ತಾಂಡವ

ಹಿಮಾಲಯದ ತುತ್ತ
ತುಟಿಯ ಬಿಳೀಹಿಮದ
ನಿಲುಕಿನಾಚೆ ನೇಲುವ ತಿಳಿ ತಿಂಗಳ ನಗು
ಶಿವರಾತ್ರಿಯ
ಕತ್ತಲಲ್ಲಿ ಗಂಗೆಯ ಪರಿಶುದ್ದ ಜಲದಿ
ತೇಲುವ ಬಿಳಿ ಪುಣ್ಯಬಿಂಬ 
ಉಮೆಯ 
ಎದೆಯ
ನಿರಿಯಿತು.
ಶಿವ ಭದ್ರಬಾಹು ಬಂಧ
ಹರಿವ ನೀರಲಾಡಿತು.
ಬೆಟ್ಟದ ಸುಳಿಗಾಳಿಯಲ್ಲಿ ಡಮರುಗ
ದನಿ ಅಡಗಿತು.

~~ಶಿವರಾತ್ರಿ ‘೧೪

ಯೇಟ್ಸನ ಗೋಪುರದಿಂದ

Translation of a part of ‘The Tower’ – W.B.Yeats (original follows below)

ಕಲ್ಪನೆ
ದಟ್ಟವಾಗಿ ತಂಗುವುದು
ದಕ್ಕಿದವಳಲ್ಲೋ, ದೂರಾದವಳಲ್ಲೋ?
ದೂರಾದವಳಲ್ಲಾದರೆ ಒಪ್ಪಿಕೊ-
ಆ ಮಹಾಜಾಲದಿಂದ ನೀನು ಮುಖ ತಿರುಗಿಸಿದ್ದು-
ಗರ್ವದಿಂದಾಗಿ,
ಪುಕ್ಕಲುತನದಿಂದಾಗಿ,
ಯಾವುದೋ ಜುಜುಬಿ ಅತಿನವಿರು ಹೊಳಹಿನಿಂದಾಗಿ,
ಅಥವಾ ಒಂದೊಮ್ಮೆ ಸಾಕ್ಷಿಪ್ರಜ್ಞೆ ಎಂಬುದರಿಂದಾಗಿ;
ಮತ್ತೆ ಅವಳು ನೆನಪಾದರೆ ಈಗ,
ಸೂರ್ಯನಿಗೆ ಗ್ರಹಣ ಹಿಡಿದು
ದಿನ ಬತ್ತಿಹೋಗಿದೆ.

Does the imagination dwell the most
Upon a woman won or woman lost?
If on the lost, admit you turned aside
From a great labyrinth out of pride,
Cowardice, some silly over-subtle thought
Or anything called conscience once;
And that if memory recur, the sun’s
Under eclipse and the day blotted out. – W.B. Yeats

 

Background images

I have been playing with Inkscape to create some backgound designs. Here are some if you like to use them. They are in png (portable network graphics) format.

They are in original SVG (Scalable Vector Graphics). I can’t upload them here, since they are not recognised as media file, I think. I can email them if you want.

You should use them in your image editing program to lay them repeatedly and create a pattern.

You can get variations by changing colour, filling colour, blurring or changing transparency.

suda_bg_1

suda_bg_3

suda_bg_2

ಬೆಂಗಳೂರು – ಹುಡುಗಿ

ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗೆ ಒಂದು ಗುಟ್ಟು ಹೇಳಬೇಕು. ಇದನ್ನು ಹಿಂಜರಿಕೆಯಿಂದಲೇ ಹೇಳುತಾ ಇದ್ದೀನಿ. ಈ ಸಲ ನಿನ್ನನ್ನ ನೋಡಬೇಕು ಅನ್ನೋ ಉಮೇದು ಯಾಕೋ ಮುಂಚಿನಷ್ಟು ಇಲ್ಲ. ಈ ಸಲ ಎಲ್ಲ ತುಸು ಯಾಂತ್ರಿಕ ಅನ್ನಿಸ್ತಾ ಇದೆ.

ಆದರೂ ನಾನು ಅಲ್ಲಿಗೆ ಬಂದಕೂಡಲೇ ಅಪ್ಪಿಕೋತೀವಿ. ಮುದ್ದಾಡತೀವಿ. ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ದೀರ್ಘವಾಗಿ ನೋಡುತೀವಿ. ಕಳೆದ ದಿನಗಳ ಬಗ್ಗೆ, ಅವುಗಳಲ್ಲಿ ಕಳೆದು ಹೋದ ಸಾಧ್ಯತೆಗಳ ನೆನಪಾಗಿ ನಿಟ್ಟುಸಿರು ಬಿಡತೀವಿ ಅಂತೆಲ್ಲಾ ಅನಿಸದೇ ಇಲ್ಲ.  ಇದನ್ನು ನಿರ್ಲಜ್ಜೆಯಿಂದ ಹೇಳಬಲ್ಲೆ. ಯಾಕೆಂದರೆ ನನ್ನೆಲ್ಲಾ ಮಾನಗೆಟ್ಟ ಕೆಲಸಗಳನ್ನು ನೀನು ನೋಡಿದ್ದೀಯ, ನಕ್ಕಿದ್ದೀಯ, ಒಪ್ಪಿಕೊಂಡಿದ್ದೀಯ.

ಈ ಸಲ ನೀನು ಎಂದಿನಂತೆ ಸುಂದರವಾಗಿ ಮಲಗಿರುವಾಗ ಭಾನುವಾರ ನಡುರಾತ್ರಿ ಬಂದು ಇಳಿತೀನಿ. ಆ ಹೊಂಬಣ್ಣದ ದೀಪದ ಬೆಳಕಲ್ಲಿ ಬದಲಾಗಿದ್ದನ್ನು, ಬದಲಾಗದ್ದನ್ನು ನಿದ್ದೆಗಣ್ಣಲ್ಲೇ ಹೀರಿಕೊಳ್ಳುತ್ತಾ ನಿನಗೆ ಎಚ್ಚರವಾಗದಂತೆ ಸದ್ದುಮಾಡದೆ ಮನೆ ಸೇರಿಕೋತೀನಿ.

ಸೋಮವಾರ ಬೆಳಿಗ್ಗೆ ನೀನೆದ್ದು ಕಣ್ಣುಜ್ಜಿಕೊಳ್ಳುವಾಗ ಎದುರಿಗೆ ಬರುತೀನಿ. ನೀನು ನಿರ್ಲಕ್ಷ್ಯದಿಂದ ನನ್ನ ಪರಿಚಯವೇ ಇಲ್ಲವೆಂಬಂತೆ ಮುಖ ತಿರುಗಿಸುತ್ತೀಯ. ನಿನ್ನನ್ನು ಒಲಿಸಿಕೊಳ್ಳಲು ನಾನು ಪಾಡು ಪಡುತೀನಿ. ನನ್ನನ್ನು ಮರೆತದ್ದು ನೆನಪಾಗಿ ನೀನು ಮೆಲ್ಲಗೆ ನಗುವಾಗ ನಾನು ಹೊರಡುವ ದಿನ ಬಂದಿರತ್ತೆ. ಅಷ್ಟರಲ್ಲಿ ನೀನು ನನ್ನನ್ನು ನಿನ್ನದೇ ಗೆರೆಗಳಲ್ಲಿ ಕೊರೆದು ಚಿತ್ರಿಸು, ನಾನು ನಿನ್ನನ್ನ ನನ್ನದೇ ಗೊಗ್ಗರು ದನಿಯ ಹಾಡಲ್ಲಿ ಕಟ್ಟಿ ಹಾಕ್ತೀನಿ.

ಈ ಸಲ ತುಸು ಬೇರೆ ಬಗೆಯಾಗಬಹುದು. ಯಾಕೆಂದರೆ ನಾನೂ ನಿನ್ನಷ್ಟೇ ನಿರ್ಲಕ್ಷದಿಂದ ಇರಬೇಕು, ಹಾಗೆ ಹೀಗೆ ಅಂತ ಅಂದಕೊಂಡಿದ್ದೀನಿ. ಎದುರಾದಾಗ ಏನಾಗುತ್ತದೋ ಅನ್ನೋ ಕುತೂಹಲದಲ್ಲಿ ಇದ್ದೀನಿ. ನನ್ನ ಲೆಕ್ಕಾಚಾರ ತಲೆಕೆಳಗಾಗಬಹುದು ಅನ್ನೋ ಭಯವಿಲ್ಲ. ಏನೋ ನಿರಾಳ ಆವರಿಸಿಕೊಂಡಿದೆ.

ಸಿಗುವ. ನನ್ನ ಚುಂಬನಕ್ಕೆ ಕಾಯುತ್ತಿರು.