತಿ ತೋರಿಸಲಿಲ್ಲ.

ಸಿಡ್ನಿಯ ಕನ್ನಡ ಸಮುದಾಯ ಪೂಜೆ, ಪುನಸ್ಕಾರ, ಭಜನೆ, ಹಬ್ಬ ಹರಿದಿನಕ್ಕೆ ತೋರಿಸುವ ಉತ್ಸಾಹವನ್ನು ವೈಚಾರಿಕತೆ ಹಾಗು ವಿಚಾರಮಂಥನಕ್ಕೆ ತೋರಿಸುವಲ್ಲಿ ಹಿಂದುಳಿದಿದೆ ಎಂದೇ ಹೇಳಬೇಕು. ಇಲ್ಲಿಗೆ ಬರುವ ಹಿರಿಯರ ಹಾಗು ಸ್ವಾಮಿಗಳ ಪಾದಪೂಜೆಯಲ್ಲೇ ಸಾರ್ಥ್ಯಕ್ಯ ಕಾಣುವ ನಾವಿನ್ನೂ ಮಧ್ಯಯುಗೀನ ಹಂತದಿಂದ ಹೊರಬರದೇ ಉಳಿದಿರುವುದು ನಿಜಕ್ಕೂ ಶೋಚನೀಯ. ಕಲ್ಬುರ್ಗಿಯವರ ನೆನಪು ಹಾಗು ವಿಚಾರವಂತಿಕೆಯ ಮಾದರಿ ನಮ್ಮನ್ನು ಮಂಪರಿನಿಂದ ಎಚ್ಚರಿಸಬೇಕಾದ ಅಗತ್ಯ ಇಂದಿನ ಅನಿವಾರ್ಯವಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: