ಕಪಾಳ ಮೋಕ್ಷ

ರಿಚರ್ಡ್ ಫ್ಲಾನಗನ್ ತನ್ನ ತಂದೆಯ ಯುದ್ಧದ ಅನುಭವದ ಬಗ್ಗೆ Life after Death ಡಾಕ್ಯುಮೆಂಟರಿಯಲ್ಲಿ ಹೇಳಿದ ಸಂಗತಿ:

ತುಂಬಾ ಮೃದು ಸ್ವಭಾವದ ಅವನ ತಂದೆ ಎರಡನೇ ಮಹಾಯುದ್ಧದಿಂದ ಹಿಂದಿರುಗಿ ಬಂದಾಗ ತಾನು ಬಂಧಿಯಾಗಿದ್ದ ಒಬ್ಬ ಜಾಪನೀಸ್ ಆಫೀಸರನನ್ನು ಸಿಕ್ಕಾಪಟ್ಟೆ ಬಯ್ಯುತ್ತಿದ್ದನಂತೆ. ತಂದೆಯ ಜಾಯಮಾನಕ್ಕೆ ಅವನ ಈ ನಡತೆ ತುಂಬಾ ಅಸಹಜವಾಗಿ ಕಾಣುತ್ತಿತ್ತಂತೆ. ಅಷ್ಟೇ ಅಲ್ಲದೆ, ಅವನು ಪದೇಪದೇ ಆ ಜಾಪನೀಸ್ ಆಫೀಸರನ ಹೊಟ್ಟೆಯನ್ನು ರೈಫಲ್ಲಿನ ಬಯೊನೆಟ್ಟಿನಿಂದ ಬಗೆದು ಬಗೆದು ರಕ್ತಸಿಕ್ತ ಜಠರವನ್ನು ಹೊರಗೆಲ್ಲಾ ಚೆಲ್ಲಾಡಿದಂತೆ ಕನಸು ಕಾಣುತ್ತಿದ್ದನಂತೆ. ಯುದ್ಧ ತನ್ನ ತಂದೆಯ ಅಂತರಂಗವನ್ನು ವಿರೂಪಗೊಳಿಸಿರುವುದನ್ನು ಮಕ್ಕಳೆಲ್ಲಾ ತಪ್ತರಾಗಿ ಅನುಭವಿಸುತ್ತಿದರಂತೆ.

archflanagaanww2
ರಿಚರ್ಡ್ ಫ್ಲಾನಗನ್ ತಂದೆ ಆರ್ಚ್ ಫ್ಲಾನಗನ್

ರಿಚರ್ಡ್ ದೊಡ್ಡವನಾದ ಮೇಲೆ, ಆ ಜಾಪನೀಸ್ ಆಫೀಸರನ್ನು ಭೇಟಿಮಾಡಿದನಂತೆ. ತುಂಬಾ ಮೃದು ಸ್ವಭಾವದ ಮುದಕನನ್ನು ನೋಡಿ ಚಕಿತನಾದನಂತೆ. ಅವನು ಯುದ್ಧಬಂಧಿಗಳ ಕಪಾಳಕ್ಕೆ ಹೊಡೆಯುತ್ತಿದ್ದದ್ದನ್ನು ರಿಚರ್ಡ್ ಕೇಳಿದ್ದನಂತೆ. ತಂದೆಯ ಆತ್ಮೀಯ ಗೆಳೆಯನನ್ನು ಹೊಡೆದು ಬಡಿದು ಇವನ ತಂದೆ ಹಾಗು ಉಳಿದವರ ಮುಂದೆಯೇ ಕೊಂದಿದ್ದರಂತೆ. ತನ್ನೆಲ್ಲಾ ಆಕ್ರೋಶವನ್ನೂ ಅದುಮಿ ಹಿಡಿದುಕೊಂಡು ಗೆಳೆಯನ ಸಾವನ್ನು ನೋಡಿದ್ದಷ್ಟೆ ಅಲ್ಲದೆ ಜೀವಮಾನವಿಡೀ ಆ ನೋವು ಹಾಗೂ ಅವಮಾನವನ್ನು ಹೊತ್ತಲೆಯುತ್ತಿದ್ದನಂತೆ.

ಟೋಕಿಯೋದಲ್ಲಿ ಆ ಆಫೀಸರನನ್ನು ಭೇಟಿಯಾದಾಗ ತನ್ನ ತಂದೆಯ ಕಪಾಳಕ್ಕೆ ಹೊಡೆದಂತೇ ತನಗೂ ಹೊಡೆಯುವಂತೆ ರಿಚರ್ಡ್ ಬಿನ್ನವಿಸಿಕೊಂಡನಂತೆ. ಅವನು ಆಗುವುದಿಲ್ಲ ಎಂದರೂ ಬಿಡದೆ ಕೇಳಿಕೊಂಡನಂತೆ. ಕಡೆಗೆ, ಆ ಮುದುಕ ಭುಜ ಹಿಂದಕ್ಕೆ ಎಳೆದು ಬೀಸಿ ಇವನ ಕಪಾಳಕ್ಕೆ ಮತ್ತೆ ಮತ್ತೆ ಹೊಡೆದನಂತೆ. ರಿಚರ್ಡನ ತಲೆ ಸುತ್ತಿಬಂದಂತಾಗಿ, ಭೂಮಿ ಬಾಯಿ ಬಿಟ್ಟಂತಾಗಿ, ತಾವಿದ್ದ ಕಟ್ಟಡ ಹೊಯ್ದಾಡಿದಂತೆ ಆಯಿತಂತೆ.

archflanagan
ವಯಸ್ಸಾದ ಆರ್ಚ್ ಫ್ಲಾನಗನ್

ಕತೆಗಾರನ ಶಾಪವೋ ಎಂಬಂತೆ ಆಗಷ್ಟೆ ಜಪಾನಿನಲ್ಲಿ ಭೂಕಂಪವಾಗುತ್ತಿರುವುದು ಅರಿವಿಗೆ ಬಂದು ಎಲ್ಲರೂ ಹೊರಗೋಡಿದರಂತೆ. ಹೊಡೆದವನು, ಹೊಡೆಸಿಕೊಂಡವನು, ನೋಡುತ್ತಿದ್ದವರು, ಎಲ್ಲರೂ.

 

[ಚಿತ್ರಕೃಪೆ : ಅಂತರ್ಜಾಲ ಪುಟಗಳು]

Advertisements

ಗುದ್ದಾಡುವ ಮನಗಳು

ತುಂಬಾ ದಿನದ ಹಿಂದೆ ತಂದಿಟ್ಟುಕೊಂಡು ನೋಡಿರದ september ಎಂಬ ಆಸ್ಟ್ರೇಲಿಯದ ಚಿತ್ರವನ್ನು ಮೊನ್ನೆ ನೋಡಿದೆ. ೧೯೬೮ರಲ್ಲಿ ಅಬಾರಜಿನಿ ಕೆಲಸಗಾರರಿಗೂ ಬಿಳಿಯರಂತೇ ಸಮಾನ ಸಂಬಳ ಕೊಡಬೇಕೆಂಬ ಕಾನೂನು ಬಂದ ಹಿನ್ನೆಲೆಯಲ್ಲಿ ನಡೆಯುವ ಚಿತ್ರ. sept_01

Continue reading “ಗುದ್ದಾಡುವ ಮನಗಳು”

ಆಸ್ಕರ್‍ ಗೆಲುವಿನ ನೆರಳಲ್ಲಿ…

ರಸುಲ್ ಪೊಕುಟ್ಟಿಯವರಿಗೆ (ಇಯನ್ ಟಾಪ್ ಹಾಗು ರಿಚರ್ಡ್ ಪ್ರೈಕ್ ಜತೆಗೆ) ಸೌಂಡ್ ಮಿಕ್ಸಿಂಗಿಗೆ ಆಸ್ಕರ್‍ ಬಂದಿದ್ದು ಖುಷಿಯಾಯಿತು
ಎ.ಆರ್‍.ರೆಹಮಾನ್‌ಗೆ ಸಂಗೀತಕ್ಕೆ ಹಾಗು ಹಾಡಿಗೆ ಆಸ್ಕರ್‍ ಬಂದಿದ್ದೂ ಖುಷಿಯಾಯಿತು.

ಆದರೆ, ಇದು ಐತಿಹಾಸಿಕ ಘಟನೆ, ಚರಿತ್ರಾರ್ಹ ಸುದ್ದಿ. ಭಾರತಕ್ಕೆ ಸಂದ ಗಣನೀಯ ಆಸ್ಕರ್‍ ಎಂಬುದೆಲ್ಲಾ ಕೇಳಿ ಇದನ್ನು ಬರೆಯೋಣ ಅನಿಸಿತು.

Continue reading “ಆಸ್ಕರ್‍ ಗೆಲುವಿನ ನೆರಳಲ್ಲಿ…”

ಪತನದ ಕತೆ


ಮೊನ್ನೆ “ಡೌನ್‌ಫಾಲ್” ಎಂಬ ಚಿತ್ರ ನೋಡಿದೆ. ಹಿಟ್ಲರನ ಕಡೆಯ ದಿನಗಳ ಬಗ್ಗೆ. ಕಳೆದ ಅರವತ್ತು ಮಿಕ್ಕ ವರ್ಷಗಳಲ್ಲಿ ಹಿಟ್ಲರನ ರಾಕ್ಷಸತೆಯ ಬಗ್ಗೆ ಸಾಕಪ್ಪ ಅನಿಸುವಷ್ಟು ಪುಸ್ತಕ, ಡಾಕ್ಯುಮೆಂಟರಿ ಎಲ್ಲಾ ಬಂದಿವೆ. ಬರುತ್ತಿವೆ. ಆದರೂ, ಹಿಟ್ಲರನ ಕಡೆಗಾಲದಲ್ಲಿ ಅವನನ್ನು ಹತ್ತಿರದಿಂದ ನೋಡುವ, ಹಲವು ಚರಿತ್ರೆ ಮತ್ತು ಆತ್ಮಚರಿತ್ರೆಯ ಪುಸ್ತಕಗಳನ್ನು ಆಧರಿಸಿದ ಈ ಚಿತ್ರಕ್ಕೆ ವಿಚಿತ್ರ ಮೋಹಕ ಶಕ್ತಿಯಿದೆ. ಹಿಟ್ಲರನ ಬಗ್ಗೆ ಹೊಸದಾಗಿ ಕಣ್ಣು ತೆರೆಸುವಂತಹ ಸಂಗತಿಗಳೇನೂ ಇಲ್ಲಿಲ್ಲ. ಆದರೆ ಸಾವಿಗೆ ಹತ್ತಿರ ನಿಂತ ಅವನ ನಡೆವಳಿಕೆ,  ಉಳಿದ ಮನುಷ್ಯರಿಗಿಂತ ಹೇಗೆ ಭಿನ್ನವಾಗಿತ್ತು ಎನ್ನುವುದು ಒಂದಂಶವಾದರೆ, ಜಗತ್ತಿನ ಮಹಾಕೃತ್ಯವೊಂದಕ್ಕೆ ಕೇವಲ ಒಬ್ಬ ಮನುಷ್ಯ ಎಷ್ಟು ಮತ್ತು ಹೇಗೆ ಕಾರಣನಾಗಬಲ್ಲ ಎಂಬುದು ಇನ್ನೊಂದು.

Continue reading “ಪತನದ ಕತೆ”

“ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ”

ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ.

ಅಂತಹ ದೇಶದಲ್ಲಿ ಅಕಿರಾ ಕುರೊಸಾವ “ಐ ಲೀವ್ ಇನ್ ಫಿಯರ್‍” ಎಂಬ ಚಿತ್ರ ಮಾಡಿದ್ದಾನೆ – ೧೯೫೫ರಲ್ಲಿ – ಅಟಾಮಿಕ್ ಬಾಂಬ್ ಸಿಡಿದ ಹತ್ತು ವರ್ಷಕ್ಕೆ. ಚಿತ್ರದ ನಾಯಕ ಒಂದು ಕೋಲ್ ಫೌಂಡ್ರಿಯ ಮಾಲೀಕ. ಬಾಂಬಿಂದ ತಪ್ಪಿಸಿಕೊಳ್ಳಲು ಬ್ರೆಜಿಲ್ಲಿಗೆ ವಲಸೆ ಹೋಗುವುದೊಂದೇ ಉಳಿದಿರುವ ದಾರಿ ಎಂಬ ಅಚಲವಾದ ನಿರ್ಧಾರಕ್ಕೆ ಬಂದಿದ್ದಾನೆ. “ಸಾಯುವುದು ಹೌದು, ಆದರೆ ಕೊಲ್ಲಲ್ಪಡಬಾರದು” ಎಂಬುದು ಅವನ ಸವಾಲು. ಕುಟುಂಬಕ್ಕೆ ಸೇರಿದ ಫೌಂಡ್ರಿಯನ್ನು ಮಾರಿ ಬಂದ ದುಡ್ಡಲ್ಲಿ ಕುಟುಂಬವೆಲ್ಲಾ ಬ್ರೆಜಿಲ್ಲಿಗೆ ಹೋಗಬೇಕೆಂದು ಅವನ ಯೋಚನೆ. ಅದಕ್ಕೆ ಅವನ ಮಕ್ಕಳಿಂದ ತೀವ್ರ ವಿರೋಧ. ಅವನಿಗೆ ಹುಚ್ಚೆಂದು ಸಾಬೀತು ಮಾಡಿ ವಲಸೆ ತಪ್ಪಿಸಲು ಅವನ ಮಕ್ಕಳು ಫ್ಯಾಮಿಲಿ ಕೋರ್ಟಿಗೆ ಹೋಗುತ್ತಾರೆ.

Continue reading ““ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ””

ಮೋರನ ನಿಜ ಮೋರೆ

ಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. “ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ” ಎಂದು ಆತನ ಸಹಾಯಕರಿಂದ ಹೇಳಿಸಿಕೊಂಡು ಹೋಗುತ್ತಾಳೆ. ಅಲ್ಲಿ ಈಕೆಯನ್ನು ಗೋಡೆಗಳ ಮೇಲಿನ ಕೆಲವು ಸೆಕ್ಯುರಿಟಿ ಕ್ಯಾಮೆರಾಗಳಷ್ಟೆ ಎದುರುಗೊಳ್ಳುತ್ತವೆ. ಉಳಿದಂತೆ ಖಾಲಿ. ಆಗಷ್ಟೆ ಮೋರನ “ಬೌಲಿಂಗ್ ಫಾರ್‍ ಕಾಲಂಬೈನ್” ಬಿಡುಗಡೆಯಾಗಿ ಜನಪ್ರಿಯವಾಗಿದ್ದ ದಿನಗಳು. Continue reading “ಮೋರನ ನಿಜ ಮೋರೆ”

ಬರ್ಗ್‌ಮನ್‌ನ ‘ವಿಂಟರ್‍ ಲೈಟ್’

ಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.

ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ ಸೈನಿಕ ಮತ್ತು ಅವನ ಬಸುರಿ ಹೆಂಡತಿ. ಬೆನ್ನು ನೋವಿಂದ ನರಳುವ, ನಿದ್ದೆ ಬಾರದೆ, ಸದಾ ಮದ್ದಿನ ಮೇಲೆ ಬದುಕಿರುವ ಗೂನು ಬೆನ್ನಿನ ಚರ್ಚಿನ ಸಹಾಯಕ. ಹಗುರ ಮನೋಭಾವದ ಚರ್ಚಿನ ಪಿಯಾನೋ ವಾದಕ. ಇಷ್ಟೇ ವಿಂಟರ್‌ಲೈಟ್ ಚಿತ್ರದ ಜಗತ್ತಿನ ಪಾತ್ರಗಳು.

ಹಿಮ ಮುಚ್ಚಿದ ಚಳಿಗಾಲದ ಒಂದು ಮಧ್ಯಾಹ್ನ-ಸಂಜೆ ನಡುವಿನ ಹೊತ್ತು. ತನ್ನ ಚರ್ಚಿನ ಸೇವೆ ಮುಗಿಸುವಲ್ಲಿಂದ ಮೂರು ಗಂಟೆಯ ನಂತರವಿರುವ ಇನ್ನೊಂದು ಚರ್ಚಿನ ಸೇವೆಯ ನಡುವೆ ನಡೆಯುವ ಘಟನೆಗಳು ಈ ಚಿತ್ರದ ಬಿತ್ತರ.

ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಗೆ ಗೆಳತಿಯ ಪತ್ರ ಓದಲು ಬಿಡುವಿಲ್ಲ. ಆಗ ಮಾತನ್ನೇ ಆಡದ ಸೈನಿಕ ಮತ್ತು ಅವನ ಆಂತರಿಕ ಹಿಂಸೆಯನ್ನು ಹೋಗಲಾಡಿಸಲು ಹವಣಿಸುತ್ತಿರುವ ಅವನ ಹೆಂಡತಿ ಪಾದ್ರಿಯನ್ನು ಭೇಟಿಮಾಡುತ್ತಾರೆ. ತನ್ನ ಗಂಡನೊಡನೆ ಮಾತಾಡಿ ಅವನ ವೇದನೆಯನ್ನು ಕಡಿಮೆ ಮಾಡಬೇಕೆಂದು ಸೈನಿಕನ ಬಸುರಿ ಹೆಂಡತಿ ಕೇಳಿಕೊಳ್ಳುತ್ತಾಳೆ. ಪಾದ್ರಿ ಒಂದು ಗಂಟೆ ಬಿಟ್ಟು ಬರುವಂತೆ ಹೇಳುತ್ತಾನೆ.

ಆ ಒಂದು ಗಂಟೆಯಲ್ಲಿ ಗೆಳತಿಯ ಪತ್ರ ಓದುತ್ತಾನೆ. ನಂತರ ಬಂದ ಸೈನಿಕನಿಗೆ ಸಾಂತ್ವನ ಹೇಳಬೇಕಾದವನು ತನ್ನ ಒಳಗನ್ನು ಅವನ ಮುಂದೆ ಸುರಿದುಕೊಳ್ಳುತ್ತಾನೆ. ಮದುವೆಯಾಗೆಂದು ಈ ಹಿಂದೆ ಪೀಡಿಸುತ್ತಿದ್ದ ಗೆಳತಿ ಅವಳ ಶಾಲೆಯ ಕೋಣೆಯಲ್ಲಿ ಪಾದ್ರಿಗೆ ಮುಖಾಮುಖಿಯಾಗುತ್ತಾಳೆ. ಪಾದ್ರಿ ಅವಳನ್ನು ತಾನೇಕೆ ಮದುವೆಯಾಗಲಾರೆ ಎಂದು ಹೇಳಿಕೊಳ್ಳುತ್ತಾನೆ. ಅವಳ ಸ್ವಭಾವವನ್ನು ಎತ್ತಾಡಿ ಹಳಿಯುತ್ತಾನೆ. ಅಷ್ಟರಲ್ಲಿ ಸೈನಿಕ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಪಾದ್ರಿಯೇ ಹೋಗಿ ಸೈನಿಕನ ಬಸುರಿ ಹೆಂಡತಿಗೆ ಅವಳ ಗಂಡ ಜೀವ ತೆಗೆದುಕೊಂಡ ಸುದ್ದಿ ಮುಟ್ಟಿಸುತ್ತಾನೆ.

ಪಾದ್ರಿಯ ಗೆಳತಿ ಅವನನ್ನು ಮತ್ತೊಂದು ಚರ್ಚಿಗೆ ಕರೆದುಕೊಂಡು ಹೋಗುತ್ತಾಳೆ. ಒಂದು ರೈಲ್ವೆ ಕ್ರಾಸಿಂಗಿನಲ್ಲಿ ಒಂದು ಕ್ಷಣ ಕಾಯುವಾಗ ತಾನು ಪಾದ್ರಿಯಾಗಬೇಕೆಂದು ತನ್ನ ತಂದೆಯ ಕನಸಾಗಿತ್ತು ಎನ್ನುತ್ತಾನೆ. ಹೆಣದ ಪೆಟ್ಟಿಗೆಗಳಂಥ ಗೂಡ್ಸ್ ಗಾಡಿ ಹಾದು ಹೋಗುತ್ತದೆ.

ಗೂನು ಬೆನ್ನಿನ, ನೋವಿನಿಂದ ನರಳುತ್ತಿರುವ ಪಾದ್ರಿಯ ಸಹಾಯಕ ಜೀಸಸ್ಸಿನ ನರಳಾಟದ ಬಗ್ಗೆ ತನ್ನ ವ್ಯಾಖ್ಯೆಯನ್ನು ಕೊಡುತ್ತಾನೆ. ತಾನು ಅನುಭವಿಸುತ್ತಿರುವ ವೇದನೆಯ ಮುಂದೆ ಜೀಸಸನ ಹಿಂಸೆ ಹೆಚ್ಚೇನೂ ಅಲ್ಲ ಎಂದು ನಮ್ರತೆಯಿಂದ ಹೇಳುತ್ತಾನೆ. ಆದರೆ, ಕಡೆ ಗಳಿಗೆಯಲ್ಲಿ ಜೀಸಸ್ಸಿಗೆ ತನ್ನ ದೇವರ ಬಗ್ಗೆ ಹುಟ್ಟಿದ ಅನುಮಾನ ತಂದಿರಬಹುದಾದ ನೋವು ದೈಹಿಕ ನೋವು ಹಿಂಸೆಗಿಂತ ಅತ್ಯಂತ ತೀವ್ರವಲ್ಲವೆ ಎಂದು ಕೇಳುತ್ತಾನೆ.

ಪಾದ್ರಿ ಮತ್ತೆ ಸ್ಥಿಮಿತ ಕಂಡುಕೊಂಡವನಂತೆ ಭದ್ರ ಧ್ವನಿಯಲ್ಲಿ ಚರ್ಚ್ ಸೇವೆ ಶುರುಮಾಡುತ್ತಾನೆ. ಅವನ ಗೆಳತಿ ಅವನ ಪ್ರವಚನ ಕೇಳಲು ಹಿಂದಿನ ಸಾಲಲ್ಲಿ ಕೂತಿದ್ದಾಳೆ.

ಬರ್ಗ್‌ಮನ್‌ನ ವಿಂಟರ್‌ಲೈಟ್ ಚಿತ್ರ ಆ ಹಳ್ಳಿಯಲ್ಲಿ ತಟಸ್ಥವಾಗಿ ಹರಿಯುವ ನದಿಯಂತೆ ಹರಿದು ಕೊನೆಗೊಳ್ಳುತ್ತದೆ.

Blog at WordPress.com.

Up ↑