ಕಪಾಳ ಮೋಕ್ಷ

ರಿಚರ್ಡ್ ಫ್ಲಾನಗನ್ ತನ್ನ ತಂದೆಯ ಯುದ್ಧದ ಅನುಭವದ ಬಗ್ಗೆ Life after Death ಡಾಕ್ಯುಮೆಂಟರಿಯಲ್ಲಿ ಹೇಳಿದ ಸಂಗತಿ:

ತುಂಬಾ ಮೃದು ಸ್ವಭಾವದ ಅವನ ತಂದೆ ಎರಡನೇ ಮಹಾಯುದ್ಧದಿಂದ ಹಿಂದಿರುಗಿ ಬಂದಾಗ ತಾನು ಬಂಧಿಯಾಗಿದ್ದ ಒಬ್ಬ ಜಾಪನೀಸ್ ಆಫೀಸರನನ್ನು ಸಿಕ್ಕಾಪಟ್ಟೆ ಬಯ್ಯುತ್ತಿದ್ದನಂತೆ. ತಂದೆಯ ಜಾಯಮಾನಕ್ಕೆ ಅವನ ಈ ನಡತೆ ತುಂಬಾ ಅಸಹಜವಾಗಿ ಕಾಣುತ್ತಿತ್ತಂತೆ. ಅಷ್ಟೇ ಅಲ್ಲದೆ, ಅವನು ಪದೇಪದೇ ಆ ಜಾಪನೀಸ್ ಆಫೀಸರನ ಹೊಟ್ಟೆಯನ್ನು ರೈಫಲ್ಲಿನ ಬಯೊನೆಟ್ಟಿನಿಂದ ಬಗೆದು ಬಗೆದು ರಕ್ತಸಿಕ್ತ ಜಠರವನ್ನು ಹೊರಗೆಲ್ಲಾ ಚೆಲ್ಲಾಡಿದಂತೆ ಕನಸು ಕಾಣುತ್ತಿದ್ದನಂತೆ. ಯುದ್ಧ ತನ್ನ ತಂದೆಯ ಅಂತರಂಗವನ್ನು ವಿರೂಪಗೊಳಿಸಿರುವುದನ್ನು ಮಕ್ಕಳೆಲ್ಲಾ ತಪ್ತರಾಗಿ ಅನುಭವಿಸುತ್ತಿದರಂತೆ.

archflanagaanww2
ರಿಚರ್ಡ್ ಫ್ಲಾನಗನ್ ತಂದೆ ಆರ್ಚ್ ಫ್ಲಾನಗನ್

ರಿಚರ್ಡ್ ದೊಡ್ಡವನಾದ ಮೇಲೆ, ಆ ಜಾಪನೀಸ್ ಆಫೀಸರನ್ನು ಭೇಟಿಮಾಡಿದನಂತೆ. ತುಂಬಾ ಮೃದು ಸ್ವಭಾವದ ಮುದಕನನ್ನು ನೋಡಿ ಚಕಿತನಾದನಂತೆ. ಅವನು ಯುದ್ಧಬಂಧಿಗಳ ಕಪಾಳಕ್ಕೆ ಹೊಡೆಯುತ್ತಿದ್ದದ್ದನ್ನು ರಿಚರ್ಡ್ ಕೇಳಿದ್ದನಂತೆ. ತಂದೆಯ ಆತ್ಮೀಯ ಗೆಳೆಯನನ್ನು ಹೊಡೆದು ಬಡಿದು ಇವನ ತಂದೆ ಹಾಗು ಉಳಿದವರ ಮುಂದೆಯೇ ಕೊಂದಿದ್ದರಂತೆ. ತನ್ನೆಲ್ಲಾ ಆಕ್ರೋಶವನ್ನೂ ಅದುಮಿ ಹಿಡಿದುಕೊಂಡು ಗೆಳೆಯನ ಸಾವನ್ನು ನೋಡಿದ್ದಷ್ಟೆ ಅಲ್ಲದೆ ಜೀವಮಾನವಿಡೀ ಆ ನೋವು ಹಾಗೂ ಅವಮಾನವನ್ನು ಹೊತ್ತಲೆಯುತ್ತಿದ್ದನಂತೆ.

ಟೋಕಿಯೋದಲ್ಲಿ ಆ ಆಫೀಸರನನ್ನು ಭೇಟಿಯಾದಾಗ ತನ್ನ ತಂದೆಯ ಕಪಾಳಕ್ಕೆ ಹೊಡೆದಂತೇ ತನಗೂ ಹೊಡೆಯುವಂತೆ ರಿಚರ್ಡ್ ಬಿನ್ನವಿಸಿಕೊಂಡನಂತೆ. ಅವನು ಆಗುವುದಿಲ್ಲ ಎಂದರೂ ಬಿಡದೆ ಕೇಳಿಕೊಂಡನಂತೆ. ಕಡೆಗೆ, ಆ ಮುದುಕ ಭುಜ ಹಿಂದಕ್ಕೆ ಎಳೆದು ಬೀಸಿ ಇವನ ಕಪಾಳಕ್ಕೆ ಮತ್ತೆ ಮತ್ತೆ ಹೊಡೆದನಂತೆ. ರಿಚರ್ಡನ ತಲೆ ಸುತ್ತಿಬಂದಂತಾಗಿ, ಭೂಮಿ ಬಾಯಿ ಬಿಟ್ಟಂತಾಗಿ, ತಾವಿದ್ದ ಕಟ್ಟಡ ಹೊಯ್ದಾಡಿದಂತೆ ಆಯಿತಂತೆ.

archflanagan
ವಯಸ್ಸಾದ ಆರ್ಚ್ ಫ್ಲಾನಗನ್

ಕತೆಗಾರನ ಶಾಪವೋ ಎಂಬಂತೆ ಆಗಷ್ಟೆ ಜಪಾನಿನಲ್ಲಿ ಭೂಕಂಪವಾಗುತ್ತಿರುವುದು ಅರಿವಿಗೆ ಬಂದು ಎಲ್ಲರೂ ಹೊರಗೋಡಿದರಂತೆ. ಹೊಡೆದವನು, ಹೊಡೆಸಿಕೊಂಡವನು, ನೋಡುತ್ತಿದ್ದವರು, ಎಲ್ಲರೂ.

 

[ಚಿತ್ರಕೃಪೆ : ಅಂತರ್ಜಾಲ ಪುಟಗಳು]