ಕವಿಯೊಬ್ಬನ ಮುಗ್ಗಟ್ಟು

ವಿಪ್ಲವಗಳಲ್ಲಿ ಪ್ರತಿಮೆಗಳ ಹುಡುಕುವೆ ನಾನು-
ಮೊನ್ನೆ ಮುರಿದ ಮೂಳೆ, ನೆನ್ನೆ ಹರಿದ ನೆತ್ತರು,
ಇಂದು ಒಡೆದ ತಲೆ, ಈಗ ಹೋದ ಪ್ರಾಣಕ್ಕಿಂತ
ಸಾರ್ವಕಾಲಿಕ ಪ್ರತಿಮೆಗಳ ಶೋಧದಲ್ಲಿ ತೊಡಗಿರುವೆ,
ಡಿಸ್ಟರ್ಬ್ ಮಾಡಬೇಡಿ ಜನಗಳೇ, ದಯವಿಟ್ಟು!

ನನ್ನ ಪದ್ಯದ ಸಾಲುಗಳಲ್ಲಿ ಮೂಡುವ ರೂಪಕಮಾಲೆಯನ್ನು
ತೊಟ್ಟು ಮುಲುಗುತ್ತವೆ ನನ್ನ ಮುಗ್ಗಟ್ಟು
ಸೂಕ್ಷ್ಮ ಸಂವೇದನೆಯ ಕವಿಗೆ ಮಾತ್ರ ತಿಳಿಯುವ ಗುಟ್ಟು-
ಮರೆಯಬೇಡಿ ರಸಿಕರೇ, ದಯವಿಟ್ಟು.

ಸುಲಭ ಸಾಧ್ಯದ ತುಡಿತವೆಲ್ಲಾ ನಿಷಿದ್ಧ ನನಗೆ;
ದಟ್ಟವಾಗಿ ಅಡರಿಕೊಳ್ಳುವ ಮುಳ್ಳುಬೇಲಿ
ಮೈಗೆ ಸವರದ ಹಾಗೆ ನುಣುಚುವ ಸೃಜನಾತ್ಮಕ ನಡೆ
ನಡೆದು ಸವೆಸಬೇಕಲ್ಲ ದಾರಿ ಬಲು ಕಷ್ಟ,
ತಿಳಿದುಕೊಳ್ಳಿ ಸಹೃದಯರೇ, ದಯವಿಟ್ಟು.

ಕಳವಳದ ಬೀದಿ ಪ್ರತಿಭಟನೆಯೇನು;
ಬೆಚ್ಚನೆಯ ಕನಸಲ್ಲಿ ಹನಿಯುವ ರಕ್ತ, ಎರಗುವ‌ ಪೆಟ್ಟು
ಕಲಕುತ್ತವೆ ನನ್ನನ್ನು ನೂರ್ಪಟ್ಟು,
ಅರಿತುಕೊಳ್ಳಿ ನನ್ನಂತಹ ಕವಿಗಳ ಸಂಕಷ್ಟವದು,
ಚಿಂತನಶೀಲರೇ, ದಯವಿಟ್ಟು.

ಮರಗಟ್ಟದಿರಲಿ ಮನಸು

 

(ಶಹೀನ್ ಬಾಗ್ ಮಹಿಳೆಯರಲ್ಲಿ ಒಂದು ನಿವೇದನೆ)
ಹರಿವನದಿ ನೀರನ್ನು ಬೇರ್ಪಡಿಸಬಹುದೆಂದು
ತೊಡೆತಟ್ಟಿ  ಬರುತಾರೆ, ಎದೆನುಡಿಯ ನುಡಿದುಬಿಡಿ ಮರಗಟ್ಟದಿರಲಿ ಮನಸು
ಆಕಾಶಕಡ್ಡಗೆರೆ ಎಳೆದೆರಡು ನಭವೆಂದು
ಎದೆತಟ್ಟಿ ಬರುತಾರೆ, ಒಳನುಡಿಯ ನುಡಿದುಬಿಡಿ ಮರಗಟ್ಟದಿರಲಿ ಮನಸು
ಸರ್ವಭವ್ಯದ ಮುಂದೆ ತಮ್ಮಭವ್ಯವನಿಟ್ಟು
ಕದನಕಿಳಿಯುತ್ತಾರೆ, ಹದದ ನುಡಿ ನುಡಿದುಬಿಡಿ ಮರಗಟ್ಟದಿರಲಿ ಮನಸು
ಮನಸೊಳಗೆ  ಬರೆಎಳೆದು ಮತ್ತೆ ಹುಣ್ಣನು ಕೆದಕಿ
ಜೈರಾಮ ಎನುತಾರೆ, ಸನ್ಮತಿಯ ಹೂವನಿಡಿ ಮರಗಟ್ಟದಿರಲಿ ಮನಸು
ನೊಂದವರ ಹೆಗಲನ್ನು ಕೆಳಕದುಮಬಹುದೆಂದು
ಬಂದವರ ಕಣ್ಮುಂದೆ, ತಡೆಗಟ್ಟಿ ನಿಂತುಬಿಡಿ ಮರಗಟ್ಟದಿರಲಿ ಮನಸು
ಮನಸು ಮರಗಟ್ಟಿಸಲು ಕನಸು ಸುಟ್ಟರಗಿಸಲು
ಬರುತಾರೆ, ಬರುತಾರೆ, ಮನ ತೆರೆದು ಕುಳಿತುಬಿಡಿ ಮರಗಟ್ಟದಿರಲಿ ಮನಸು
(PC : Collage of newspaper images)

Peasant’s call

To be happy –
the body as land, harvest the spirit
and grow the grain of trust
and feast on them
says the master of
desire, strength and life itself.

– peasant muddanna

ಅಂಗವೇ ಭೂಮಿಯಾಗಿ
ಲಿಂಗವೇ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಬೆಳೆದು ಉಂಡು
ಸುಖಿಯಾಗಿರಬೇಕೆಂದ ಕಾಮ ಭೀಮ ಜೀವನದೊಡೆಯ
-ಒಕ್ಕಲಿಗ ಮುದ್ದಣ್ಣ